Thursday, October 23, 2008

ಎ ವೆಡ್ನೆಸ್ ಡೇ

ಫಿಲ್ಮ್ ನೋಡೋದು ಅಂದ್ರೆ ನನಗೆ ಸ್ವಲ್ಪ ಅಲರ್ಜಿ. ಎಲ್ಲೋ ಅಪರೂಪಕ್ಕೆ ಒಳ್ಳೇ ಫಿಲ್ಮ್ ಬಂದ್ರೆ ಹೋಗೋಣ ಅನ್ಸತ್ತೆ. ಇತ್ತೀಚೆಗಂತೂ ಯಾವ್ದಾದ್ರು ಒಂದು ಫಿಲ್ಮ್ ಹಿಟ್ ಆದ್ರೆ ಅದೇ ರೀತಿ ಇರುವ (ಕಥೆ, ಸಂಗೀತ, ಸಾಹಿತ್ಯ ಏಲ್ಲಾ ಆಲ್ಮೋಸ್ಟ್ ಕಾಪಿ) ಫಿಲ್ಮ್ ಗಳು ಸಾಲಗಿ ಬರುತ್ತದೆ. ಯಾವ್ದಾದ್ರು ಡಮ್ ಅಂದ್ರೆ ಅಲ್ಲಿಗೆ ಆ ಸೀರೀಸ್ ಸ್ಟಾಪ್ . ಮಿತಿಮೀರಿದ ಕ್ರೌರ್ಯ್ಯ, ಕಾಮ, ಅರ್ಥವಿಲ್ಲದ ಹಾಸ್ಯ, ಮನಸಿಗನಿಸಿದ ಸಾಹಿತ್ಯವೆಲ್ಲಾ ಜಾಸ್ತಿಯಾಗಿದೆ. ಸಂಗೀತವಂತೂ ಕೇಳಲಸಾದ್ಯ. ಅರವತ್ತು-ಏಪ್ಪತ್ತರ ಹಾಡಿನ(ಅದ್ರಲ್ಲೂ ಪಾಪ್ ಮ್ಯೂಸಿಕ್ ಕಾಪಿ ಮಾಡೋದು ಜಾಸ್ತಿ) ಒಂದು ತುಣುಕನ್ನು ತೆಗೆದುಕೊಂಡು ಸ್ವಲ್ಪ ಬದಲಾಯಿಸಿದರೆ ಆಯ್ತು. ಈಗ ಯಾರು ಬೇಕಾದ್ರು ನಿರ್ದೇಶಕರಾಗಬಹುದು. ಒಂದೆರಡು ಬೇರೆ ಭಾಷೆ ಅಥವಾ ಅದೇ ಭಾಷೆಯ ಫಿಲ್ಮ್ ನೋಡಿ ಅಲ್ಲಿಂದ ಇಲ್ಲಿಂದ ತಂದು ಹಾಕಿದ್ರೆ ಆಯ್ತು. ಇವುಗಳ ಮದ್ಯೆ ಅಲ್ಲಿ ಇಲ್ಲಿ ಒಂದೆರಡು ಒಳ್ಳೇ ಫಿಲ್ಮ್ ಗಳು ಬರುತ್ತದೆ.

ಮೊನ್ನೆಯಷ್ಟೇ ರಾಘು ಒಂದು ಸಿ.ಡಿ ತಂದುಕೊಟ್ಟಿದ್ದ. ಯಾವ ಫಿಲ್ಮ್ ಅಂತ ಕೇಳಿದ್ದೆ. "ಎ ವೆಡ್ನೆಸ್ ಡೇ" ಅಂದ. ಯಾವ ಭಾಷೆದು, ಇಂಗ್ಲೀಷಿಂದಾ ಅಂದೆ. ಅದಕ್ಕೆ ಅಲ್ಲ ಹಿಂದಿದು, ಚೆನ್ನಾಗಿದೆ ಅಂದ. ಆಯ್ತು ನೋಡೋಣ ಅಂತ ಸುಮ್ಮನಾದ. ಭಾನುವಾರ ಸ್ವಲ್ಪ ಫ್ರೀ ಇದ್ದಿದ್ರಿಂದ ಸ್ವಲ್ಪ ನೋಡೋಣ, ಚೆನ್ನಾಗಿದ್ರೆ ಫುಲ್ ನೋಡಿದ್ರಾಯ್ತು ಅಂತ ಹಾಕಿದೆ. ಫಿಲ್ಮ್ ಫುಲ್ ಮುಗಿಯೋತನಕ ಮೇಲೇಳಲಿಲ್ಲ. ಫಿಲ್ಮ್ ತುಂಬಾ ಚೆನ್ನಾಗಿದೆ. ಹಿರೋ ಹಿರೋಯಿನ್ನು ಮರ ಸುತ್ತೋ ಹಾಡುಗಳಿಲ್ಲ. ಅನಗತ್ಯ ಸಂಬಾಷಣೆಯಿಲ್ಲ. ಹಾಸ್ಯಕ್ಕಾಗಿಯೇ ಬಳಸಿಕೊಂಡ ವ್ಯಕ್ತಿಗಳಿಲ್ಲ. ಫಿಲ್ಮ್ ನ ಕೊನೆಯ ತನಕ ಯಾರು ಹಿರೋ ಅನ್ನುವ ಪ್ರಶ್ನೆ ಕಾಡತ್ತೆ. ವಿಲನ್ ಯಾಕೆ ಹಾಗೆ ಮಾಡ್ತಾಯಿದ್ದಾನೆ ಅನ್ನೋದು ಮನಸ್ಸಲ್ಲಿ ಕಾಡತ್ತೆ.

ನಿರಜ್ ಪಾಂಡೇಯವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಇತ್ತೀಚಿನ ದಿನಗಳಲ್ಲಿ ಬಂದ zತ್ತಮ ಚಿತ್ರವೆನ್ನಬಹುದು. ನಾಸಿರುದ್ದೀನ್ ಶಾ ಮತ್ತು ಅನುಪಮ್ ಖೇರ್ ಅವರ ಅಭಿನಯವಿರುವ ಚಿತ್ರದ ಸಾರಾಂಶ ಭಯೋತ್ಪಾದನೆಗೆ ಸಾಮಾನ್ಯ ವ್ಯಕ್ತಿಯ ಸೇಡು ಅಥವಾ ಪ್ರತಿಕ್ರಿಯೆಯನ್ನೊಳಗೊಂಡಿದೆ. ನಿಮಗೆ ಬಿಡುವಾದಾಗ ಒಮ್ಮೆ ನೋಡಿ. ಹಾಂ..ಗೆಳೆಯ ರವೀಂದ್ರ "ಮುಂಬೈ ಮೇರಿ ಜಾನ್" ಫಿಲ್ಮ್ ಬಗ್ಗೆ ಹೇಳಿದ್ದ. ಅದನ್ನು ನೋಡಬೇಕು. ನಿವೇನಾದ್ರು ನೋಡಿದ್ರೆ ಹೇಗಿದೇ ಅಂತ ಹೇಳಿ.

ಒಳ್ಳೆಯವನು

ಒಂದು ಕ್ಷೇತ್ರದಲ್ಲಿ ವ್ಯಕ್ತಿ ಉನ್ನತ ಸ್ಥಾನಕ್ಕೇರಿದ ಹಾಗೆ ಆತನಿಗೆ ಬೇರೇ ಕ್ಷೇತ್ರದಲ್ಲಿ ಆಸಕ್ತಿ ಕಡಿಮೆಯಾಗುವುದು ಸಹಜ. ನಮ್ಮ ಸ್ಥಾನ ಜಾಸ್ತಿಯಾದ ಹಾಗೆ ಕೆಲಸವೂ ಮತ್ತು ಅದರ ಜೊತೆ ಉಚಿತವಾಗಿ ಬರುವ ಒತ್ತಡಗಳು ಹೆಚ್ಚು ಹೆಚ್ಚು. ತಮ್ಮ ಕಾರ್ಯ್ಯವ್ಯಾಪ್ತಿಯಲ್ಲಿ ಬರುವ ಕೆಲಸವನ್ನು ಮುಗಿಸುವುದರಲ್ಲಿಯೇ ದಿನದ ಹೆಚ್ಚಿನ ಸಮಯ ಕಳೆದುಹೋಗುತ್ತದೆ. ಅಲ್ಲಿ ಇಲ್ಲಿ ಅಪರೂಪಕ್ಕೊಬ್ಬರು ತಮ್ಮ ಕಾರ್ಯ್ಯಕ್ಷೇತ್ರದ ಜೊತೆ ಬೇರೆ ಕ್ಷೇತ್ರದಲ್ಲಿಯೂ ಬಾಗಿಯಾಗುವುದನ್ನು ಕಾಣುತ್ತೇವೆ. ಅಂತವರಲ್ಲಿ ಅಶೋಕ ಹೆಗಡೆ ಒಬ್ಬರು. ಕಳೆದ ಕೆಲವು ವರ್ಷಗಳಿಂದ ಅಶೋಕ ಹೆಗಡೆಯವರ ಬಗ್ಗೆ ಕೇಳಿದ್ದೆ. ಅವರ ಕಥೆಗಳನ್ನು ಓದಿದ್ದೆ. ಅವರು ವಿಪ್ರೋನಲ್ಲಿದ್ದಾರೆ ಅಂತ ತಿಳಿದಿತ್ತು. ಆಮೇಲೆ ನಾನೂ ವಿಪ್ರೋ ಸೇರಿ ಮೇಲೆ ಒಂದೆರಡು ಬಾರಿ ಅವರನ್ನು ಬೇಟಿ ಮಾಡಲು ಹೋಗಿದ್ದೆ. ಅವರು ಬ್ಯುಸಿ ಇದ್ದಿದ್ರಿಂದ ಆಗಿರಲಿಲ್ಲ. ಆಮೇಲೆ ಅವರು ವಿಪ್ರೋ ಬಿಟ್ಟ ಮೇಲೆ ಬೇಟಿ ಮಾಡಲಾಗಲಿಲ್ಲ. ಒಮ್ಮೆ ಫೋನಾಯಿಸಿದಾಗ "ಒಳ್ಳೆಯವನು" ಪುಸ್ತಕದ ಬಗ್ಗೆ ಹೇಳಿದ್ದರು. ಇತ್ತೀಚೆಗಷ್ಟೆ ಅದನ್ನು ಓದಿದೆ.

ಅದರಲ್ಲಿ ಬರುವ ಒಂದೊಂದು ಕಥೆಯೂ ಬಹಳ ಸುಂದರವಾಗಿದೆ. ಕಥೆಯಲ್ಲಿ ಬರುವ ನಾಗರಾಜ, ವಿಲಾಸ, ಪುರುಷೋತ್ತಮ, ಸುಬ್ರಾಯ ಹೆಗಡೆಯವರು, ಹಮೀದ, ಜಲೀಲ, ಮನು ಮತ್ತು ಒಳ್ಳೆಯವನು ಮನಸ್ಸಲ್ಲಿ ಅಚ್ಚಳಿಯದೇ ನಿಲ್ಲುತ್ತಾರೆ. ನಿಮಗೆ ಬಿಡುವಾದಾಗ ಒಮ್ಮೆ ಓದಿ.

Tuesday, October 14, 2008

ಹೊಸತನ

ಪ್ರತಿದಿನ ಏನಾದ್ರು ಹೊಸತನವಿದ್ರೆ ಎಷ್ಟು ಚಂದ ಅಲ್ವಾ ಈ ಜೀವನ !!!

ಹಾಗೇ ನಮ್ಮ ಬ್ಲಾಗಿನಲ್ಲಿ ಹೊಸತನವಿದ್ರೆ ನೋಡೋರಿಗೆ, ಓದೋರಿಗೆ ಒಂದು ರೀತಿಯ ಕುತೂಹಲವಿರುತ್ತದೆ. ಇಲ್ಲಿ ಹೊಸತನವೆಂದರೆ ಬ್ಲಾಗಿನಲ್ಲಿ ಬರಿಯೋ ಲೇಖನಗಳೊಂದೇ ಅಲ್ಲ. ನಮ್ಮ ಬ್ಲಾಗಿನ ವಿನ್ಯಾಸವೂ ಆಗಬಹುದು.

ಹೀಗೆ ಒಂದಿನ ಬ್ಲಾಗಿನ ಸೆಟ್ಟಿಂಗ್ ಚೆಕ್ ಮಾಡ್ತಾಯಿರೋವಾಗ ನನಗೆ ಹೊಳೆದಿದ್ದು ನಾನು ಯಾಕೆ ನನ್ನ ಬ್ಲಾಗನ್ನು ನನಗನಿಸಿದ ಹಾಗೆ ವಿನ್ಯಾಸ ಮಾಡಬಾರದು ಎಂದು. ಬೇರೆ ಯಾವುದೋ ಟೆಂಪ್ಲೇಟನ್ನು ತೆಗೆದು ಕೊಳ್ಳದೇ ಇರೋ ಟೆಂಪ್ಲೇಟನ್ನು ವಿನ್ಯಾಸಗೊಳಿಸಬಹುದು. ಅದಕ್ಕೆ ಸ್ವಲ್ಪ CSS ಬಗ್ಗೆ ಮಾಹಿತಿಯಿದ್ದರೆ ಆಯ್ತು. ಹಾಗೇ ಕಲರ್ ಕೋಡಿನ ಬಗ್ಗೆ ಮಾಹಿತಿಯಿದ್ದರೆ ಆಯ್ತು...

ನನ್ನ ಬ್ಲಾಗಿನಲ್ಲಿ ಸ್ವಲ್ಪ ಹೊಸತನ ಮಾಡಲು ಪ್ರಯತ್ನಿಸಿದ್ದೇನೆ. ಹಳೆಯ ಟೆಂಪ್ಲೇಟನ್ನು ಬದಲಾಯಿಸಿದ್ದೇನೆ.


ಹಳೆಯ ವಿನ್ಯಾಸ

Monday, October 6, 2008

ಗಣೇಶ ಮತ್ತು ಗಣೇಶ


ಬೆಂಗಳೂರಿಗೆ ಬಂದ ಹೊಸತರಲ್ಲಿ ನನಗೆ ಇಲ್ಲಿಯ ಜನರು ಆಚರಿಸೋ ಹಬ್ಬ, ರೀತಿ ನೀತಿ ನೋಡಿ ಆಶ್ಚರ್ಯ ಆಗ್ತಾಯಿತ್ತು. ಅಲ್ಲಿಯ ತನಕ ಹೆಸರೇ ಕೇಳದ ದೇವರುಗಳು ಮತ್ತು ಜನರ ಆಚಾರ ವಿಚಾರ ವಿಚಿತ್ರ ಅನ್ನಿಸುತ್ತಿತ್ತು. ಅಣ್ಣಮ್ಮ, ಕೆಂಪಮ್ಮ, ಮಾರಮ್ಮ ಮುಂತಾದ ದೇವರುಗಳ ಹೆಸರನ್ನು ನಾನು ಮೊದಲು ಕೇಳಿರಲಿಲ್ಲ. ಗಣಪತಿ, ವಿಷ್ಣು, ಶಿವ ಮುಂತಾದ ಹೆಸರು ಗೊತ್ತಿತ್ತು. ಹಾಗೆ ಜನರು ಮಾಡುವ ಪೂಜೆಗಳು ಸಹ ವಿಚಿತ್ರ ಅನ್ನಿಸುತ್ತಿತ್ತು.

ಜನರು ತಮಗೆ ಬಿಡುವಾದಾಗ ಹಬ್ಬ ಆಚರಿಸುತ್ತಿದ್ದರು. ಅದರಲ್ಲಿ ಗಣೇಶ ಹಬ್ಬನೂ ಒಂದು. ಗಣೇಶ ಇಡಬೇಕು ಅಂದ್ರೆ ಮುಖ್ಯವಾಗಿ ಬೇಕಾಗಿದ್ದು ಮುಹೂರ್ತ ಅಲ್ಲ.
ದೇವ್ರು ತಾನೆ, ಎಲ್ಲಾ ಅಡ್ಜೆಸ್ಟು ಮಾಡ್ಕೋತಾನೆ ಎಲ್ಲರ ಮನಸ್ಸಲಿ. ಗಣೇಶ ಮುಖ್ಯ ಅಲ್ಲ. ಆರ್ಕೆಸ್ಟ್ರಾ ಮುಖ್ಯ. ಆರ್ಕೆಸ್ಟ್ರಾ ನವರು ಸಿಗೋದೇ ಕಷ್ಟ. ಅವರು ಸಿಕ್ಕಿದ ಮೇಲೆ ದಿನ ನಿಗದಿಯಾಗೋದು.

ನಾನಿದ್ದ ಹಳೆಯ ಏರಿಯಾ ರೋಡಿನಲ್ಲಿ ನಡೆಯುತ್ತಿದ್ದ ಗಣೇಶ ಹಬ್ಬ ಈಗಲೂ ನೆನಪಿದೆ. ದೇವರ ಮೂರ್ತಿಯ ಸೈಜು ಎಷ್ಟು ಹಣ ಕಲೆಕ್ಟ್ ಆಯ್ತು ಮತ್ತು ಅದ್ರಲ್ಲಿ ಆರ್ಕೆಸ್ಟ್ರಾ + ಮೈಕು + ಅದೂ ಇದೂ + ತಮ್ಮ ಖರ್ಚಿಗೆ ಎಲ್ಲಾ ಆದಮೇಲೆ ಎಷ್ಟು ಉಳಿತೂ ಅನ್ನೋದರ ಮೇಲೆ ಡಿಪೆಂಡು. ಮಾರ್ಕೇಟಿಗೆ ಹೋದ್ರಾಯ್ತು ಗಣೇಶ ಮೂರ್ತಿ ತಂದ್ರಾಯ್ತು. ಇಲ್ಲಿ ರಸ್ತೆ ಮದ್ಯ ಗುಂಡಿ ತೆಗೆದು ಪೆಂಡಾಲು ಹಾಕಿದ್ರಾಯ್ತು. ಗಣೇಶನ್ನ ಅದ್ರಲ್ಲಿ ಕೂರ್ಸಿದ್ರಾಯ್ತು. ಅಷ್ಟೆ!!!

ಆಮೇಲೆ ಶುರುವಾಗತ್ತೆ ನೋಡಿ ಅವರ ಸ್ಟೈಲುಗಳು. ಮಂಗನ ಕೈಲಿ ಮಾಣಿಕ್ಯ ಕೊಟ್ಟ ಹಾಗೆ ಇವರ ಕೈಲಿ ಮೈಕ್ ಇರತ್ತೆ. ಬಾಯಿ ಚಟ ಇರೋರೆಲ್ಲ ಇದೇ ಸಂದರ್ಭ ಅಂತ ತೀರ್ಸ್ಕೋತಾರೆ. ಅದ್ರಲ್ಲೂ ಒಬ್ಬ "ಕಲಾಭಿಮಾನಿಗಳೇ(?), ಈಗ ಮಂಗಳಾರತಿ ಟೈಮು. ಎಲ್ಲಾ ಬನ್ನಿ" ಅಂದ. ನಾನು ಇದ್ಯಾವುದೋ ಸಾಂಸ್ಕೃತಿಕ ಸಂಘದವರ ಕಾರ್ಯಕ್ರಮ ಇರ್ಬೇಕು ಅಂತ ಹೊರಗಡೆ ಹೋಗಿ ನೋಡಿದ್ರೆ ನಮ್ಮ ರೋಡಿನ ಹುಡುಗ್ರು ಇದ್ರು. ಮತ್ಯಾಕೆ ಇವರು ಕಲಾಭಿಮಾನಿಗಳು ಅಂತ ಕರದ್ರೂ ಅಂತ ತಲೆ ಕೆಡಿಸ್ಕೋಂಡೆ. ಕೊನೆಗೆ ಗೊತ್ತಾಗಿದ್ದು ಯಾರೋ ಒಬ್ಬ ಮಹಾಶಯರಿಗೆ ಮಾತಾಡೋ ಚಟ. ಅದ್ಕೆ ಎನೋ ಹೇಳಿದ್ರು. ನಾನು ಮಂಗಳಾರತಿಗೆ ಸರಿಯಾಗಿ ಹೋದೆ. ಅಲ್ಲಿ ಇದ್ದ ಭಟ್ಟರು ನೋಡಿ ಆಶ್ಚರ್ಯ ಆಯ್ತು. ಸಂಜೆ ಆದ ತಕ್ಷಣ ಗುಂಡು ಹಾಕಿ ರಸ್ತೆ ಅಳೆಯೋದೇ ಅವರ ದಿನನಿತ್ಯದ ಮುಖ್ಯ ಕೆಲಸವಾಗಿತ್ತು. ಈಗ ಪೂಜಾರಿಯಾಗಿದ್ದರು. ಅವರು ಮಾಡಿದ ಮಂಗಳಾರತಿ ಮಾತ್ರ ಇನ್ನೂ ಅದ್ಭುತ. ಒಂದು ಕೈಯಲ್ಲಿ ಆರತಿ, ಇನ್ನೊಂದರಲ್ಲಿ ಘಂಟೆ. ಒಂದು ರೌಂಡು ಆರತಿ ಏತ್ತಿ ನಿಲ್ಲಿಸಿ ಘಂಟೆ ತೂಗ್ತಾಯಿದ್ರು. ಎರಡನ್ನೂ ಒಟ್ಟಿಗೆ ಮಾಡಲು ಬರುತ್ತಿರಲಿಲ್ಲ. ಮರುದಿನ ಅವರಿಗೆ ಆರತಿಯ ಜವಾಬ್ದಾರಿ ಮಾತ್ರ. ಘಂಟೆ ಪಕ್ಕದವನ ಹತ್ತಿರ!!! ರಾತ್ರಿ ಹನ್ನೋಂದರ ತನಕ ಇವರು ಹಾಕೋ ಅಸಂಬದ್ದ ಹಾಡುಗಳು..ಅಬ್ಬಬ್ಬ...ಗಣೇಶ ಇದನ್ನೆಲ್ಲ ಹೇಗೆ ಸಹಿಸಿಕೊಳ್ತಾಯಿದ್ನೋ...ಅವನಿಗೇ ಗೊತ್ತು!!!


ಹಾಗೋ ಹೀಗೂ ಮೂರು ದಿನ ಆದಮೇಲೆ ದೇವರನ್ನು ನೀರಲ್ಲಿ ಮುಳುಗಿಸಿ ಬಂದು ಪೆಂಡಾಲನ್ನು ಕಿತ್ತು ತೆಗೆದು ತೆಗೆದ ಗುಂಡಿಯನ್ನು ಮುಚ್ಚದೇ ಇವರು ಗುಂಡು ಹಾಕಲು ಹೋಗ್ತಾಯಿದ್ದರು. ತಾವೇನೋ ಮಹತ್ಕಾರ್ಯ ಮಾಡಿದ ಹಾಗೆ ಮದ್ಯ ರಾತ್ರಿಯ ತನಕ ಇವರ ಸಮಾಲೋಚನೆ, ಕೇಕೆ ಮುಂತಾದವುಗಳು ನಡಿತಾಯಿದ್ದವು.

ಇದು ನಗರದಲ್ಲಿ ನಡೆದ ಒಂದು ಘಟನೆ. ಹಾಗಂತ ಎಲ್ಲರೂ ಈ ರೀತಿ ಮಾಡ್ತಾರೆ ಅಂತಲ್ಲ. ತುಂಬಾ ಒಳ್ಳೆಯ ಕಾರ್ಯಕ್ರಮಗಳು ನಡಿಯುತ್ತಾ ಇರತ್ತೆ. ಆದರೆ ಬಹಳಷ್ಟು ಜನ ಗಣೇಶ ಹಬ್ಬವನ್ನು ಮೋಜಿಗಾಗಿ ಆಚರಿಸುತ್ತಾರೆ.

ನಮ್ಮ ಊರಲ್ಲಿ ಗಣೇಶ ಹಬ್ಬ ಹೇಗಿರತ್ತೆ ಅಂತ ನೋಡೋಣ ಬನ್ನಿ. ನಮ್ಮಲ್ಲಿ ಅಂದರೆ ಹವ್ಯಕರಲ್ಲಿ ಒಂದು ಪದ್ದತಿ ಪುರಾತನದಿಂದ ನಡೆದು ಬಂದಿದೆ. ಗಣೇಶನ್ನು ಯಾರೂ ತಾವಾಗಿಯೇ ತರುವುದಿಲ್ಲ. ಯಾರಾದರು ಗಣೇಶನ ಮೂರ್ತಿಯನ್ನು ಹಬ್ಬದ ಹಿಂದಿನ ದಿನ ರಾತ್ರಿ ಮನೆಯ ಮುಂದೆ ತಂದಿಟ್ಟರೆ ಆ ಮನೆಯವರು ತಮ ಶಕ್ತಿಗನುಸಾರವಾದಷ್ಟು ವರ್ಷ ಗಣೇಶನ ಪೂಜೆ ಮಾಡುತ್ತಾರೆ. ಹಾಗೆ ತಂದು ಇಡುವಾಗ ಮನೆಯವರು ಯಾರು ಎದಿರುಗಡೆ ಬರಬಾರದು ಅನ್ನೋ ನಿಯಮ ಇದೆಯಂತೆ. ಮನೆಯಲಿ ಯಾರದರು ತಂದು ಇಟ್ಟರೆ ಕನಿಷ್ಟ ಮೂರು ವರ್ಷ ಗಣೇಶನ್ನು ತರಬೇಕು ಅನ್ನೋ ನಿಯಮವಿದೆ ಅನ್ನುತ್ತಾರೆ. ಮನಸ್ಸಿಗೆ ಬಂದ ದಿನ ಗಣೇಶನನ್ನು ಇಡೋದಿಲ್ಲ. ಹಬ್ಬದ ದಿನದಂದೇ ಇಡುತ್ತಾರೆ. ಕೆಲವರು ಅಂದೇ ಮೂರ್ತಿಯನ್ನು ವಿಸರ್ಜಿಸಿದರೇ, ಇನ್ನು ಕೆಲವರು ಮೂರು ದಿನವಾದ ಮೇಲೆ ವಿಸರ್ಜಿಸುತ್ತಾರೆ. ತಂದ ಗಣೇಶನ ವಿಗ್ರಹಕ್ಕೆ ಮೊದಲು ಪ್ರಾಣ ಪ್ರತಿಷ್ಟೆ ಮಾಡುತ್ತಾರೆ. ಪ್ರಾಣ ಪ್ರತಿಷ್ಟೆ ಎಂದರೆ ಮೂರ್ತಿಗೆ ದೇವರನ್ನು ಆಹ್ವಾನಿಸುವುದು ಅಂತ ಅರ್ಥ. ಅದಕ್ಕೆ ಕೆಲವು ಪೂಜೆಗಳಿವೆ. ನನಗೆ ಅದರ ಬಗ್ಗೆ ಅಷ್ಟು ಮಾಹಿತಿಯಿಲ್ಲ. ಹೀಗೆ ಒಂದು ಕ್ರಮಬದ್ದವಾಗಿ ಆಚರಿಸುತ್ತಾರೆ.

ಈಗ ಪ್ರವೇಶವಾಗುತ್ತಿರುವವನು ನಮ್ಮ ಕಥಾನಾಯಕ ಗಣೇಶ ಶೆಟ್ಟಿ. ಗಣೇಶ ಶೆಟ್ಟಿ ಮೂಲತಃ ದಕ್ಷಿಣ ಕನ್ನಡದವನು. ಹೊಟ್ಟೆ ಪಾಡಿಗಾಗಿ ನಮ್ಮ ಊರಿಗೆ ತನ್ನ ಸಂಸಾರದ ಜೊತೆ ಬಂದು ಕೂಲಿ ಕೆಲಸ ಮಾಡುತ್ತಿದ್ದವನು ಕ್ರಮೇಣ ಜನರಲ್ಲಿ ವಿಶ್ವಾಸ ಗಳಿಸಿ ತನ್ನೂರಿನ ಕೆಲವರನ್ನು ಕರೆತಂದು ಇಲ್ಲಿ ಕೆಲಸವನ್ನು ಗುತ್ತಿಗೆಗೆ ಹಿಡಿದು ಮೇಸ್ತ್ರಿಯಾಗಿ ಬಡ್ತಿ ಹೊಂದಿದ್ದ. ಮಸ್ತುಕಟ್ತಾದ ಶರೀರ, ಆರು ಅಡಿ ಎತ್ತರದ ಗಣೇಶ ಶೆಟ್ಟಿ ಸುಮಾರು ನಲವತ್ತರ ಆಜುಬಾಜಿನವನು. ಹೆಚ್ಚಾಗಿ ಆತ ಉಡುತ್ತಿದ್ದು ತುಂಡು ಬಟ್ಟೆ. ಅದು ಅವನ ಕೆಲಸಕ್ಕೆ ಅನುಕೂಲವಾಗುತ್ತಿತ್ತು ಅನ್ಸತ್ತೆ. ಕೆಲಸದ ಮದ್ಯೆ ಬೀಡಿ ಸೇದೊದು ಅವನ ಅಭ್ಯಾಸ.

ಸುಮಾರು ಹದಿನೈದು ವರ್ಷಗಳ ಹಿಂದೆ ಗಣೇಶ ಹಬ್ಬದ ಸಮಯದಲ್ಲಿ ಆತ ಕೆಲಸ ಮಾಡುತ್ತಿದ್ದಿದ್ದು ನಮ್ಮೂರಿನ ಹೆಗಡೆಯವರ ಮನೆಯಲ್ಲಿ. ಹಬ್ಬ ಹತ್ತಿರವಾಗುತ್ತಿದ್ದ ಹಾಗೆ ಹೆಗಡೆಯವರಿಗೆ ಒಬ್ಬ ಕೆಲಸದವನು ಒಂದು ಕುತೂಹಲ ಸುದ್ದಿ ತರ್ತಾನೆ. ನಿಮ್ಮ ಮನೆಗೆ ಊರಿನ ಒಂದಿಷ್ಟು ಹುಡುಗರು ಗಣೇಶನ್ನು ತಂದು ಇಡುತ್ತಾರೆ ಅಂತ. ವಿಷಯ ಕೇಳಿದ ಗಣೇಶ ಶೆಟ್ಟಿ "ಹೆಗ್ಡೇರರೇ, ಯಾರು ಬತ್ರೋ ಕಾಣ್ತೇ, ಅವತ್ತು ರಾತ್ರಿ ನಾನು ನಿಮ್ಮ ಮನೆ ಹೊರಗೆ ಮಲಗ್ತೆ" ಅಂತ ಹೇಳಿದ್ದ. ಹೆಗಡೆಯವರು ಸುಮ್ಮನಿದ್ದರು.

ಅವತ್ತು ಆತ ಮೊದಲೇ ಹೇಳಿದಂತೆ ಹೆಗಡೆಯವರ ಮನೆಯ ಹೊರಗೆ ಮಲಗಿದ್ದ. ಮದ್ಯರಾತ್ರಿಯ ಸಮಯ, ಊರಿನ ಐದು ಹುಡುಗರು ಗಣೇಶನನ್ನು ತೆಗೆದುಕೊಂಡು ಹೆಗಡೆಯವರ ಮನೆಯತ್ತ ಹೊರಟರು. ಅವರಿಗೆ ಗಣೇಶ ಶೆಟ್ಟಿಯ ಬಗ್ಗೆ ಅರಿವಿರಲಿಲ್ಲ. ಎಲ್ಲರ ಮನಸ್ಸಲಿ ಎನೋ ಒಂದು ರೀತಿಯ ಪುಳಕ. ಇಬ್ಬರು ದಾರಿ ಕಾಣಲೆಂದು ದಂದಿ ತಂದಿದ್ದರು. ಹೆಗಡೆಯವರ ಮನೆಯ ಅಂಗಳಕ್ಕೆ ಬಂದಾಗ ಅವರಿಗೆ ಗಣೇಶ ಶೆಟ್ಟಿ ಹೊರಗಡೆ ಮಲಗಿದ್ದಿದ್ದು ಕಾಣಿಸುತ್ತದೆ. ಒಬ್ಬ ಸುಮ್ಮನೆ ಹತ್ತಿರ ಬಂದು ನೋಡಿದಾಗ ಗಣೇಶ ಶೆಟ್ಟಿ ಈ ಲೋಕದಲ್ಲಿ ಇರಲಿಲ್ಲ. ಗಾಡ ನಿದ್ರೆಯಲಿದ್ದ. ಆತನ ಗೊರಕೆಯ ಸದ್ದು ದೊರದಲ್ಲಿ ನಿಂತಿದ್ದವರಿಗೆ ಕೇಳಿಸುತ್ತಿತ್ತು. ಬಂದವನು ಗಣೇಶ ಶೆಟ್ಟಿಯ ಪರಿಸ್ಥಿತಿಯನ್ನು ಗಮನಿಸಿ ಅವನಿಂದ ತಮಗೇನು ಅಪಾಯವಿಲ್ಲವೆಂದರಿತು ಎಲ್ಲರಿಗೂ ವಿಷಯ ತಿಳಿಸಿದ. ಎಲ್ಲರೂ ಒಳಗೆ ಬಂದು ಮನೆಯ ಬಾಗಿಲಲ್ಲಿ ಗಣೇಶನ್ನು ಇಟ್ಟು, ಆತನಿಗೆ ಪೂಜೆಯನ್ನು ಮಾಡಿದರು. ಪೂಜೆ ಮಂಗಳಾರತಿಯ ತನಕ ಬಂದರೂ ಮನೆಯವರಿಗಾಗಲಿ ಅಥವಾ ಗಣೇಶ ಶೆಟ್ಟಿಗಾಗಲಿ ಇದರ ಅರಿವಿರಲಿಲ್ಲ. ಮಂಗಳಾರತಿಯ ಸಮಯದಲ್ಲಿ ಜಾಂಗಟೆ ಹೊಡೆಯುವುದು ಸಾಮಾನ್ಯ. ಹಾಗೆ ಇಲ್ಲಿ ಮಂಗಳಾರತಿಯನ್ನು ಒಬ್ಬರು ಮಾಡ್ತಾಯಿದ್ದರು ಇನ್ನೊಬ್ಬರು ಅಲ್ಲೇ ಹತ್ತಿರದಲ್ಲಿ ಮಲಗಿದ್ದ ಗಣೇಶ ಶೆಟ್ಟಿಯ ಕಿವಿಯ ಹತ್ತಿರ ಜಾಂಗಟೆಯನ್ನು ಜೋರಾಗಿ ಬಡಿದರು. ಪಕ್ಕದಲ್ಲಿದ್ದವರು ಪಟಾಕಿಯನ್ನು ಅದೇ ಸಮಯದಲ್ಲಿ ಹೊಡೆದರು. ಗಾಡ ನಿದ್ರೆಯಲ್ಲಿದ್ದ ಗಣೇಶ ಶೆಟ್ಟಿಗೆ ಏನಾಗುತ್ತಿದೆ ಅನ್ನುವುದು ತಿಳಿಯಲಿಲ್ಲ. ದಿಗ್ಗನೆ ಎದ್ದು ಕುಳಿತಿದ್ದವನನು ನೋಡಿದ ಎಲ್ಲರೂ ಗೊಳ್ಳೆಂದು ನಗಲು ಪ್ರಾರಂಭಿಸಿದರು. ಗಣೇಶನಿಗೆ ಯಾರೋ ಕಳ್ಳರು ಬಂದಿದಾರೆ ಅಂತ ಯೋಚಿಸಿದವನೇ ಪಕ್ಕದಲ್ಲಿ ಇದ್ದ ಕತ್ತಿಯನ್ನು ಎತ್ತಿ ಇವರ ಮೇಲೆರಗಿದ. ಸುಮ್ಮನೆ ತಮಾಷೆಗೆ ಮಾಡ್ತಾಯಿದ್ದಾನೆ ಅಂತ ಎಲ್ಲ ಭಾವಿಸಿದರು. ಆದರೆ ಗಣೇಶ ಅಲ್ಲೇ ಇದ್ದವನ ಕೊರಳಿಗೆ ಕೈ ಹಾಕಿದ್ದನ್ನು ನೋಡಿ, ಇವನು ಕೊಲೆ ಮಾಡಬಹುದೆಂದು ಹೆದರಿ ಗಣೇಶ ಶೆಟ್ಟಿಯನ್ನು ಎಲ್ಲ ತಳ್ಳಿ ಚಪ್ಪಲಿಯನ್ನು ಹಾಕಿ ಕೊಳ್ಳದೇ ದಿಕ್ಕಾಪಾಲಾಗಿ ಓಡಿದರು. ಗಣೇಶ ಶೆಟ್ಟಿ ಹಿಂದಿನಿಂದ ಆಟ್ಟಿಸಿಕೊಂಡು ಬರುತ್ತಿದ್ದ. ಬಂದವರೆಲ್ಲಾ ರಸ್ತೆ ಬಿಟ್ಟು ಗುಡ್ಡ ಹತ್ತಿ ಹಾಗೋ ಹೀಗೋ ಮನೆ ಸೇರಿದರು. ಮೈಯೆಲ್ಲ ಗಾಯವಾಗಿತ್ತು. ಅರ್ದ ಘಂಟೆಯ ಹಿಂದಿದ್ದ ಉತ್ಸಾಹವೆಲ್ಲ ಇಳಿದು ಸದ್ಯ ಬದುಕಿ ಉಳಿದೆವೆಲ್ಲ ಅಂತ ತಮಗೆ ತಾವೇ ಸಮಾಧಾನ ಹೇಳಿಕೊಂಡರು. ಗಣೇಶ ಶೆಟ್ಟಿ ಎಲ್ಲರನ್ನೂ ಮನಸಾರೆ ಬೈಯುತ್ತಾ ಹೆಗಡೆಯವರ ಮನೆಗೆ ವಾಪಾಸಾದ. ಸದ್ದು ಕೇಳಿದ ಹೆಗಡೆಯವರ ಮನೆಯವರೆಲ್ಲಾ ಮನೆಯ ಹೊರಗೆ ಬಂದಾಗ ಅವರಿಗೆ ಕಂಡಿದ್ದು ಪೂಜೆ ಮಾಡಿಸಿಕೊಂಡಿದ್ದ ಗಣೇಶ ಮೂರ್ತಿ ಮತ್ತು ಇಡಲು ಬಂದವರಿಗೆ ಪೂಜೆ ಮಾಡಲು ಹೋಗಿ ಅವರು ಸಿಗದೇ ವಾಪಸು ಬಂದು ಎನಾಗಿದೆ ಎಂಬ ಅರಿವಿಲ್ಲದ ಗಣೇಶ ಶೆಟ್ಟಿ.

ಹೆಗಡೆಯವರ ಮನೆಯ ಬಾಗಿಲಲ್ಲಿ ಇದ್ದ ಗಣಪ ಎಲ್ಲರನ್ನು ನೋಡಿ ತನ್ನಷ್ಟಕ್ಕೆ ಮನಸಲ್ಲಿ ನಗುತ್ತಿದ್ದ.

Friday, October 3, 2008

ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ

"ದೇಶ ಸುತ್ತು..ಕೋಶ ಓದು" - ನನಗಿಷ್ಟವಾದ ನಾಣ್ಣುಡಿ. ಈ ಓದಿನ ಗೀಳು ಸಣ್ಣವನಿದ್ದಾಗಲಿಂದ ಬಂದಿದ್ದು. ಇದು ಬಂದಿದ್ದು ನಮ್ಮ ಮನೆಯಿಂದ. ಮನೆಯಲ್ಲಿ ಇದ್ದ ಮಹಾಭಾರತದ ೧೮ ದೊಡ್ಡ ದೊಡ್ಡ ಪುಸ್ತಕಗಳು ಮತ್ತು ರಾಮಾಯಣದ ಪುಸ್ತಕಗಳು ನನ್ನ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಯಿತು ಅನ್ನಬಹುದು. ನಂತರದ ಹಂತದಲ್ಲಿ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದ ಮೇಲೆ ಓದೋ ಹವ್ಯಾಸ ಸ್ವಲ್ಪ ಕಡಿಮೆಯಾಯಿತು. ಕೆಲಸಕ್ಕೆ ಸೇರಿದ ಮೇಲಂತೂ ಬಹಳ ಕಡಿಮೆ. ಓದೋದಕ್ಕೆ ಸಮಯ ಸಿಗೋದಿಲ್ಲ ಅನ್ನೋದಕ್ಕಿಂತ ಓದುವ ಆಸಕ್ತಿ ಕಡಿಮೆ ಅನ್ನಬಹುದು. ಈಗ ಕಳೆದ ಒಂದೆರಡು ವರ್ಷಗಳಿಂದ ಮತ್ತೆ ಆಸಕ್ತಿ ಬಂದಿದೆ.

ನನ್ನ ಆಫೀಸು ಇರೋದು ಎಲೆಕ್ಟಾನಿಕ್ ಸಿಟಿನಲ್ಲಿ. ಮನೆಗೂ ಆಫೀಸಿಗೂ ಕೇವಲ 35 ಕಿ.ಮಿ ಮಾತ್ರ. ಮೊದಲು ಕಾರಿನಲ್ಲಿ ಹೋಗ್ತಾಯಿದ್ದೆ. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಕಾರು ಓದ್ಸೋದು ಅಂದರೆ ದೊಡ್ಡ ಯಜ್ಞ ಮಾಡಿದ ಹಾಗೆ. ಅದಕ್ಕೆ ಆಫೀಸು ಬಸ್ಸನ್ನು ಆಯ್ಕೆ ಮಾಡಿಕೊಂಡೆ. ದಿನಾ ನಾನು ಸುತ್ತೋದು ಬರೋಬ್ಬರಿ 70 ಕಿ.ಮಿ. ದಿನದಲ್ಲಿ ಮೂರು ತಾಸು ಬಸ್ಸಿನಲ್ಲಿ ಪ್ರಯಾಣ. ಆ ಸಮಯ ಹೇಗೆ ಕಳೆಯೋದು ಅನ್ನೋದೇ ದೊಡ್ಡ ಸಮಸ್ಯೆ. ಆಗ ಇಲ್ಲಸಲ್ಲದ ವಿಷಯಗಳು ಎಲ್ಲ ನೆನಪಿಗೆ ಬರೊತ್ತೆ. ಅದರಿಂದ ಪ್ರಯೋಜನವು ನಾಸ್ತಿ. ಆಗ ಹೊಳೆದಿದ್ದು ಪುಸ್ತಕಗಳು. ದಿನದ ಮೂವತ್ತು ನಿಮಿಷನಾದ್ರೂ ಓದಬೇಕು ಅಂತ ತೀರ್ಮಾನ ಮಾಡಿದೆ. ಮತ್ತೆ ಓದಲು ಪ್ರಾರಂಭಿಸಿದೆ.


ಇತ್ತೀಚೆಗಷ್ಟೆ ಗೊತ್ತಾಗಿದ್ದು ಪ್ರತಾಪಸಿಂಹರ ಅಂತರಜಾಲ. ಅದರಲ್ಲಿ ಇದ್ದ "ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ" ಎನ್ನುವ ಪುಸ್ತಕದ ಪಿ.ಡಿ.ಎಫ್ ಪ್ರತಿ ಸಿಕ್ಕಿತು. ಇಂದು ಆಫೀಸಿನಲ್ಲಿ ಹೆಚ್ಚು ಕೆಲಸವಿಲ್ಲದ ಕಾರಣ ಬೆಳಿಗ್ಗೆಯಿಂದ ಓದಲು ಪ್ರಾರಂಭಿಸಿ ಈಗ ಮುಗಿಸಿದೆ. "ರಾಷ್ಟ್ರದ ನಂ-೧ ಮುಖ್ಯಮಂತ್ರಿ ಮತ್ತು ಮುಂದಿನ ಪ್ರಧಾನಿ" ಎಂದೇ ಬಿಂಬಿತರಾದ ನರೇಂದ್ರ ಮೋದಿ ನಡೆದು ಬಂದ ದಾರಿ ಮತ್ತು ಅವರು ಗುಜರಾತನ್ನು ಮಾದರಿಯಾಗಲು ಹಾಕಿದ ಕಾರ್ಯಕ್ರಮಗಳು ಮುಂತಾದವುಗಳ ಬಗ್ಗೆ ಬೆಳಕನ್ನು ಲೇಖಕರು ಚೆಲ್ಲಿದ್ದಾರೆ. ನಿಮಗೆ ಬಿಡುವಾದಾಗ ಓದಿ.


ಲಿಂಕ್: http://pratapsimha.com/books/narendra-modi.pdf