ಹಿಂದೊಮ್ಮೆ ಕ್ರೆಡಿಟ್ ತಗೋಬೇಕು ಅಂದ್ರೆ ನೂರೆಂಟು ದಾಖಲೆ ಕೊಡ್ಬೇಕಿತ್ತು. ಆಗ ಕೆಲವೇ ಕಂಪನಿಗಳು ಇದ್ವು. ಈಗ ನಾಯಿ ಕೊಡೆ ಹಾಗೆ ಕ್ರೆಡಿಟ್ ಕಾರ್ಡ್ ಕಂಪನಿಗಳು ತಲೆ ಎತ್ತಿವೆ. ಒಂದೆರಡು ದಾಖಲೆ ಕೊಟ್ರೆ ಸಾಕು. ಒಂದೆರಡು ದಿನದಲ್ಲಿ ಮನೆಗೆ ಬಂದಿರತ್ತೆ. ಲೈಫ್ ಟೈಮ್ ಫ್ರೀ ಸಾರ್ ಅಂತ ಹೇಳ್ತಾರೆ. ಆಮೇಲೇ ಅದು ಇದು (ಹಿಡನ್ ಚಾರ್ಜಸ್) ಹಾಕ್ತಾರೆ. ಅಕಸ್ಮಾತ್ ಕಟ್ಟೋದು ಒಂದೆರಡು ದಿನ ಲೇಟಾದ್ರೆ ಬಡ್ಡಿ, ಚಕ್ರಬಡ್ಡಿ ಅಂತೆಲ್ಲಾ ಹಾಕ್ತಾರೆ. ಕಟ್ಟಿ ಮುಗ್ಸೋದ್ರಲ್ಲಿ ಸಾಕು ಬೇಕಾಗಿರತ್ತೆ. ಈ ರೀತಿ ಅನುಭವ ಹೆಚ್ಚಿನ ಜನರಿಗೆ ಆಗಿರತ್ತೆ. ಈ ಕ್ರೆಡಿಟ್ ಕಾರ್ಡ್ ಏನಾದ್ರು ಕಳೆದು ಹೋದ್ರೆ ತುಂಬಾ ಕಷ್ಟ. ಯಾರು ಬೇಕಾದ್ರೂ ಉಪಯೋಗಿಸಬಹುದು. ಕಾರ್ಡಿನಲ್ಲಿ ಇರೋ ಸೈನು ಮತ್ತು ಮಾಡಿದ ಸೈನು ಸರಿ ಇರತ್ತೋ ಅಂತನೂ ಚೆಕ್ ಮಾಡೊಲ್ಲ. ಆದ್ದರಿಂದ ಕಳೆದು ಹೋದ್ರೆ ತಕ್ಷಣ ಕಸ್ಟಮರ್ ಕೇರ್ ಗೆ ಫೋನಾಯಿಸಿ ಅವರು ಕೇಳುವ ಸಾವಿರ ಪ್ರಶ್ನೆಗೆ ಉತ್ತರಿಸಿ, ಅದು ಅವರಿಗೆ ಓಕೆ ಆದ್ರೆ ನಮ್ಮ ಕಾರ್ಡನ್ನು ಬ್ಲಾಕ್ ಮಾಡ್ತಾರೆ. ನೂರಕ್ಕೆ ೯೦ ಭಾಗ ಜನರು ತಮ್ಮ ಕ್ರೆಡಿಟ್ ಕಾರ್ಡ್ ನಂಬರನ್ನು ಬರೆದಿಟ್ಟುಕೊಂಡಿರಲ್ಲ. ಕಳೆದು ಹೋದಾಗ ಒದ್ದಾಡ್ತಾರೆ.
ಏನಪ್ಪ ಇದು...ಸೋಮಾರಿತನಕ್ಕೂ ಕ್ರೆಡಿಟ್ ಕಾರ್ಡಿಗೂ ಏನು ಸಂಬಂಧ ಅಂತ ಅನಿಸಿರಬೇಕು...ಇದೇ ಸ್ವಾಮಿ. ಇದೇ...
ಕ್ರೆಡಿಟ್ ಕಾರ್ಡಿನ ನಂಬರನ್ನು ಒಂದು ಕಡೆ ಬರೆದಿಟ್ಟುಕೊಳ್ಳದೇ ಇರೋದು ಸೋಮಾರಿತನ. ಇವತ್ತು ನನಗೆ ಹಾಗೆ ಆಯ್ತು. ನಿನ್ನೆ ರಾತ್ರಿ ಬ್ಯಾಂಕಿಗೆ ಹೋಗಿ ಬರುವಾಗ ಪರ್ಸನ್ನು ಕಾರಲ್ಲೇ ಇಟ್ಟಿದ್ದೆ. ಕೆಲವು ದಿನಗಳಿಂದ ಈ ಕೆಟ್ಟ ಟ್ರಾಫಿಕ್ಕಿನಲ್ಲಿ ಕಾರು ಓಡಿಸೋದು ಕಷ್ಟ, ಆಫಿಸಿನ ಬಸ್ಸು ಸ್ವಲ್ಪ ಲೇಟಾದ್ರು ಸರಿ ಟೆನ್ಶನ್ ಇರೊಲ್ಲ ಅಂತ ಆಫೀಸಿನ ಬಸ್ಸಿನಲ್ಲಿ ಹೋಗ್ತಾಯಿದೀನಿ. ನಿನ್ನೆ ಬ್ಯಾಂಕಿಂದ ಬರೋವಾಗ ಪರ್ಸು ಕಾರಲ್ಲಿ ಇಟ್ಟಿದ್ದೆ. ಬೆಳಗ್ಗೆ ಕಾರು ಹೊರಗೆ ತೆಗೆದಿಡುವಾಗ ಅದನ್ನು ಜೇಬಿಗೆ ಹಾಕಿಕೊಂಡ ನೆನಪು. ಆಫೀಸಿಗೆ ಬಂದು ನೋಡೋವಾಗ ಪರ್ಸು ನಾಪತ್ತೆ. ತಕ್ಷನ ಬಸ್ಸಿನ ಡ್ರೈವರಿಗೆ ಫೋನ್ ಮಾಡಿ ಬಸ್ಸನ್ನು ಜಾಲಾಡಲು ಹೇಳಿದೆ. ಅಲ್ಲಿ ನನ್ನ ಪರ್ಸಿರಲಿಲ್ಲ. ಪರ್ಸಿನ ಒಳಗೆ ಒಂದೆರಡು ಕ್ರೆಡಿಟ್ಟು ಮತ್ತು ಡೆಬಿಟ್ ಕಾರ್ಡಿದ್ದವು. ಅವುಗಳ ನಂಬರನ್ನು ಹುಡೋಕೋದು ದೊಡ್ಡ ಕೆಲಸ. ಎಷ್ಟೋ ಸಲ ಅವುಗಳನ್ನು ಜೆರಾಕ್ಸ್ ಮಾಡಿ ಮನೇಲಿ ಇಡಬೇಕು ಅಂತ ಯೋಚಿಸಿದ್ದರೂ ಅದು ಕಾರ್ಯಗತವಾಗಿರಲಿಲ್ಲ. ಕಾರಣ ಬೇರೆ ಎನೂ ಅಲ್ಲ. ಸೋಮಾರಿತನ ಅಷ್ಟೆ.
ಮನೆಗೆ ಫೋನು ಮಾಡಿ ಕೇಳಿದಾಗ ನನ್ನ ಪರ್ಸ್ಸು ಕಾರಲ್ಲಿ ಹಾಯಾಗಿ ಮಲಗಿತ್ತು.
ತಕ್ಷಣ ಬ್ಲಾಗಿನಲ್ಲಿ ಬರಿಯೋಕೆ ಶುರು ಹಚ್ಕೊಂಡೆ. ಇದ್ರಿಂದ ಒಂದು ಸಹಾಯ ಅಗತ್ತೆ. ಆಗಾಗ್ಗೆ ಬ್ಲಾಗನ್ನು ನೋಡೋವಾಗ ಕ್ರೆಡಿಟ್ ಕಾರ್ಡಿನ ನೆನಪಾಗತ್ತೆ ಮತ್ತು ಅದರ ಜೆರಾಕ್ಸನ್ನು ಮಾಡಿಸಿದ್ದೇನಾ ಅಂತ ನನಗೆ ಅರಿವಾಗತ್ತೆ.
ನೀವೂ ಕ್ರೆಡಿಟ್ ಕಾರ್ಡಿನ ನಂಬರನ್ನು ಎಲ್ಲಾದರೂ ಒಂದು ಕಡೆ ಬರೆದಿಟ್ಟು ಕೊಳ್ಳೋದನ್ನ ಮರೀಬೇಡಿ. ಕಾಲ ಕಾಲಕ್ಕೆ ಕ್ರೆಡಿಟ್ ಕಾರ್ಡಿನ ವಿವರ ನೋಡ್ತಾಯಿರಿ.