Thursday, August 30, 2007

ತಿರುಕನೋರ್ವನೂರ ಮುಂದೆ

ಉಧ್ವವ.ಕಾಮ್ ನಲ್ಲಿ ಸಿಕ್ಕಿದ್ದು....

ತಿರುಕನ ಕನಸು
ಮುಪ್ಪಿನ ಷಡಕ್ಷರಿ

ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿತ್ತಲೊಂದು ಕನಸ ಕಂಡನೆಂತೆನೆ
ಪುರದ ರಾಜ ಸತ್ತನವಗೆ
ವರಕುಮಾರರಿಲ್ಲದಿರಲು,
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು

ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ವೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು

ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟಿನಿಗಳ ಕೂಡಿ ನಲ್ಲ
ನಿಷ್ಟಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ

ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡಿತಿರಲು
ಲೀಲೆಯಿಂದ ಚಾತುರಂಗ ಬಲ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ, ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ

ನೋಡಿ ಬನ್ನಿರೆನಲು ಜೀಯ
ನೋಡಿ ಬಂದವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ
ಗಾಡವಾಗೆ ಸಂಭ್ರಮಗಳು
ಮಾಡುತ್ತಿದ್ದ ಮದುವೆಗಳನು
ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ

ಧನದ ಮದವು ರಾಜ್ಯಮದವು
ತನುಜಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದ ಹೆದರಿ ಕಣ್ಣ ತೆರೆದನು

Sunday, August 26, 2007

ಬಾಲ್ಯದಲ್ಲಿ ಇದ್ದ ಪಾಠ

ಬಾಲ್ಯದಲ್ಲಿ ಇದ್ದ ಪಾಠ...

ನೀವು ಕನ್ನಡ ಮಾಧ್ಯಮದಲ್ಲಿ ಓದಿದ್ರೆ, ಒಮ್ಮೆ ನಿಮಗೆ ಶಾಲೆಯ ನೆನಪಾಗಬಹುದು.

ಒಂದು ಎರಡು ಬಾಳೆಲಿ ಹರಡು,
ಮೂರು ನಾಲ್ಕು ಅನ್ನ ಹಾಕು,
ಐದು ಆರು ಬೇಳೆ ಸಾರು,
ಏಳು ಎಂಟು ಪಲ್ಯಕೆ ದಂಟು,
ಒಂಬತ್ತು ಹತ್ತು ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು.

~~~~~~~~~~~~~~~~~~~~~~~~~

ಈತ ಈಶ, ಈತ ಗಣಪ.
ಈಶನ ಮಗ ಗಣಪ

ಗ ಣ ಪ
~~~~~~~~~~~~~~~~~~~~~~~~~

ಈಗ ಊಟದ ಸಮಯ
ಕನಕ ನೀನು ಬಾ
ಕಮಲ ನೀನು ಬಾ

ಕನಕಳ ಲಂಗ ಜಳ ಜಳ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ವಯಸ್ಸಾದ ಕಾರಣ (ದೇಹಕ್ಕೆ ಆದುದ್ದದ್ದಲ್ಲ. ಮನಸ್ಸಿಗೆ ವಯಸ್ಸಾಗಿದ್ದು) ಮರೆತು ಹೋಗಿದೆ. ತಪ್ಪಿದ್ದಲ್ಲಿ ತಿದ್ದಿ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಗೆಳೆಯ ಸುಶ್ರುತ ದೊಡ್ಡೇರಿ ಹೇಳಿದ್ದು

ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲಲು ಸುಂದರ
ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಟ್ಟದ ಗಾಳಿಪಟ.....


ಮತ್ತೆ,

ನನ್ನಯ ಬುಗರಿ
ಬಣ್ಣದ ಬುಗರಿ
ಗಿರಿಗಿರಿ ಸದ್ದನು ಮಾಡುವ ಬುಗರಿ.....

......ಕಾಮನಬಿಲ್ಲನು ಭೂಮಿಗೆ ಇಳಿಸಿ
ಗರಗರ ಸುತ್ತುವ ನನ್ನಯ ಬಗರಿ...

ಮುಂದೆ, ಮಧ್ಯೆ ಮಧ್ಯೆ ಮರ್ತ್ ಹೋಗಿದೆ.. :(

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಶ್ಯಾಮಾ ಹೇಳಿದ್ದು

ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯನೆಂತು ಪೇಳ್ವೆನೊ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯಾಳು ತಾನಿದ್ದನು

ಪುಣ್ಯ ಕೋಟಿ ಎಂಬ ಹಸುವು
ತನ್ನ ಕಂದನ ನೆನೆದು ಕೊಂಡು
ಮುನ್ನ ಹಾಲನು ಕೊಡುವೆನೆನುತಾ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯಾಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೆ ನಮ್ಮ ತಾಯಿ ತಂದೆ
ಸತ್ಯವೆ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚಂದದಿಂದ ಭಾಷೆಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲು ಎಂದು
ಅಮ್ಮನಿಗೆ ಕರು ಹೇಳಿತು

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಕೊಟ್ಟ ಭಾಷೆಯ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟ ಕಡೆಗಿದು ಖಂಡಿತಾ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯಾಡಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ವೊದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತಕೇಳಿ
ಕಣ್ಣನೀರನು ಸುರಿಸಿ ನೊಂದೂ
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನೂ

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನಾ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಪ್ರಭ ಹೇಳಿದ್ದು

ಆಮೆಯೊಂದು ಮರದ ಕೆಳಗೆ ಮನೆಯ ಮಾಡಿತು
ಹಕ್ಕಿಯಂತೆ ಹಾರಬೇಕು ಎಂದು ಬಯಸಿತು

ಹಕ್ಕಿ ಜೊತೆಗೆ ಸಂಗ ಮಾಡಿ ಆಸೆ ತಿಳಿಸಿತು
ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು

ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದವು
ಆಮೆ ಅದಕೆ ಜೋತು ಬೀಳೆ ಹಾರಿ ಹೋದವು
.... ಆಮೆ ನೋಡಿ ಜನರು ನಕ್ಕರು
ನಕ್ಕ ಜನರ ಬೈಯಲೆಂದು ಆಮೆ ಬಾಯಿ ತೆರೆಯಿತು
ಮೇಲಿನಿಂದ ಕೆಳಗೆ ಬಿದ್ದು ಸತ್ತು ಹೋಯಿತು

~~~~~~~~~~~~~~~~
ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಮಲಗಿ
ಮೂರು ಕರಡಿಗಳಾಡುತಿದ್ದವು
ನಾಲ್ಕು ಮರಿಗಳ ಸೇರಿಸಿ

ಐದು ಜನರು ಬೇಟೆಗಾರರು
ಆರು ಬಲೆಗಳ ಎಳೆದು ತಂದು
ಏಳು ಕರಡಿಗಳಿಡಿಯಲೆಂದು
ಎಂಟು ಎಂದರು ಹರುಷದೀ

ಒಂಬತ್ತು ಎಂದನು ಅವರಲೊಬ್ಬ
ಹತ್ತು ಎಂದನು ಬೇರೆಯವನು
ಎಣಿಸಿ ನೋಡಿದರೇಳೇ ಏಳು
ಇಲ್ಲಿಗೀ ಕತೆ ಮುಗಿಯಿತು

Monday, August 13, 2007

ವೃತ್ತಿ

ಹಿಂದೊಮ್ಮೆ ದನ ಕಾಯೋ ಮಂಜು ಬಗ್ಗೆ ಬ್ಲಾಗ್ ನಲ್ಲಿ ಬರೆದಿದ್ದೆ. ಅದನ್ನು ಸ್ವಲ್ಪ ವಿಸ್ತರಿಸಿ "ದಟ್ಸ್ ಕನ್ನಡ.ಕಾಮ್ ಗೆ ಕಳಿಸಿದ್ದೆ. ಅದಕ್ಕೆ "ವೃತ್ತಿ" ಅಂತ ಹೆಸರಿಟ್ಟೆ.

ಬಿಡುವಾದಾಗ ಒಮ್ಮೆ ಕಣ್ಣು ಹಾಯಿಸಿ.

http://thatskannada.oneindia.in/sahitya/kathe/270707vrutti_yajnesh.html


ಕ್ರಿಷ್ಣ ಮತ್ತು ದೆವ್ವ

ಅಮವಾಸ್ಯೆಯ ರಾತ್ರಿ 11:30, ಕ್ರಿಷ್ಣ ಮತ್ತು ಜುಟ್ಟು ಸೈಕಲ್ ಮೇಲೇರಿ ಮನೆಗೆ ಹೊಂಟಿದ್ದ. ಆ ಸೈಕಲ್ ಅವನ ಅಪ್ಪ ಶೀನಣ್ಣ ಸಣ್ಣಕಿದ್ದಾಗ ತಗಂಡಿದ್ದಾಗಿತು. ಅಪರೂಪಕ್ಕೊಮ್ಮೆ ಕೆಲಸ ನಿರ್ವಹಿಸುವ ಬ್ರೇಕು ಟೈರ್, ಪೆಡಲ್ ಬಿಟ್ಟರೆ ಉಳಿದುದಕ್ಕೆಲ್ಲ ಕ್ರಿಷ್ಣನ ಅಪ್ಪಂಗೆ ಆದಷ್ಟೇ ವಯಸ್ಸಾಗಿತ್ತು. ಮನೇಲಿ ಅಪ್ಪ ಅಮ್ಮ ಫಿಲ್ಮು ನೋಡಕೆ ಬಿಡ್ತ್ವಲ್ಲೆ ಹೇಳಿ ಕ್ರಿಷ್ಣ ಸುಬ್ಬಣ್ಣನ ಮನೆಗೆ ಹೋಗ್ತಿದ್ದ. ಅವತ್ತು ಬ್ಯಾಟರಿ ತಗಂಡು ಹೋಗಕೆ ಮರ್ತೇ ಹೋಗಿತ್ತು. ಫಿಲ್ಮ್ ಮುಗಿದ್ ತಕ್ಷಣ ಸುಬ್ಬಣ್ಣ ಲಾಟೀನು ಕೊಡ್ತಿ ಅಂದ್ರು ತಗಳದೇ ಕಪ್ಪಲ್ಲೇ ಇಬ್ರು ಹೊಂಟಿದ್ದ. ದಿನಾ ಒಡಾಡೋ ದಾರಿಯಾಗಿದ್ರಿಂದ ಸುಬ್ಬಣ್ಣನೂ ಸುಮ್ನಾನಾದ. ಸುಬ್ಬಣ್ಣನ ಮನೆ ಹತ್ರ ರಸ್ತೆ ಸ್ವಲ್ಪ ಏರು ಇದ್ದಿದ್ರಿಂದ ಸೈಕಲ್ ತಳ್ಕಿಂಡೇ ಹೋದ. ಚೂರು ಮುಂದೆ ಹೋದ ತಕ್ಷಣ ಇಳಿ ಇತ್ತು.ಶುರುನಲ್ಲೇ ಸಣ್ಣ ಮುರಿ. ಅದು ಬೇರೆ ಕಗ್ಗತ್ತಲು. ಕ್ರಿಷ್ಣಂಗೆ ಸುಬ್ಬಣ್ಣ ಹೊರಡಕಿದ್ರೆ "ಇವತ್ತು ಅಮವಾಸ್ಯೆ, ನಿಧಾನ ಹೋಗಿ" ಅಂತ ಹೇಳಿದ್ದು ನೆನಪಾತು. ಸ್ವಲ್ಪ ಹೆದ್ರಿಕೆ ಆತು. ಜೊತೆಗೆ ಜುಟ್ಟು ಇದ್ದಿದ್ರಿಂದ ಧೈರ್ಯ ತಗಂಡ. ಮುರಿ ಹತ್ರ ಇಬ್ರೂ ಸೈಕಲ್ ಹತ್ತಿ ಹೊಂಟ. ಕ್ರಿಷ್ಣ ಸೈಕಲ್ ಹೊಡಿತಾಯಿದ್ದ. ಹಿಂದೆ ಜುಟ್ಟು. ಮುರಿನಲ್ಲಿ ಇಳಿತಾಯಿದ್ದ ಹಂಗೆ ಸೈಕಲ್ ಬುಡ್ ಅಂತ ಎಂತಕೋ ಹೊಡತ್ತು. ಎಂತೋ ಒಡಿಹೋದ ಹಂಗೆ ಆತು. ಕ್ರಿಷ್ಣ "ಅಪ್ಪಯ್ಯಾ...ಅಪ್ಪಯ್ಯಾ" ಅಂತ ಸೈಕಲ ಬಿಟ್ಟು ಮನೆ ಕಡೆ ಓಡಕೆ ಶುರು ಮಾಡ್ದ. ಜುಟ್ಟು ಅವನ ಮನೆ ಕಡೆ ಓಡಿಹೋದ.

ಅಪ್ಪಯ್ಯಾ.. ಅಪ್ಪಯ್ಯಾ.. ಕೂಗಿದ್ದು ಇಡೀ ಊರಿಗೇ ಕೇಳ್ತು. ಮಲಗಿದ್ದ ಶೀನಣ್ಣ ಕನಸ್ಸಲ್ಲಿ ಯಾರೋ ಕೂಗಿದ ಅಂತ ಮಾಡ್ಕಿಂಡ. ಆದ್ರೆ ಕೂಗದು ಇನ್ನು ಜೋರಾಗಿ ಕೇಳ್ತಾಯಿತ್ತು. ಕ್ರಿಷ್ಣ ಮನೇ ಕಡೆ ಓಡಿ ಬರ್ತಾಯಿದ್ದಿದ್ದ. ಇದು ತನ್ನ ಮಗಂದೇ ದ್ವನಿ ಅಂತ ಶೀನಣ್ಣಂಗೆ ಗೊತ್ತಾಗಿ ಬ್ಯಾಟರಿನೂ ತಗಳದೇ ಎದ್ದು ರಸ್ತೆಕಡೆ ಓಡಿದ. ಕಪ್ಪು ಬೇರೆ. ಕ್ರಿಷ್ಣಂಗೆ ಯಾವುದರ ಪರಿವೇ ಇಲ್ಲೆ. ಓಡಿ ಬರ್ತಾಯಿದ್ದ ಅಪ್ಪಂಗೆ ಡಿಕ್ಕಿ ಹೊಡೆದು ಮತ್ತೆ ದೆವ್ವಕ್ಕೆ ಡಿಕ್ಕಿ ಹೊಡಿದಿ ಅಂತ ಇನ್ನೊಂದು ಕಡೆ ಓಡಕೆ ಶುರು ಮಾಡಿದ. ಬಿದ್ದು ಸುದಾರಿಸ್ಕಿಂಡು ಮತ್ತೆ ಶೀನಣ್ಣ ಕ್ರಿಷ್ಣನ ಹಿಂದೆ ಓಡಿ ಹೋಗಿ ಅಂತೂ ಅವನ ಹಿಡಿದು ಏಂತಾತು ಅಂತ ಕೇಳ್ದ. ಮುರಿ ಹತ್ರ ದೇವ್ವ ತಂಗೆ ಡಿಕ್ಕಿ ಹೊಡತ್ತು ಅಂತ ಕ್ರಿಷ್ಣ ಹೇಳಕಿದ್ರೆ ಸುಮಾರು ಹೊತ್ತಾತು.

ಶೀನಣ್ಣಂಗೆ ಅಲ್ಲಿಗೆ ಹೋಗಿ ಸೈಕಲ್ ತರಕೆ ಹೆದ್ರಿಕೆ. ಕ್ರಿಷ್ಣನ್ನ ಮನೆಗೆ ಕರ್ಕಂಡು ಹೋದ.ಜುಟ್ಟು ಅಲ್ಲಿಂದ ಕಾಲು ಕಿತ್ತವ ಮನೆ ತನಕ ಒಂದೇ ಉಸಿರಲ್ಲಿ ಓಡಿ ಹೋಗಿ ಮುಚ್ಚಿಹಾಕ್ಕಿಂಡು ಮಲಗಿದ್ದ. ಇತ್ಲಗೆ ಶೀನಣ್ಣಂಗೆ ಎಂತ ಮಾಡದು ಅಂತ ಗೊತ್ತಾಗಲ್ಲೆ. ಅಷ್ಟು ಹೊತ್ತಿಗೆ ಊರಗಿದ್ದವೆಲ್ಲ ಎದ್ದು ಶೀನಣ್ಣನ ಮನೆ ಕಡೆ ಓಡಿ ಬಂದ. ಬರ್ತಾ ಗಣಪತಣ್ಣ ರಸ್ತೆ ಮದ್ಯೆ ಇದ್ದ ಸೈಕಲ್ ತಗಂಡು ಬಂದ. ಅವ್ರಿಗೆ ದೆವ್ವ ಕಾಣದೇ ಇದ್ದಿದ್ದು ಕ್ರಿಷ್ಣಂಗೆ ಆಶ್ಚರ್ಯ ಆತು. ಬಂದವೆಲ್ಲ ಎಂತಾತು ಅಂತ ಕೇಳ್ದ. ಶೀನಣ್ಣ ಅವಕ್ಕೆ ಕ್ರಿಷ್ಣನ ಪುರಾಣ ಎಲ್ಲ ಹೇಳ್ದ. ಸೈಕಲ್ ಗೆ ದೆವ್ವ ಬಂದು ಹೊಡದ್ದು, ಕ್ರಿಷ್ಣ ಓಡಿ ಬಂದಿದ್ದು ಏಲ್ಲ ಕೇಳಿ ಬಂದವಕ್ಕೆಲ್ಲ ಸ್ವಲ್ಪ ಹೆದ್ರಿಕೆ ಆತು. ಆದ್ರೆ ಗಣಪತಣ್ಣ ಮಾತ್ರ ಜೋರಾಗಿ ನಗಾಡಕೆ ಶುರು ಮಾಡಿದ. ಎಂತಕೆ ಅಂತ ಎಲ್ಲ ಕೇಳ್ದ. "ಅದು ದೆವ್ವನೂ ಅಲ್ಲ ಎಂತೂ ಅಲ್ಲ, ನಮ್ಮನೆ ದನಗಳು. ಮೇಯಕ್ಕೆ ಹೋಗಿದ್ದ ದನಗಳು ಈಗ ಬಂದ. ಕೊಟ್ಟಿಗೆಲಿ ಕಟ್ಟ್ ಹಾಕಿಕ್ಕೆ ಬೈಂದಿ. ಒಂದು ದನದ ಕೋಡಗೆ ಸೈಕಲ್ ಸೀಟು ಸಿಗ್ತು. ಬರ್ತಾಯಿರಕಿದ್ರೆ ನಿಮ್ಮನೆ ಸೈಕಲ್ ಸಿಗ್ತು. ತಗಂಡ್ ಬಂದಿ" ಅಂದ. ಎಲ್ಲ ಕ್ರಿಷ್ಣಂಗೆ ಬೈತಾ ಮನೆಗೆ ಹೊಂಟ