Wednesday, December 24, 2008

ವಿದಾಯ

ಆತ್ಮೀಯರೇ,

ಇಂದು ನನಗೆ ಬಹಳ ಬೇಸರವಾಗುತ್ತಿದೆ. ಜೀವನದ ಪ್ರತಿ ಗಳಿಗೆ ನನ್ನ ಜೊತೆಯಿದ್ದು ನನ್ನ ಅವಿಬಾಜ್ಯ ಅಂಗವಾದ ನಿಮ್ಮನ್ನು ಇಂದು ನನ್ನ ಹಿತಕ್ಕೋಸ್ಕರ ಬಲಿ ಕೊಡುತ್ತಿದ್ದೇನೆ. ಕ್ಷಮೆಯಿರಲಿ. ನನಗೂ ನಿಮ್ಮನ್ನು ಬೀಳ್ಕೊಡಲು ಇಷ್ಟವಿಲ್ಲ. ಆದರೆ ವಿದಿಯಾಟ. ವಿದಿಯಾಟದ ಮುಂದೆ ಹುಲುಮಾನವರ ಆಟವೇನೂ ಸಾಗದು. ನಾವೆಲ್ಲಾ ಪಾತ್ರದಾರಿಗಳು. ಸೂತ್ರದಾರಿ ಅವನು.

ನಾನು ಬೆಳೆದ ಹಾಗೆ ನೀವೂ ನನ್ನೊಟ್ಟಿಗೆ ಬೆಳೆದಿರಿ. ಹಾಗೆಯೇ ನನ್ನ ಏಳುಬೀಳಿನಲ್ಲಿ ಬಾಗಿಯಾಗಿ ನನಗೆ ಸ್ಪೂರ್ತಿಯಾದಿರಿ. ನಿಮ್ಮಿಂದ ನನಗೆ ಯಾವುದೇ ತೊಂದರೆಯಾಗಲಿಲ್ಲ. ಆದರೂ ನಿಮ್ಮನ್ನು ದೂರ ಮಾಡುತ್ತಿದ್ದೇನೆ.

ನಾವೇನು ಮಾಡಿದೆವು ಅಂತ ನೀವು ನನ್ನ ಪ್ರಶ್ನಿಸಬಹುದು.
ನೀವು ಹುಟ್ಟಿದ ಸ್ಥಳ ಸರಿಯಾದುದಲ್ಲ. ಪ್ರತಿಯೊಬ್ಬರು ಉತ್ತಮ ಸಂಸ್ಕಾರವಂತರಾಗಬೇಕಾದರೆ ಉತ್ತಮ ಪರಿಸರವಿರಬೇಕು. ಉತ್ತಮರ ಸಹವಾಸವಿರಬೇಕು. ಆಗಲೇ ಆತನಲ್ಲಿ ಜೀವನದ ತತ್ವಗಳ ಬಗ್ಗೆ ಜಾಗೃತಿ ಮೂಡುತ್ತದೆ. ಆದರೆ ನಿಮ್ಮ ವಿಷಯದಲ್ಲಿ ಹಾಗಾಗಲಿಲ್ಲ. ಇದು ನಿಮ್ಮ ತಪ್ಪಲ್ಲ. ಮತ್ತೆ ಹೇಳ್ತೇನೆ, ಇದು ವಿದಿಯಾಟ. ಅದಕ್ಕೆ ನಿಮ್ಮನ್ನು ನನ್ನಿಂದ ದೂರ ಮಾಡುತ್ತಿದ್ದೇನೆ.

ಮೊನ್ನೆ ನಿಮ್ಮನ್ನು ಕಳಿಸಿಕೊಡುವಾಗ ನನಗೆ ಬಹಳ ನೋವಾಯಿತು. ಬಾಯಿ ಕಿತ್ತು ಬಂದ ಹಾಗಾಯಿತು. ನನ್ನನ್ನು ಕಳಿಸದಿರು ಅಂತ ಮೌನವಾಗಿ ನೀವಿಬ್ಬರು ನನ್ನನ್ನು ತಬ್ಬಿ ಹಿಡಿದಿದ್ದಿರಿ. ಆದರೂ ಕಳಿಸಿಕೊಟ್ಟೆ. ಈಗ ನಿಮ್ಮ ಜಾಗದಲ್ಲಿ ಹೊಸತು ಕೃತಕ ಹಲ್ಲುಗಳು ಬಂದಿವೆ. ಹೊಂದಿಕೊಳ್ಳಲು ಕೆಲವು ದಿನಗಳಾಗಬಹುದು. ಅಲ್ಲಿಯ ತನಕ ಕಿರಿ ಕಿರಿಯಾಗುತ್ತದೆ. ಆಗ ನಿಮ್ಮ ನೆನಪಾಗುತ್ತದೆ.

ಮನಸು ಹೇಳ ಬಯಸಿದೇ ನೂಂರೊದು
ತುಟಿಯ ಮೇಲೆ ಬಾರದಿರೇ ಮಾತೊಂದು
ವಿದಾಯ ಗೆಳೆಯರೇ
ವಿದಾಯ ಗೆಳೆಯರೇ,
ವಿದಾಯ ಹೇಳ ಬಯಸಿರುವೇ ನಾನಿಂದು

ಏನಿದು ವಿದಾಯ ಅನಿಸಿರಬಹುದು. ಇದು ದಂತ ವಿದಾಯ!!!
ಹುಟ್ಟಿನಿಂದ ನನ್ನ ಜೊತೆಗೆ ಸಿಹಿ ಕಹಿಯನ್ನುಂಡ ಮತ್ತು ಹುಟ್ಟುವಾಗಲೇ ವಕ್ರವಾಗಿದ್ದ ಎರಡು ಹಲ್ಲುಗಳನ್ನು ಮೊನ್ನೆ ದೂರಮಾಡಿದೆ. ಅಗ ನನಗನಿಸಿದ್ದು ಹೀಗೆ.

Saturday, December 6, 2008

ನೀನ್ಯಾರಿಗಾದೆಯೋ ಎಲೆ ಮಾನವ

ಗೋವು ಮಾತನಾಡಿದಾಗ.....

ಆತ್ಮೀಯ,

ಬಹಳ ದಿನಗಳಿಂದ ಈ ಪತ್ರ ಬರೆಯಬೇಕೆಂದಿದ್ದೆ. ಇಂದು ಬರೆಯುತ್ತಿರುವೆ.

ನಾನೇನು ತಪ್ಪು ಮಾಡಿದೆ ನಿನಗೆ? ನಿನ್ನನ್ನು ಎಂದಾದರೂ ದೂಷಿಸಿದ್ದೆನಾ? ಅಥವಾ ನಿನ್ನ ಕುಟುಂಬಕ್ಕೇನಾದರೂ ದ್ರೋಹ ಮಾಡಿದ್ದೆನಾ? ಅಮ್ಮನ ಎದೆ ಹಾಲಿನ ಅನಂತರ ನೀನು ಕುಡಿದಿದ್ದು ನನ್ನ ಹಾಲಲ್ಲವೇ? ಅಂದಿನಿಂದ ಇಂದಿನವರೆಗೆ ನಾನೆಂದೂ ನಿನಗೆ ಮೋಸ ಮಾಡಿಲ್ಲ. ಹಾಗಿದ್ದಾಗ ನನ್ನ ಮೇಲೆ ನಿನಗೇಕೆ ಕೋಪ, ಮತ್ಸರ!

ಹಾಲು ಬೇಕೆಂದಾಗ ಏನು ಮಾಡುತಿದ್ದೆ ನೀನು?
ನನ್ನ ಮುದ್ದು ಕರುವಿಗೆ ನಾನು ಹಾಲುಣಿಸದಂತೆ ಮಾಡಿ ನನ್ನ ಹಾಲನ್ನು ಕರೆದು ನೀನು ನಿನ್ನವರಿಗೆ ಉಣಿಸಿದೆ. “ಅಮ್ಮ ನನಗೆ ಹಾಲು ಬೇಕು, ಕೊಡು” ಅಂತ ಕರು ಸಂಜ್ಞೆ ಮಾಡಿದರೂ ಅದನ್ನು ನೋಡಿ ನಾನು ಅಸಹಾಯಕಳಾಗಿದ್ದೆ. “ಮಗು, ಎಲ್ಲದಕ್ಕೂ ನಾವು ಪಡೆದುಕೊಂಡು ಬರಬೇಕು” ಎಂದು ಕರುವಿಗೆ ಸಮಾಧಾನ ಮಾಡುತ್ತಿದ್ದೆ. ಕೆಚ್ಚಲು ಗಾಯವಾದಾಗ ನಾನು ಒದ್ದಿದ್ದು ನಿಜ. ನನಗೆ ನೋವಾಗುವುದಿಲ್ಲವೇ? ಅದನ್ನೇ ಕಾರಣವಾಗಿಟ್ಟುಕೊಂಡು ನೀನು ನನ್ನ ಕಾಲುಗಳನ್ನು ಕಟ್ಟಿ ಹಾಲು ಕರೆದಿಲ್ಲವೇ? ನನ್ನ ನೋವು ನಿನಗರ್ಥವಾಗಲಿಲ್ಲವೇ?

ಕಂಡ ಕಂಡವರ ಮೇಲೆ ನಿನ್ನ ಕಾಮುಕ ದೃಷ್ಟಿಯಿಟ್ಟ ನೀನು ನನಗೆ ನನ್ನಷ್ಟಕ್ಕೆ ಗರ್ಭಧರಿಸಲೂ ಬಿಡಲಿಲ್ಲ. ನನ್ನ ಪ್ರಾಣಗಳಾದ ನನ್ನ ಕರುಗಳನ್ನು ದುಡ್ಡಿನ ಆಸೆಗೆ ನೀನು ಮಾರಿದೆ. ಸ್ವತಂತ್ರವಾಗಿ ಓಡಾಡುವ ಹಕ್ಕನ್ನೂ ಕಸಿದುಕೊಂಡೆ. ಯಾಕೆ ಕೋಪ ನಿನಗೆ? ಹಾಲು ಕೊಡುವುದಿಲ್ಲ ಎಂಬ ಏಕೈಕ ಕಾರಣಕ್ಕೆ ನನ್ನನ್ನು ಕಸಾಯಿಖಾನೆಗೆ ತಳ್ಳಿದೆ. ನನ್ನ ಕೋಡು ಉದ್ದವಿತ್ತು, ಅದಕ್ಕೆ ಬೆಂಕಿ ಹಚ್ಚಿ ವೈರಿಗಳ ಮೇಲೆ ಆಕ್ರಮಣ ಮಾಡಲು ನನ್ನನು ಉಪಯೋಗಿಸಿದೆ. ನಿನ್ನ ಭಯದಿಂದ ನಾನು ಹಾಗೆ ಓಡಿದೆ. ಓಡುವಾಗ ಕೊಂಬಿನಲ್ಲಿದ್ದ ಬೆಂಕಿ ನನ್ನ ಮೈಗೂ ತಾಗಿ ಸುಟ್ಟಿತ್ತು. ವೈರಿಗಳು ನನ್ನ ಇರಿದಿದ್ದರು. ನಿನ್ನನ್ನು ಕಾಪಾಡಿಕೊಳ್ಳಲು ನನ್ನನ್ನು ನೀನು ಉಪಯೋಗಿಸಿದ್ದೆ. ನಿನಗೆ ಕರುಣೆಯಿಲ್ಲವೇ?

ನಿನಗಾಗಿ ನನ್ನ ಜೀವನ ತೆತ್ತೆ. ಹೇಳು ಮಾನವ ಹೇಳು.
ನನಗೆ ಉತ್ತರಿಸು. ನಿನ್ನ ಆತ್ಮವನ್ನೊಮ್ಮೆ ಪ್ರಶ್ನಿಸು....
~~~~~~~~~~~~~~~~~~~~~~~~~~~~~~~~~~~~~~
ಮಾನವನ ಸ್ವಾರ್ಥದ ಅಟ್ಟಹಾಸದಲ್ಲಿ ಸಿಕ್ಕಿ ನಲುಗುತ್ತಿರುವ ಮೂಕ ಪ್ರಾಣಿ ಗೋವು ಮಾತನಾಡುವ ಲೇಖನ ಮಾಲಿಕೆ "ನೀನ್ಯಾರಿಗಾದೆಯೋ ಎಲೆ ಮಾನವ"

ಈ ಲೇಖನ ಮಾಲಿಕೆ ಶ್ರೀರಾಮಚಂದ್ರಾಪುರ ಮಠದ "ಧರ್ಮಭಾರತೀ" ಮಾಸ ಪತ್ರಿಕೆಯಲ್ಲಿ ಡಿಸೆಂಬರ್ ನಿಂದ ಪ್ರಾರಂಭವಾಗಿದೆ. ಬರೆಯಲು ಸ್ಪೂರ್ತಿಸಿದ ಮತ್ತು ಆಶೀರ್ವದಿಸಿದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರಿಗೆ ಚಿರಋಣಿ. ಬರವಣಿಗೆಯನ್ನು ತಿದ್ದಿ ತೀಡುತ್ತಿರುವ ಮತ್ತು ಧರ್ಮಭಾರತೀ ಮಾಸಪತ್ರಿಕೆಯಲ್ಲಿ ಲೇಖನ ಬರೆಯಲು ಅವಕಾಶ ನೀಡಿದ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಜಗದೀಶ ಶರ್ಮಾರವರಿಗೆ ಪ್ರೀತಿಪೂರ್ವಕ ಧನ್ಯವಾದಗಳು.

ಈ ಲೇಖನಮಾಲಿಕೆಯನ್ನು ಧರ್ಮಭಾರತೀ ಯ ಅಂತರಜಾಲ ತಾಣದಲ್ಲಿ ಓದಬಹುದು