Wednesday, December 24, 2008
ವಿದಾಯ
ಇಂದು ನನಗೆ ಬಹಳ ಬೇಸರವಾಗುತ್ತಿದೆ. ಜೀವನದ ಪ್ರತಿ ಗಳಿಗೆ ನನ್ನ ಜೊತೆಯಿದ್ದು ನನ್ನ ಅವಿಬಾಜ್ಯ ಅಂಗವಾದ ನಿಮ್ಮನ್ನು ಇಂದು ನನ್ನ ಹಿತಕ್ಕೋಸ್ಕರ ಬಲಿ ಕೊಡುತ್ತಿದ್ದೇನೆ. ಕ್ಷಮೆಯಿರಲಿ. ನನಗೂ ನಿಮ್ಮನ್ನು ಬೀಳ್ಕೊಡಲು ಇಷ್ಟವಿಲ್ಲ. ಆದರೆ ವಿದಿಯಾಟ. ವಿದಿಯಾಟದ ಮುಂದೆ ಹುಲುಮಾನವರ ಆಟವೇನೂ ಸಾಗದು. ನಾವೆಲ್ಲಾ ಪಾತ್ರದಾರಿಗಳು. ಸೂತ್ರದಾರಿ ಅವನು.
ನಾನು ಬೆಳೆದ ಹಾಗೆ ನೀವೂ ನನ್ನೊಟ್ಟಿಗೆ ಬೆಳೆದಿರಿ. ಹಾಗೆಯೇ ನನ್ನ ಏಳುಬೀಳಿನಲ್ಲಿ ಬಾಗಿಯಾಗಿ ನನಗೆ ಸ್ಪೂರ್ತಿಯಾದಿರಿ. ನಿಮ್ಮಿಂದ ನನಗೆ ಯಾವುದೇ ತೊಂದರೆಯಾಗಲಿಲ್ಲ. ಆದರೂ ನಿಮ್ಮನ್ನು ದೂರ ಮಾಡುತ್ತಿದ್ದೇನೆ.
ನಾವೇನು ಮಾಡಿದೆವು ಅಂತ ನೀವು ನನ್ನ ಪ್ರಶ್ನಿಸಬಹುದು.
ನೀವು ಹುಟ್ಟಿದ ಸ್ಥಳ ಸರಿಯಾದುದಲ್ಲ. ಪ್ರತಿಯೊಬ್ಬರು ಉತ್ತಮ ಸಂಸ್ಕಾರವಂತರಾಗಬೇಕಾದರೆ ಉತ್ತಮ ಪರಿಸರವಿರಬೇಕು. ಉತ್ತಮರ ಸಹವಾಸವಿರಬೇಕು. ಆಗಲೇ ಆತನಲ್ಲಿ ಜೀವನದ ತತ್ವಗಳ ಬಗ್ಗೆ ಜಾಗೃತಿ ಮೂಡುತ್ತದೆ. ಆದರೆ ನಿಮ್ಮ ವಿಷಯದಲ್ಲಿ ಹಾಗಾಗಲಿಲ್ಲ. ಇದು ನಿಮ್ಮ ತಪ್ಪಲ್ಲ. ಮತ್ತೆ ಹೇಳ್ತೇನೆ, ಇದು ವಿದಿಯಾಟ. ಅದಕ್ಕೆ ನಿಮ್ಮನ್ನು ನನ್ನಿಂದ ದೂರ ಮಾಡುತ್ತಿದ್ದೇನೆ.
ಮೊನ್ನೆ ನಿಮ್ಮನ್ನು ಕಳಿಸಿಕೊಡುವಾಗ ನನಗೆ ಬಹಳ ನೋವಾಯಿತು. ಬಾಯಿ ಕಿತ್ತು ಬಂದ ಹಾಗಾಯಿತು. ನನ್ನನ್ನು ಕಳಿಸದಿರು ಅಂತ ಮೌನವಾಗಿ ನೀವಿಬ್ಬರು ನನ್ನನ್ನು ತಬ್ಬಿ ಹಿಡಿದಿದ್ದಿರಿ. ಆದರೂ ಕಳಿಸಿಕೊಟ್ಟೆ. ಈಗ ನಿಮ್ಮ ಜಾಗದಲ್ಲಿ ಹೊಸತು ಕೃತಕ ಹಲ್ಲುಗಳು ಬಂದಿವೆ. ಹೊಂದಿಕೊಳ್ಳಲು ಕೆಲವು ದಿನಗಳಾಗಬಹುದು. ಅಲ್ಲಿಯ ತನಕ ಕಿರಿ ಕಿರಿಯಾಗುತ್ತದೆ. ಆಗ ನಿಮ್ಮ ನೆನಪಾಗುತ್ತದೆ.
ಮನಸು ಹೇಳ ಬಯಸಿದೇ ನೂಂರೊದು
ತುಟಿಯ ಮೇಲೆ ಬಾರದಿರೇ ಮಾತೊಂದು
ವಿದಾಯ ಗೆಳೆಯರೇ
ವಿದಾಯ ಗೆಳೆಯರೇ,
ವಿದಾಯ ಹೇಳ ಬಯಸಿರುವೇ ನಾನಿಂದು
ಏನಿದು ವಿದಾಯ ಅನಿಸಿರಬಹುದು. ಇದು ದಂತ ವಿದಾಯ!!!
ಹುಟ್ಟಿನಿಂದ ನನ್ನ ಜೊತೆಗೆ ಸಿಹಿ ಕಹಿಯನ್ನುಂಡ ಮತ್ತು ಹುಟ್ಟುವಾಗಲೇ ವಕ್ರವಾಗಿದ್ದ ಎರಡು ಹಲ್ಲುಗಳನ್ನು ಮೊನ್ನೆ ದೂರಮಾಡಿದೆ. ಅಗ ನನಗನಿಸಿದ್ದು ಹೀಗೆ.
Saturday, December 6, 2008
ನೀನ್ಯಾರಿಗಾದೆಯೋ ಎಲೆ ಮಾನವ
ಆತ್ಮೀಯ,
ಬಹಳ ದಿನಗಳಿಂದ ಈ ಪತ್ರ ಬರೆಯಬೇಕೆಂದಿದ್ದೆ. ಇಂದು ಬರೆಯುತ್ತಿರುವೆ.
ನಾನೇನು ತಪ್ಪು ಮಾಡಿದೆ ನಿನಗೆ? ನಿನ್ನನ್ನು ಎಂದಾದರೂ ದೂಷಿಸಿದ್ದೆನಾ? ಅಥವಾ ನಿನ್ನ ಕುಟುಂಬಕ್ಕೇನಾದರೂ ದ್ರೋಹ ಮಾಡಿದ್ದೆನಾ? ಅಮ್ಮನ ಎದೆ ಹಾಲಿನ ಅನಂತರ ನೀನು ಕುಡಿದಿದ್ದು ನನ್ನ ಹಾಲಲ್ಲವೇ? ಅಂದಿನಿಂದ ಇಂದಿನವರೆಗೆ ನಾನೆಂದೂ ನಿನಗೆ ಮೋಸ ಮಾಡಿಲ್ಲ. ಹಾಗಿದ್ದಾಗ ನನ್ನ ಮೇಲೆ ನಿನಗೇಕೆ ಕೋಪ, ಮತ್ಸರ!
ಹಾಲು ಬೇಕೆಂದಾಗ ಏನು ಮಾಡುತಿದ್ದೆ ನೀನು?
ನನ್ನ ಮುದ್ದು ಕರುವಿಗೆ ನಾನು ಹಾಲುಣಿಸದಂತೆ ಮಾಡಿ ನನ್ನ ಹಾಲನ್ನು ಕರೆದು ನೀನು ನಿನ್ನವರಿಗೆ ಉಣಿಸಿದೆ. “ಅಮ್ಮ ನನಗೆ ಹಾಲು ಬೇಕು, ಕೊಡು” ಅಂತ ಕರು ಸಂಜ್ಞೆ ಮಾಡಿದರೂ ಅದನ್ನು ನೋಡಿ ನಾನು ಅಸಹಾಯಕಳಾಗಿದ್ದೆ. “ಮಗು, ಎಲ್ಲದಕ್ಕೂ ನಾವು ಪಡೆದುಕೊಂಡು ಬರಬೇಕು” ಎಂದು ಕರುವಿಗೆ ಸಮಾಧಾನ ಮಾಡುತ್ತಿದ್ದೆ. ಕೆಚ್ಚಲು ಗಾಯವಾದಾಗ ನಾನು ಒದ್ದಿದ್ದು ನಿಜ. ನನಗೆ ನೋವಾಗುವುದಿಲ್ಲವೇ? ಅದನ್ನೇ ಕಾರಣವಾಗಿಟ್ಟುಕೊಂಡು ನೀನು ನನ್ನ ಕಾಲುಗಳನ್ನು ಕಟ್ಟಿ ಹಾಲು ಕರೆದಿಲ್ಲವೇ? ನನ್ನ ನೋವು ನಿನಗರ್ಥವಾಗಲಿಲ್ಲವೇ?
ಕಂಡ ಕಂಡವರ ಮೇಲೆ ನಿನ್ನ ಕಾಮುಕ ದೃಷ್ಟಿಯಿಟ್ಟ ನೀನು ನನಗೆ ನನ್ನಷ್ಟಕ್ಕೆ ಗರ್ಭಧರಿಸಲೂ ಬಿಡಲಿಲ್ಲ. ನನ್ನ ಪ್ರಾಣಗಳಾದ ನನ್ನ ಕರುಗಳನ್ನು ದುಡ್ಡಿನ ಆಸೆಗೆ ನೀನು ಮಾರಿದೆ. ಸ್ವತಂತ್ರವಾಗಿ ಓಡಾಡುವ ಹಕ್ಕನ್ನೂ ಕಸಿದುಕೊಂಡೆ. ಯಾಕೆ ಕೋಪ ನಿನಗೆ? ಹಾಲು ಕೊಡುವುದಿಲ್ಲ ಎಂಬ ಏಕೈಕ ಕಾರಣಕ್ಕೆ ನನ್ನನ್ನು ಕಸಾಯಿಖಾನೆಗೆ ತಳ್ಳಿದೆ. ನನ್ನ ಕೋಡು ಉದ್ದವಿತ್ತು, ಅದಕ್ಕೆ ಬೆಂಕಿ ಹಚ್ಚಿ ವೈರಿಗಳ ಮೇಲೆ ಆಕ್ರಮಣ ಮಾಡಲು ನನ್ನನು ಉಪಯೋಗಿಸಿದೆ. ನಿನ್ನ ಭಯದಿಂದ ನಾನು ಹಾಗೆ ಓಡಿದೆ. ಓಡುವಾಗ ಕೊಂಬಿನಲ್ಲಿದ್ದ ಬೆಂಕಿ ನನ್ನ ಮೈಗೂ ತಾಗಿ ಸುಟ್ಟಿತ್ತು. ವೈರಿಗಳು ನನ್ನ ಇರಿದಿದ್ದರು. ನಿನ್ನನ್ನು ಕಾಪಾಡಿಕೊಳ್ಳಲು ನನ್ನನ್ನು ನೀನು ಉಪಯೋಗಿಸಿದ್ದೆ. ನಿನಗೆ ಕರುಣೆಯಿಲ್ಲವೇ?
ನಿನಗಾಗಿ ನನ್ನ ಜೀವನ ತೆತ್ತೆ. ಹೇಳು ಮಾನವ ಹೇಳು.
ನನಗೆ ಉತ್ತರಿಸು. ನಿನ್ನ ಆತ್ಮವನ್ನೊಮ್ಮೆ ಪ್ರಶ್ನಿಸು....
ಈ ಲೇಖನ ಮಾಲಿಕೆ ಶ್ರೀರಾಮಚಂದ್ರಾಪುರ ಮಠದ "ಧರ್ಮಭಾರತೀ" ಮಾಸ ಪತ್ರಿಕೆಯಲ್ಲಿ ಡಿಸೆಂಬರ್ ನಿಂದ ಪ್ರಾರಂಭವಾಗಿದೆ. ಬರೆಯಲು ಸ್ಪೂರ್ತಿಸಿದ ಮತ್ತು ಆಶೀರ್ವದಿಸಿದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರಿಗೆ ಚಿರಋಣಿ. ಬರವಣಿಗೆಯನ್ನು ತಿದ್ದಿ ತೀಡುತ್ತಿರುವ ಮತ್ತು ಧರ್ಮಭಾರತೀ ಮಾಸಪತ್ರಿಕೆಯಲ್ಲಿ ಲೇಖನ ಬರೆಯಲು ಅವಕಾಶ ನೀಡಿದ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಜಗದೀಶ ಶರ್ಮಾರವರಿಗೆ ಪ್ರೀತಿಪೂರ್ವಕ ಧನ್ಯವಾದಗಳು.
ಈ ಲೇಖನಮಾಲಿಕೆಯನ್ನು ಧರ್ಮಭಾರತೀ ಯ ಅಂತರಜಾಲ ತಾಣದಲ್ಲಿ ಓದಬಹುದು
Thursday, October 23, 2008
ಎ ವೆಡ್ನೆಸ್ ಡೇ
ನಿರಜ್ ಪಾಂಡೇಯವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಇತ್ತೀಚಿನ ದಿನಗಳಲ್ಲಿ ಬಂದ zತ್ತಮ ಚಿತ್ರವೆನ್ನಬಹುದು. ನಾಸಿರುದ್ದೀನ್ ಶಾ ಮತ್ತು ಅನುಪಮ್ ಖೇರ್ ಅವರ ಅಭಿನಯವಿರುವ ಚಿತ್ರದ ಸಾರಾಂಶ ಭಯೋತ್ಪಾದನೆಗೆ ಸಾಮಾನ್ಯ ವ್ಯಕ್ತಿಯ ಸೇಡು ಅಥವಾ ಪ್ರತಿಕ್ರಿಯೆಯನ್ನೊಳಗೊಂಡಿದೆ. ನಿಮಗೆ ಬಿಡುವಾದಾಗ ಒಮ್ಮೆ ನೋಡಿ. ಹಾಂ..ಗೆಳೆಯ ರವೀಂದ್ರ "ಮುಂಬೈ ಮೇರಿ ಜಾನ್" ಫಿಲ್ಮ್ ಬಗ್ಗೆ ಹೇಳಿದ್ದ. ಅದನ್ನು ನೋಡಬೇಕು. ನಿವೇನಾದ್ರು ನೋಡಿದ್ರೆ ಹೇಗಿದೇ ಅಂತ ಹೇಳಿ.
ಒಳ್ಳೆಯವನು
Tuesday, October 14, 2008
ಹೊಸತನ
ಹಾಗೇ ನಮ್ಮ ಬ್ಲಾಗಿನಲ್ಲಿ ಹೊಸತನವಿದ್ರೆ ನೋಡೋರಿಗೆ, ಓದೋರಿಗೆ ಒಂದು ರೀತಿಯ ಕುತೂಹಲವಿರುತ್ತದೆ. ಇಲ್ಲಿ ಹೊಸತನವೆಂದರೆ ಬ್ಲಾಗಿನಲ್ಲಿ ಬರಿಯೋ ಲೇಖನಗಳೊಂದೇ ಅಲ್ಲ. ನಮ್ಮ ಬ್ಲಾಗಿನ ವಿನ್ಯಾಸವೂ ಆಗಬಹುದು.
ಹೀಗೆ ಒಂದಿನ ಬ್ಲಾಗಿನ ಸೆಟ್ಟಿಂಗ್ ಚೆಕ್ ಮಾಡ್ತಾಯಿರೋವಾಗ ನನಗೆ ಹೊಳೆದಿದ್ದು ನಾನು ಯಾಕೆ ನನ್ನ ಬ್ಲಾಗನ್ನು ನನಗನಿಸಿದ ಹಾಗೆ ವಿನ್ಯಾಸ ಮಾಡಬಾರದು ಎಂದು. ಬೇರೆ ಯಾವುದೋ ಟೆಂಪ್ಲೇಟನ್ನು ತೆಗೆದು ಕೊಳ್ಳದೇ ಇರೋ ಟೆಂಪ್ಲೇಟನ್ನು ವಿನ್ಯಾಸಗೊಳಿಸಬಹುದು. ಅದಕ್ಕೆ ಸ್ವಲ್ಪ CSS ಬಗ್ಗೆ ಮಾಹಿತಿಯಿದ್ದರೆ ಆಯ್ತು. ಹಾಗೇ ಕಲರ್ ಕೋಡಿನ ಬಗ್ಗೆ ಮಾಹಿತಿಯಿದ್ದರೆ ಆಯ್ತು...
ನನ್ನ ಬ್ಲಾಗಿನಲ್ಲಿ ಸ್ವಲ್ಪ ಹೊಸತನ ಮಾಡಲು ಪ್ರಯತ್ನಿಸಿದ್ದೇನೆ. ಹಳೆಯ ಟೆಂಪ್ಲೇಟನ್ನು ಬದಲಾಯಿಸಿದ್ದೇನೆ.
Monday, October 6, 2008
ಗಣೇಶ ಮತ್ತು ಗಣೇಶ
ಜನರು ತಮಗೆ ಬಿಡುವಾದಾಗ ಹಬ್ಬ ಆಚರಿಸುತ್ತಿದ್ದರು. ಅದರಲ್ಲಿ ಗಣೇಶ ಹಬ್ಬನೂ ಒಂದು. ಗಣೇಶ ಇಡಬೇಕು ಅಂದ್ರೆ ಮುಖ್ಯವಾಗಿ ಬೇಕಾಗಿದ್ದು ಮುಹೂರ್ತ ಅಲ್ಲ.
ದೇವ್ರು ತಾನೆ, ಎಲ್ಲಾ ಅಡ್ಜೆಸ್ಟು ಮಾಡ್ಕೋತಾನೆ ಎಲ್ಲರ ಮನಸ್ಸಲಿ. ಗಣೇಶ ಮುಖ್ಯ ಅಲ್ಲ. ಆರ್ಕೆಸ್ಟ್ರಾ ಮುಖ್ಯ. ಆರ್ಕೆಸ್ಟ್ರಾ ನವರು ಸಿಗೋದೇ ಕಷ್ಟ. ಅವರು ಸಿಕ್ಕಿದ ಮೇಲೆ ದಿನ ನಿಗದಿಯಾಗೋದು.
ನಾನಿದ್ದ ಹಳೆಯ ಏರಿಯಾ ರೋಡಿನಲ್ಲಿ ನಡೆಯುತ್ತಿದ್ದ ಗಣೇಶ ಹಬ್ಬ ಈಗಲೂ ನೆನಪಿದೆ. ದೇವರ ಮೂರ್ತಿಯ ಸೈಜು ಎಷ್ಟು ಹಣ ಕಲೆಕ್ಟ್ ಆಯ್ತು ಮತ್ತು ಅದ್ರಲ್ಲಿ ಆರ್ಕೆಸ್ಟ್ರಾ + ಮೈಕು + ಅದೂ ಇದೂ + ತಮ್ಮ ಖರ್ಚಿಗೆ ಎಲ್ಲಾ ಆದಮೇಲೆ ಎಷ್ಟು ಉಳಿತೂ ಅನ್ನೋದರ ಮೇಲೆ ಡಿಪೆಂಡು. ಮಾರ್ಕೇಟಿಗೆ ಹೋದ್ರಾಯ್ತು ಗಣೇಶ ಮೂರ್ತಿ ತಂದ್ರಾಯ್ತು. ಇಲ್ಲಿ ರಸ್ತೆ ಮದ್ಯ ಗುಂಡಿ ತೆಗೆದು ಪೆಂಡಾಲು ಹಾಕಿದ್ರಾಯ್ತು. ಗಣೇಶನ್ನ ಅದ್ರಲ್ಲಿ ಕೂರ್ಸಿದ್ರಾಯ್ತು. ಅಷ್ಟೆ!!!
ಆಮೇಲೆ ಶುರುವಾಗತ್ತೆ ನೋಡಿ ಅವರ ಸ್ಟೈಲುಗಳು. ಮಂಗನ ಕೈಲಿ ಮಾಣಿಕ್ಯ ಕೊಟ್ಟ ಹಾಗೆ ಇವರ ಕೈಲಿ ಮೈಕ್ ಇರತ್ತೆ. ಬಾಯಿ ಚಟ ಇರೋರೆಲ್ಲ ಇದೇ ಸಂದರ್ಭ ಅಂತ ತೀರ್ಸ್ಕೋತಾರೆ. ಅದ್ರಲ್ಲೂ ಒಬ್ಬ "ಕಲಾಭಿಮಾನಿಗಳೇ(?), ಈಗ ಮಂಗಳಾರತಿ ಟೈಮು. ಎಲ್ಲಾ ಬನ್ನಿ" ಅಂದ. ನಾನು ಇದ್ಯಾವುದೋ ಸಾಂಸ್ಕೃತಿಕ ಸಂಘದವರ ಕಾರ್ಯಕ್ರಮ ಇರ್ಬೇಕು ಅಂತ ಹೊರಗಡೆ ಹೋಗಿ ನೋಡಿದ್ರೆ ನಮ್ಮ ರೋಡಿನ ಹುಡುಗ್ರು ಇದ್ರು. ಮತ್ಯಾಕೆ ಇವರು ಕಲಾಭಿಮಾನಿಗಳು ಅಂತ ಕರದ್ರೂ ಅಂತ ತಲೆ ಕೆಡಿಸ್ಕೋಂಡೆ. ಕೊನೆಗೆ ಗೊತ್ತಾಗಿದ್ದು ಯಾರೋ ಒಬ್ಬ ಮಹಾಶಯರಿಗೆ ಮಾತಾಡೋ ಚಟ. ಅದ್ಕೆ ಎನೋ ಹೇಳಿದ್ರು. ನಾನು ಮಂಗಳಾರತಿಗೆ ಸರಿಯಾಗಿ ಹೋದೆ. ಅಲ್ಲಿ ಇದ್ದ ಭಟ್ಟರು ನೋಡಿ ಆಶ್ಚರ್ಯ ಆಯ್ತು. ಸಂಜೆ ಆದ ತಕ್ಷಣ ಗುಂಡು ಹಾಕಿ ರಸ್ತೆ ಅಳೆಯೋದೇ ಅವರ ದಿನನಿತ್ಯದ ಮುಖ್ಯ ಕೆಲಸವಾಗಿತ್ತು. ಈಗ ಪೂಜಾರಿಯಾಗಿದ್ದರು. ಅವರು ಮಾಡಿದ ಮಂಗಳಾರತಿ ಮಾತ್ರ ಇನ್ನೂ ಅದ್ಭುತ. ಒಂದು ಕೈಯಲ್ಲಿ ಆರತಿ, ಇನ್ನೊಂದರಲ್ಲಿ ಘಂಟೆ. ಒಂದು ರೌಂಡು ಆರತಿ ಏತ್ತಿ ನಿಲ್ಲಿಸಿ ಘಂಟೆ ತೂಗ್ತಾಯಿದ್ರು. ಎರಡನ್ನೂ ಒಟ್ಟಿಗೆ ಮಾಡಲು ಬರುತ್ತಿರಲಿಲ್ಲ. ಮರುದಿನ ಅವರಿಗೆ ಆರತಿಯ ಜವಾಬ್ದಾರಿ ಮಾತ್ರ. ಘಂಟೆ ಪಕ್ಕದವನ ಹತ್ತಿರ!!! ರಾತ್ರಿ ಹನ್ನೋಂದರ ತನಕ ಇವರು ಹಾಕೋ ಅಸಂಬದ್ದ ಹಾಡುಗಳು..ಅಬ್ಬಬ್ಬ...ಗಣೇಶ ಇದನ್ನೆಲ್ಲ ಹೇಗೆ ಸಹಿಸಿಕೊಳ್ತಾಯಿದ್ನೋ...ಅವನಿಗೇ ಗೊತ್ತು!!!
ಹಾಗೋ ಹೀಗೂ ಮೂರು ದಿನ ಆದಮೇಲೆ ದೇವರನ್ನು ನೀರಲ್ಲಿ ಮುಳುಗಿಸಿ ಬಂದು ಪೆಂಡಾಲನ್ನು ಕಿತ್ತು ತೆಗೆದು ತೆಗೆದ ಗುಂಡಿಯನ್ನು ಮುಚ್ಚದೇ ಇವರು ಗುಂಡು ಹಾಕಲು ಹೋಗ್ತಾಯಿದ್ದರು. ತಾವೇನೋ ಮಹತ್ಕಾರ್ಯ ಮಾಡಿದ ಹಾಗೆ ಮದ್ಯ ರಾತ್ರಿಯ ತನಕ ಇವರ ಸಮಾಲೋಚನೆ, ಕೇಕೆ ಮುಂತಾದವುಗಳು ನಡಿತಾಯಿದ್ದವು.
ಇದು ನಗರದಲ್ಲಿ ನಡೆದ ಒಂದು ಘಟನೆ. ಹಾಗಂತ ಎಲ್ಲರೂ ಈ ರೀತಿ ಮಾಡ್ತಾರೆ ಅಂತಲ್ಲ. ತುಂಬಾ ಒಳ್ಳೆಯ ಕಾರ್ಯಕ್ರಮಗಳು ನಡಿಯುತ್ತಾ ಇರತ್ತೆ. ಆದರೆ ಬಹಳಷ್ಟು ಜನ ಗಣೇಶ ಹಬ್ಬವನ್ನು ಮೋಜಿಗಾಗಿ ಆಚರಿಸುತ್ತಾರೆ.
ನಮ್ಮ ಊರಲ್ಲಿ ಗಣೇಶ ಹಬ್ಬ ಹೇಗಿರತ್ತೆ ಅಂತ ನೋಡೋಣ ಬನ್ನಿ. ನಮ್ಮಲ್ಲಿ ಅಂದರೆ ಹವ್ಯಕರಲ್ಲಿ ಒಂದು ಪದ್ದತಿ ಪುರಾತನದಿಂದ ನಡೆದು ಬಂದಿದೆ. ಗಣೇಶನ್ನು ಯಾರೂ ತಾವಾಗಿಯೇ ತರುವುದಿಲ್ಲ. ಯಾರಾದರು ಗಣೇಶನ ಮೂರ್ತಿಯನ್ನು ಹಬ್ಬದ ಹಿಂದಿನ ದಿನ ರಾತ್ರಿ ಮನೆಯ ಮುಂದೆ ತಂದಿಟ್ಟರೆ ಆ ಮನೆಯವರು ತಮ ಶಕ್ತಿಗನುಸಾರವಾದಷ್ಟು ವರ್ಷ ಗಣೇಶನ ಪೂಜೆ ಮಾಡುತ್ತಾರೆ. ಹಾಗೆ ತಂದು ಇಡುವಾಗ ಮನೆಯವರು ಯಾರು ಎದಿರುಗಡೆ ಬರಬಾರದು ಅನ್ನೋ ನಿಯಮ ಇದೆಯಂತೆ. ಮನೆಯಲಿ ಯಾರದರು ತಂದು ಇಟ್ಟರೆ ಕನಿಷ್ಟ ಮೂರು ವರ್ಷ ಗಣೇಶನ್ನು ತರಬೇಕು ಅನ್ನೋ ನಿಯಮವಿದೆ ಅನ್ನುತ್ತಾರೆ. ಮನಸ್ಸಿಗೆ ಬಂದ ದಿನ ಗಣೇಶನನ್ನು ಇಡೋದಿಲ್ಲ. ಹಬ್ಬದ ದಿನದಂದೇ ಇಡುತ್ತಾರೆ. ಕೆಲವರು ಅಂದೇ ಮೂರ್ತಿಯನ್ನು ವಿಸರ್ಜಿಸಿದರೇ, ಇನ್ನು ಕೆಲವರು ಮೂರು ದಿನವಾದ ಮೇಲೆ ವಿಸರ್ಜಿಸುತ್ತಾರೆ. ತಂದ ಗಣೇಶನ ವಿಗ್ರಹಕ್ಕೆ ಮೊದಲು ಪ್ರಾಣ ಪ್ರತಿಷ್ಟೆ ಮಾಡುತ್ತಾರೆ. ಪ್ರಾಣ ಪ್ರತಿಷ್ಟೆ ಎಂದರೆ ಮೂರ್ತಿಗೆ ದೇವರನ್ನು ಆಹ್ವಾನಿಸುವುದು ಅಂತ ಅರ್ಥ. ಅದಕ್ಕೆ ಕೆಲವು ಪೂಜೆಗಳಿವೆ. ನನಗೆ ಅದರ ಬಗ್ಗೆ ಅಷ್ಟು ಮಾಹಿತಿಯಿಲ್ಲ. ಹೀಗೆ ಒಂದು ಕ್ರಮಬದ್ದವಾಗಿ ಆಚರಿಸುತ್ತಾರೆ.
ಈಗ ಪ್ರವೇಶವಾಗುತ್ತಿರುವವನು ನಮ್ಮ ಕಥಾನಾಯಕ ಗಣೇಶ ಶೆಟ್ಟಿ. ಗಣೇಶ ಶೆಟ್ಟಿ ಮೂಲತಃ ದಕ್ಷಿಣ ಕನ್ನಡದವನು. ಹೊಟ್ಟೆ ಪಾಡಿಗಾಗಿ ನಮ್ಮ ಊರಿಗೆ ತನ್ನ ಸಂಸಾರದ ಜೊತೆ ಬಂದು ಕೂಲಿ ಕೆಲಸ ಮಾಡುತ್ತಿದ್ದವನು ಕ್ರಮೇಣ ಜನರಲ್ಲಿ ವಿಶ್ವಾಸ ಗಳಿಸಿ ತನ್ನೂರಿನ ಕೆಲವರನ್ನು ಕರೆತಂದು ಇಲ್ಲಿ ಕೆಲಸವನ್ನು ಗುತ್ತಿಗೆಗೆ ಹಿಡಿದು ಮೇಸ್ತ್ರಿಯಾಗಿ ಬಡ್ತಿ ಹೊಂದಿದ್ದ. ಮಸ್ತುಕಟ್ತಾದ ಶರೀರ, ಆರು ಅಡಿ ಎತ್ತರದ ಗಣೇಶ ಶೆಟ್ಟಿ ಸುಮಾರು ನಲವತ್ತರ ಆಜುಬಾಜಿನವನು. ಹೆಚ್ಚಾಗಿ ಆತ ಉಡುತ್ತಿದ್ದು ತುಂಡು ಬಟ್ಟೆ. ಅದು ಅವನ ಕೆಲಸಕ್ಕೆ ಅನುಕೂಲವಾಗುತ್ತಿತ್ತು ಅನ್ಸತ್ತೆ. ಕೆಲಸದ ಮದ್ಯೆ ಬೀಡಿ ಸೇದೊದು ಅವನ ಅಭ್ಯಾಸ.
ಸುಮಾರು ಹದಿನೈದು ವರ್ಷಗಳ ಹಿಂದೆ ಗಣೇಶ ಹಬ್ಬದ ಸಮಯದಲ್ಲಿ ಆತ ಕೆಲಸ ಮಾಡುತ್ತಿದ್ದಿದ್ದು ನಮ್ಮೂರಿನ ಹೆಗಡೆಯವರ ಮನೆಯಲ್ಲಿ. ಹಬ್ಬ ಹತ್ತಿರವಾಗುತ್ತಿದ್ದ ಹಾಗೆ ಹೆಗಡೆಯವರಿಗೆ ಒಬ್ಬ ಕೆಲಸದವನು ಒಂದು ಕುತೂಹಲ ಸುದ್ದಿ ತರ್ತಾನೆ. ನಿಮ್ಮ ಮನೆಗೆ ಊರಿನ ಒಂದಿಷ್ಟು ಹುಡುಗರು ಗಣೇಶನ್ನು ತಂದು ಇಡುತ್ತಾರೆ ಅಂತ. ವಿಷಯ ಕೇಳಿದ ಗಣೇಶ ಶೆಟ್ಟಿ "ಹೆಗ್ಡೇರರೇ, ಯಾರು ಬತ್ರೋ ಕಾಣ್ತೇ, ಅವತ್ತು ರಾತ್ರಿ ನಾನು ನಿಮ್ಮ ಮನೆ ಹೊರಗೆ ಮಲಗ್ತೆ" ಅಂತ ಹೇಳಿದ್ದ. ಹೆಗಡೆಯವರು ಸುಮ್ಮನಿದ್ದರು.
ಅವತ್ತು ಆತ ಮೊದಲೇ ಹೇಳಿದಂತೆ ಹೆಗಡೆಯವರ ಮನೆಯ ಹೊರಗೆ ಮಲಗಿದ್ದ. ಮದ್ಯರಾತ್ರಿಯ ಸಮಯ, ಊರಿನ ಐದು ಹುಡುಗರು ಗಣೇಶನನ್ನು ತೆಗೆದುಕೊಂಡು ಹೆಗಡೆಯವರ ಮನೆಯತ್ತ ಹೊರಟರು. ಅವರಿಗೆ ಗಣೇಶ ಶೆಟ್ಟಿಯ ಬಗ್ಗೆ ಅರಿವಿರಲಿಲ್ಲ. ಎಲ್ಲರ ಮನಸ್ಸಲಿ ಎನೋ ಒಂದು ರೀತಿಯ ಪುಳಕ. ಇಬ್ಬರು ದಾರಿ ಕಾಣಲೆಂದು ದಂದಿ ತಂದಿದ್ದರು. ಹೆಗಡೆಯವರ ಮನೆಯ ಅಂಗಳಕ್ಕೆ ಬಂದಾಗ ಅವರಿಗೆ ಗಣೇಶ ಶೆಟ್ಟಿ ಹೊರಗಡೆ ಮಲಗಿದ್ದಿದ್ದು ಕಾಣಿಸುತ್ತದೆ. ಒಬ್ಬ ಸುಮ್ಮನೆ ಹತ್ತಿರ ಬಂದು ನೋಡಿದಾಗ ಗಣೇಶ ಶೆಟ್ಟಿ ಈ ಲೋಕದಲ್ಲಿ ಇರಲಿಲ್ಲ. ಗಾಡ ನಿದ್ರೆಯಲಿದ್ದ. ಆತನ ಗೊರಕೆಯ ಸದ್ದು ದೊರದಲ್ಲಿ ನಿಂತಿದ್ದವರಿಗೆ ಕೇಳಿಸುತ್ತಿತ್ತು. ಬಂದವನು ಗಣೇಶ ಶೆಟ್ಟಿಯ ಪರಿಸ್ಥಿತಿಯನ್ನು ಗಮನಿಸಿ ಅವನಿಂದ ತಮಗೇನು ಅಪಾಯವಿಲ್ಲವೆಂದರಿತು ಎಲ್ಲರಿಗೂ ವಿಷಯ ತಿಳಿಸಿದ. ಎಲ್ಲರೂ ಒಳಗೆ ಬಂದು ಮನೆಯ ಬಾಗಿಲಲ್ಲಿ ಗಣೇಶನ್ನು ಇಟ್ಟು, ಆತನಿಗೆ ಪೂಜೆಯನ್ನು ಮಾಡಿದರು. ಪೂಜೆ ಮಂಗಳಾರತಿಯ ತನಕ ಬಂದರೂ ಮನೆಯವರಿಗಾಗಲಿ ಅಥವಾ ಗಣೇಶ ಶೆಟ್ಟಿಗಾಗಲಿ ಇದರ ಅರಿವಿರಲಿಲ್ಲ. ಮಂಗಳಾರತಿಯ ಸಮಯದಲ್ಲಿ ಜಾಂಗಟೆ ಹೊಡೆಯುವುದು ಸಾಮಾನ್ಯ. ಹಾಗೆ ಇಲ್ಲಿ ಮಂಗಳಾರತಿಯನ್ನು ಒಬ್ಬರು ಮಾಡ್ತಾಯಿದ್ದರು ಇನ್ನೊಬ್ಬರು ಅಲ್ಲೇ ಹತ್ತಿರದಲ್ಲಿ ಮಲಗಿದ್ದ ಗಣೇಶ ಶೆಟ್ಟಿಯ ಕಿವಿಯ ಹತ್ತಿರ ಜಾಂಗಟೆಯನ್ನು ಜೋರಾಗಿ ಬಡಿದರು. ಪಕ್ಕದಲ್ಲಿದ್ದವರು ಪಟಾಕಿಯನ್ನು ಅದೇ ಸಮಯದಲ್ಲಿ ಹೊಡೆದರು. ಗಾಡ ನಿದ್ರೆಯಲ್ಲಿದ್ದ ಗಣೇಶ ಶೆಟ್ಟಿಗೆ ಏನಾಗುತ್ತಿದೆ ಅನ್ನುವುದು ತಿಳಿಯಲಿಲ್ಲ. ದಿಗ್ಗನೆ ಎದ್ದು ಕುಳಿತಿದ್ದವನನು ನೋಡಿದ ಎಲ್ಲರೂ ಗೊಳ್ಳೆಂದು ನಗಲು ಪ್ರಾರಂಭಿಸಿದರು. ಗಣೇಶನಿಗೆ ಯಾರೋ ಕಳ್ಳರು ಬಂದಿದಾರೆ ಅಂತ ಯೋಚಿಸಿದವನೇ ಪಕ್ಕದಲ್ಲಿ ಇದ್ದ ಕತ್ತಿಯನ್ನು ಎತ್ತಿ ಇವರ ಮೇಲೆರಗಿದ. ಸುಮ್ಮನೆ ತಮಾಷೆಗೆ ಮಾಡ್ತಾಯಿದ್ದಾನೆ ಅಂತ ಎಲ್ಲ ಭಾವಿಸಿದರು. ಆದರೆ ಗಣೇಶ ಅಲ್ಲೇ ಇದ್ದವನ ಕೊರಳಿಗೆ ಕೈ ಹಾಕಿದ್ದನ್ನು ನೋಡಿ, ಇವನು ಕೊಲೆ ಮಾಡಬಹುದೆಂದು ಹೆದರಿ ಗಣೇಶ ಶೆಟ್ಟಿಯನ್ನು ಎಲ್ಲ ತಳ್ಳಿ ಚಪ್ಪಲಿಯನ್ನು ಹಾಕಿ ಕೊಳ್ಳದೇ ದಿಕ್ಕಾಪಾಲಾಗಿ ಓಡಿದರು. ಗಣೇಶ ಶೆಟ್ಟಿ ಹಿಂದಿನಿಂದ ಆಟ್ಟಿಸಿಕೊಂಡು ಬರುತ್ತಿದ್ದ. ಬಂದವರೆಲ್ಲಾ ರಸ್ತೆ ಬಿಟ್ಟು ಗುಡ್ಡ ಹತ್ತಿ ಹಾಗೋ ಹೀಗೋ ಮನೆ ಸೇರಿದರು. ಮೈಯೆಲ್ಲ ಗಾಯವಾಗಿತ್ತು. ಅರ್ದ ಘಂಟೆಯ ಹಿಂದಿದ್ದ ಉತ್ಸಾಹವೆಲ್ಲ ಇಳಿದು ಸದ್ಯ ಬದುಕಿ ಉಳಿದೆವೆಲ್ಲ ಅಂತ ತಮಗೆ ತಾವೇ ಸಮಾಧಾನ ಹೇಳಿಕೊಂಡರು. ಗಣೇಶ ಶೆಟ್ಟಿ ಎಲ್ಲರನ್ನೂ ಮನಸಾರೆ ಬೈಯುತ್ತಾ ಹೆಗಡೆಯವರ ಮನೆಗೆ ವಾಪಾಸಾದ. ಸದ್ದು ಕೇಳಿದ ಹೆಗಡೆಯವರ ಮನೆಯವರೆಲ್ಲಾ ಮನೆಯ ಹೊರಗೆ ಬಂದಾಗ ಅವರಿಗೆ ಕಂಡಿದ್ದು ಪೂಜೆ ಮಾಡಿಸಿಕೊಂಡಿದ್ದ ಗಣೇಶ ಮೂರ್ತಿ ಮತ್ತು ಇಡಲು ಬಂದವರಿಗೆ ಪೂಜೆ ಮಾಡಲು ಹೋಗಿ ಅವರು ಸಿಗದೇ ವಾಪಸು ಬಂದು ಎನಾಗಿದೆ ಎಂಬ ಅರಿವಿಲ್ಲದ ಗಣೇಶ ಶೆಟ್ಟಿ.
ಹೆಗಡೆಯವರ ಮನೆಯ ಬಾಗಿಲಲ್ಲಿ ಇದ್ದ ಗಣಪ ಎಲ್ಲರನ್ನು ನೋಡಿ ತನ್ನಷ್ಟಕ್ಕೆ ಮನಸಲ್ಲಿ ನಗುತ್ತಿದ್ದ.
Friday, October 3, 2008
ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ
ನನ್ನ ಆಫೀಸು ಇರೋದು ಎಲೆಕ್ಟಾನಿಕ್ ಸಿಟಿನಲ್ಲಿ. ಮನೆಗೂ ಆಫೀಸಿಗೂ ಕೇವಲ 35 ಕಿ.ಮಿ ಮಾತ್ರ. ಮೊದಲು ಕಾರಿನಲ್ಲಿ ಹೋಗ್ತಾಯಿದ್ದೆ. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಕಾರು ಓದ್ಸೋದು ಅಂದರೆ ದೊಡ್ಡ ಯಜ್ಞ ಮಾಡಿದ ಹಾಗೆ. ಅದಕ್ಕೆ ಆಫೀಸು ಬಸ್ಸನ್ನು ಆಯ್ಕೆ ಮಾಡಿಕೊಂಡೆ. ದಿನಾ ನಾನು ಸುತ್ತೋದು ಬರೋಬ್ಬರಿ 70 ಕಿ.ಮಿ. ದಿನದಲ್ಲಿ ಮೂರು ತಾಸು ಬಸ್ಸಿನಲ್ಲಿ ಪ್ರಯಾಣ. ಆ ಸಮಯ ಹೇಗೆ ಕಳೆಯೋದು ಅನ್ನೋದೇ ದೊಡ್ಡ ಸಮಸ್ಯೆ. ಆಗ ಇಲ್ಲಸಲ್ಲದ ವಿಷಯಗಳು ಎಲ್ಲ ನೆನಪಿಗೆ ಬರೊತ್ತೆ. ಅದರಿಂದ ಪ್ರಯೋಜನವು ನಾಸ್ತಿ. ಆಗ ಹೊಳೆದಿದ್ದು ಪುಸ್ತಕಗಳು. ದಿನದ ಮೂವತ್ತು ನಿಮಿಷನಾದ್ರೂ ಓದಬೇಕು ಅಂತ ತೀರ್ಮಾನ ಮಾಡಿದೆ. ಮತ್ತೆ ಓದಲು ಪ್ರಾರಂಭಿಸಿದೆ.
ಲಿಂಕ್: http://pratapsimha.com/books/narendra-modi.pdf
Thursday, September 25, 2008
ಇಲ್ಲ... ಇಲ್ಲ.. ಇಲ್ಲ
ಬರೆಯಬೇಕಿನಿಸುವುದಿಲ್ಲ,
ಬರೆಯಲೇ ಬೇಕೆಂದು ಕುಳಿತಾಗ
ಮನಸು ಓಡುವುದಿಲ್ಲ,
ಬರೆಯಲು ಮನಸು ಬಂದಾಗ
ಸಮಯ ನನ್ನಲ್ಲಿರುವುದಿಲ್ಲ.
ನಾಲ್ಕು ಚೌಕದ ಒಳಗಿದ್ದಾಗ
ಹೊರ ಪ್ರಪಂಚದರಿವಿರುವುದಿಲ್ಲ,
ಹೊರಗೆ ಹೋಗಲೆಂದರೆ
ಕೆಲಸ ಬಿಡುವುದಿಲ್ಲ,
ಹೊರಗೆ ಕಾಲಿಟ್ಟಾಗ
ಸಮಯ ನನ್ನಲ್ಲಿರುವುದಿಲ್ಲ.
ದಿನದ ಕೆಲಸದ ನಡುವೆ
ಸಮಯದ ಅರಿವಿರುವುದಿಲ್ಲ,
ಮಳೆ ಗಾಳಿ ಚಳಿ ಬಿಸಿಲು
ಎನಗೆ ತಿಳಿಯುವುದಿಲ್ಲ,
ತಿಳಿಯುವ ಮನಸ್ಸಿದ್ದರೂ
ಸಮಯ ನನ್ನಲ್ಲಿರುವುದಿಲ್ಲ.
Sunday, August 3, 2008
ಅನಾಮಿಕ ಗೆಳೆಯ
ಮೊನ್ನೆ ಬೆಳಿಗ್ಗೆ ಮಧು ಫೋನ್ ಮಾಡಿದ್ದ. "ನನ್ನ ಫ್ರೆಂಡಿಗೆ ಹುಷಾರಿಲ್ಲ. ಅವರು ತುಂಬಾ ಬಡವರು, ಮೊನ್ನೆ ಮೊನ್ನೆಯಷ್ಟೇ ಅವನ ತಾಯಿ ಆರೋಗ್ಯ ಸರಿ ಇರ್ಲಿಲ್ಲ. ಅದಕ್ಕೆ ಬಹಳ ಖರ್ಚಾಗಿತ್ತು. ಈಗ ಇವನಿಗೆ ಹುಶಾರಿಲ್ಲ. ಆಸ್ಪತ್ರೆಯಲ್ಲಿದ್ದಾನೆ. ಆಪರೇಷನ್ನಿಗೆ ಸುಮಾರು ಎರಡು ಲಕ್ಷದ ಮೇಲೆ ಖರ್ಚಾಗತ್ತಂತೆ. ನಿನ್ನೆ ಆಸ್ಪತ್ರೆಗೆ ಹೋಗಿದ್ದೆ. ನನ್ನ ಕಾಲು ಹಿಡಿದು ಅತ್ತ. ಹೇಗಾದ್ರು ಮಾಡಿ ಹಣ ಸಹಾಯ ಮಾಡು ಅಂತ ಅತ್ತಿದ್ದ. ನಿನಗೆ ಬಹಳ ಜನ ಪರಿಚಯ ಇದ್ದಾರಲ್ಲ. ಅವನಿಗೆ ಸಹಾಯ ಮಾಡು. ಐವತ್ತು ನೊರಾದರೂ ತೊಂದರೆಯಿಲ್ಲ" ಅಂದ.
ಸಾವು ತನ್ನನ್ನು ಕರಿತಾಯಿದೆ ಎಂದು ಒಬ್ಬ ವ್ಯಕ್ತಿಗೆ ತಿಳಿದಾಗ ಅವನ ಮನಸ್ಸಲ್ಲಿ ಎನೇನು ಯೋಚನೆಗಳು ಉದ್ಬವಿಸಬಹುದು ಗೆಳೆಯರೇ. ಹೇಗಾದರೂ ಮಾಡಿ ತಾನು ಬದುಕಬೇಕು ಅಂತ ಮೊದಲು ಮನಸ್ಸಿಗೆ ಬರುತ್ತದೆ ಅಲ್ಲವೇ.
"ವೈದ್ಯೋ ನಾರಾಯಣೋ ಹರಿ" ಅಂತ ವೇದ ಹೇಳಿದೆ. ವೈದ್ಯರು ದೇವರಿಗೆ ಸಮಾನ. ಎಲ್ಲ ಕೆಲಸಗಳಿಗಿಂತ ಹೆಚ್ಚು ಮನಸ್ಸಿಗೆ ಸಮಾಧಾನ ಸಿಗೋದು ಒಬ್ಬ ವ್ಯಕ್ತಿಯ ಪ್ರಾಣ ಉಳಿಸೋದರಲ್ಲಿ. ಅದರಲ್ಲಿ ಸಿಗೋ ಸಮಾಧಾನ ಬೇರೆ ಎಲ್ಲೂ ಸಿಗೊಲ್ಲ. ಅದು ವೈದ್ಯವೃತ್ತಿಗೆ ಮಾತ್ರ. ಆದರೆ ಇಂದಿನ ವ್ಯಾಪಾರೀಕರಣದಲ್ಲಿ ಮಾನವತೆಗೆ ಬೆಲೆಯಿಲ್ಲ. ಬರೀ ದುಡ್ಡಿಗೆ ಮಾತ್ರ ಬೆಲೆ. ಒಬ್ಬ ವ್ಯಕ್ತಿಯನ್ನು ಅಳೆಯೋದು ದುಡ್ಡಿನ ಮೇಲೆ. ಇಂದಿನ ಕೆಲವು ವೈದ್ಯರು ಮೇಲೆ ಹೇಳಿದ ಗಾದೆಗೆ ಉಲ್ಟಾಯಿರ್ತಾರೆ. ರೋಗವನ್ನೇ ಎನ್ಕ್ಯಾಷ್ ಮಾಡಿಕೊಂಡು ಅದು ಇದು ಅಂತ ದುಡ್ಡು ಸುಲಿಯೋರೆ ಜಾಸ್ತಿ. ಅಲ್ಲೋ ಇಲ್ಲೋ ಓಂದಿಷ್ಟು ಒಳ್ಳೆಯ ವೈದ್ಯರುಗಳು ಸಿಗ್ತಾರೆ. ಇಂದಿನ ಆಧುನಿಕ ವೈದ್ಯಕೀಯ ಸೌಲಭ್ಯಗಳು ಬಡವರಿಗೆ ಸಿಗೋದು ಬಹಳ ಕಷ್ಟ.
ಮಧು ನನಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ನಾನು ಆಯ್ತು ನನ್ನ ಎಲ್ಲರಿಗೂ ವಿಷಯ ತಿಳಿಸ್ತೇನೆ. ಖಂಡಿತಾ ಸಹಾಯ ಮಾಡ್ತೀನಿ. ಆದ್ರೆ ಅವನ ಪೂರ್ತಿ ವಿಷಯ ತಿಳಿಸು. ಆತನ ವಿವರ, ರೋಗದ ಬಗ್ಗೆ, ಆಸ್ಪತ್ರೆ ಬಗ್ಗೆ ಎಲ್ಲ ನನಗೆ ಹೇಳು ಅಂದಿದ್ದೆ. ವಿವರವಿಲ್ಲದೇ ಇದ್ದರೆ ಕೆಲವರು ಸಹಾಯ ಮಾಡೊಲ್ಲ. ಅದಕ್ಕೆ ವಿವರ ಕೊಡು ಅಂದೆ. ಅದಕ್ಕೆ ಮಧು ಇನ್ನು ಅರ್ದ ಘಂಟೆಯೊಳಗೆ ವಿವರ ಕೊಡ್ತೀನಿ ಅಂದ. ತಕ್ಷಣ ನನ್ನ ಆತ್ಮೀಯ ಸ್ನೇಹಿತರಿಗೆ ವಿಷಯ ತಿಳಿಸಿದ್ದೆ.
ಸುಮಾರು ಎರಡು ಘಂಟೆಯ ಮೇಲೆ ಮಧು ಫೋನ್ ಮಾಡಿದ್ದ. ಆತನ ದ್ವನ ಬಾಡಿತ್ತು. ಆತನ ವಿವರ ಕೊಡು ಅಂದೆ. ಅದಕ್ಕೆ ಆತ ಇಲ್ಲ. ಆತ ತೀರಿಕೊಂಡ ಅಂತ ನನಗೆ ಹೇಳ್ದ. ಮನಸ್ಸಿಗೆ ಬಹಳ ಬೇಸರವಾಯ್ತು.
ದೇವರು ಆ ಗೆಳೆಯನ ಆತ್ಮಕ್ಕೆ ಶಾಂತಿ ನೀಡಲಿ. ಆತನ ಮನೆಯವರಿಗೆ ಧೈರ್ಯ ನೀಡಲಿ.
Wednesday, July 9, 2008
ಕ್ರೆಡಿಟ್ ಕಾರ್ಡ್ ಮತ್ತು ಸೋಮಾರಿತನ
ಹಿಂದೊಮ್ಮೆ ಕ್ರೆಡಿಟ್ ತಗೋಬೇಕು ಅಂದ್ರೆ ನೂರೆಂಟು ದಾಖಲೆ ಕೊಡ್ಬೇಕಿತ್ತು. ಆಗ ಕೆಲವೇ ಕಂಪನಿಗಳು ಇದ್ವು. ಈಗ ನಾಯಿ ಕೊಡೆ ಹಾಗೆ ಕ್ರೆಡಿಟ್ ಕಾರ್ಡ್ ಕಂಪನಿಗಳು ತಲೆ ಎತ್ತಿವೆ. ಒಂದೆರಡು ದಾಖಲೆ ಕೊಟ್ರೆ ಸಾಕು. ಒಂದೆರಡು ದಿನದಲ್ಲಿ ಮನೆಗೆ ಬಂದಿರತ್ತೆ. ಲೈಫ್ ಟೈಮ್ ಫ್ರೀ ಸಾರ್ ಅಂತ ಹೇಳ್ತಾರೆ. ಆಮೇಲೇ ಅದು ಇದು (ಹಿಡನ್ ಚಾರ್ಜಸ್) ಹಾಕ್ತಾರೆ. ಅಕಸ್ಮಾತ್ ಕಟ್ಟೋದು ಒಂದೆರಡು ದಿನ ಲೇಟಾದ್ರೆ ಬಡ್ಡಿ, ಚಕ್ರಬಡ್ಡಿ ಅಂತೆಲ್ಲಾ ಹಾಕ್ತಾರೆ. ಕಟ್ಟಿ ಮುಗ್ಸೋದ್ರಲ್ಲಿ ಸಾಕು ಬೇಕಾಗಿರತ್ತೆ. ಈ ರೀತಿ ಅನುಭವ ಹೆಚ್ಚಿನ ಜನರಿಗೆ ಆಗಿರತ್ತೆ. ಈ ಕ್ರೆಡಿಟ್ ಕಾರ್ಡ್ ಏನಾದ್ರು ಕಳೆದು ಹೋದ್ರೆ ತುಂಬಾ ಕಷ್ಟ. ಯಾರು ಬೇಕಾದ್ರೂ ಉಪಯೋಗಿಸಬಹುದು. ಕಾರ್ಡಿನಲ್ಲಿ ಇರೋ ಸೈನು ಮತ್ತು ಮಾಡಿದ ಸೈನು ಸರಿ ಇರತ್ತೋ ಅಂತನೂ ಚೆಕ್ ಮಾಡೊಲ್ಲ. ಆದ್ದರಿಂದ ಕಳೆದು ಹೋದ್ರೆ ತಕ್ಷಣ ಕಸ್ಟಮರ್ ಕೇರ್ ಗೆ ಫೋನಾಯಿಸಿ ಅವರು ಕೇಳುವ ಸಾವಿರ ಪ್ರಶ್ನೆಗೆ ಉತ್ತರಿಸಿ, ಅದು ಅವರಿಗೆ ಓಕೆ ಆದ್ರೆ ನಮ್ಮ ಕಾರ್ಡನ್ನು ಬ್ಲಾಕ್ ಮಾಡ್ತಾರೆ. ನೂರಕ್ಕೆ ೯೦ ಭಾಗ ಜನರು ತಮ್ಮ ಕ್ರೆಡಿಟ್ ಕಾರ್ಡ್ ನಂಬರನ್ನು ಬರೆದಿಟ್ಟುಕೊಂಡಿರಲ್ಲ. ಕಳೆದು ಹೋದಾಗ ಒದ್ದಾಡ್ತಾರೆ.
ಏನಪ್ಪ ಇದು...ಸೋಮಾರಿತನಕ್ಕೂ ಕ್ರೆಡಿಟ್ ಕಾರ್ಡಿಗೂ ಏನು ಸಂಬಂಧ ಅಂತ ಅನಿಸಿರಬೇಕು...ಇದೇ ಸ್ವಾಮಿ. ಇದೇ...
ಕ್ರೆಡಿಟ್ ಕಾರ್ಡಿನ ನಂಬರನ್ನು ಒಂದು ಕಡೆ ಬರೆದಿಟ್ಟುಕೊಳ್ಳದೇ ಇರೋದು ಸೋಮಾರಿತನ. ಇವತ್ತು ನನಗೆ ಹಾಗೆ ಆಯ್ತು. ನಿನ್ನೆ ರಾತ್ರಿ ಬ್ಯಾಂಕಿಗೆ ಹೋಗಿ ಬರುವಾಗ ಪರ್ಸನ್ನು ಕಾರಲ್ಲೇ ಇಟ್ಟಿದ್ದೆ. ಕೆಲವು ದಿನಗಳಿಂದ ಈ ಕೆಟ್ಟ ಟ್ರಾಫಿಕ್ಕಿನಲ್ಲಿ ಕಾರು ಓಡಿಸೋದು ಕಷ್ಟ, ಆಫಿಸಿನ ಬಸ್ಸು ಸ್ವಲ್ಪ ಲೇಟಾದ್ರು ಸರಿ ಟೆನ್ಶನ್ ಇರೊಲ್ಲ ಅಂತ ಆಫೀಸಿನ ಬಸ್ಸಿನಲ್ಲಿ ಹೋಗ್ತಾಯಿದೀನಿ. ನಿನ್ನೆ ಬ್ಯಾಂಕಿಂದ ಬರೋವಾಗ ಪರ್ಸು ಕಾರಲ್ಲಿ ಇಟ್ಟಿದ್ದೆ. ಬೆಳಗ್ಗೆ ಕಾರು ಹೊರಗೆ ತೆಗೆದಿಡುವಾಗ ಅದನ್ನು ಜೇಬಿಗೆ ಹಾಕಿಕೊಂಡ ನೆನಪು. ಆಫೀಸಿಗೆ ಬಂದು ನೋಡೋವಾಗ ಪರ್ಸು ನಾಪತ್ತೆ. ತಕ್ಷನ ಬಸ್ಸಿನ ಡ್ರೈವರಿಗೆ ಫೋನ್ ಮಾಡಿ ಬಸ್ಸನ್ನು ಜಾಲಾಡಲು ಹೇಳಿದೆ. ಅಲ್ಲಿ ನನ್ನ ಪರ್ಸಿರಲಿಲ್ಲ. ಪರ್ಸಿನ ಒಳಗೆ ಒಂದೆರಡು ಕ್ರೆಡಿಟ್ಟು ಮತ್ತು ಡೆಬಿಟ್ ಕಾರ್ಡಿದ್ದವು. ಅವುಗಳ ನಂಬರನ್ನು ಹುಡೋಕೋದು ದೊಡ್ಡ ಕೆಲಸ. ಎಷ್ಟೋ ಸಲ ಅವುಗಳನ್ನು ಜೆರಾಕ್ಸ್ ಮಾಡಿ ಮನೇಲಿ ಇಡಬೇಕು ಅಂತ ಯೋಚಿಸಿದ್ದರೂ ಅದು ಕಾರ್ಯಗತವಾಗಿರಲಿಲ್ಲ. ಕಾರಣ ಬೇರೆ ಎನೂ ಅಲ್ಲ. ಸೋಮಾರಿತನ ಅಷ್ಟೆ.
ಮನೆಗೆ ಫೋನು ಮಾಡಿ ಕೇಳಿದಾಗ ನನ್ನ ಪರ್ಸ್ಸು ಕಾರಲ್ಲಿ ಹಾಯಾಗಿ ಮಲಗಿತ್ತು.
ತಕ್ಷಣ ಬ್ಲಾಗಿನಲ್ಲಿ ಬರಿಯೋಕೆ ಶುರು ಹಚ್ಕೊಂಡೆ. ಇದ್ರಿಂದ ಒಂದು ಸಹಾಯ ಅಗತ್ತೆ. ಆಗಾಗ್ಗೆ ಬ್ಲಾಗನ್ನು ನೋಡೋವಾಗ ಕ್ರೆಡಿಟ್ ಕಾರ್ಡಿನ ನೆನಪಾಗತ್ತೆ ಮತ್ತು ಅದರ ಜೆರಾಕ್ಸನ್ನು ಮಾಡಿಸಿದ್ದೇನಾ ಅಂತ ನನಗೆ ಅರಿವಾಗತ್ತೆ.
ನೀವೂ ಕ್ರೆಡಿಟ್ ಕಾರ್ಡಿನ ನಂಬರನ್ನು ಎಲ್ಲಾದರೂ ಒಂದು ಕಡೆ ಬರೆದಿಟ್ಟು ಕೊಳ್ಳೋದನ್ನ ಮರೀಬೇಡಿ. ಕಾಲ ಕಾಲಕ್ಕೆ ಕ್ರೆಡಿಟ್ ಕಾರ್ಡಿನ ವಿವರ ನೋಡ್ತಾಯಿರಿ.
Monday, June 30, 2008
ಆ ಬೆಟ್ಟದ ತುದಿಯಲ್ಲಿ
ಮುಖದಲ್ಲಿ ನಗುವಿತ್ತು,
ಜೊತೆಗೆ ಚುಮು ಚುಮು ಚಳಿಯಿತ್ತು,
ಆ ಬೆಟ್ಟದ ತುದಿಯಲ್ಲಿ
ಯಾರ ಹಂಗಿರಲಿಲ್ಲ,
ಯಾರ ಕೊಂಗಿರಲಿಲ್ಲ,
ಯಾರ ನೆನಪೂ ಇರಲಿಲ್ಲ,
ಆ ಬೆಟ್ಟದ ತುದಿಯಲ್ಲಿ
ಅಲ್ಲಿ ಮೌನವಿತ್ತು,
ಅಲ್ಲಿ ಶೂನ್ಯವಿತ್ತು,
ಅಲ್ಲಿ ಧ್ಯಾನವಿತ್ತು,
ಆ ಬೆಟ್ಟದ ತುದಿಯಲ್ಲಿ
ದಿನದ ಜಂಜಾಟವಿರಲಿಲ್ಲ,
ದಿನದ ಕೆಲಸವಿರಲಿಲ್ಲ,
ದಿನದ ಒತ್ತಡವಿರಲಿಲ್ಲ
ಆ ಬೆಟ್ಟದ ತುದಿಯಲ್ಲಿ
- ಕೆಲವು ದಿನಗಳ ಹಿಂದೆ ಮುನ್ನಾರಿಗೆ ಹೋದಾಗ ನನಗನಿಸಿದ್ದು. ಮೇಲಿನ ಚಿತ್ರ ಮುನ್ನಾರಿನ ಟಾಪ್ ಸ್ಟೇಷನ್ ದು
Saturday, June 28, 2008
ವೃತ್ತಿ
"ಬಂದೇ.." ಅಂತ ಗುಡಿಸಿಲಿನ ಒಳಗಿಂದ ಒಂದು ಆಕೃತಿ ಬಂತು. ಊರುಗೋಲು ಹಿಡಿದು ಹೊರಗೆ ಬಂದು ನನ್ನನ್ನು ದಿಟ್ಟಿಸಿ "ಓ ಅಪ್ಪಿ, ಯಾವಾಗ ಬಂದ್ರಿ" ಅಂದ. ನನ್ನಜ್ಜನ ವಯಸ್ಸಿನ ಮಂಜು ನನಗೆ ಗೌರವ ಕೊಟ್ಟಿದ್ದು ಇರಿಸುಮುರಿಸಾಯ್ತು. ಒಳಗಿಂದ ಯಾರು ಅಂತ ಹೇಳ್ತಾ ಮಂಜು ಹೆಂಡ್ತಿ ಮಂಜಿ ಬಂದ್ಲು. ಮಂಜಿಗೆ ಇತ್ತೀಚೆಗೆ ಕಣ್ಣು ಕಾಣಿಸೊಲ್ಲ ಅಂತ ಅಮ್ಮ ಹೇಳಿದ್ದು ನೆನಪಾಯ್ತು. "ಭಟ್ಟರ ಮಗ ಬಂದಿದಾರೆ" ಅಂತ ಮಂಜು ಹೇಳ್ದ. ಅವನನ್ನೇ ಗಮನಿಸಿದೆ. ಮಂಜು ಬಹಳ ಸೋತು ಹೋಗಿದ್ದ. ಬಟ್ಟೆ ಹರಿದು ಹೋಗಿತ್ತು. ಬಣ್ಣ ಮಾಸಿತ್ತು. "ಏನ್ ಯೋಚ್ನೆ ಮಾಡ್ತಾಯಿದೀರ ಬುದ್ದಿ" ಅಂತ ಮಂಜು ಕೇಳಿದಾಗಲೇ ನಾನು ವಾಸ್ತವಕ್ಕೆ ಬಂದಿದ್ದು. "ನಿಂದೊಂದು ಫೋಟೋ ತಗೋಬೇಕು" ಅಂದೆ. ಹೊಸದಾಗಿ ಕ್ಯಾಮೆರಾ ತಗೊಂಡಿದ್ದೆ. ಊರಿಗೆ ಹೋದಾಗ ಮಂಜು ಮತ್ತು ಮಂಜಿಯ ಫೋಟೋ ತಗೋಬೇಕು ಅಂತ ಬಹಳ ದಿನದಿಂದ ಯೋಚಿಸಿದ್ದೆ. ನಾನು ಹೇಳಿದ ತಕ್ಷಣ ಮಂಜು ಗುಡಿಸಿಲಿನ ಒಳಗೆ ಹೋದ. ಹೋಗೋವಾಗ ಹೆಂಡ್ತಿಯನ್ನು ಒಳಗೆ ಕರ್ಕೊಂಡು ಹೋದ. ಯಾಕೆ ಮಂಜು ಹೋದ, ನಾನೇದ್ರು ತಪ್ಪು ಮಾತಾಡಿದ್ನೆ ಅಂತ ಗಾಭರಿಯಾದೆ. 2 ನಿಮಿಷ ಮೌನವಾಗಿದ್ದೆ. ಮತ್ತೆ ಕರೆದೆ. ಒಳಗಿಂದ "ಬಂದೇ" ಅಂದ. 5 ನಿಮಿಷ ಬಿಟ್ಟು ಇಬ್ರೂ ಹೊರಗೆ ಬಂದಿದ್ರು. ಇದ್ದ ಬಟ್ಟೆಯಲ್ಲಿ ಚೆನ್ನಾಗಿರೋದನ್ನ ಆರಿಸಿ ಉಟ್ಟುಕೊಂಡು ಬಂದಿದ್ರು. ಅವರು ನಿತ್ಯ ಹಾಕುತ್ತಿದ್ದ ಬಟ್ಟೇಯಲ್ಲಿ ಫೋಟೋ ತೆಗೀಬೇಕು ಅಂತಿದ್ದ ನನಗೆ ನಿರಾಸೆಯಯ್ತು. ಆದರೂ ಅದನ್ನು ತೋರಿಸಿಕೊಳ್ಳದೆ ಒಂದೆರಡು ಫೋಟೋ ತಗೊಂಡೆ. ಕೊನೆಗೆ ಮನೆಗೆ ಬಾ ಅಂತ ಹೊರಟೆ. ನಾನು ಮನೆಯ ದಾರಿ ಹಿಡಿದಿದ್ದೆ, ಅದ್ರೆ ನನ್ನ ಮನಸ್ಸು ಬಾಲ್ಯದ ಕಡೆ ಪಯಣಿಸಿತ್ತು.
ಸರಿಯಾಗಿ ಓದದೇ ಹೊದ್ರೆ ದನ ಕಾಯೋಕೆ ಹೋಗು ಅಂತ ನಾವು ಸಣ್ಣಕಿದ್ದಾಗ ಎಲ್ಲ ಹೇಳ್ತಿದ್ರು. ಅದ್ರಲ್ಲೂ ಭೀಮನಕೋಣೆಗೆ ದನ ಕಾಯೋಕೆ ಹೋಗು ಅಂತಿದ್ರು. ಇಂದಿಗೂ ನನಗೆ ಭೀಮನಕೋಣೆಗೂ ದನ ಕಾಯೋದಕ್ಕು ಏನು ಸಂಬಂಧ ಅಂತ ಗೊತ್ತಿಲ್ಲ. ಇದು ಸಾಗರದ ಹತ್ತಿರ ಇರೋ ಒಂದು ಸಣ್ಣ ಗ್ರಾಮ. ಬಹುಶ: ಹಿಂದೆ ಭೀಮನಕೋಣೆ ದನ ಕಾಯೋದಕ್ಕೆ ಹೆಸರುವಾಸಿಯಾಗಿರಬೇಕು. ಇರಲಿ. ಅದು ಇಲ್ಲಿ ಅಪ್ರಸ್ತುತ. ಆವಾಗ ನನಗೆ ದನ ಕಾಯೋದು ಅಂದ್ರೆ ಕೀಳು ಮಟ್ಟದ ಕೆಲಸ ಅನ್ನೋ ಭಾವನೆಯಿತ್ತು. ದನ ಕಾಯೋದು ಅಂದಾಗ ನನಗೆ ನೆನಪಾಗ್ತಾಯಿದ್ದಿದ್ದು ಮಂಜು. ಆತನ ಕೆಲಸ ದನ ಕಾಯೋದಾಗಿತ್ತು. ಹಾಗಂತ ಅದು ಅವನ ವೃತ್ತಿಯಾಗಿರಲಿಲ್ಲ. ದೇಹದಲ್ಲಿ ಶಕ್ತಿಯಿರೋ ತನಕ ಆತ ಕೂಲಿ ಕೆಲಸ ಮಾಡಿದ್ದ. ವಯಸ್ಸಾದ ಹಾಗೆ ಅವನಿಗೆ ಕೂಲಿ ಮಾಡೋಕೆ ಅಗ್ತಾಯಿರಲಿಲ್ಲ. ಮಂಜುಗೆ ಮಕ್ಕಳಿರಲಿಲ್ಲ. ಇದ್ದ ಚೂರು ಗದ್ದೆಯಿಂದ ಅವನಿಗೆ ಸಂಸಾರ ನಡೆಸಲು ಕಷ್ಟವಾದ ಕಾರಣ ಆತ ದನ ಕಾಯೋ ಕೆಲಸ ಮಾಡ್ತಾಯಿದ್ದ. ಆಗ ನಮ್ಮೂರಲ್ಲಿ ಇದ್ದ 12 ಮನೆಯಲ್ಲಿ 8 ರಿಂದ 10 ಮನೆಯವರು ದನ/ಎಮ್ಮೆ ಸಾಕಿದ್ದರು. ಬೆಳೆಗ್ಗೆ ಯಾರಾದ್ರು ಜೋರಾಗಿ ಕೂಗಿದ್ರೆ ಅದು ಮಂಜುದೇ ಅಂತ ಗೊತ್ತಾಗ್ತಾಯಿತ್ತು. ಬೆಳೆಗ್ಗೆ ಬೇಗ ತಿಂಡಿ ತಿಂದು ಮಂಜಿ ಕೊಟ್ಟ ಬುತ್ತಿಯನ್ನು ತಗೊಂಡು ಎಲ್ಲರ ಮನೆ ಹತ್ತಿರ ಜೋರಾಗಿ ಕೂಗಿ, ಬಿಟ್ಟ ದನಗಳನ್ನು ಹತ್ತಿರ ಇದ್ದ ಗುಡ್ಡಕ್ಕೆ ಹೊಡೆದುಕೊಂಡು ಹೋದರೆ ಮಂಜು ವಾಪಾಸಾಗ್ತಾಯಿದ್ದಿದ್ದು ಸಂಜೆ ಸೂರ್ಯ ಮುಳುಗೋ ಹೊತ್ತಲ್ಲಿ. ಅಲ್ಲಿಯ ತನಕ ಅದೇ ಅವನ ಪ್ರಪಂಚ. ಅವನು ಹೇಗೆ ಕಾಲ ಕಳಿತಾನೆ, ಅವನಿಗೆ ಒಂಟಿತನ ಕಾಡೊಲ್ವೆ, ಕಾಡಲ್ಲಿ ಭಯ ಆಗೊಲ್ವೆ, ಅವನ ಜೀವನದ ಗುರಿಯೇನು, ಕಾಡು ಪ್ರಾಣಿ ಬಂದ್ರೆ ಎನ್ ಮಾಡ್ತಾನೆ ಅಂತೆಲ್ಲಾ ನನ್ನ ಮನಸ್ಸಲ್ಲಿ ಪ್ರಶ್ನೆ ಏಳ್ತಾಯಿತ್ತು. ಅಲ್ಲಿ ಅವನು ಏನ್ ಮಾಡ್ತಾನೆ ಅಂತ ಕೆಲವೊಮ್ಮೆ ಅಮ್ಮನ ಹತ್ತಿರ ಕೇಳಿದ್ದೆ. ದನ ಕಾಯ್ತಾನೆ ಅಂದಿದ್ಲು.
ಮುಂದೆ ಹಳ್ಳಿಯಲ್ಲಿದ್ದರೆ ಉತ್ತಮ ವಿಧ್ಯಾಬ್ಯಾಸ ಸಿಗದೆಂಬ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದೆ. ಇಲ್ಲಿ ಬಂದು ಓದಿ, ಕೆಲಸಕ್ಕೆ ಸೇರಿಯೂ ಆಯ್ತು. ಸಣ್ಣಕ್ಕಿದ್ದಾಗ ಶಾಲೆಯಲ್ಲಿ ನಿಮ್ಮ ಗುರಿಯೇನು ಅಂತ ಕೇಳಿದ್ರು. ನಾನು ಏನೂ ಹೇಳಿರಲಿಲ್ಲ. ಮನೆಗೆ ಹೋದಮೇಲೆ ಮಂಜು ಹತ್ರ ಒಮ್ಮೆ ಕೇಳಿದ್ದೆ. ನಿನ್ನ ಗುರಿಯೇನು ಅಂತ. ಅದಕ್ಕೆ ಆತ ಶಕ್ತಿಯಿರೋ ಅಷ್ಟು ದಿನ ಕೆಲಸ ಮಾಡ್ತೀನಿ ಆಮೇಲೆ ದೇವ್ರು ನೋಡ್ಕೋತಾನೆ ಅಂದಿದ್ದ. ಮುಂದೆ ಮಂಜಿನ ಯಾರು ನೋಡ್ಕೋತಾರೆ ಅಂದಾಗ ಅಕ್ಕಪಕ್ಕದ ಮನೆಯವ್ರು ನೋಡ್ಕೋತಾರೆ ಅಂದಿದ್ದ. ಇಂಟರ್ವ್ಯೂಗೆ ಹೋದಾಗ ಎಲ್ಲರ ನಿಮ್ಮ ಮುಂದಿನ ಗುರಿಯೇನು ಅಂತ ಕೇಳ್ತಾರೆ. ಎಲ್ಲ ನಾನು ಅದಾಗಬೇಕು, ಇದಾಗಬೇಕು ಅಂತ ಹೇಳ್ತಾರೆ. ನೂರರಲ್ಲಿ 90 ಜನಕ್ಕೆ ತಾವೇನಾಗಬೇಕು ಎಂಬುದು ಗೊತ್ತೇಯಿರಲ್ಲ. ಕೆಲಸದ ಬಗ್ಗೆ ಯೋಚಿಸ್ತಾರೆ ಹೊರತು ಯಾರೂ ಜೀವನದ ಬಗ್ಗೆ ಯೋಚಿಸಲ್ಲ. ಜೀವನ ಅಂದ್ರೆ ಏನು ಅನ್ನುವ ಹೊತ್ತಿಗೆ ಗಂಟು ಮೂಟೆ ಕಟ್ಟೋಕೆ ತಯಾರಾಗಿರ್ತಾರೆ. ನನ್ನ ಕೇಳಿದಾಗ ನಾನು ಸುಮ್ಮನೆ ನಕ್ಕಿದ್ದೆ. ಆಗ ಮಂಜು ನೆನಪಾಗಿದ್ದ.
ಕೆಲಸದ ಒತ್ತಡದ ನಡುವೆ ಮಂಜು ಕಳೆದು ಹೋಗಿದ್ದ. ಎಷ್ಟು ದುಡಿದರೂ ಅದಕ್ಕೆ ತಕ್ಕ ಹಾಗೆ ಏರೋ ನಮ್ಮ ಖರ್ಚು, ಬಂದ ಸಂಬಳವನ್ನು ಮೂರೇ ದಿನದಲ್ಲಿ ಮುಕ್ಕಿ ಮತ್ತೆ ಯಾವಾಗ ಸಂಬಳ ಬರತ್ತೋ ಎಂದು ಕಾಯೋದು, ಈ ಕೆಲಸ, ಇ-ಡೆಡ್ ಲೈನು, ಯಾಂತ್ರಿಕ ಜೀವನದಿಂದ ಮನಸ್ಸು ಬೇಸತ್ತಿತ್ತು. ಆಗ ಮತ್ತೆ ನೆನಪಾಗಿದ್ದು ಮಂಜು. ಒಮ್ಮೆ ಊರಿಗೆ ಹೋಗಿ ಬರೋಣ ಅಂತ ಹೋಗಿದ್ದೆ. ಆಗ ಅಮ್ಮನ ಕೇಳಿದ್ದೆ. ಮಂಜು ಹೇಗಿದಾನೆ ಅಂತ. ಅವನು ಸತ್ತು ಎಷ್ಟೋ ವರ್ಷವಾಯ್ತು ಅಂದ್ಲು. ಮಂಜಿ ಹೇಗಿದಾಳೆ ಅಂದೆ. ಮಂಜು ಹೋದ ಕೆಲವೇ ದಿನಗಳಲ್ಲಿ ಅವಳೂ ಅವನ ಹಾದಿ ಹಿಡಿದ್ಲು ಅಂತ ಹೇಳಿದ್ಲು.
ಅನಾದಿಕಾಲದಿಂದ ಜೀವನದ ಅವಿಭಾಜ್ಯ ಅಂಗವಾದ ಕೊಟ್ಟಿಗೆ ಎಷ್ಟೋ ಮನೆಯಲ್ಲಿ ಎತ್ತಂಗಡಿಯಾಗಿತ್ತು. ಮಂಜು ಹೋದ ಮೇಲೆ ದನ ಕಾಯೋ ಕೆಲಸನೂ ಇರಲಿಲ್ಲ. ಬಹುಶ: ಮಂಜು ಅಥವಾ ದನ ಕಾಯೋರು ಇದ್ದಿದ್ರೆ ಅವಕ್ಕೆ ಕಾಡಲ್ಲಿ ಹೋಗಿ ತಮಗಿಷ್ಟವಾದುದನ್ನು ತಿನ್ನುವ ಹಕ್ಕು ಇರ್ತಿತ್ತು. ತಮಗಿಷ್ಟವಾದವರ ಜೊತೆ ಸೇರುವ ಅವಕಾಶವಿರ್ತಿತ್ತು. ಕೃತಕ ಗರ್ಭದಾರಣೆ ಕಡಿಮೆಯಾಗ್ತಿತ್ತು. ಮನೆಯಲ್ಲಿ ಕೂರಲಾಗದೆ ಮಂಜುವಿನ ಮನೆಯ ಹತ್ತಿರ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಮನೆಯ ಸೋಗೆ ಹಾರಿ ಹೋಗಿತ್ತು. ಅರ್ದಬಿದ್ದ ಗೋಡೆಗಳು ನನ್ನನ್ನು ನೋಡಿ ಯಾವುದು ಶಾಶ್ವತವಲ್ಲ ಎಂದು ಅಣಕಿಸುತ್ತಿತ್ತು.
ಬಹಳ ಹಿಂದೆ ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ನನ್ನ ಒಂದು ಕಥೆ ಪ್ರಕಟವಾಗಿತ್ತು. ಕೆಲವು ದಿನಗಳ ಹಿಂದೆ ವೆಬ್ ಸೈಟಿನ ನೋಡಿದಾಗ ಅದು ಮಾಯವಾಗಿತ್ತು. ಮನೆಯಲ್ಲಿ ಒಂದು ಪ್ರತಿಯಿತ್ತು. ಅದನ್ನು ಇಲ್ಲಿ ಹಾಕುತ್ತಿದ್ದೇನೆ.
Thursday, May 22, 2008
ಧರ್ಮಭಾರತೀ
ದಿನಾಂಕ 14 ಮೇ 2008 ರಂದು ಧರ್ಮಭಾರತೀ ಮಾಸಪತ್ರಿಕೆಯು ಒಂದು ಮಹತ್ತರವಾದ ಹೆಜ್ಜೆಯನ್ನಿಟ್ಟಿತು. ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರಿಂದ ಧರ್ಮಭಾರತೀ ಅಂತರಜಾಲದಲ್ಲಿ ಅನಾವರಣಗೊಂಡಿತು.
ಇದು ನನ್ನ ಕನ್ನಡದಲ್ಲಿ ಮಾಡಿದ ಮೊದಲ ವೆಬ್ ಸೈಟ್ . ಇಲ್ಲಿ ನೀವು ಧರ್ಮಭಾರತೀ ಮಾಸಪತಿಕೆಯನ್ನು ಓದಬಹುದು.
ಅಂತರಜಾಲ ತಾಣ : http://dharmabharathi.org/
Monday, May 19, 2008
ಎಲ್ಲಿಗೇ ಪಯಣ.... ಯಾವುದೋ ದಾರೀ.... ಏಕಾಂಗಿ ಸಂಚಾರಿ
ಇದು ನನಗೆ ಬಹಳ ಇಷ್ಟವಾದ ಸಾಲುಗಳು. ಗೊತ್ತು ಗುರಿಯಿಲ್ಲದೇ ಜೀವನ ಸಾಗಿಸುವವರಿಗೆ ಇದು ಅನ್ವಯವಾಗುವಂತಹ ಸಾಲುಗಳು ಎನ್ನಬಹುದು. ಬೆಳಗ್ಗೆ ಎಫ್. ಎಮ್. ರೈನ್ಬೋ ನ ನೆನಪಿನ ದೋಣಿಯಲ್ಲಿ ಈ ಹಾಡನ್ನು ಕೇಳ್ದೆ. ಇದರ ರಚನೆಗಾರ ಆರ್ ಎನ್ ಜಯಗೋಪಾಲ್ ವಿಧಿವಶರಾದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ.
ಕಥೆ ಮುಗಿಯಿತೇ ಆರಂಭದ ಮುನ್ನ
Monday, March 17, 2008
ಟಿಪ್ಸ್ ಟಿಪ್ಸ್ ಟಿಪ್ಸ್
ನಿಮ್ಮ ಬಾಸ್ ಅಥವಾ ನಿಮ್ಮ ಅಕ್ಕಪಕ್ಕ ಇರೋರು ನೀವು ಯಾವ ಸೈಟ್ ನೋಡ್ತಾಯಿದೀರ ಅಂತ ನೋಡ್ತಾಯಿರ್ತಾರಾ ? ಅವರ ಕಣ್ಣು ತಪ್ಪಿಸಿ ನೀವು ಯಾವ್ದಾದ್ರು ಸೈಟ್ ನೋಡ್ಬೇಕಾ !!! steps ಕೆಳಗಡೆ ಇದೆ. ಚೆಕ್ ಮಾಡಿ
1) Go to Tools > Internet Options in IE
2) Click Accessibility > select first 3 checkbox which comes in Formating section and click OK button
3) Go to Advanced tab and scroll down > De select Show Picture in Multi media section and click OK button
refresh the page and njoy ಮಾಡಿ
Thursday, March 13, 2008
comfortzone
ಮೊನ್ನೆ ಆತ ಮತ್ತೆ ಬಸ್ಸಲ್ಲಿ ಬಂದ. ಬಸ್ ನಲ್ಲಿ ಇದ್ದ ಎಲ್ಲರ ಹುಬ್ಬು ಒಮ್ಮೆ ಮೇಲೆ ಹೋಯ್ತು. ಕೆಲವರು ಅವನ ಬಸ್ಸು ಮಿಸ್ಸಾಗಿ ಇಲ್ಲಿಗೆ ಬಂದ ಅಂದ್ಕೊಂಡ್ರು. ಇನ್ನು ಕೆಲವರು ಮಿಸ್ಸಾಗಿ ಈ ಬಸ್ಸಿಗೆ ಬಂದ ಅಂದ್ಕೊಂಡ್ರು. ಎಲ್ಲರಿಗೂ ಆಶ್ಚರ್ಯ!!!. ಒಂದು ರೀತಿ ಪೆಕರನ ಹಾಗೆ ನಗ್ತಾ ಒಳಗೆ ಬಂದ. ಎಲ್ಲ ಯಾವ ರೀತಿ ಸ್ವಾಗತಿಸಬಹುದು ಅನ್ನೋ ಭಯ ಅವನಲ್ಲಿತ್ತು. ಬಂದು ಹಿಂದೆ ನಾವು ಕೂರುವ ಜಾಗಕ್ಕೆ ಬಂದ. ಒಬ್ಬ ಕೇಳೇಬಿಟ್ಟ "ಯಾಕೆ ಆ ಬಸ್ಸು ಮಿಸ್ಸಾಯ್ತಾ?" ಇವನು ಸುಮ್ಮನೆ ನಕ್ಕ. ಕಳೆದ ತಿಂಗಳಷ್ಟೇ ತಾನು ಕಂಪನಿ ಬಿಡ್ತಾಯಿದೀನಿ, ಒಳ್ಳೆ ಕೆಲ್ಸ ಸಿಗ್ತು. ಟಾ ಟಾ ಅಂದೆಲ್ಲಾ ಬೊಗಳೇ ಬಿಟ್ಟು ಹೋದವ ಒಂದು ತಿಂಗಳೊಳಗೆ ವಾಪಾಸು ಬಂದಿದ್ದ.
ಘಟನೆ 2
ಘಟನೆ 3
ಘಟನೆ 4
Tuesday, February 19, 2008
ನಾನು ಸ್ವಾಮಿಯಾಗಿದ್ದು...
"ಮೊನ್ನೆ ಯಜ್ಞೇಶ್ ಸ್ವಾಮಿಗಳು ಮೈಲ್ ಮಾಡಿದ್ರು" ಅಂತ ಗೋಮಾತಾ ಶರ್ಮ ಅವ್ರು ಹೇಳ್ದಾಗ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರಿಗೆ ನಗು ತಡೆಯೋಕಾಗಿಲ್ವಂತೆ. ಆಗ ಅವ್ರು ಆತ ಸ್ವಾಮಿಯಲ್ಲ, ಅವ್ನಿಗೆ ಮದ್ವೆಯಾಗಿದೆ ಅಂತ ನಗ್ತಾ ಹೇಳಿದ್ರಂತೆ.
ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಇಂಜಿನೀಯರ್ಸ್ ಮೀಟಿಂಗ್ ಕೆಲವು ತಿಂಗಳುಗಳ ಹಿಂದೆ ನಡೆದಿತ್ತು. ಅದರ ಇನ್ನುಂದು ಮೀಟಿಂಗ್ ಇದ್ದಿದರಿಂದ ನಾನು ನನ್ನ ಆಫೀಸ್ ಮೈಲ್ ನಿಂದ ಎಲ್ಲರಿಗೂ ವಿಷಯ ತಿಳಿಸಿದ್ದೆ . ಆದ್ರೆ ಅಂದು ನನಗೆ ಅಲ್ಲಿಗೆ ಹೋಗೋಕೆ ಆಗಿರಲಿಲ್ಲ. ಆಗ ಗೋಮಾತಾ ಶರ್ಮ ಅವ್ರು ನನ್ನ ಹೆಸ್ರು ಹೇಳಿದ್ರಂತೆ.
ವಿಷಯ ಏನಪ್ಪ ಅಂದ್ರೆ, ಕಂಪನಿಯಲ್ಲಿ ಮೈಲ್ ಐಡಿ ಕೊಡುವಾಗ ಹೆಸ್ರು.ಅಪ್ಪನ ಹೆಸ್ರು ಅಥವಾ ಉರಿನ ಹೆಸ್ರು ಕೊಡೋದು ಸಹಜ. ನನ್ನ ಅಪ್ಪನ ಹೆಸ್ರು ನಾರಾಯಣಸ್ವಾಮಿ ಭಟ್ . ಆದ್ರೆ ನನ್ನ ರೆಕಾರ್ಡ್ಸ್ ನಲ್ಲಿ ಅದು ಬರೀ ನಾರಾಯಣಸ್ವಾಮಿಯಾಗಿತ್ತು. ನಾನು ಆಫೀಸಿಗೆ ಸೇರೋವಾಗ ಕಾಲಂ ನಲ್ಲಿ ನಾರಾಯಣಸ್ವಾಮಿ ಅಂತನೇ ಬರೆದಿದ್ದೆ. ಆದ್ರೆ ಮದ್ಯೆ ಎಲ್ಲೋ ಗ್ಯಾಪ್ ಇತ್ತು ಅನ್ಸತ್ತೆ. ಅದು yajnesh.swamy ಅಂತ ಆಗಿತ್ತು.
ಅದನ್ನ ಗೋಮಾತಾ ಶರ್ಮ ಅವ್ರು ಸರಿಯಾಗೇ ಹೇಳಿದ್ರು. ಆದ್ರೆ ಅಲ್ಲಿ ಇದ್ದವರಿಗೆ ಒಂದ್ಸಲ ಆಶ್ಚರ್ಯ ಆಯ್ತು. ಎಲ್ಲರಿಗೂ ನಾನು ಭಟ್ ಆಗಿದ್ದೆ. ಆದ್ರೆ ಅಂದು ಸ್ವಾಮಿಯಾಗಿದ್ದೆ.
"ನೀನು ಯಾವಾಗ ಸ್ವಾಮಿಯಾದೆ" ಅಂತ ಈಗ್ಲೂ ನನ್ನ ಫ್ರೆಂಡ್ಸ್ ಕೇಳ್ತ ಇರ್ತಾರೆ. ನಾನು ಸುಮ್ಮನೆ ನಕ್ಕುಬಿಡ್ತೀನಿ
Thursday, February 14, 2008
ಶ್ರೀಭಾರತೀ ವಿದ್ಯಾಲಯ
ನಾಳೆ ಶ್ರೀಭಾರತೀ ವಿದ್ಯಾಲಯದ ವೆಬ್ ಸೈಟ್ ಅನಾವರಣಗೊಳ್ತಾಯಿದೆ. ನನ್ನ ಬಿಡುವಿನ ಸಮಯದಲ್ಲಿ ಮಾಡಿದ ವೆಬ್ ಸೈಟ್. ಇದರಲ್ಲಿ ನನ್ನ ಮಡದಿ ಜಯಶ್ರೀ ಪಾಲು ಇದೆ.
ಭಾರತೀವಿದ್ಯಾಲಯದ ಅಂತರಜಾಲ ತಾಣ: http://bharathividyalaya.in
Thursday, January 17, 2008
ಅಜ್ಜ
ಹೌದು, ನಾನೀಗ ಬರಿಲೇಬೇಕು. ದಿನಾ ಅದನ್ನೇ ಯೋಚಿಸ್ತಾ ಇರ್ತೀನಿ. ಏನ್ ಬರೀಲಿ, ಹ್ಯಾಗೆ ಬರೀಲಿ ಅಂತ. ಇನ್ನು ಕೆಲವೇ ದಿನಗಳಲ್ಲಿ ಅಜ್ಜನ ವರ್ಷಾಂತ. ಅಜ್ಜನ ಹೆಸರಲಿ ಒಂದು ಪುಸ್ತಕ ತರ್ಬೇಕು ಅಂತ ಮೊಮ್ಮಕ್ಕಳಾದ ನಮ್ಮ ಆಸೆ. ಬರೋಬ್ಬರಿ ಎಂಬತ್ತು ವರ್ಷದ ಮೇಲೆ ಸಂಭವಿಸಿದ ಮೊದಲ ಸಾವಾಗಿತ್ತು. ಅಣ್ಣ ಮನೆ ಬಿಟ್ಟು ಹೋದಾಗ ಬೇಸರವಾಗಿತ್ತು. ಆದ್ರೇ ಏಲ್ಲೋ ಕಣ್ಣ ಮುಂದೆ ಇರ್ತಾರೆ ಅನ್ನೋ ನಂಬಿಕೆಯಿತ್ತು. ಆದ್ರೆ ಅಜ್ಜ ಹೋಗಿ ವರ್ಷವಾದರು ಇನ್ನು ನೋವು ಮಾಸಿಲ್ಲ. ಹುಟ್ಟು ಸಾವು ಜಗತ್ತಿನ ನಿಯಮ. ಯಾರೂ ಶಾಶ್ವತವಲ್ಲ ಅನ್ನೋ ಸತ್ಯ ತಿಳಿದಿದ್ದರೂ ಕೆಲವೊಮ್ಮೆ ಅಜ್ಜನೊಂದಿಗೆ ಕಳೆದ ಕ್ಷಣಗಳು ನೆನಪಿಗೆ ಬಂದಾಗ ನೋವಾಗತ್ತೆ.
ನಾವೆಲ್ಲ ಸೇರಿ ಅಜ್ಜನ ಹೆಸರಲ್ಲಿ 2005ರಲ್ಲಿ "ಮಹಾಬಲ" ಪ್ರತಿಷ್ಟಾನಮ್ ಪ್ರಾರಂಭ ಮಾಡಿದ್ವಿ(ಅಜ್ಜನ ಹೆಸರು ಮಹಾಬಲೇಶ್ವರ ಭಟ್). ಶ್ರೀರಾಘವೇಶ್ವರಭಾರತೀ ಸ್ವಾಮಿಗಳವರು ಅದನ್ನು ಉದ್ಘಾಟಿಸಿದ್ದರು. ಅಜ್ಜನ ಹೆಸರಲ್ಲಿ ನಮಗೆ ಸಾದ್ಯವಾದ ಒಳ್ಳೆಯ ಕೆಲಸಗಳನ್ನು ಮಾಡಬೇಕು ಅಂತ ನಮ್ಮ ಆಸೆ. ಒಂದು ವರ್ಷ ಚದರವಳ್ಳಿಯ ಶಾಲೆಯ ಜವಾಬ್ದಾರಿಯನ್ನು ನಿರ್ವಹಿಸಿದೆವು.
ಅಜ್ಜನ ವರ್ಷಾಂತಕ್ಕೆ ಒಂದು ಪುಸ್ತಕ ತರಬೇಕು. ಅದರಲ್ಲಿ ನಮ್ಮ ಮನೆಯವರೆಲ್ಲ ಅಜ್ಜನ ಬಗ್ಗೆ ಲೇಖನ, ಕವನ ಬರೀಬೇಕು, ಅಜ್ಜನ ಆತ್ಮೀಯರ ಹತ್ತಿರ ಲೇಖನ ಬರಿಸ್ಬೇಕು, ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಅಜ್ಜನ ಹೆಸರಲ್ಲಿ ಗೌರವಿಸಬೇಕು, ಬಡತನದಲ್ಲಿರುವ ವಿಧ್ಯಾರ್ಥಿಗಳಿಗೆ ಸಹಾಯ ಮಾಡಬೇಕು, ನಮ್ಮದೇ ಆದ ಪ್ರಕಾಶನದಿಂದ ಪುಸ್ತಕಗಳನ್ನು ತರಬೇಕು, ಮನೆಯಲ್ಲಿ ಅಜ್ಜನ ಚಿತ್ರ ಸಂಗ್ರಹವಾಗಬೇಕು, ಪ್ರತಿವರ್ಷ ಅಜ್ಜನ ಹೆಸರಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಬೇಕು...ಅಂತೆಲ್ಲಾ ನಾವು ತೀರ್ಮಾನಿಸಿದೆವು.
ಈಗ ಮೊದಲಿಗೆ ಪುಸ್ತಕ ಬರಬೇಕು. ಅಜ್ಜನ ಬಗ್ಗೆ ನಾವು ಲೇಖನ ಬರಿಬೇಕು.... ಎನ್ ಬರಿಯೋದು ಅಂತ ಗೊತ್ತಾಗ್ತಾ ಇಲ್ಲ. ಮನಸ್ಸು ಬಾರವಾಗ್ತಾಯಿದೆ.
ಮಹಾಬಲ ಪ್ರತಿಷ್ಟಾನಮ್ ಬಗ್ಗೆ ನೀವಿಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. http://mahabalatrust.tripod.com
ರೀ ಸ್ವಲ್ಪ ನಗ್ರೀ.....
ಆತ: ನೋಡೋ ಅಲ್ಲಿ ನಿಂತಿದ್ದ ಸುಂದರ ಹುಡ್ಗಿ ನನ್ನ ನೋಡಿ ನಕ್ಕಳು ಕಣೋ..!
ಈತ: ಅದೇನ್ ದೊಡ್ಡ ವಿಷ್ಯ ಅಲ್ಲ ಬಿಡು. ಮೊದಲ ಸಲ ನಿನ್ನ ನೋಡಿದ ನನಗೇ ಮೂರು ದಿನ ನಗು ತಡ್ಕೊಳ್ಳಕ್ಕಾಗಿಲ್ಲ ಗೊತ್ತಾ !!! ಹ್ಹ ಹ್ಹ ಹ್ಹ