Tuesday, July 14, 2009

ರುದ್ರಪಾಠ

"ಅಪ್ಪ ಎಲ್ಲಿ?" ಅಂತ ಅಮ್ಮನ ಹತ್ತಿರ ಫೋನಿನಲ್ಲಿ ಕೇಳ್ದೆ.. "ಅಪ್ಪ ಸಿಗಂದೂರಿಗೆ ಹೋಯ್ದ. ದಿನಾ ಬೆಳಿಗ್ಗೆ ಅಲ್ಲಿಗೆ ಹೋಗಿ ರುದ್ರ ಹೇಳಿಕೊಡ್ತಾಯಿದ್ದ. ಸಂಜೆ ಮನೇಲಿ ಊರಿನವರಿಗೆ ರುದ್ರ ಹೇಳಿಕೊಡ್ತಾಯಿದ್ದ. ಮನ್ಯಾಥಣ್ಣ ಚದ್ರಳ್ಳಿಗೆ, ಶ್ರೀಧರಣ್ಣ ಕೆರೆಕೈ ಗೆ, ಸೂರ್ಯನಾರಾಯಣ ಚಿಕ್ಕಯ್ಯ ಗುಮ್ಗೋಡಿ ಗೆ, ದತ್ತಣ್ಣ ಮೂರ್ಕೈ ಗೆ ಹೋಗಿ ರುದ್ರ ಹೇಳಿಕೊಡ್ತಾಯಿದ್ದ." ಅಂತ ಅಮ್ಮ ಹೇಳಿದ್ಲು.

ಇದು ನಮ್ಮ ಕರೂರು ಸೀಮೆಯಲ್ಲಿ ರುದ್ರ ಕಲಿತವರು ಬೇರೆ ಬೇರೆ ಊರುಗಳಿಗೆ ಹೋಗಿ ಉಚಿತವಾಗಿ ರುದ್ರ ಹೇಳಿಕೊಡುತ್ತಿರುವ ವಿಷಯ. ನಿಮಗೆ ಆಶ್ಚರ್ಯವಾಗಬಹುದು. ಅದೂ ಉಚಿತವಾಗಿ ಹೇಳಿಕೊಡುತ್ತಿದ್ದಾರೆ ಎಂದು!!!. ಇದು ಗೋಕರ್ಣದ ಶ್ರೀಮಹಾಬಲ ದೇವರಿಗೆ ಕೋಟಿ ರುದ್ರದ ಸಂಕಲ್ಪ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರಿಂದ ಆದ ನಂತರದ ಪ್ರಭಾವ. ಇದು ಕೇವಲ ನಮ್ಮ ಸೀಮೆಯಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಇದು ಶ್ರೀರಾಮಚಂದ್ರಾಪುರ ಮಠದ ಎಲ್ಲಾ ಸೀಮೆಗಳಲ್ಲಿ ನಡೆಯುತ್ತಿರುವುದು. ಇಲ್ಲಿ ಯಾರಿಗೂ ಒತ್ತಡವಿಲ್ಲ. ಎಲ್ಲರೂ ಸ್ವಯಂ ಆಸಕ್ತಿಯಂದ ಕಲಿಯುತ್ತಿರುವುದು. ಜನರ ಮನಸ್ಸನ್ನು ಸದ್ದಿಲ್ಲದೇ/ಅರಿವಿಲ್ಲದೇ ನಮ್ಮ ಶ್ರೀಗಳವರು ಪರಿವರ್ತಿಸಿದ್ದಾರೆ ಮತ್ತು ಪರಿವರ್ತಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಮನೆಯ ಒನರ್ ಶ್ರೀಧರಣ್ಣನೂ ಈಗ ರುದ್ರ ಕಲಿತಾಯಿದ್ದಾನೆ. ನಾಲ್ಕೈದು ಜನ ಇಂಜಿನಿಯರ್ಸ್ ಕಲಿಯಕೆ ಬತ್ತಾಯಿದ್ದ. ನೀನೂ ಬಾ ಅಂತ ಶ್ರೀಧರಣ್ಣ ಕರೆದಿದ್ದರು. ಬೆಳೆಗ್ಗೆ ೭ ಕ್ಕೆ ಮನೆ ಬಿಟ್ಟರೆ ರಾತ್ರಿ ಎಷ್ಟು ಹೊತ್ತಿಗೆ ವಾಪಾಸು ಬರ್ತೀನಿ ಅಂತ ನನಗೇ ಗೊತ್ತಿರೋದಿಲ್ಲ. ಸಾಫ್ಟ್ವೇರ್ ಕೆಲ್ಸನೇ ಹಾಗೆ. "ರೀ.. ಎಷ್ಟೋತ್ತಿಗೆ ಬತ್ತಿ" ಅಂತ ಹೆಂಡ್ತಿ ಕೇಳಿದ್ರೆ ಎಷ್ಟು ಹೊತ್ತು ಆಗತ್ತೇ ಅಂತಾನೇ ನನಗೆ ಗೊತ್ತಿರೋದಿಲ್ಲ. ಕಲಿಯ ಬೇಕು ಅನ್ನೋ ಮನಸ್ಸಿದೆ.. ಆದ್ರೆ ಸಮಯ ಇಲ್ಲ.

ಇನ್ನೂ ನೆನಪಿದೆ ನನಗೆ. ಸಣ್ಣವನಿದ್ದಾಗ ಬೆಳಿಗ್ಗೆ ಐದಕ್ಕೆ ಸ್ವರ ಬದ್ದಾವಾಗಿ ಕಿವಿಗೆ ನಾದವಾಗಿ ಹೊಮ್ಮುತ್ತಿದ್ದ ರುದ್ರದ ಸಾಲುಗಳು.. ಶೀ ಸೂಕ್ತ, ಪುರುಷ ಸೂಕ್ತ....

ಮಳೆಯಿರಲಿ, ಚಳಿಯಿರಲಿ, ಸೆಖೆಯಿರಲಿ ಅಪ್ಪ ದಿನ ಬೆಳಿಗ್ಗೆ ನಾಲ್ಕುವರೆಗೆ ಎದ್ದು ಸ್ನಾನ ಮಾಡಿ ಬರೋಬ್ಬರಿ ಎರಡು ತಾಸು ಪೂಜೆ ಮಾಡುತ್ತಿದ್ದರು. ಅಪ್ಪನ ಕಂಠನೇ ಹಾಗೆ. ಎಷ್ಟೇ ನಿದ್ರೆ ಬಂದಿದ್ದರು ಆ ಸ್ವರ, ಮಂತ್ರ, ಘಂಟೆ ಎಲ್ಲಾ ಈಗಲೂ ನೆನಪಿದೆ. ಅಪ್ಪನ ಜೊತೆಗೆ ಅಮ್ಮ ಎದ್ದು ಚಿಮಣಿ ಹಿಡಿದುಕೊಂಡು ದೇವರಿಗೆ ಹೂವು ಕೊಯ್ಯುತ್ತಿದ್ದು, ಸೋಮಾರಿ ನಾನು ಇನ್ನು ಮಲಗಿರುತ್ತಿದ್ದು ಎಲ್ಲವೂ ಮರೆಯಲಸಾದ್ಯ. ಈಗಲೂ ನನಗೆ ರುದ್ರ, ಪುರುಷ ಸೂಕ್ತ, ಶ್ರೀ ಸೂಕ್ತ ನೆನಪಿಲ್ಲದಿದ್ದರೂ ಆ ಲಯಬದ್ದವಾದ ಸ್ವರ ಇನ್ನೂ ನೆನಪಿದೆ.

ಅಮ್ಮ ರುದ್ರದ ಬಗ್ಗೆ ಹೇಳಿದಾದ ಬಾಲ್ಯದ ನೆನಪಾಯಿತು.

ಗಿರಿನಗರದಲ್ಲಿ ಶನಿವಾರ ಮತ್ತು ಭಾನುವಾರ ರುದ್ರ ಹೇಳಿಕೊಡುತ್ತಿದ್ದಾರಂತೆ. ಹೋಗಿ ಕಲಿಯಬೇಕು.

ಗೆಳೆಯರೊಡನೆ ರುದ್ರಪಾಠ ಲೇಖನ ಹಂಚಿಕೊಂಡಾಗ ಸಿಕ್ಕ ಕೊಂಡಿಗಳು. ಮಹೇಶ ಮತ್ತು ಉಲ್ಲಾಸರಿಗೆ ಧನ್ಯವಾದಗಳು.
http://www.sssbpt.org/sri-rudram/instructions-to-user.htm
http://www.vedamantram.com/audio/rudram.mp3