Tuesday, March 27, 2007

ಏಷ್ಟು ವಿಸ್ಮಯ ಅಲ್ವಾ ಈ ಜಗತ್ತು !!!

ಏಂದಿನಂತೆ ತಿಂಡಿಗೆಂದು ಹೋಟೆಲ್ ಕಡೆ ಹೆಜ್ಜೆ ಹಾಕ್ತಾಯಿದ್ದೆ. ಹಾಗೆ ಹೋಗೋವಾಗ ಆತ ಕಾಣಿಸ್ತಾನಾ ಅಂತ ನೋಡಿದೆ. ಆತ ಅಲ್ಲಿ ಇರಲಿಲ್ಲ. ಓಂದು ವಾರದಿಂದ ಆತ ಅಲ್ಲಿ ಇರಲಿಲ್ಲ. ಅವನ ಬಗ್ಗೆ ಮರುಕವುಂಟಾಯ್ತು.ಆತ ಏಲ್ಲಿರಬಹುದು ? ಎನ್ ಮಾಡ್ತಾಯಿರಬಹುದು? ಅಂತ ಮನಸ್ಸಲ್ಲಿ ಗೊಂದಲವುಂಟಾಯ್ತು. ಪಕ್ಕದಲ್ಲಿದ್ದ ಗೆಳೆಯನ ಹತ್ರ ಕೇಳ್ದೆ ಆತ ಏಲ್ಲಿರಬಹುದು ಅಂತ. ಅದ್ಕೆ ಯಾಕೆ ಅವನ ಬಗ್ಗೆ ತಲೆ ಕೆಡಿಸ್ಕೋತೀಯಾ, ಸತ್ತು ಹೋಗಿರಬೇಕು ಅಂದ. ಯಾಕೋ ಬೇಜಾರಯ್ತು. ದಿನಾ ತಿಂಡಿ ತಿನ್ನೋವಾಗ ಆತ ಅಲ್ಲೇ ಹೋಟೆಲ್ ಪಕ್ಕ ಇರ್ತಾಯಿದ್ದ. ಅಲ್ಲಿಗೆ ಬರೋರ್ ಹತ್ರ ಬಿಕ್ಷೆ ಬೇಡಿ ಬಂದ ದುಡ್ದಿಂದ ಟೀ ಕುಡಿತಾಯಿದ್ದ. ಬಹುಶಃ ಅದೇ ಅವನ ತಿಂಡಿಯಿರಬಹುದು!

ಆದರೆ ಅವನ ಓಂದು ಗುಣ ನನಗೇ ಬಹಳ ಹಿಡಿಸ್ತು. ಆತ ಬಿಕ್ಷೆ ನೀಡದಿದ್ದರೆ ಏನೂ ಹೇಳದೇ ಸುಮ್ಮನೆ ಮುಂದೆ ಹೋಗ್ತಾಯಿದ್ದ. ಕೆಲವೊಮ್ಮೆ ಯಾರೋ ಅರ್ದ ಕುಡಿದುಬಿಟ್ಟ ಕಾಫಿ/ಟೀ ಕುಡಿತಾಯಿದ್ದ. ಚೀ!!! ಅಂತ ನಿಮಗನಿಸಿರಬಹುದು. ಆದರೆ ಅವನಿಗೆ ಏಂಜಲಿಗಿಂತ ಓಂದು ಹೊತ್ತಿನ ಆಹಾರ ಮುಖ್ಯ. ನಾವು ಹೋಟೆಲ್ ಗಳಿಗೆ ಹೋಗ್ತೇವೆ. ಏಷ್ಟೋ ಕಡೆ ಪಾತ್ರೆ ತೊಳೀಲಿಕ್ಕ ಇರೋದು ೨ ಬಕೇಟ್ಟುಗಳು. ಅದನ್ನೇ ನಾವು ಕ್ಲೀನ್ ಅಂತ ತಿಳಿದು ತಿನ್ನ್ತೇವೆ. ಆದರೆ ಅವನಿಗೆ ಅದು ಅನಿವಾರ್ಯ. "ಕಾಲಾಯ ತಸ್ಮೈ ನಮಃ" ಅಲ್ವಾ?....

ಏಷ್ಟೋ ಸಲ ಅವನ ಮಾತಾಡಿಸಬೇಕು, ನಿಂದು ಯಾವೂರು, ನಿನ್ನವರು ಯಾರು ಇಲ್ವಾ, ನೀನ್ಯಾಕೆ ಬಿಕ್ಷೆ ಬೇಡ್ತೀಯ ಅಂತ. ಆದರೆ ಆತ ಅಂಟಿಕೊಂಡರೆ ಕಷ್ಟ ಅಂತ ಭಯ. ಸುಮಾರು ೧ ವರ್ಷದಿಂದ ಆತನನ್ನು ಗಮನಿಸ್ತಾ ಇದ್ದೆ. ಇತ್ತೀಚೆಗೆ ಬಹಳ ಸೋತು ಹೋಗಿದ್ದ. ಮೊದಲಿದ್ದ ಉತ್ಸಾಹ ಇರಲಿಲ್ಲ. ಜೀವನದ ಸಂದ್ಯಾಕಾಲದಲ್ಲಿದ್ದ. ಕೋಲು ಹಿಡಿದು ನಡೆದಾಡ್ತಾ ಇದ್ದ. ಅಲ್ಲೇ ಹೋಟೆಲ್ ಪಕ್ಕ ಮಲಗ್ತಾ ಇದ್ದ. ಅದೇ ಅವನ ಅರಮನೆ. ಒಂದು ವಾರದ ಹಿಂದೆ ಆತ ಮಲಗಿದ್ದನ್ನು ನೋಡಿದ್ದೆ. ಈಗ ಇಲ್ಲ. ಅವನು ಮಲಗುತ್ತಿದ್ದ ಜಾಗದಲ್ಲಿ ಏನೂ ಇಲ್ಲ. ಬಹುಶಃ ಈ ಲೋಕ ಬಿಟ್ಟು ಹೋಗಿರಬೇಕು. ಅವನು ಹೋದಾಗ ಯಾರೂ ಅಳಲಿಲ್ಲ.

ಏಷ್ಟು ವಿಸ್ಮಯ ಅಲ್ವಾ ಈ ಜಗತ್ತು. ಇನ್ನೊಂದು ಕ್ಷಣದಲ್ಲಿ ಏನಾಗತ್ತೆ ಅಂತ ಅರಿವಿರುವುದಿಲ್ಲ. ಇಲ್ಲಿ ಯಾರಿಗೆ ಯಾರೂ ಇಲ್ಲ. ನಾಳೆ ನಮಗೆ ಆತನಿಗಾದ ಹಾಗೆ ಆಗಬಹುದು.

ಏನು ಜೀವನಾರ್ಥ? ಏನು ಪ್ರಪಂಚಾರ್ಥ?
ಏನು ಜೀವ ಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದು ಏನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ

Wednesday, March 21, 2007

ಹುಡುಕಾಟನೋ ಅಥವಾ ಹುಡುಗಾಟನೋ

ಏನ್ ಬರೀಬೇಕು ಅಂತ ಗೊತ್ತಾಗ್ತಾ ಇಲ್ಲ. ಹುಡುಕ್ತಾ ಇದೀನಿ.

ಹುಡುಕಾಟನೋ ಅಥವಾ ಹುಡುಗಾಟನೋ ಅಂತ ಕೇಳ್ಬೇಡಿ.

ನಮ್ಮ ಜೀವನವೇ ಓಂದು ರೀತಿ ಹುಡುಕಾಟ ಅಲ್ವಾ? ಕೆಲವರಿಗೆ ಗುರಿ ಇರತ್ತೆ, ಕೆಲವರಿಗೆ ಇರಲ್ಲ. ಸುಮ್ಮನೇ ಹುಡುಕ್ತಾ ಇರ್ತಾರೆ. ಇಂಟರ್ ವ್ಯೂನಲ್ಲಿ ನಲ್ಲಿ ಕೇಳಿದ ಹಾಗೆ ಯಾರಾದ್ರು ಬಂದು ನಿಮ್ಮ ಜೀವನದ ಗುರಿ ಎನು ಅಂತ ಕೇಳಿದ್ರೆ ಯಾರ ಹತ್ರನೂ ಸರಿಯಾದ ಉತ್ತರ ಇರಲ್ಲ.

ನಮ್ಮೂರಲ್ಲಿ ದನಕಾಯೋ ಮಂಜು ಅಂತ ಓಬ್ಬ ಇದ್ದ. ಅವನಿಗೆ ಮಕ್ಕಳು ಇರ್ಲಿಲ್ಲ. ದಿನ ಬೆಳಗಾದ್ರೆ ಏಲ್ಲರ ಮನೆ ದನ ಹೊಡೇದುಕೊಂಡು ಗುಡ್ಡಕ್ಕೆ ಹೋಗ್ತಾ ಇದ್ದ. ಹೋಗೋವಾಗ ಮದ್ಯಾನ್ನಕ್ಕೆ ಬುತ್ತಿ ತಗೊಂಡು ಹೋಗಿ ಸೂರ್ಯ ಮುಳುಗೋ ಹೊತ್ತಿಗೆ ವಾಪಾಸ್ ಬರ್ತಾ ಇದ್ದ. ನಾವು ಅವಾಗ ಸಣ್ಣವರು. ಅಲ್ಲಿ ಮಂಜು ಏನ್ ಮಾಡ್ತಾನೆ ಅಂತ ಅಮ್ಮನ ಹತ್ರ ಕೇಳಿದ್ದೆ. ಅಲ್ಲಿ ದನ ಕಾಯ್ತಾನೆ ಅಂದಿದ್ಲು. ನಾವು ಸರಿಯಾಗಿ ಓದದೆ ಹೋದ್ರೆ ನೀನು ದನಕಾಯೋಕೆ ಹೋಗು ಅಂತಿದ್ಲು. ದನ ಕಾಯೋದು ಅಂದ್ರೆ ಜನ ನಗ್ತಾರೆ ಅಂತ ಆಗ ನನಗನಿಸ್ತಾ ಇತ್ತು.

ಈಗ e-ಕೆಲಸ, ಈ ಡೆಡ್ ಲೈನು, ಈ ಟ್ರಾಫಿಕ್ಕು ಏಲ್ಲಾ ನೋಡಿದ್ರೆ ದನ ಕಾಯೋದೇ ವಾಸಿ ಅನ್ಸತ್ತೆ. ಅಲ್ಲಿ ಹೋಗಿ ದನ ಮೇಯಸ್ಲಿಕ್ಕೆ ಬಿಟ್ಟು, ಕಥೆ, ಕವನ, ಪ್ರಕೃತಿ ಏಲ್ಲಾ ನೋಡ್ಕೊಂಡು ಇರೋದೇ ವಾಸಿ ಅಲ್ವಾ?ಇಲ್ಲಿ ಕತ್ತೆ ದುಡಿದ ಹಾಗೆ ದುಡಿದು, ತಿಂಗಳ ಕೊನೇ ಯಾವಾಗ ಬರತ್ತೆ ಅಂತ ಕಾದು, ಬಂದ ದುಡ್ದನ್ನು ಮೂರೇ ದಿನದಲ್ಲಿ ಮುಕ್ಕಿ ಮತ್ತೆ ತಿಂಗಳ ಕೊನೆಗೇ ಕಾಯ್ಬೇಕು. ಇಷ್ಟೆಲ್ಲಾ ಮಾಡೋದು ಯಾಕೆ? ಹೊಟ್ಟೆಗಾಗೀ ಗೇಣು ಬಟ್ಟೆಗಾಗಿ ಅಲ್ವಾ?

ಸುಖ, ಸಂತೋಷ, ನೆಮ್ಮದಿ ಏಲ್ಲಾ ನಮ್ಮೊಳಗೇ ಇರತ್ತೆ ಅಲ್ವಾ ?

ಕಾಲನ ಹೊಡೆತಕ್ಕೆ ಸಿಕ್ಕು ಈಗ ದನಕಾಯೋ ಕೆಲಸನೂ ಮಾಯವಾಗಿ ಹೋಗಿದೆ. ಮನೆಯಲ್ಲಿ ದನ ಸಾಕೋದು ಕಷ್ಟ, ಅದರ ನಿರ್ವಹಣೆ ಕಷ್ಟ ಅಂತ ಏಲ್ಲಾ ಸಬೂಬು ಕೊಟ್ಟು ಜನ ಅನಾದಿ ಕಾಲದಿಂದ ಬಂದ ಜೀವನದ ಅವಿಭಾಜ್ಯ ಅಂಗವಾದ ಕೊಟ್ಟಿಗೆಯನ್ನು ಏತ್ತಂಗಡಿ ಮಾಡಿದಾರೆ. ಈಗ ದನಕಾಯೋ ಮಂಜುನೂ ಇಲ್ಲ, ದನಕಾಯೋ ಕೆಲ್ಸನೂ ಇಲ್ಲ. ಅವನು ಸತ್ತ ಕೆಲವು ವರ್ಷದ ನಂತರ ಅವನ ಹೆಂಡತಿ ಮಂಜಿಯೂ ಅವನ ದಾರಿ ಹಿಡಿದ್ಲು. ರಸ್ತೆ ಬದಿ ಅವನ ಮುರಕಲು ಗುಡಿಸಲು, ಅರ್ದಬಿದ್ದ ಗೋಡೆಗಳು ನಮ್ಮನ್ನು ನೋಡಿ ಯಾವದೂ ಶಾಶ್ವತ ಅಲ್ಲ ಅಂತ ಅಣಕಿಸ್ತಾ ಇದ್ದ ಹಾಗೆ ಅನ್ನಿಸತ್ತೆ.

ಮೊದ್ಲು ಏನ್ ಬರೀಬೇಕು ಅಂತ ಗೊತ್ತಾಗ್ಲಿಲ್ಲ. ಆದ್ರೆ ಬರೀತಾ ಹೋದ ಹಾಗೆ ವಿಷಯಗಳು ನೆನಪಾಗ್ತಾ ಬಂತು.

Thursday, March 15, 2007

ಮಾಮರವೆಲ್ಲೋ ಕೋಗಿಲೆ ಎಲ್ಲೋ

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ ಹೇಗೇ ಇರಲೀ
ಕಾಣುವ ಆಸೆ ಏತಕೋ ಏನೋ....

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ..

ಏಷ್ಟು ಅದ್ಬುತವಾದ ಸಾಹಿತ್ಯ ಅಲ್ವಾ? ಇನ್ನು ಇನ್ನು ಕೇಳೋಣ ಅಂತ ಅನ್ನಿಸತ್ತೆ.ಬಹುಶಃ ಚಿತ್ರಗೀತೆಗಳಿಗೇನಾದರೂ ಜ್ಙಾನಪೀಠ ಕೊಡೋದಿದ್ರೆ ಚಿ.ಉದಯಶಂಕರ ಅವರಿಗೆ ಸಲ್ಲಬೇಕಾಗಿತ್ತು.ಇತ್ತೀಚಿನ ದಿನಗಳಲ್ಲಿ ಈ ರೀತಿ ಸಾಹಿತ್ಯ ಮರೆಯಾಗಿ ಹೋಗಿದೆ ಅಂತ ಅನ್ನಿಸ್ತಾಯಿದೆ. ಏಲ್ಲೋ ಅಪರೂಪಕ್ಕೆ ಓಂದೆರಡು ಕಾಣಸಿಗುತ್ತವೆ. ಅದೇನಾದ್ರು ಹಿಟ್ ಆದ್ರೆ ಅದರ ಹಾಗೆ ಸಾಹಿತ್ಯಗಳಿರುವ ಮತ್ತೊಂದಿಷ್ಟು ಹಾಡುಗಳು ಬರತ್ವೆ. "ಸರ್ವಂ ಕಾಪಿಮಯ"

ಏಲ್ಲಿಗೇ ಪಯಣಾ.....ಯಾವುದೋ ದಾರಿ ...ಏಕಾಂಗಿ ಸಂಚಾರಿ ...

ಇದು ಮೊನ್ನೆ ನಮ್ಮ ಕುಟುಂಬದ ನಾವಿಕನಾದ ಪ್ರೀತಿಯ ಅಜ್ಜನ ಚಿತೆಗೆ ಅಗ್ನಿಸ್ಪರ್ಷ ಮಾಡಿದಾಗ ನೆನಪಾಗಿದ್ದು. ಈಗ ಅಜ್ಜ ಏಲ್ಲಿರಬಹುದು,ಏನ್ ಮಾಡ್ತಾಯಿರಬಹುದು ಏಂಬೆಲ್ಲಾ ತರ್ಕಗಳು ಮನಸ್ಸಲ್ಲಿ ಬಂತು. ಮನುಷ್ಯ ವಿಜ್ಙಾನದಲ್ಲಿ ಏಷ್ಟೇ ಸಾಧನೆ ಮಾಡಿದರೂ ಇದುವರೆಗೂ ಯಾರಿಗೂ ಹುಟ್ಟು ಸಾವುಗಳ ಬಗ್ಗೆಯಾಗಲಿ, ಸತ್ತ ಮೇಲೆ ಮನುಷ್ಯ ಏಲ್ಲಿಗೆ ಹೋಗ್ತಾನೆ? ಹುಟ್ಟೊಕ್ಕಿಂತ ಮುಂಚೆ ಏಲ್ಲಿದ್ದ ಏನ್ನುವುದು ತಿಳಿದಿಲ್ಲ.ಬೆಂಗಳೂರಿನಿಂದ ಊರಿಗೆ ಹೋದಾಗ ಮನೆಯಲ್ಲಿ ಸ್ಮಷಾನ ಮೌನ. ಅಜ್ಜನ ದೇಹ ಚಾವಡಿಯಲ್ಲಿತ್ತು. ಅರ್ದ ಮುಚ್ಚಿದ ಕಣ್ಣುಗಳು, ಬರೀ ಮೂಳೆಗಳ ದೇಹ, ಅರ್ದ ತೆರೆದ ಬಾಯಿ, ಜೀವನದ ದಾರಿ ದಿಕ್ಕಾಗಿದ್ದ ಗಂಡನ ಕಳೆದುಕೊಂಡ,ಅತ್ತೂ ಅತ್ತೂ ಇನ್ನು ಕಣ್ಣಲ್ಲಿ ನೀರಿಲ್ಲದೆ ಅಜ್ಜನ ಪಕ್ಕ ಕುಳಿತಿದ್ದ ದೊಡ್ಡಮ್ಮ(ಅಜ್ಜಿ)..ಇದೆಲ್ಲ ಇನ್ನೂ ಕಣ್ಮುಂದೆ ಬರುತ್ತೆ. ನಂತರ ಅಜ್ಜನ ದೇಹವನ್ನು ಅಂಗಳದಲ್ಲಿಟ್ಟು, ಕೆಲವು ಧಾರ್ಮಿಕ ಕ್ರಿಯೆಯ ನಂತರ ದೇಹವನ್ನು ಗುಡ್ಡಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಮತ್ತೆ ಕೆಲವು ಧಾರ್ಮಿಕ ಕ್ರಿಯಗಳು.ಅಜ್ಜನ ಸುತ್ತ ಬಟ್ಟೆಯಿಂದ ಗಾಳಿ ಬೀಸಿದಾಗ ಓಮ್ಮೆ ಆಶ್ಚರ್ಯವಾಯ್ತು. ಅದರ ಅರ್ಥ ತಿಳಿದಾಗ ಮನಸ್ಸು ಏಲ್ಲೊ ಹರಿದಾಡುತ್ತಿತ್ತು. ನಿನ್ನ ಮುಂದಿನ ಪಯಣವು ಸುಖಕರವಾಗಿರಲಿ, ತಂಪಾದ ಗಾಳಿ ಬೀಸಲಿ ಏಂದು. ಅಜ್ಜನ ಚಿತೆ ಸಂಪೂರ್ಣ ಉರಿದು ಹೋಗುವ ತನಕ ಅಲ್ಲೇ ಇದ್ದೆ. ಚಿತೆ ಉರಿದ ಹಾಗೇ ನನ್ನ ಮನಸ್ಸೂ ಸಹ ಶೂನ್ಯದತ್ತ ಹೊಯ್ತು. ಮನಸ್ಸಲ್ಲಿ ಹೇಳಲಾಗದ ವೇದನೆ. ಅಜ್ಜ ಇನ್ನೂ ಇದ್ದಾನೇ ಅಂತ ಏಲ್ಲೊ ಹೇಳುವ ಓಳಮನಸ್ಸು...

ಏಲ್ಲಿಗೇ ಪಯಣಾ.....ಯಾವುದೋ ದಾರಿ ...ಏಕಾಂಗಿ ಸಂಚಾರಿ ...