Sunday, July 18, 2010
ಕೆಟ್ಟಿದೆ, ಸರ್ವರ್ ಕೆಟ್ಟಿದೆ. ನಿಮಗೆ ಮಿಠಾಯಿ ಇಲ್ಲ.
ಕನ್ನಡಕ್ಕೆ ತರ್ಜುಮೆ ಮಾಡಿದವರಿಗೆ ಕನ್ನಡ ರಾಜ್ಯೋಸ್ತವ (ನೂರಕ್ಕೆ ತೊಂಬತ್ತು ಭಾಗ ಜನ ರಾಜ್ಯೋತ್ಸವ ಅನ್ನೋಕೆ ರಾಜ್ಯೋಸ್ತವ ಅಂತಾರೆ) ಪ್ರಶಸ್ತಿ ಕೊಡಬಹುದಲ್ಲವೇ?
Thursday, July 15, 2010
ಆಕೆ ಬರೋಬ್ಬರಿ 34 ವರ್ಷಗಳ ನಂತರ ಫಿಲ್ಮ್ ನೋಡಿದ್ದಳು.
ಯಾರಿರಬಹುದು ಅನ್ನೋ ಕುತೂಹಲ ನಿಮ್ಮಲ್ಲಿರಬಹುದು. ಆಕೆ ಬೇರೆ ಯಾರು ಅಲ್ಲ, ನನ್ನಮ್ಮ. ಮೊನ್ನೆ ಭಾನುವಾರ ನಾನು ಜಯಶ್ರೀ ಹೀಗೆ ಮಾತಾಡುತ್ತಾ ಇದ್ದಾಗ ಜಯಶ್ರೀ "ಎರಡನೇ ಮದುವೆ" ಫಿಲ್ಮ್ ನೋಡೋಣ್ವಾ ಅಂದ್ಲು. ಅದ್ಕೆ ನಾನು ಮುಂದಿನವಾರ ಹೋಗೋಣ ಅಂದೆ. ಇಬ್ಬರಿಗೂ ಓಕೆಯಾಯಿತು. ತಕ್ಷಣ ನನ್ ಮನ್ಸಿಗೆ ಬಂದಿದ್ದು ಯಾಕೆ ಈ ವಾರ ಹೋಗಬಾರ್ದು. ಅಮ್ಮ ಬಂದಿದ್ದಾಳೆ, ಮುಂದಿನ ವಾರದ ತನಕ ಇರೊಲ್ಲ. ಆಕೆನೂ ಫಿಲ್ಮ್ ಗೆ ಕರ್ಕೊಂಡ್ ಹೋಗೋಣ ಅಂತ. ತಕ್ಷಣ ಇಬ್ರೂ ಮಾತಾಡಿ ಬಿಗ್ ಸಿನೆಮಾಸ್ ಟಾಕೀಸ್ ನಲ್ಲಿ ಟಿಕೇಟ್ ಬುಕ್ ಮಾಡಿದ್ವಿ. ಆಮೇಲೆ ಅಮ್ಮನ ಹತ್ರ ಊಟ ಮಾಡಿದ್ಮೇಲೆ ಫಿಲ್ಮ್ ಗೆ ಹೋಗೋಣ ಅಂದೆ. ಅದ್ಕೆ ನಾ ಬರೊಲ್ಲ, ನೀವು ಹೋಗಿ ಅಂದ್ಲು. ಇಲ್ಲ ಟಿಕೇಟ್ ಬುಕ್ ಮಾಡ್ಸಿದ್ದೇನೆ. ನೀನು ಬಾ ಅಂದೆ. ಅಮ್ಮ ಹೂಂಗುಟ್ಟಿದ್ದಳು.
ಊಟ ಮಾಡಿ ನಾವು ಗೋಪಾಲನ್ ಆರ್ಕೇಡ್ ನಲ್ಲಿ ಇರೋ ಬಿಗ್ ಸಿನೆಮಾಸ್ ಟಾಕೀಸ್ ಗೆ ಹೋದ್ವಿ. ಮಾಲ್ ಮತ್ತೆ ಅದ್ರಲ್ಲಿ ಇರೋ ಟಾಕೀಸ್ ಎಲ್ಲ ಅಮ್ಮನಿಗೆ ಆಶ್ಚರ್ಯ ತಂದಿತ್ತು. ಸಾಗರದಲ್ಲಿ ಬರೀ ಟಾಕೀಸ್ ಇದ್ದಿದ್ದನ್ನು ನೋಡಿದ್ದ ಅಮ್ಮನಿಗೆ ಇಲ್ಲಿ ಎಲ್ಲಾ ಇದ್ದಿದ್ದು ನೋಡಿ ವಿಶೇಷ ಅನ್ಸಿರಬೇಕು. ಹೋಗಿ ಮೆತ್ತನೆಯ ಸೋಫಾದಲ್ಲಿ ಕುಳಿತ್ಗೊಂಡು ಫಿಲ್ಮ್ ನೋಡಿದ್ವಿ. ಏ.ಸಿ ರೂಮ್ ಆಗಿದ್ದ್ರಿಂದ ಅಮ್ಮನಿಗೆ ಸ್ವಲ್ಪ ಚಳಿಯಾಗಿತ್ತು ಅನ್ಸತ್ತೆ. ಸೀರೆ ಫುಲ್ ಹೊದ್ಕೊಂಡು ಫಿಲ್ಮ್ ನೋಡಿದ್ಳು. ಮದ್ಯೆ ಪಾಪ್ ಕಾರ್ನ್ ತಂದಿದ್ದೆ. ಅದನ್ನು ತಿಂತಾ ಫುಲ್ ಖುಷಿಲಿ ಇದ್ಲು. ಫಿಲ್ಮ್ ಮುಗ್ಸಿ ಮನೆಗೆ ಹೋಗೋವಾಗ ನೀನು ಈ ಹಿಂದೆ ಯಾವಾಗ ಟಾಕೀಸ್ ನಲ್ಲಿ ಫಿಲ್ಮ್ ನೋಡಿದ್ದೆ ಅಂತ ಕೇಳ್ದೆ. ಅದ್ಕೆ ರಾಜ್ ಕುಮಾರ್ ದು ಫಿಲ್ಮ್ "ನಾ ನಿನ್ನ ಮರೆಯಲಾರೆ" ನೋಡಿದ್ದು. ಆಮೇಲೆ ಟಾಕೀಸ್ ಗೆ ಹೋಗ್ಲಿಲ್ಲ ಅಂದಿದ್ಳು.
ದೂರದ ಮಲೆನಾಡಿನ ಗುಡ್ಡದ ಮೇಲಿದ್ದ ನಮ್ಮ ಮನೇಲಿ ದಿನವಿಡೀ ತಾನಾಯಿತು ತನ್ನ ಕೆಲಸವಾಯಿತು ಅಂತ ಇದ್ದ ಅಮ್ಮನಿಗೆ ದೂರದ ಸಾಗರಕ್ಕೆ ಹೋಗಿ ಫಿಲ್ಮ್ ನೋಡೋ ಅವಕಾಶ ಸಿಗ್ತಾಯಿದ್ದಿದ್ದು ಬಹಳ ಕಡಿಮೆ. ಹಾಗಂತ ಆಕೆಗೆ ಟಾಕೀಸ್ ಗೆ ಹೋಗಿ ನೋಡೋ ಆಸಕ್ತಿನೂ ಇರ್ಲಿಲ್ಲ. ಮನೇಲಿ ಟಿ.ವಿ ನಲ್ಲಿ ಬರೋ ಫಿಲ್ಮ್ಸ್/ದಾರವಾಹಿನ ಅಮ್ಮ ಯಾವತ್ತೂ ಮಿಸ್ ಮಾಡ್ಕೊಳಲ್ಲ. ಮೊನ್ನೆ ಫುಟ್ಬಾಲ್ ನೋಡೋಣ ಅಂತ ಹಾಲ್ ಗೆ ಬಂದು ನೋಡಿದ್ರೆ ಅಮ್ಮ ಹಿಂದಿ ಸೀರಿಯಲ್ ನೋಡೋದ್ರಲ್ಲಿ ಫುಲ್ ಬ್ಯಸಿ. ಚೈಂಜ್ ಮಾಡ್ಬೇಕಾ ಅಂತ ಕೇಳಿದ್ಲು. ನಾ ಬೇಡ, ನೀನು ನೋಡು ಅಂದಿದ್ದೆ. ಹಿಂದಿ ಪೂರ ಅರ್ಥ ಆಗ್ದೇ ಇದ್ರೆ ಏನಂತೆ, ಚಿತ್ರ ನೋಡಿದ್ರೆ ಅರ್ಥ ಆಗತ್ತೆ ಅಂದಿದ್ದ್ಲು. ನಾನು ನಕ್ಕಿದ್ದೆ.
ಇಂದು ಬಂದು "ನಾ ನಿನ್ನ ಮರೆಯಲಾರೆ" ಚಿತ್ರ ಯಾವಾಗ ಬಂದಿತ್ತು ನೋಡಿದೆ. ಅದು ಬಂದಿದ್ದು 1976 ರಲ್ಲಿ. ನಾ ಹುಟ್ಟೋದಕ್ಕಿಂತ ಮುಂಚೆ!!!
Friday, July 9, 2010
ಸಂಗ್ರಹ ವಿಜಯಕರ್ನಾಟಕದಲ್ಲಿ
"ನೀನು ಆಫೀಸ್ ನಲ್ಲಿ ಕೆಲ್ಸ ಮಾಡ್ತ್ಯ ಅಥ್ವಾ ಹಾಡು ಬರಿತ್ಯಾ" ಬೆಳ್ಳಂಬೆಳಗ್ಗೆ ಕಾರು ತೆಗಿತಾ ಇದ್ದಾಗ ಮನೆಯ ಓನರ್ ಶ್ರೀಧರಣ್ಣ ಕೇಳಿದ ಪ್ರಶ್ನೆ. ಒಮ್ಮೆ ನನ್ನ ಹುಬ್ಬು ಮೇಲೆ ಹೋಗಿ ಬಂತು. "ಯಾಕೆ" ಅಂತ ನಗಾಡುತ್ತಾ ಕೇಳಿದೆ. ಅದಕ್ಕೆ "ನಿನ್ ಹೆಸ್ರು ಇವತ್ತು ವಿಜಯ ಕರ್ನಾಟಕದಲ್ಲಿ ಬೈಂದು" ಅಂದ. ಒಂದ್ಸಲ ಆಶ್ಚರ್ಯ ಮತ್ತು ಸ್ವಲ್ಪ ಭಯನೂ ಆಯ್ತು. ಇದೇನಪ್ಪಾ ನನ್ ಹೆಸ್ರು ವಿಜಯಕರ್ನಾಟಕ ಪೇಪರ್ ನಲ್ಲಿ ಅಂತ. ಅಷ್ಟೊತ್ತಿಗೆ ಶ್ರೀಧರಣ್ಣನ ಹೆಂಡತಿ ರಾಧಕ್ಕ "ನೀನು ಹಾಡು ಬರಿತ್ಯಾ" ಅಂದಾಗ ಇನ್ನೂ ಕನ್ಫ್ಯೂಸ್.. ಕೊನೆಗೆ ಗೊತ್ತಾಯ್ತು. ನಾನು ಬರಿತಾಯಿರೋ "ನಮ್ಮ ಸಂಗ್ರಹ" ಬ್ಲಾಗ್ ಬಗ್ಗೆ ವಿಜಯಕರ್ನಾಟಕದ ಲವಲvk ಯಲ್ಲಿ ಬಂದಿತ್ತು.
ಉತ್ತಮ ಸಾಹಿತ್ಯ/ಉತ್ತಮ ಸಂಗೀತ ಇರೋ ಹಾಡುಗಳೆಂದ್ರೆ ನನಗೆ ತುಂಬಾ ಇಷ್ಟ. ಹಾಗೆ ಇಷ್ಟವಾಗೋ ಹಾಡುಗಳ ಸಾಹಿತ್ಯ ಮಾತ್ರ ನೆನ್ಪಲ್ಲಿ ಇರೊಲ್ಲ. ಮನ್ಸಿಗೆ ತೋಚಿದ್ದನ್ನೆಲ್ಲಾ ಆ ಹಾಡಿಗೆ ತಕ್ಕ ಹಾಗೆ ಸೇರಿಸಿ ಹಾಡ್ತಾಯಿರ್ತೀನಿ. ಜಯಶ್ರೀ ನನ್ನ ಸಾಹಿತ್ಯ ಕೇಳಿ ಯಾವಾಗ್ಲು ನಗ್ತಾ ಇದ್ಲು. ಕೊನೆಗೆ ಒಂದು ದಿನ ಮನ್ಸಿಗೆ ಬಂದಿದ್ದು ನಾನ್ಯಾಕೆ ಇಷ್ಟವಾಗೋ ಹಾಡುಗಳನ್ನು ಒಂದು ಬ್ಲಾಗ್ ನಲ್ಲಿ ಬರೀಬಾರ್ದು ಅಂತ. ಹೇಗೂ ನನ್ನ ಹತ್ತಿರ ಒಳ್ಳೊಳ್ಳೆ ಹಾಡುಗಳು ಇದ್ದವು. ಅದನ್ನ ಕೇಳುತ್ತಾ ಸಾಹಿತ್ಯ ಬರೆದರಾಯಿತು. ಇಂಟರ್ನೆಟ್ ನಲ್ಲಿ ಹುಡುಕಿದ್ರೂ ಸಿಗತ್ತೆ, ಸಾಹಿತ್ಯ ರಚೆನಕಾರರ ಪುಸ್ತಕಗಳು ಸಿಗತ್ವೆ. ಅದನ್ನ ನೋಡಿ ಬರೀಬಹುದು. ಸಮಯ ಸಿಕ್ಕಾಗ/ಮನಸ್ಸಿಗೆ ಸಂತಸ/ಬೇಸರವಾದಾಗ ಒಮ್ಮೆ ಬ್ಲಾಗ್ ಗೆ ಭೇಟಿಯಿತ್ತು ಹಾಡುಗಳಲ್ಲಿ ಇರೋ ಸಾಹಿತ್ಯ ಓದ್ತಾಯಿದ್ರೆ ಎಲ್ಲಾ ನಾರ್ಮಲ್ ಮತ್ತು ಜೊತೆಗೆ ಮನ್ಸಿಗೆ ಉಲ್ಲಾಸ. ಬಿಡುವು ಸಿಕ್ಕಾಗ ಬರಿತಾಯಿದ್ದೆ. ಕೊನೆಗೆ ಇದರ ಜೊತೆ ವೀಡಿಯೋ ಇದ್ರೆ ನಾವು ವೀಡಿಯೋನ ನೋಡ್ತಾ ಹಾಡಬಹುದಲ್ಲ ಅನಿಸ್ತು. ಹಾಡಿಗೆ ವಿಡಿಯೋನ ಸೇರ್ಸಿದೆ. ಅದೆಷ್ಟೋ ಜನ ಇದನ್ನು ಬಂದು ಓದ್ತಾರೆ/ನೋಡ್ತಾರೆ. ಕೆಲವರು ಮೆಚ್ಚುಗೆಯ ಮಾತಾಡಿ ಹೋಗ್ತಾರೆ. ಇನ್ನು ಕೆಲವರು ತಮ್ಮ ಹತ್ತಿರ ಇರೋ ಹಾಡನ್ನು ನನಗೆ ಹಾಕಲು ಕೊಡ್ತಾರೆ.
ಇದೊಂದು ಕನ್ನಡಕ್ಕಾಗಿ ನನ್ನ ಸಣ್ಣ ಸೇವೆ. ಬೇರೆ ಯಾವ ಉದ್ದೇಶವೂ ಇಲ್ಲ. ಹಾಗಂತ ನಾನು ಯಾವ ಭಾಷೆಯನ್ನು ದ್ವೇಷಿಸಲ್ಲ. ನನ್ನ ಮಾತೃ ಭಾಷೆಯ ಬಗ್ಗೆ ಹೆಮ್ಮೆ. ನಾನು ನವಂಬರ್ ಕನ್ನಡಿಗನಲ್ಲ.
ಇಲ್ಲಿ ನಿಮ್ಮ ಹಾಡು ಇದ್ದು, ನಿಮಗೆ ಇಲ್ಲಿ ಇರೋದು ಇಷ್ಟವಿಲ್ಲದಿದ್ದರೆ ಖಂಡಿತಾ ಹೇಳಿ. ತೆಗೆಯುತ್ತೇನೆ.
ನಮಸ್ಕಾರಗಳು