Saturday, May 18, 2013

ಕಮ್ಯುನಿಕೇಶನ್ ಗ್ಯಾಪು ಮತ್ತು 8500 ಹೊಗೆ!!!


ಗಣೇಶ್ ಭಾರತಕ್ಕೆ 20 ದಿನ ರಜೆಗೆಂದು ಹೊರಟಿದ್ದ. ರಮ್ಯಗೆ ಅಲ್ಲಿಂದ ಮಾತ್ರೆ ಬೇಕಿತ್ತು. ಮಾತ್ರೆ xxxx150 ತಗೊಂಡ್ ಬಾ ಅಂತ ಹೇಳಿದ್ಲು. ಗಣೇಶ್ ವಾಪಾಸ್ ಅಮೇರಿಕಾಕ್ಕೆ ಬರ್ತಾ ನೆನಪ್ ಮಾಡ್ಕೊಂಡು ಮಾತ್ರೆ ತಗೊಂಡ್ ಬಂದಿದ್ದ. ರಮ್ಯಗೆ ದೊಡ್ಡ ಬಾಕ್ಸ್ ನೋಡಿ ಆಶ್ಚರ್ಯ. ಒಡೆದು ನೋಡ್ತಾಳೆ  150 ಮಾತ್ರೆಗಳು. ಬಿಲ್ ನೋಡಿದ್ರೆ Rs 8500. ಹೊಗೆ ಹಾಕಿಸಿಕೊಳ್ಳೋದೊಂದೇ ಬಾಕಿ.

ವಿಷ್ಯ ಏನಪ್ಪಾ ಅಂದ್ರೆ, ಆಕೆ ಹೇಳಿದ್ದು ಮಾತ್ರೆ ಹೆಸ್ರು "xxxx150". ಆತ ತಿಳ್ಕೊಂಡಿದ್ದು xxxx ಅನ್ನೋ ಮಾತ್ರೆ 150 ತರಬೇಕು ಅಂತ. ಕಮ್ಯುನಿಕೇಶನ್ ಗ್ಯಾಪು. ರಮ್ಯಗೆ Rs 8500 ಹೊಗೆ!!!


ಏಷ್ಟೋ ಸಲ ನಾವು ಹೇಳಿದ್ದು ಸರಿ ಇದೆಯಾ ಅಂತ ಯೋಚಿಸೋದಿಲ್ಲ. ಎದುರಿಗಡೆ ಇರೋರಿಗೆ ನಾವ್ ಹೇಳಿದ್ದು ಅರ್ಥ ಆಯ್ತಾ ಅನ್ನೋದನ್ನೂ ಗಮನಿಸೋಲ್ಲ. ಇನ್ನೊಬ್ಬರು ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಗೋಣು ಆಡಿಸಿರುತ್ತೇವೆ. ಮಾತಿನ ಬಗ್ಗೆ ಗಮನ ಇರೊಲ್ಲ. ಮಾತು ಮುತ್ತು ಅನ್ನೋದು ನೆನ್ಪೇ ಇರೊಲ್ಲ....

ಇಲ್ಲಿ ರಮ್ಯಗೆ ಆಗಿದ್ದು ಅದೇ ಕತೆ. ಆ ಮಾತ್ರೆಗಳನ್ನು ಅಮೇರಿಕಾದ ಮೆಡಿಕಲ್ ಸ್ಟೋರ್ ಗಳಿಗೆ ಕೊಡೋಕಾಗೊಲ್ಲ. ಮಾತ್ರೆ ಇದೇ ಅಂತ ಸುಮ್ನೆ ತಗೊಳೋಕು ಆಗೊಲ್ಲ. ಯಾರಾದರು ಭಾರತಕ್ಕೆ ಹೋಗೋರು ಸಿಕ್ರೆ ಅವರ ಹತ್ರ ಕಳಿಸಿ ಮತ್ತೆ ಮೆಡಿಕಲ್ ಶಾಪ್ ಗೆ ಕೊಡಬಹುದು. ಅವ್ರು ವಾಪಾಸ್ ತಗೋತಾರೆ ಅಂತ ಗ್ಯಾರಂಟಿ ಇಲ್ಲ. ಸಣ್ಣ ತಪ್ಪಿಗೆ ತೆತ್ತೆ ಬೆಲೆ 8500!!!


ಎಷ್ಟೋ ಸಲ ಇದಿರುಗಡೆ ಇರೋ ವ್ಯಕ್ತಿ ತುಂಬಾ ಪ್ರಶ್ನೆ ಕೇಳಿದ್ರೆ ನಾವು ಗುರ್ ಅಂತೀವಿ. ದೊಡ್ಡ ಮೂರ್ಖ ಶಿಖಾಮಣಿ ಅಂತ ಹೇಳ್ತಿವಿ. ಆದ್ರೆ ಎಷ್ಟೋ ಸಲ ನಾವು ಎಲ್ಲ್ಲಾ ಅರ್ಥ ಆಯ್ತು ಅಂತ ಯಾವ ಪ್ರಶ್ನೆ ಮಾಡದೇ ಆಮೇಲೆ ಕಣ್ ಕಣ್ ಬಿಡ್ತೀವಿ. ನಿಜವಾಗಿ ಫುಲ್ ಅರ್ಥ ಆಗೋ ತನಕ ಪ್ರಶ್ನೆಗಳ ಸುರಿಮಳೆಯಿಟ್ಟವನ ಮುಂದೆ ನಾವು ದೊಡ್ಡ ಮೂರ್ಖ ಶಿಖಾಮಣಿ ಆಗಿರ್ತೀವಿ.

ಏನಾಗಬೇಕೆನ್ನುವ choice ನಿಮ್ಮದು


Monday, May 13, 2013

ಸ್ಲೈಡರ್ ಮತ್ತು ಸಣ್ಣ ಹೆಜ್ಜೆ

ನನ್ನ ಎರಡೂವರೆ ವರ್ಷದ ಮಗ ಅದ್ವೈತ ಪಾರ್ಕ್ ನಲ್ಲಿ ಸ್ಲೈಡರ್ ಹತ್ತೋಕೆ ಹೆದರ್ತಾಯಿದ್ದ. ಸೈಡರ್ ನ ಹತ್ರ ಹೋದ್ರೆ ನಮ್ಮನ್ನ ಗಟ್ಟಿಯಾಗಿ ಹಿಡಿದುಕೊಳ್ತಾಯಿದ್ದ. ಒಂದು ವರ್ಷದ ಹಿಂದೆ ಸ್ಲೈಡರ್ ನಲ್ಲಿ ಆಡ್ತಾಯಿದ್ದೋನು ಸಲ್ಪ ದೊಡ್ಡವನಾದಾಗ ಹೆದರಿಕೆಯಿಂದ ಸ್ಲೈಡರ್ ನಲ್ಲಿ ಆಡೋಕೆ ಹಿಂದೇಟ್ ಹಾಕ್ತಾಯಿದ್ದ. ಒಂದೆರಡು ಸಲ ಫೋರ್ಸ್ ಮಾಡಿ ಸ್ಲೈಡರ್ ನಲ್ಲಿ ಕೂರಿಸಿದ್ರೂ ಆತ ಅದನ್ನು ಎಂಜಾಯ್ ಮಾಡಿರಲಿಲ್ಲ.

ಮಗನಲ್ಲಿ ಸ್ಲೈಡರ್ ಹೆದರಿಕೆ ಹೋಗೋ ಹಾಗೆ ಮಾಡೋ ಕೆಲ್ಸ ನಮ್ಮದಾಗಿತ್ತು. ಮೊದ್ಲು ಅವನು ತುಂಬಾ ಇಷ್ಟಪಟ್ಟು ನೋಡ್ತಾಯಿದ್ದ ಐಫೋನ್ ನಲ್ಲಿ ಸ್ಲೈಡರ್ನಲ್ಲಿ ಮಕ್ಕಳು ಆಡ್ತಾಯಿರೋ ವಿಡಿಯೋಸ್ ಹಾಕಿ ಅವನಿಗೆ ಆಸಕ್ತಿ ಬರೋ ಹಾಗೆ ಮಾಡಿದ್ವಿ. ಒಂದೆರಡು ದಿನ ಬಿಟ್ಟು ಟಿ. ವಿ ನಲ್ಲಿ ಮತ್ತೊಂದಿಷ್ಟು ವೀಡಿಯೋಸ್ ನ ಸಲ್ಪ್ಪ ಹಾಕಿದ್ವಿ. ಎಲ್ಲದನ್ನು ತುಂಬಾ ಖುಷಿ ಪಡ್ತಾ ಆತ ನೋಡೋಕೆ ಶುರು ಮಾಡಿದ. ಆಮೇಲೆ ಕುಳಿತುಕೊಂಡು ನಮ್ಮ ಕಾಲಿಂದ ಜಾರೋ ಹಾಗೆ ಅವನಿಗೆ ಹೇಳಿಕೊಟ್ವಿ. ನಿದಾನ ಆತ ಅಪ್ಪ ಸ್ಲೈಡರ್, ಅಮ್ಮ ಸ್ಲೈಡರ್ ಅಂತ ಕಾಲಿಂದ ಜಾರೋಕೆ ಶುರು ಮಾಡಿದ.

ಸಲ್ಪ ದಿನದ ನಂತರ ಮತ್ತೆ ಪಾರ್ಕ್ ಗೆ ಕರ್ಕೊಂಡ್ ಹೋಗಿ ಅಲ್ಲಿ ಸ್ಲೈಡರ್ ನಲ್ಲಿ ಆಡ್ತಾಯಿರೋ ಮಕ್ಕಳನ್ನು ತೋರಿಸಿದ್ವಿ. ಅದನ್ನು ನೋಡ್ತಾ ಸಕತ್ ಎಂಜಾಯ್ ಮಾಡಿದ. ಅವನಿಗೆ ನೀನು ಕುತ್ಗೋ ಅಂತ ಫೋರ್ಸ್ ಮಾಡ್ಲಿಲ್ಲ. ಸುಮ್ನೆ ಒಂದೆರಡು ದಿನ ಹಾಗೆ ನೋಡಿದ ಮೇಲೆ ಆತನಲ್ಲಿ ಕಾನ್ಪಿಡೆನ್ಸ್ ಬರ್ತಾಯಿರೋದು ಗೊತ್ತಾಯ್ತು.

ನಂತರ ಮತ್ತೆ ಆತನನ್ನು ಪಾರ್ಕ್ ಗೆ ಕರ್ಕೊಂಡು ಹೋಗಿ ಸ್ಲೈಡರ್ ನ ಅರ್ದದಿಂದ ನಾನು ನಿಧಾನ ಬಿಟ್ವಿ. ಜಯಶ್ರೀ ಕೆಳಗೆ ನಿಂತು ಅವನನ್ನು ಹಿಡ್ಕೋತಾಯಿದ್ಲು. ನಿಧಾನವಾಗಿ ಮೇಲೆ ಮೇಲಿಂದ ಬಿಡ್ತಾ ಬಂದ್ವಿ. ಆಮೇಲೆ ಅವನೇ "ಸ್ಲೈಡರ್, ಸ್ಲೈಡರ್" ಅಂತ ಹೇಳ್ತಾ ಒಬ್ಬನೇ ಆಡೋಕೆ ಶುರುಮಾಡಿದ. ಒಂದು ಸ್ಮಾಲ್ ಸ್ಟೆಪ್ಸ್ ನಿಂದ ಆತನಲ್ಲಿ ಹೆದರಿಕೆ ಹೋಗಿತ್ತು.

ಜೀವನದಲ್ಲೂ ಹಾಗೆ, ಒಮ್ಮೆಲೆ ಏಕಾ ಏಕೀ ಸಾಧಿಸಹೊರಡೋದಕ್ಕಿಂತ ಒಂದು ಸ್ಮಾಲ್ ಸ್ಟೆಪ್ ನಿಂದ ಶುರುಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವೇಗವಾಗಿ ಓಡಬೇಕು ಅಂದ್ರೆ ಒಂದೇ ದಿನದಲ್ಲಿ ಆಗೊಲ್ಲ ಅಥವಾ ಒಂದೇ ದಿನ ತುಂಬಾ ಓಡಿದರೂ ಆಗೊಲ್ಲ. ಪ್ರತಿದಿನ ಹಂತ ಹಂತವಾಗಿ ವೇಗ ಜಾಸ್ತಿ ಮಾಡ್ತಾ ಹೋದ್ರೆ ಒಂದು ದಿನ ನಾವು ವೇಗವಾಗಿ ಓಡಬಹುದು.

ಇದು ಎಲ್ಲಾ ಕೆಲಸಕ್ಕೂ ಅನ್ವಯ ಆಗತ್ತೆ. ಎಷ್ಟೋ ಸಲ ಇದು ನನ್ನಿಂದ ಆಗೊಲ್ಲ. ನನಗೆ ಇದು ಗೊತ್ತಿಲ್ಲ ಅಂತ ಹೇಳ್ತೇವೆ ಮತ್ತು ಅದಕ್ಕೆ ನಮ್ಮದೇ ಆದ ಸ್ಪಷ್ಟೀಕರಣನೂ ಕೊಡ್ತೀವಿ. ನಾವು ಸರಿಯಾದ ರೀತಿನಲ್ಲಿ ಪ್ರಯತ್ನ ಮಾಡಿರೋದೇ ಇಲ್ಲ.

ಬೀಜ ಬಿತ್ತಿದ ತಕ್ಷಣ ಗಿಡ ಹುಟ್ಟೋಲ್ಲ. ಅದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಗೊಬ್ಬರ ಎಲ್ಲ ಕೊಟ್ಟರೆ ಮೊಳಕೆ ಸಲ್ಪ ದಿನವಾದ ಮೇಲೆ ಬರತ್ತೆ. ನಮ್ಮಲ್ಲಿ ಸಕಾರಾತ್ಮಕ ಬೀಜ ಬಿತ್ತೋಣ... ಉತ್ತಮ ಬೆಳೆ ಬರಲಿ ಮತ್ತು ಅದು ಎಲ್ಲೆಡೆ ಹರಡಲಿ..

--------------------------------------
ಚಿತ್ರ ಕೃಪೆ: http://www.istockphoto.com

Saturday, May 11, 2013

ಯಶಸ್ಸು ಅನ್ನೋದು ಯಾರಪ್ಪನ್ನ ಮನೆ ಗಂಟೂ ಅಲ್ಲ


ಅದ್ಯಾಕೋ ಗೊತ್ತಿಲ್ಲ, ನಾನು ಮಾತ್ರ ಇಲ್ಲೇ ಇದ್ದೇನೆ. ಆದರೆ ಆತ ನೋಡ ನೋಡುತ್ತಿದ್ದ ಹಾಗೆ ಅದೆಷ್ಟು ಮೇಲಕ್ಕೆ ಹೋದ. ಆತ ನನ್ನಂತೆಯೇ ಒಬ್ಬ ಸಾಮಾನ್ಯ. ಆದ್ರೂ ಆತ ಜೀವನದಲ್ಲಿ ತುಂಬಾ ಯಶಸ್ಸನ್ನು ಕಂಡ.

ಬಹಳಷ್ಟು ಜನ ಈ ರೀತೀ ಯೋಚಿಸ್ತಾಯಿರುತ್ತಾರೆ. ಹಾಗೆ ಯೋಚಿಸಿದವರಲ್ಲಿ ಶೇ 5-8 ರಷ್ಟು ಜನ ಮಾತ್ರ ಆತನ ಯಶಸ್ಸಿನ ಗುಟ್ಟೇನು ಅಂತ ತಿಳ್ಕೊಳ್ಳೋಕೆ ಪ್ರಯತ್ಸಿಸುತ್ತಾರೆ. ಉಳಿದವರು ನಾವು ಅದೃಷ್ಟವಂತರಲ್ಲ ಅಥವಾ ಆತ ಬೇರೆಯವರ ತಲೆ ಒಡೆದು ಮೇಲೆ ಬಂದ ಅಂತಾನೋ ಅಥವಾ ಇನ್ನೇನೋ ಕಲ್ಪಿಸಿಕೊಂಡು ತಾವು ಕಟ್ಟಿಕೊಂಡ ಸಾಮ್ರಾಜ್ಯದಲ್ಲಿ ಹಾಗೆ ಇದ್ದು ಬಿಡ್ತಾರೆ.

ಯಶಸ್ಸು ಕಂಡವರ ನೋಟಕ್ಕೂ/ಯೋಚನಾಹರಿಗೂ ನಮ್ಮ ನೋಟ/ಯೋಚನಾ ಲಹರಿಗೂ ವ್ಯತ್ಯಾಸವೇನೆಂದು ನೋಡಿದರೆ ಗೊತ್ತಾಗತ್ತೆ ನಾವು ಮೇಲೆ ಹೋಗದಿರಲು ಕಾರಣವೇನೆಂದು. ಹೆಚ್ಚಿನ ಜನರು ಜೀವನ ಎಂದ್ರೆ ಹೀಗೆ ಅಂತ ಮೊದಲೇ ಫಿಕ್ಸ್ ಮಾಡ್ಕೊಂರ್ತಾರೆ. ಬೆಳಗ್ಗೆ ಏಳೋದು, ತಿಂಡಿ ತಿನ್ನೋದು, ಆಫೀಸಿಗೆ ಹೋಗೋದು, ಕಾಫಿ ಬ್ರೇಕ್, ಲಂಚ್ ಬ್ರೇಕ್, ಗಾಸಿಪ್ಪು ಅದು ಇದೂ ಎಲ್ಲದರ ಜೊತೆ ಕೊಟ್ಟ ಕೆಲಸ ಮಾಡಿ ಮುಗಿಸಿ ರಾತ್ರಿ ಉಸ್ಸಪ್ಪಾ ಅಂತ ಮನೆಗೆ ಬಂದು ತಿಂದು ಮದ್ಯರಾತ್ರಿ ತನಕ ಟಿ.ವಿ ನೋಡಿ ಮಲ್ಗೋದು. ವೀಕೆಂಡ್ ನಲ್ಲಿ ಶಾಪಿಂಗ್, ಫಿಲ್ಮ್, ಟ್ರಿಪ್, ಎಕ್ಸೆಟ್ರಾ... ಎಲ್ಲವೂ ಫಿಕ್ಸ್...


ವಿಭಿನ್ನವಾಗಿ ಯೋಚಿಸೋದಕ್ಕೆ ಟೈಮ್ ಕೊಡೊಲ್ಲ. ನಾವು ಮಾಡೋ ಕೆಲಸದಲ್ಲಿ ಹೊಸತನ್ನು ಹೇಗೆ ತರಬಹುದು ಅಂತ ಯೋಚನೆ ಮಾಡೋದೆ ಕಡಿಮೆ. ಹಲವರಿಗೆ  ಹೊಸತನ್ನು ತಿರಸ್ಕರಿಸಬಹುದು ಎನ್ನೋ ಭಯವಿದ್ರೆ ಇನ್ನು ಕೆಲವರಿಗೆ ಅಯ್ಯೋ ಯಾರು ಅದ್ನೆಲ್ಲಾ ಮಾಡ್ತಾರೆ ಅನ್ನೋ ಸೋಮಾರಿತನ. ಹಾಗಾಗಿ ಅವರು ಅಲ್ಲೇ ಇರ್ತಾರೆ,  ಹೊಸತನ್ನು ಯೋಚಿಸುವವನು ಮೇಲೆ ಮೇಲೆ ಹೋಗ್ತಾನೆ. ಮನಸ್ಸಲ್ಲಿ ಬಂದ ಹೊಸ ಐಡಿಯಾಕ್ಕೆ ಕಾವು ಕೊಟ್ಟು ಅದರ ಸಾದಕ ಬಾದಕ ನೋಡಿ ಪ್ರಯೋಗಿಸಿ ಯಶಸನ್ನ ಎಷ್ಟೋ ಮಂದಿ  ಕಂಡ್ರೆ, ಅದೇ ಐಡಿಯಾವನ್ನು ಕನಸು ಕಾಣುತ್ತಾ ಅದರಲ್ಲೇ ಸುಖ ಕಂಡು ಮುಂದೊಂದು ದಿನ ತಾವು ಕಂಡ ಐಡಿಯಾ ಇನ್ನೊಬ್ಬ ಸಾಕಾರ ಮಾಡಿದ್ದನ್ನು ನೋಡಿ ಕೊರಗುವ/ಕರುಬುವವರು ಬಹಳಷ್ಟು ಮಂದಿ.

ಯಶಸ್ಸು ಅನ್ನೋದು ಯಾರಪ್ಪನ್ನ ಮನೆ ಗಂಟೂ ಅಲ್ಲ. ನಮ್ಮ ಜೀವನವನ್ನು ನಾವು ಹೊಸ ರೀತಿಯಿಂದ ಸಕಾರಾತ್ಮಕವಾಗಿ ನೋಡಿದರೆ ಯಶಸ್ಸು ನಮ್ಮ ಸುತ್ತ ಇರತ್ತೆ.  ಬೆಲ್ಲವಿದ್ದಲ್ಲಿ ಇರುವೆ ಇದ್ದ ಹಾಗೆ.

ಚಿತ್ರ ಕೃಪೆ: http://www.istockphoto.com

Thursday, May 2, 2013

ಬೆಳಗ್ಗೆ ಜಾಗಿಂಗ್


ಬೆಳಗ್ಗೆ ಬೇಗ ಏಳ್ಬೇಕು ಅಂತ ತುಂಬಾ ದಿನ ಅಂದ್ಕೊಂಡಿದ್ದೆ ನಾನು. ಆದ್ರೆ ಅದನ್ನು ಕಾರ್ಯಗತಗೊಳಿಸಿರಲಿಲ್ಲ ಅಷ್ಟೇ :(
ಅಯ್ಯೋ ನಾಳೆ ಎದ್ರಾಯ್ತು ಅಂತ ಅಲಾರಂ ಆಫ್ ಮಾಡಿ ಮಗ್ಗಲು ಬದಲಾಯಿಸಿದ್ದೆ ಜಾಸ್ತಿ. ಆದ್ರೆ ನನ್ನೊಳಗೆ ಅಸಮಾಧಾನ ಪ್ರತಿದಿನ ಹೆಚ್ಚಾಗ್ತಾ ಹೋಯ್ತು. ಪ್ರತಿದಿನ ನನ್ನೊಳಗೆ ಮೌಲ್ಯಮಾಪನ ಪ್ರಾರಂಭವಾಗಿ ಮನಸ್ಸು ಕಿರಿ ಕಿರಿ ಮಾಡಿಕೊಳ್ಳೋದು ಜಾಸ್ತಿಯಾಗ್ತಾ ಹೋಯ್ತು. ಎಷ್ಟೋ ಸಲ ಎದ್ದು ಏನ್ ಮಾಡಬೇಕು, ಅದರ ಬದಲು ಆ ಹೊತ್ತನ್ನು ಸುಖವಾಗಿ ನಿದ್ದೆ ಮಾಡಬಹುದಲ್ಲಾ ಅನಿಸ್ತಿತ್ತು. ಬೆಂಗಳೂರಲ್ಲಿ ಇದ್ದಾಗ ಆಫೀಸಿಗೆ ಹೋಗಬೇಕಲ್ಲ ಅಂತ ಬೇಗ ಏಳ್ತಿದ್ದೆ. ಎದ್ದು ಗಡಿಬಿಡಿಯಲ್ಲಿ ಸ್ನಾನ ಎಲ್ಲಾ ಮುಗಿಸಿ ಆಫೀಸ್ ಕಡೆ ಓಡ್ತಾಯಿದ್ದೆ. ಆದ್ರೆ ಅಮೇರಿಕಾಕ್ಕೆ ಬಂದಮೇಲೆ ಬೆಳಗ್ಗೆ ಬೇಗ ಏಳೋ ಅವಶ್ಯಕತೆಯಿರಲಿಲ್ಲ. ಹಾಗಾಗಿ ಮತ್ತೆ ಸೋಮಾರಿಯಾಗಿದ್ದೆ.

ಕೊನೆಗೊಂದು ದಿನ ಜಾಗಿಂಗ್ ಮಾಡೋದ್ರ ಬಗ್ಗೆ ಗೆಳಯ ಶ್ರೀಧರನ ಹತ್ತಿರ ಮಾತಾಡಿದೆ. ಅವ್ನೂ ರೆಡಿ ಅಂದಾಗ ಸಕತ್ ಖುಷಿಯಾಯ್ತು. ನಾವಿಬ್ರೂ ಒಂದೇ ಅಪಾರ್ಟ್ಮೆಂಟ್ ನಲ್ಲಿ ಇದ್ದಿದ್ರಿಂದ ಜಾಗಿಂಗ್ ಸುಲಭ ಆಯ್ತು.

ಪ್ರತಿದಿನ ಸಂಜೆ ಆಫೀಸಿಂದ ಬಂದ ಮೇಲೆ ನಾವು ಮತ್ತು ಶ್ರೀಧರನ ಫ್ಯಾಮಿಲಿ 1-2 ಮೈಲಿ ವಾಕ್ ಹೋಗ್ತಾಯಿದ್ದಿದ್ರಿಂದ ಸಂಜೆ ಜಾಗಿಂಗ್ ಬದ್ಲು ಬೆಳಗ್ಗೆ ಹೋಗೋಣ ಅಂತ ಮಾತಾಡಿ ಮುಹೂರ್ತ ಫಿಕ್ಸ್ ಮಾಡಿದ್ವಿ ಮತ್ತು ಪ್ರಾರಂಭ ಮಾಡಿದ್ವಿ.

ಬೆಳಗ್ಗೆ ಜಾಗಿಂಗ್ ನಿಂದ ಆಗೋ ಅನುಕೂಲತೆಗಳು

1) ನೆಮ್ಮದಿ - ಬೆಳ್ಳಂಬೆಳಗ್ಗೆ ಓಡೋದ್ರಿಂದ ಮನಸ್ಸಿನ ನೆಮ್ಮದಿ ಜಾಸ್ತಿಯಾಗತ್ತೆ ಮತ್ತು ನಮ್ಮಲ್ಲಿರೋ ಕ್ರಿಯೇಟಿವಿಟಿ ಜಾಸ್ತಿಯಾಗತ್ತೆ ಅಂತ ಬಹಳಷ್ಟು ಕಡೆ ಓದಿದ್ದೆ. ಅದರ ಅನುಭವನೂ ನನಗಾಯ್ತು.

2) ಸ್ವಚ್ಚ ಪರಿಸರ - ಬೆಳಗಿನ ಪರಿಸರ ತುಂಬಾ ಚೆನ್ನಾಗಿರತ್ತೆ. pollution ತುಂಬಾ ಕಡಿಮೆ. ಒಳ್ಳೆ ಗಾಳಿ ಸಿಗತ್ತೆ. ಕಾರು ದೂಳುಗಳು ಶುರುವಾಗೋಕಿಂತ ಮುಂಚೆ ನಮ್ಮ ಜಾಗಿಂಗ್ ಆದ್ರೆ ಆರೋಗ್ಯಕ್ಕೂ ಒಳ್ಳೇದು

3) ಕುಂಟುನೆಪ ಹೇಳೋಕಾಗೊಲ್ಲ - ಎಷ್ಟೋ ಸಲ ವಾಸ್ತವ ಮರೆಮಾಡಿ ಕುಂಟು ನೆಪ ಹೇಳೋದ್ರಲ್ಲಿ ನಾವು ನಿಸ್ಸೀಮರು. ಸಲ್ಪ ಸುಸ್ತಾದ್ರೂ/ಅಫೀಸಿಂದ ಲೇಟಾದ್ರೆ/ಟ್ರಾಫಿಕ್ ಜಾಮ್/ಅದೂ ಇದೂ ಅಂತ ಇವತ್ತು ಬೇಡ ನಾಳೆ ಓಡೋಣ ಅಂತ ಮುಂದುಹಾಕೋ ಸಾದ್ಯತೆಗಳೇ ಜಾಸ್ತಿ. ಆದ್ರೆ ಬೆಳಗಿನ ಜಾವದಲ್ಲಿ ಈ ಎಲ್ಲಾ ಕಾರಣ ಇರೊಲ್ಲ. ಬೇಗ ಏಳೋದು ಶೂ ಲೇಸ್ ಕಟ್ಟಿ ಹೊರಡೋದು ಅಷ್ಟೆ

4) ತೂಕ ಇಳಿಕೆ - ಖಾಲಿ ಹೊಟ್ಟೆಯಲ್ಲಿ ಓಡಿದ್ರೆ ನಮ್ಮಲ್ಲಿ ಇರೋ calories ನ ಬೇಗ ಕರಗಿಸಬಹುದು ಅಂತ ಬಹಳಷ್ಟು ಲೇಖನಗಳಲ್ಲಿ ಓದಿದ್ದೆ.

5) ತಂಗಾಳಿ - ಬೆಳಗಿನ ಜಾವದ ತಂಗಾಳಿ ಸವಿಯುತ್ತಾ ಓಡೋದ್ರಲ್ಲಿ ಇರೋ ಮಜಾನೇ ಬೇರೆ ಕಣ್ರಿ. ಅದನ್ನು ಅನುಭವಿಸಿದವರಿಗೇ ಗೊತ್ತು. ಓಡು ಮತ್ತೆ ನಿಲ್ಲು ಮತ್ತೆ ಓಡು ನಿಲ್ಲು. ಸಲ್ಪ ಹೊತ್ತಲ್ಲಿ ಮೈಯೆಲ್ಲಿ ಬೆವರಿಳಿಯತ್ತೆ.  ತಂಗಾಳಿ ಬೆವರನ್ನು ಸವರಿ ಹೋಗೋವಾಗ ಆಗೋ ಮೈಪುಳಕ ಸೂಪರ್...

Wednesday, May 1, 2013

ಜಾಗಿಂಗ್ ಶುರುಮಾಡಿದ್ದೇನೆ


ಮೊದಲು ಬಲಗಾಲು ಮುಷ್ಕರ ಹೂಡ್ತು, ಮರುದಿನ ಎಡಗಾಲು ಮುಷ್ಕರ, ಅದಕ್ಕೂ ಮರುದಿನ ಎರಡು ಕಾಲುಗಳು ಮುಷ್ಕರ ಹೂಡಿದವು. ಆದರೂ ಬಿಡದೇ ಹುರಿದುಂಬಿಸಿ ಎರಡು ಕಾಲ್ಗಳನ್ನು ರೆಡಿ ಮಾಡೇಬಿಟ್ಟೆ ಜಾಗಿಂಗ್ ಗೆ.

ಹೌದು ನಾನೀಗ ಜಾಗಿಂಗ್ ಶುರುಮಾಡಿದ್ದೇನೆ. ಕಷ್ಟಪಡದೇ ಇಷ್ಟಪಟ್ಟು ಶುರುಮಾಡಿದ್ದರಿಂದ ಇದನ್ನು ಅರ್ದಕ್ಕೆ ಬಿಡುವ ಮನಸ್ಸಂತೂ ಸದ್ಯಕ್ಕಿಲ್ಲ.

ಮೊದಲಿಂದಲೂ ಬೆಳಗ್ಗೆ ಬೇಗ ಏಳ್ಬೇಕು ಅಂತ ಮನಸ್ಸಿದ್ರೂ ಅಲಾರಂ ಹೊಡೆದಾಗ ನಾಳೆ ಬೇಗ ಏಳೋಣ ಅಂತ ಮಲಗಿದ್ದೇ ಜಾಸ್ತಿ. ಪ್ರತಿ ವರ್ಷ ಪ್ರಾರಂಭದಲ್ಲಿ ಅದನ್ನು ಮಾಡಬೇಕು, ಇದನ್ನ ಮಾಡಬೇಕು ಅಂತೆಲ್ಲಾ ಅಂದುಕೊಂಡರೂ ಕೊನೆಗೆ  ಯಾವುದನ್ನೂ ಮಾಡದೇ ಮತ್ತೆ ಮುಂದಿನವರ್ಷ ಬಂದಾಗ ನನ್ನ ಬಗ್ಗೇ ಬೇಸರ ಪಟ್ಟಿದ್ದೇ ನಡಿತಾಯಿತ್ತು. ಆದ್ರೆ ಈ ವರ್ಷ ಹಾಗಾಗಬಾರದು ಅಂತ ನಿರ್ದಾರ ಮಾಡಿದ್ದೆ. ಅದೇ ಸಮಯದಲ್ಲಿ ನಾನು ತುಂಬಾ ಇಷ್ಟ ಪಡೋ Leo Babauta ಅವರ "zenhabits.net" ನ "Sea Change Program" ಜಾಯಿನ್ ಆದೆ. ತುಂಬಾ ಸರಳವಾಗಿ ನಮಗನಿಸಿದ್ದನ್ನು ಹೇಗೆ ಹಂತ ಹಂತವಾಗಿ ಬರೀತಾರೆ. ನನಗೆ ತುಂಬಾ ಇಷ್ಟವಾಯ್ತು.

ಅದ್ರಲ್ಲಿ ಏಪ್ರಿಲ್ ತಿಂಗಳ ವಿಷಯ "The Exercise Habit". ಅಲ್ಲಿಂದ ನಾನು ಶುರುಮಾಡಿದ್ದು ಜಾಗಿಂಗ್. ಜೊತೆಗೆ ಶ್ರೀಧರನೂ ಸಿಕ್ಕಿದ್ದರಿಂದ ಪ್ರತಿದಿನ ಈಗ 30-40 ನಿಮಿಷ ಜಾಗಿಂಗ್ ಮಾಡುತ್ತಿದ್ದೇವೆ. ಮೊದಲದಿನ ಸಲ್ಪ ದೂರ ಓಡಿದ್ದ್ದಾಗಲೇ ನನಗೆ ಗೊತ್ತಾಗಿದ್ದು ನನ್ನ ಸಾಮರ್ಥ್ಯ. ಆದರೆ ಹಂತ ಹಂತವಾಗಿ ಓಟದ ದೂರ ಜಾಸ್ತಿ ಮಾಡ್ತಾಬಂದ್ವಿ. ಈಗ ಸರಾಗವಾಗಿ ಹತ್ರ ಹತ್ರ ಒಂದು ಕಿಲೋ ಮೀಟರ್ ಬ್ರೇಕ್ ಇಲ್ದೇ ಓಡ್ತೀವಿ. ಬೆಳ್ಳಂಬೆಳಗ್ಗೆ ಎದ್ದು ತಂಗಾಳಿಲಿ ಓಡೋ ಮಜಾನೇ ಬೇರೆ. ಸಕತ್ ಖುಷಿಯಾಗತ್ತೆ. ಸಲ್ಪ ದೂರ ಓಡೋದು ಮದ್ಯೆ ಸಲ್ಪ ಬ್ರೇಕ್ ಮತ್ತೆ ಓಟ ಶುರು. ಇನ್ನೂ ಜಾಸ್ತಿ ಜಾಸ್ತಿ ಓಡಬೇಕೆನಿಸಿದೆ. ಪ್ರತಿದಿನ ಮೈಗೆ ವ್ಯಾಯಾಮ ಇಲ್ದೇ ಬೆವರು ಬರೋದೇ ಕಡಿಮೆಯಾಗಿದೆ. ಹೊರಗೆ ಎಷ್ಟು ಬಿಸಿಲಿರಲಿ/ತಣ್ಣಗಿರಲಿ ಅನ್ನೋದೇ ಗೊತ್ತಾಗೋದೇ ಇಲ್ಲ. ಆಫೀಸಿನಲ್ಲಿ ಎಲ್ಲಾ  AC ಗಳು.

ನಾನು ಜಾಗಿಂಗ್ ಶುರುಮಾಡಿದ್ದು ತುಂಬಾ ಸಿಂಪಲ್ ಆಗಿ
೧) ಮೊದಲ ದಿನ ಜೋರಾಗಿ ವಾಕ್ ಮಾಡಿ ನಮ್ಮ ಬಾಡಿ ಸಲ್ಪ ಸೆಟ್ ಆದ್ಮೇಲೆ ಸ್ವಲ್ಪ ದೂರ ಓಡಿದೆ. ಇನ್ನೂ ಓಡೋಣ ಅನಿಸಿದ್ರೂ ನಿಲ್ಲಿಸಿದ್ದೆ
೨) ಮರುದಿನದಿಂದ ಸ್ವಲ್ಪ ಸ್ವಲ್ಪ ಜಾಸ್ತಿ ಮಾಡಿದೆ. ಮೊದಲು ಮೂರ್ಲಾಕ್ಕು ದಿನ ಮೈಕೈಲ್ಲಾ ನೋವಾದ್ರು ಬಿಡದೇ ಮುಂದುವರೆಸಿದೆ.
೩) ಸಾಕು ಅನಿಸಿದ ತಕ್ಷಣ ಬ್ರೇಕ್ ಕೊಟ್ಟು ಸುಧಾರಿಸಿಕೊಂಡು ಮತ್ತೆ ಓಡೋಕೆ ಶುರುಮಾಡಿದೆ. ಈಗ ದೇಹ ಮತ್ತು ಮನ್ಸು ಎರಡೂ ಫುಲ್ ಖುಷ್.

ನೀವೂ ಜಾಗಿಂಗ್ ಶುರು ಮಾಡ್ರಿ, ಅದ್ರ ಮಜಾನೇ ಬೇರೆ.

ಕಳೆದ ನಾಲ್ಕು ದಿನದಿಂದ ಜ್ವರವಿದ್ದಿದರಿಂದ ಜಾಗಿಂಗ್ ಇಲ್ಲ. ಮೈಯೆಲ್ಲಾ ಬಾರ ಅನಿಸ್ತಾಯಿದೆ. ಏನನ್ನೋ ಕೆಳೆದುಕೊಂಡ ಅನುಭವ. ಮತ್ತೆ ಓಡಬೇಕು, ದೇಹ ಮತ್ತು ಮನಸ್ಸು ಹಗುರಾಗಬೇಕು