Saturday, May 11, 2013

ಯಶಸ್ಸು ಅನ್ನೋದು ಯಾರಪ್ಪನ್ನ ಮನೆ ಗಂಟೂ ಅಲ್ಲ


ಅದ್ಯಾಕೋ ಗೊತ್ತಿಲ್ಲ, ನಾನು ಮಾತ್ರ ಇಲ್ಲೇ ಇದ್ದೇನೆ. ಆದರೆ ಆತ ನೋಡ ನೋಡುತ್ತಿದ್ದ ಹಾಗೆ ಅದೆಷ್ಟು ಮೇಲಕ್ಕೆ ಹೋದ. ಆತ ನನ್ನಂತೆಯೇ ಒಬ್ಬ ಸಾಮಾನ್ಯ. ಆದ್ರೂ ಆತ ಜೀವನದಲ್ಲಿ ತುಂಬಾ ಯಶಸ್ಸನ್ನು ಕಂಡ.

ಬಹಳಷ್ಟು ಜನ ಈ ರೀತೀ ಯೋಚಿಸ್ತಾಯಿರುತ್ತಾರೆ. ಹಾಗೆ ಯೋಚಿಸಿದವರಲ್ಲಿ ಶೇ 5-8 ರಷ್ಟು ಜನ ಮಾತ್ರ ಆತನ ಯಶಸ್ಸಿನ ಗುಟ್ಟೇನು ಅಂತ ತಿಳ್ಕೊಳ್ಳೋಕೆ ಪ್ರಯತ್ಸಿಸುತ್ತಾರೆ. ಉಳಿದವರು ನಾವು ಅದೃಷ್ಟವಂತರಲ್ಲ ಅಥವಾ ಆತ ಬೇರೆಯವರ ತಲೆ ಒಡೆದು ಮೇಲೆ ಬಂದ ಅಂತಾನೋ ಅಥವಾ ಇನ್ನೇನೋ ಕಲ್ಪಿಸಿಕೊಂಡು ತಾವು ಕಟ್ಟಿಕೊಂಡ ಸಾಮ್ರಾಜ್ಯದಲ್ಲಿ ಹಾಗೆ ಇದ್ದು ಬಿಡ್ತಾರೆ.

ಯಶಸ್ಸು ಕಂಡವರ ನೋಟಕ್ಕೂ/ಯೋಚನಾಹರಿಗೂ ನಮ್ಮ ನೋಟ/ಯೋಚನಾ ಲಹರಿಗೂ ವ್ಯತ್ಯಾಸವೇನೆಂದು ನೋಡಿದರೆ ಗೊತ್ತಾಗತ್ತೆ ನಾವು ಮೇಲೆ ಹೋಗದಿರಲು ಕಾರಣವೇನೆಂದು. ಹೆಚ್ಚಿನ ಜನರು ಜೀವನ ಎಂದ್ರೆ ಹೀಗೆ ಅಂತ ಮೊದಲೇ ಫಿಕ್ಸ್ ಮಾಡ್ಕೊಂರ್ತಾರೆ. ಬೆಳಗ್ಗೆ ಏಳೋದು, ತಿಂಡಿ ತಿನ್ನೋದು, ಆಫೀಸಿಗೆ ಹೋಗೋದು, ಕಾಫಿ ಬ್ರೇಕ್, ಲಂಚ್ ಬ್ರೇಕ್, ಗಾಸಿಪ್ಪು ಅದು ಇದೂ ಎಲ್ಲದರ ಜೊತೆ ಕೊಟ್ಟ ಕೆಲಸ ಮಾಡಿ ಮುಗಿಸಿ ರಾತ್ರಿ ಉಸ್ಸಪ್ಪಾ ಅಂತ ಮನೆಗೆ ಬಂದು ತಿಂದು ಮದ್ಯರಾತ್ರಿ ತನಕ ಟಿ.ವಿ ನೋಡಿ ಮಲ್ಗೋದು. ವೀಕೆಂಡ್ ನಲ್ಲಿ ಶಾಪಿಂಗ್, ಫಿಲ್ಮ್, ಟ್ರಿಪ್, ಎಕ್ಸೆಟ್ರಾ... ಎಲ್ಲವೂ ಫಿಕ್ಸ್...


ವಿಭಿನ್ನವಾಗಿ ಯೋಚಿಸೋದಕ್ಕೆ ಟೈಮ್ ಕೊಡೊಲ್ಲ. ನಾವು ಮಾಡೋ ಕೆಲಸದಲ್ಲಿ ಹೊಸತನ್ನು ಹೇಗೆ ತರಬಹುದು ಅಂತ ಯೋಚನೆ ಮಾಡೋದೆ ಕಡಿಮೆ. ಹಲವರಿಗೆ  ಹೊಸತನ್ನು ತಿರಸ್ಕರಿಸಬಹುದು ಎನ್ನೋ ಭಯವಿದ್ರೆ ಇನ್ನು ಕೆಲವರಿಗೆ ಅಯ್ಯೋ ಯಾರು ಅದ್ನೆಲ್ಲಾ ಮಾಡ್ತಾರೆ ಅನ್ನೋ ಸೋಮಾರಿತನ. ಹಾಗಾಗಿ ಅವರು ಅಲ್ಲೇ ಇರ್ತಾರೆ,  ಹೊಸತನ್ನು ಯೋಚಿಸುವವನು ಮೇಲೆ ಮೇಲೆ ಹೋಗ್ತಾನೆ. ಮನಸ್ಸಲ್ಲಿ ಬಂದ ಹೊಸ ಐಡಿಯಾಕ್ಕೆ ಕಾವು ಕೊಟ್ಟು ಅದರ ಸಾದಕ ಬಾದಕ ನೋಡಿ ಪ್ರಯೋಗಿಸಿ ಯಶಸನ್ನ ಎಷ್ಟೋ ಮಂದಿ  ಕಂಡ್ರೆ, ಅದೇ ಐಡಿಯಾವನ್ನು ಕನಸು ಕಾಣುತ್ತಾ ಅದರಲ್ಲೇ ಸುಖ ಕಂಡು ಮುಂದೊಂದು ದಿನ ತಾವು ಕಂಡ ಐಡಿಯಾ ಇನ್ನೊಬ್ಬ ಸಾಕಾರ ಮಾಡಿದ್ದನ್ನು ನೋಡಿ ಕೊರಗುವ/ಕರುಬುವವರು ಬಹಳಷ್ಟು ಮಂದಿ.

ಯಶಸ್ಸು ಅನ್ನೋದು ಯಾರಪ್ಪನ್ನ ಮನೆ ಗಂಟೂ ಅಲ್ಲ. ನಮ್ಮ ಜೀವನವನ್ನು ನಾವು ಹೊಸ ರೀತಿಯಿಂದ ಸಕಾರಾತ್ಮಕವಾಗಿ ನೋಡಿದರೆ ಯಶಸ್ಸು ನಮ್ಮ ಸುತ್ತ ಇರತ್ತೆ.  ಬೆಲ್ಲವಿದ್ದಲ್ಲಿ ಇರುವೆ ಇದ್ದ ಹಾಗೆ.

ಚಿತ್ರ ಕೃಪೆ: http://www.istockphoto.com

No comments: