Wednesday, July 9, 2008

ಕ್ರೆಡಿಟ್ ಕಾರ್ಡ್ ಮತ್ತು ಸೋಮಾರಿತನ

ನಮ್ಮಲ್ಲಿ ಬಹಳ ಜನರಿಗೆ ಎನಾದ್ರು ಮಾಡಬೇಕು ಅಂತ ಮನಸ್ಸಿದ್ದರೂ ಸೋಮಾರಿತನ ಅನ್ನೋದು ನಮ್ಮನ್ನ ಬಿಡೋದೇ ಇಲ್ಲ. ಅದು ತಪ್ಪು, ಅದನ್ನು ತಿದ್ದ್ಕೋಬೇಕು ಅಂತನಿಸಿದರೂ, ನಾಳೆ ಮಾಡಿದ್ರಾಯ್ತು ಅನ್ನೋ ಸೋಮಾರಿತನ ನೋಡಿ..

ಹಿಂದೊಮ್ಮೆ ಕ್ರೆಡಿಟ್ ತಗೋಬೇಕು ಅಂದ್ರೆ ನೂರೆಂಟು ದಾಖಲೆ ಕೊಡ್ಬೇಕಿತ್ತು. ಆಗ ಕೆಲವೇ ಕಂಪನಿಗಳು ಇದ್ವು. ಈಗ ನಾಯಿ ಕೊಡೆ ಹಾಗೆ ಕ್ರೆಡಿಟ್ ಕಾರ್ಡ್ ಕಂಪನಿಗಳು ತಲೆ ಎತ್ತಿವೆ. ಒಂದೆರಡು ದಾಖಲೆ ಕೊಟ್ರೆ ಸಾಕು. ಒಂದೆರಡು ದಿನದಲ್ಲಿ ಮನೆಗೆ ಬಂದಿರತ್ತೆ. ಲೈಫ್ ಟೈಮ್ ಫ್ರೀ ಸಾರ್ ಅಂತ ಹೇಳ್ತಾರೆ. ಆಮೇಲೇ ಅದು ಇದು (ಹಿಡನ್ ಚಾರ್ಜಸ್) ಹಾಕ್ತಾರೆ. ಅಕಸ್ಮಾತ್ ಕಟ್ಟೋದು ಒಂದೆರಡು ದಿನ ಲೇಟಾದ್ರೆ ಬಡ್ಡಿ, ಚಕ್ರಬಡ್ಡಿ ಅಂತೆಲ್ಲಾ ಹಾಕ್ತಾರೆ. ಕಟ್ಟಿ ಮುಗ್ಸೋದ್ರಲ್ಲಿ ಸಾಕು ಬೇಕಾಗಿರತ್ತೆ. ಈ ರೀತಿ ಅನುಭವ ಹೆಚ್ಚಿನ ಜನರಿಗೆ ಆಗಿರತ್ತೆ. ಈ ಕ್ರೆಡಿಟ್ ಕಾರ್ಡ್ ಏನಾದ್ರು ಕಳೆದು ಹೋದ್ರೆ ತುಂಬಾ ಕಷ್ಟ. ಯಾರು ಬೇಕಾದ್ರೂ ಉಪಯೋಗಿಸಬಹುದು. ಕಾರ್ಡಿನಲ್ಲಿ ಇರೋ ಸೈನು ಮತ್ತು ಮಾಡಿದ ಸೈನು ಸರಿ ಇರತ್ತೋ ಅಂತನೂ ಚೆಕ್ ಮಾಡೊಲ್ಲ. ಆದ್ದರಿಂದ ಕಳೆದು ಹೋದ್ರೆ ತಕ್ಷಣ ಕಸ್ಟಮರ್ ಕೇರ್ ಗೆ ಫೋನಾಯಿಸಿ ಅವರು ಕೇಳುವ ಸಾವಿರ ಪ್ರಶ್ನೆಗೆ ಉತ್ತರಿಸಿ, ಅದು ಅವರಿಗೆ ಓಕೆ ಆದ್ರೆ ನಮ್ಮ ಕಾರ್ಡನ್ನು ಬ್ಲಾಕ್ ಮಾಡ್ತಾರೆ. ನೂರಕ್ಕೆ ೯೦ ಭಾಗ ಜನರು ತಮ್ಮ ಕ್ರೆಡಿಟ್ ಕಾರ್ಡ್ ನಂಬರನ್ನು ಬರೆದಿಟ್ಟುಕೊಂಡಿರಲ್ಲ. ಕಳೆದು ಹೋದಾಗ ಒದ್ದಾಡ್ತಾರೆ.



ಏನಪ್ಪ ಇದು...ಸೋಮಾರಿತನಕ್ಕೂ ಕ್ರೆಡಿಟ್ ಕಾರ್ಡಿಗೂ ಏನು ಸಂಬಂಧ ಅಂತ ಅನಿಸಿರಬೇಕು...ಇದೇ ಸ್ವಾಮಿ. ಇದೇ...

ಕ್ರೆಡಿಟ್ ಕಾರ್ಡಿನ ನಂಬರನ್ನು ಒಂದು ಕಡೆ ಬರೆದಿಟ್ಟುಕೊಳ್ಳದೇ ಇರೋದು ಸೋಮಾರಿತನ. ಇವತ್ತು ನನಗೆ ಹಾಗೆ ಆಯ್ತು. ನಿನ್ನೆ ರಾತ್ರಿ ಬ್ಯಾಂಕಿಗೆ ಹೋಗಿ ಬರುವಾಗ ಪರ್ಸನ್ನು ಕಾರಲ್ಲೇ ಇಟ್ಟಿದ್ದೆ. ಕೆಲವು ದಿನಗಳಿಂದ ಈ ಕೆಟ್ಟ ಟ್ರಾಫಿಕ್ಕಿನಲ್ಲಿ ಕಾರು ಓಡಿಸೋದು ಕಷ್ಟ, ಆಫಿಸಿನ ಬಸ್ಸು ಸ್ವಲ್ಪ ಲೇಟಾದ್ರು ಸರಿ ಟೆನ್ಶನ್ ಇರೊಲ್ಲ ಅಂತ ಆಫೀಸಿನ ಬಸ್ಸಿನಲ್ಲಿ ಹೋಗ್ತಾಯಿದೀನಿ. ನಿನ್ನೆ ಬ್ಯಾಂಕಿಂದ ಬರೋವಾಗ ಪರ್ಸು ಕಾರಲ್ಲಿ ಇಟ್ಟಿದ್ದೆ. ಬೆಳಗ್ಗೆ ಕಾರು ಹೊರಗೆ ತೆಗೆದಿಡುವಾಗ ಅದನ್ನು ಜೇಬಿಗೆ ಹಾಕಿಕೊಂಡ ನೆನಪು. ಆಫೀಸಿಗೆ ಬಂದು ನೋಡೋವಾಗ ಪರ್ಸು ನಾಪತ್ತೆ. ತಕ್ಷನ ಬಸ್ಸಿನ ಡ್ರೈವರಿಗೆ ಫೋನ್ ಮಾಡಿ ಬಸ್ಸನ್ನು ಜಾಲಾಡಲು ಹೇಳಿದೆ. ಅಲ್ಲಿ ನನ್ನ ಪರ್ಸಿರಲಿಲ್ಲ. ಪರ್ಸಿನ ಒಳಗೆ ಒಂದೆರಡು ಕ್ರೆಡಿಟ್ಟು ಮತ್ತು ಡೆಬಿಟ್ ಕಾರ್ಡಿದ್ದವು. ಅವುಗಳ ನಂಬರನ್ನು ಹುಡೋಕೋದು ದೊಡ್ಡ ಕೆಲಸ. ಎಷ್ಟೋ ಸಲ ಅವುಗಳನ್ನು ಜೆರಾಕ್ಸ್ ಮಾಡಿ ಮನೇಲಿ ಇಡಬೇಕು ಅಂತ ಯೋಚಿಸಿದ್ದರೂ ಅದು ಕಾರ್ಯಗತವಾಗಿರಲಿಲ್ಲ. ಕಾರಣ ಬೇರೆ ಎನೂ ಅಲ್ಲ. ಸೋಮಾರಿತನ ಅಷ್ಟೆ.

ಮನೆಗೆ ಫೋನು ಮಾಡಿ ಕೇಳಿದಾಗ ನನ್ನ ಪರ್ಸ್ಸು ಕಾರಲ್ಲಿ ಹಾಯಾಗಿ ಮಲಗಿತ್ತು.

ತಕ್ಷಣ ಬ್ಲಾಗಿನಲ್ಲಿ ಬರಿಯೋಕೆ ಶುರು ಹಚ್ಕೊಂಡೆ. ಇದ್ರಿಂದ ಒಂದು ಸಹಾಯ ಅಗತ್ತೆ. ಆಗಾಗ್ಗೆ ಬ್ಲಾಗನ್ನು ನೋಡೋವಾಗ ಕ್ರೆಡಿಟ್ ಕಾರ್ಡಿನ ನೆನಪಾಗತ್ತೆ ಮತ್ತು ಅದರ ಜೆರಾಕ್ಸನ್ನು ಮಾಡಿಸಿದ್ದೇನಾ ಅಂತ ನನಗೆ ಅರಿವಾಗತ್ತೆ.

ನೀವೂ ಕ್ರೆಡಿಟ್ ಕಾರ್ಡಿನ ನಂಬರನ್ನು ಎಲ್ಲಾದರೂ ಒಂದು ಕಡೆ ಬರೆದಿಟ್ಟು ಕೊಳ್ಳೋದನ್ನ ಮರೀಬೇಡಿ. ಕಾಲ ಕಾಲಕ್ಕೆ ಕ್ರೆಡಿಟ್ ಕಾರ್ಡಿನ ವಿವರ ನೋಡ್ತಾಯಿರಿ.

Monday, June 30, 2008

ಆ ಬೆಟ್ಟದ ತುದಿಯಲ್ಲಿ

ಮನದಲ್ಲಿ ನಲಿವಿತ್ತು,
ಮುಖದಲ್ಲಿ ನಗುವಿತ್ತು,
ಜೊತೆಗೆ ಚುಮು ಚುಮು ಚಳಿಯಿತ್ತು,
ಆ ಬೆಟ್ಟದ ತುದಿಯಲ್ಲಿ

ಯಾರ ಹಂಗಿರಲಿಲ್ಲ,
ಯಾರ ಕೊಂಗಿರಲಿಲ್ಲ,
ಯಾರ ನೆನಪೂ ಇರಲಿಲ್ಲ,
ಆ ಬೆಟ್ಟದ ತುದಿಯಲ್ಲಿ

ಅಲ್ಲಿ ಮೌನವಿತ್ತು,
ಅಲ್ಲಿ ಶೂನ್ಯವಿತ್ತು,
ಅಲ್ಲಿ ಧ್ಯಾನವಿತ್ತು,
ಆ ಬೆಟ್ಟದ ತುದಿಯಲ್ಲಿ

ದಿನದ ಜಂಜಾಟವಿರಲಿಲ್ಲ,
ದಿನದ ಕೆಲಸವಿರಲಿಲ್ಲ,
ದಿನದ ಒತ್ತಡವಿರಲಿಲ್ಲ
ಆ ಬೆಟ್ಟದ ತುದಿಯಲ್ಲಿ

- ಕೆಲವು ದಿನಗಳ ಹಿಂದೆ ಮುನ್ನಾರಿಗೆ ಹೋದಾಗ ನನಗನಿಸಿದ್ದು. ಮೇಲಿನ ಚಿತ್ರ ಮುನ್ನಾರಿನ ಟಾಪ್ ಸ್ಟೇಷನ್ ದು

Saturday, June 28, 2008

ವೃತ್ತಿ

"ಮಂಜೂ...." ಅಂತ ಕರೆದೆ.

"ಬಂದೇ.." ಅಂತ ಗುಡಿಸಿಲಿನ ಒಳಗಿಂದ ಒಂದು ಆಕೃತಿ ಬಂತು. ಊರುಗೋಲು ಹಿಡಿದು ಹೊರಗೆ ಬಂದು ನನ್ನನ್ನು ದಿಟ್ಟಿಸಿ "ಓ ಅಪ್ಪಿ, ಯಾವಾಗ ಬಂದ್ರಿ" ಅಂದ. ನನ್ನಜ್ಜನ ವಯಸ್ಸಿನ ಮಂಜು ನನಗೆ ಗೌರವ ಕೊಟ್ಟಿದ್ದು ಇರಿಸುಮುರಿಸಾಯ್ತು. ಒಳಗಿಂದ ಯಾರು ಅಂತ ಹೇಳ್ತಾ ಮಂಜು ಹೆಂಡ್ತಿ ಮಂಜಿ ಬಂದ್ಲು. ಮಂಜಿಗೆ ಇತ್ತೀಚೆಗೆ ಕಣ್ಣು ಕಾಣಿಸೊಲ್ಲ ಅಂತ ಅಮ್ಮ ಹೇಳಿದ್ದು ನೆನಪಾಯ್ತು. "ಭಟ್ಟರ ಮಗ ಬಂದಿದಾರೆ" ಅಂತ ಮಂಜು ಹೇಳ್ದ. ಅವನನ್ನೇ ಗಮನಿಸಿದೆ. ಮಂಜು ಬಹಳ ಸೋತು ಹೋಗಿದ್ದ. ಬಟ್ಟೆ ಹರಿದು ಹೋಗಿತ್ತು. ಬಣ್ಣ ಮಾಸಿತ್ತು. "ಏನ್ ಯೋಚ್ನೆ ಮಾಡ್ತಾಯಿದೀರ ಬುದ್ದಿ" ಅಂತ ಮಂಜು ಕೇಳಿದಾಗಲೇ ನಾನು ವಾಸ್ತವಕ್ಕೆ ಬಂದಿದ್ದು. "ನಿಂದೊಂದು ಫೋಟೋ ತಗೋಬೇಕು" ಅಂದೆ. ಹೊಸದಾಗಿ ಕ್ಯಾಮೆರಾ ತಗೊಂಡಿದ್ದೆ. ಊರಿಗೆ ಹೋದಾಗ ಮಂಜು ಮತ್ತು ಮಂಜಿಯ ಫೋಟೋ ತಗೋಬೇಕು ಅಂತ ಬಹಳ ದಿನದಿಂದ ಯೋಚಿಸಿದ್ದೆ. ನಾನು ಹೇಳಿದ ತಕ್ಷಣ ಮಂಜು ಗುಡಿಸಿಲಿನ ಒಳಗೆ ಹೋದ. ಹೋಗೋವಾಗ ಹೆಂಡ್ತಿಯನ್ನು ಒಳಗೆ ಕರ್ಕೊಂಡು ಹೋದ. ಯಾಕೆ ಮಂಜು ಹೋದ, ನಾನೇದ್ರು ತಪ್ಪು ಮಾತಾಡಿದ್ನೆ ಅಂತ ಗಾಭರಿಯಾದೆ. 2 ನಿಮಿಷ ಮೌನವಾಗಿದ್ದೆ. ಮತ್ತೆ ಕರೆದೆ. ಒಳಗಿಂದ "ಬಂದೇ" ಅಂದ. 5 ನಿಮಿಷ ಬಿಟ್ಟು ಇಬ್ರೂ ಹೊರಗೆ ಬಂದಿದ್ರು. ಇದ್ದ ಬಟ್ಟೆಯಲ್ಲಿ ಚೆನ್ನಾಗಿರೋದನ್ನ ಆರಿಸಿ ಉಟ್ಟುಕೊಂಡು ಬಂದಿದ್ರು. ಅವರು ನಿತ್ಯ ಹಾಕುತ್ತಿದ್ದ ಬಟ್ಟೇಯಲ್ಲಿ ಫೋಟೋ ತೆಗೀಬೇಕು ಅಂತಿದ್ದ ನನಗೆ ನಿರಾಸೆಯಯ್ತು. ಆದರೂ ಅದನ್ನು ತೋರಿಸಿಕೊಳ್ಳದೆ ಒಂದೆರಡು ಫೋಟೋ ತಗೊಂಡೆ. ಕೊನೆಗೆ ಮನೆಗೆ ಬಾ ಅಂತ ಹೊರಟೆ. ನಾನು ಮನೆಯ ದಾರಿ ಹಿಡಿದಿದ್ದೆ, ಅದ್ರೆ ನನ್ನ ಮನಸ್ಸು ಬಾಲ್ಯದ ಕಡೆ ಪಯಣಿಸಿತ್ತು.

ಸರಿಯಾಗಿ ಓದದೇ ಹೊದ್ರೆ ದನ ಕಾಯೋಕೆ ಹೋಗು ಅಂತ ನಾವು ಸಣ್ಣಕಿದ್ದಾಗ ಎಲ್ಲ ಹೇಳ್ತಿದ್ರು. ಅದ್ರಲ್ಲೂ ಭೀಮನಕೋಣೆಗೆ ದನ ಕಾಯೋಕೆ ಹೋಗು ಅಂತಿದ್ರು. ಇಂದಿಗೂ ನನಗೆ ಭೀಮನಕೋಣೆಗೂ ದನ ಕಾಯೋದಕ್ಕು ಏನು ಸಂಬಂಧ ಅಂತ ಗೊತ್ತಿಲ್ಲ. ಇದು ಸಾಗರದ ಹತ್ತಿರ ಇರೋ ಒಂದು ಸಣ್ಣ ಗ್ರಾಮ. ಬಹುಶ: ಹಿಂದೆ ಭೀಮನಕೋಣೆ ದನ ಕಾಯೋದಕ್ಕೆ ಹೆಸರುವಾಸಿಯಾಗಿರಬೇಕು. ಇರಲಿ. ಅದು ಇಲ್ಲಿ ಅಪ್ರಸ್ತುತ. ಆವಾಗ ನನಗೆ ದನ ಕಾಯೋದು ಅಂದ್ರೆ ಕೀಳು ಮಟ್ಟದ ಕೆಲಸ ಅನ್ನೋ ಭಾವನೆಯಿತ್ತು. ದನ ಕಾಯೋದು ಅಂದಾಗ ನನಗೆ ನೆನಪಾಗ್ತಾಯಿದ್ದಿದ್ದು ಮಂಜು. ಆತನ ಕೆಲಸ ದನ ಕಾಯೋದಾಗಿತ್ತು. ಹಾಗಂತ ಅದು ಅವನ ವೃತ್ತಿಯಾಗಿರಲಿಲ್ಲ. ದೇಹದಲ್ಲಿ ಶಕ್ತಿಯಿರೋ ತನಕ ಆತ ಕೂಲಿ ಕೆಲಸ ಮಾಡಿದ್ದ. ವಯಸ್ಸಾದ ಹಾಗೆ ಅವನಿಗೆ ಕೂಲಿ ಮಾಡೋಕೆ ಅಗ್ತಾಯಿರಲಿಲ್ಲ. ಮಂಜುಗೆ ಮಕ್ಕಳಿರಲಿಲ್ಲ. ಇದ್ದ ಚೂರು ಗದ್ದೆಯಿಂದ ಅವನಿಗೆ ಸಂಸಾರ ನಡೆಸಲು ಕಷ್ಟವಾದ ಕಾರಣ ಆತ ದನ ಕಾಯೋ ಕೆಲಸ ಮಾಡ್ತಾಯಿದ್ದ. ಆಗ ನಮ್ಮೂರಲ್ಲಿ ಇದ್ದ 12 ಮನೆಯಲ್ಲಿ 8 ರಿಂದ 10 ಮನೆಯವರು ದನ/ಎಮ್ಮೆ ಸಾಕಿದ್ದರು. ಬೆಳೆಗ್ಗೆ ಯಾರಾದ್ರು ಜೋರಾಗಿ ಕೂಗಿದ್ರೆ ಅದು ಮಂಜುದೇ ಅಂತ ಗೊತ್ತಾಗ್ತಾಯಿತ್ತು. ಬೆಳೆಗ್ಗೆ ಬೇಗ ತಿಂಡಿ ತಿಂದು ಮಂಜಿ ಕೊಟ್ಟ ಬುತ್ತಿಯನ್ನು ತಗೊಂಡು ಎಲ್ಲರ ಮನೆ ಹತ್ತಿರ ಜೋರಾಗಿ ಕೂಗಿ, ಬಿಟ್ಟ ದನಗಳನ್ನು ಹತ್ತಿರ ಇದ್ದ ಗುಡ್ಡಕ್ಕೆ ಹೊಡೆದುಕೊಂಡು ಹೋದರೆ ಮಂಜು ವಾಪಾಸಾಗ್ತಾಯಿದ್ದಿದ್ದು ಸಂಜೆ ಸೂರ್ಯ ಮುಳುಗೋ ಹೊತ್ತಲ್ಲಿ. ಅಲ್ಲಿಯ ತನಕ ಅದೇ ಅವನ ಪ್ರಪಂಚ. ಅವನು ಹೇಗೆ ಕಾಲ ಕಳಿತಾನೆ, ಅವನಿಗೆ ಒಂಟಿತನ ಕಾಡೊಲ್ವೆ, ಕಾಡಲ್ಲಿ ಭಯ ಆಗೊಲ್ವೆ, ಅವನ ಜೀವನದ ಗುರಿಯೇನು, ಕಾಡು ಪ್ರಾಣಿ ಬಂದ್ರೆ ಎನ್ ಮಾಡ್ತಾನೆ ಅಂತೆಲ್ಲಾ ನನ್ನ ಮನಸ್ಸಲ್ಲಿ ಪ್ರಶ್ನೆ ಏಳ್ತಾಯಿತ್ತು. ಅಲ್ಲಿ ಅವನು ಏನ್ ಮಾಡ್ತಾನೆ ಅಂತ ಕೆಲವೊಮ್ಮೆ ಅಮ್ಮನ ಹತ್ತಿರ ಕೇಳಿದ್ದೆ. ದನ ಕಾಯ್ತಾನೆ ಅಂದಿದ್ಲು.

ಮುಂದೆ ಹಳ್ಳಿಯಲ್ಲಿದ್ದರೆ ಉತ್ತಮ ವಿಧ್ಯಾಬ್ಯಾಸ ಸಿಗದೆಂಬ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದೆ. ಇಲ್ಲಿ ಬಂದು ಓದಿ, ಕೆಲಸಕ್ಕೆ ಸೇರಿಯೂ ಆಯ್ತು. ಸಣ್ಣಕ್ಕಿದ್ದಾಗ ಶಾಲೆಯಲ್ಲಿ ನಿಮ್ಮ ಗುರಿಯೇನು ಅಂತ ಕೇಳಿದ್ರು. ನಾನು ಏನೂ ಹೇಳಿರಲಿಲ್ಲ. ಮನೆಗೆ ಹೋದಮೇಲೆ ಮಂಜು ಹತ್ರ ಒಮ್ಮೆ ಕೇಳಿದ್ದೆ. ನಿನ್ನ ಗುರಿಯೇನು ಅಂತ. ಅದಕ್ಕೆ ಆತ ಶಕ್ತಿಯಿರೋ ಅಷ್ಟು ದಿನ ಕೆಲಸ ಮಾಡ್ತೀನಿ ಆಮೇಲೆ ದೇವ್ರು ನೋಡ್ಕೋತಾನೆ ಅಂದಿದ್ದ. ಮುಂದೆ ಮಂಜಿನ ಯಾರು ನೋಡ್ಕೋತಾರೆ ಅಂದಾಗ ಅಕ್ಕಪಕ್ಕದ ಮನೆಯವ್ರು ನೋಡ್ಕೋತಾರೆ ಅಂದಿದ್ದ. ಇಂಟರ್ವ್ಯೂಗೆ ಹೋದಾಗ ಎಲ್ಲರ ನಿಮ್ಮ ಮುಂದಿನ ಗುರಿಯೇನು ಅಂತ ಕೇಳ್ತಾರೆ. ಎಲ್ಲ ನಾನು ಅದಾಗಬೇಕು, ಇದಾಗಬೇಕು ಅಂತ ಹೇಳ್ತಾರೆ. ನೂರರಲ್ಲಿ 90 ಜನಕ್ಕೆ ತಾವೇನಾಗಬೇಕು ಎಂಬುದು ಗೊತ್ತೇಯಿರಲ್ಲ. ಕೆಲಸದ ಬಗ್ಗೆ ಯೋಚಿಸ್ತಾರೆ ಹೊರತು ಯಾರೂ ಜೀವನದ ಬಗ್ಗೆ ಯೋಚಿಸಲ್ಲ. ಜೀವನ ಅಂದ್ರೆ ಏನು ಅನ್ನುವ ಹೊತ್ತಿಗೆ ಗಂಟು ಮೂಟೆ ಕಟ್ಟೋಕೆ ತಯಾರಾಗಿರ್ತಾರೆ. ನನ್ನ ಕೇಳಿದಾಗ ನಾನು ಸುಮ್ಮನೆ ನಕ್ಕಿದ್ದೆ. ಆಗ ಮಂಜು ನೆನಪಾಗಿದ್ದ.

ಕೆಲಸದ ಒತ್ತಡದ ನಡುವೆ ಮಂಜು ಕಳೆದು ಹೋಗಿದ್ದ. ಎಷ್ಟು ದುಡಿದರೂ ಅದಕ್ಕೆ ತಕ್ಕ ಹಾಗೆ ಏರೋ ನಮ್ಮ ಖರ್ಚು, ಬಂದ ಸಂಬಳವನ್ನು ಮೂರೇ ದಿನದಲ್ಲಿ ಮುಕ್ಕಿ ಮತ್ತೆ ಯಾವಾಗ ಸಂಬಳ ಬರತ್ತೋ ಎಂದು ಕಾಯೋದು, ಈ ಕೆಲಸ, ಇ-ಡೆಡ್ ಲೈನು, ಯಾಂತ್ರಿಕ ಜೀವನದಿಂದ ಮನಸ್ಸು ಬೇಸತ್ತಿತ್ತು. ಆಗ ಮತ್ತೆ ನೆನಪಾಗಿದ್ದು ಮಂಜು. ಒಮ್ಮೆ ಊರಿಗೆ ಹೋಗಿ ಬರೋಣ ಅಂತ ಹೋಗಿದ್ದೆ. ಆಗ ಅಮ್ಮನ ಕೇಳಿದ್ದೆ. ಮಂಜು ಹೇಗಿದಾನೆ ಅಂತ. ಅವನು ಸತ್ತು ಎಷ್ಟೋ ವರ್ಷವಾಯ್ತು ಅಂದ್ಲು. ಮಂಜಿ ಹೇಗಿದಾಳೆ ಅಂದೆ. ಮಂಜು ಹೋದ ಕೆಲವೇ ದಿನಗಳಲ್ಲಿ ಅವಳೂ ಅವನ ಹಾದಿ ಹಿಡಿದ್ಲು ಅಂತ ಹೇಳಿದ್ಲು.

ಅನಾದಿಕಾಲದಿಂದ ಜೀವನದ ಅವಿಭಾಜ್ಯ ಅಂಗವಾದ ಕೊಟ್ಟಿಗೆ ಎಷ್ಟೋ ಮನೆಯಲ್ಲಿ ಎತ್ತಂಗಡಿಯಾಗಿತ್ತು. ಮಂಜು ಹೋದ ಮೇಲೆ ದನ ಕಾಯೋ ಕೆಲಸನೂ ಇರಲಿಲ್ಲ. ಬಹುಶ: ಮಂಜು ಅಥವಾ ದನ ಕಾಯೋರು ಇದ್ದಿದ್ರೆ ಅವಕ್ಕೆ ಕಾಡಲ್ಲಿ ಹೋಗಿ ತಮಗಿಷ್ಟವಾದುದನ್ನು ತಿನ್ನುವ ಹಕ್ಕು ಇರ್ತಿತ್ತು. ತಮಗಿಷ್ಟವಾದವರ ಜೊತೆ ಸೇರುವ ಅವಕಾಶವಿರ್ತಿತ್ತು. ಕೃತಕ ಗರ್ಭದಾರಣೆ ಕಡಿಮೆಯಾಗ್ತಿತ್ತು. ಮನೆಯಲ್ಲಿ ಕೂರಲಾಗದೆ ಮಂಜುವಿನ ಮನೆಯ ಹತ್ತಿರ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಮನೆಯ ಸೋಗೆ ಹಾರಿ ಹೋಗಿತ್ತು. ಅರ್ದಬಿದ್ದ ಗೋಡೆಗಳು ನನ್ನನ್ನು ನೋಡಿ ಯಾವುದು ಶಾಶ್ವತವಲ್ಲ ಎಂದು ಅಣಕಿಸುತ್ತಿತ್ತು.

ಬಹಳ ಹಿಂದೆ ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ನನ್ನ ಒಂದು ಕಥೆ ಪ್ರಕಟವಾಗಿತ್ತು. ಕೆಲವು ದಿನಗಳ ಹಿಂದೆ ವೆಬ್ ಸೈಟಿನ ನೋಡಿದಾಗ ಅದು ಮಾಯವಾಗಿತ್ತು. ಮನೆಯಲ್ಲಿ ಒಂದು ಪ್ರತಿಯಿತ್ತು. ಅದನ್ನು ಇಲ್ಲಿ ಹಾಕುತ್ತಿದ್ದೇನೆ.

Thursday, May 22, 2008

ಧರ್ಮಭಾರತೀ

ಧರ್ಮಭಾರತೀ’ಶಾಶ್ವತಮೌಲ್ಯಗಳನ್ನು ಸಕಾಲಿಕವಾಗಿ ಸಾರುವ ಮಾಸಿಕ. ಸನಾತನಧರ್ಮದ ಲೋಕಹಿತಕರವಾದ ಮೌಲ್ಯಗಳನ್ನು ಬಿತ್ತರಿಸುವ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪವೇ ಪತ್ರಿಕೆಯ ಹುಟ್ಟಿಗೆ ಕಾರಣ. ಏಳು ವರ್ಷಗಳ ಈ ಪಯಣದಲ್ಲಿ ಅಸಂಖ್ಯ ವಿಷಯಗಳನ್ನು ಪತ್ರಿಕೆ ಸ್ಪರ್ಶಿಸಿದೆ. ಸನಾತನಧರ್ಮ ಬಗೆದಷ್ಟೂ ಬರಿದಾಗದ ಅನರ್ಘ್ಯ ಗಣಿ. ಆದರೂ ಈ ಗಣಿಯ ಉದ್ದಗಲಗಳ ಹೊರನೋಟ ಪತ್ರಿಕೆಯಿಂದ ಸಾಧ್ಯವಾಗಿದೆ
ದಿನಾಂಕ 14 ಮೇ 2008 ರಂದು ಧರ್ಮಭಾರತೀ ಮಾಸಪತ್ರಿಕೆಯು ಒಂದು ಮಹತ್ತರವಾದ ಹೆಜ್ಜೆಯನ್ನಿಟ್ಟಿತು. ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರಿಂದ ಧರ್ಮಭಾರತೀ ಅಂತರಜಾಲದಲ್ಲಿ ಅನಾವರಣಗೊಂಡಿತು.

ಇದು ನನ್ನ ಕನ್ನಡದಲ್ಲಿ ಮಾಡಿದ ಮೊದಲ ವೆಬ್ ಸೈಟ್ . ಇಲ್ಲಿ ನೀವು ಧರ್ಮಭಾರತೀ ಮಾಸಪತಿಕೆಯನ್ನು ಓದಬಹುದು.
ಅಂತರಜಾಲ ತಾಣ : http://dharmabharathi.org/

Monday, May 19, 2008

ಎಲ್ಲಿಗೇ ಪಯಣ.... ಯಾವುದೋ ದಾರೀ.... ಏಕಾಂಗಿ ಸಂಚಾರಿ

ಎಲ್ಲಿಗೇ ಪಯಣ.... ಯಾವುದೋ ದಾರೀ.... ಏಕಾಂಗಿ ಸಂಚಾರಿ

ಇದು ನನಗೆ ಬಹಳ ಇಷ್ಟವಾದ ಸಾಲುಗಳು. ಗೊತ್ತು ಗುರಿಯಿಲ್ಲದೇ ಜೀವನ ಸಾಗಿಸುವವರಿಗೆ ಇದು ಅನ್ವಯವಾಗುವಂತಹ ಸಾಲುಗಳು ಎನ್ನಬಹುದು. ಬೆಳಗ್ಗೆ ಎಫ್. ಎಮ್. ರೈನ್ಬೋ ನ ನೆನಪಿನ ದೋಣಿಯಲ್ಲಿ ಈ ಹಾಡನ್ನು ಕೇಳ್ದೆ. ಇದರ ರಚನೆಗಾರ ಆರ್ ಎನ್ ಜಯಗೋಪಾಲ್ ವಿಧಿವಶರಾದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ.

ಚಿತ್ರ: 'ಸಿಪಾಯಿ ರಾಮು'

ಕಥೆ ಮುಗಿಯಿತೇ ಆರಂಭದ ಮುನ್ನ
ಲತೆ ಬಾಡಿ ಹೋಯಿತೆ ಹೂವಾಗುವ ಮುನ್ನ

ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ
ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಶ ಮಾಡಿ
ನಡೆದಿಹೆ ಇಂದು ಅಂಧನ ರೀತಿ ಶೋಕದೇ ಏನೋ ನಿನ್ನ ಗುರಿ ಎಲ್ಲಿಗೇ ಪಯಣ

ಸೋಲು ಗೆಲುವು ಸಾವು ನೋವು ಜೀವನದುಯ್ಯಾಲೆ
ಸಾಯುವ ಮುನ್ನ ಜನಿಸಿದ ಮಣ್ಣಾ ದರುಶನ ನೀ ಪಡೆದು
ತಾಯಿಯ ಮಡಿಲ ಧೂಳಲಿ ಬೆರೆತು ಶೂನ್ಯದೇ ಮುಗಿಸು ನಿನ್ನ ಕಥೆ
ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ.

Monday, March 17, 2008

ಟಿಪ್ಸ್ ಟಿಪ್ಸ್ ಟಿಪ್ಸ್

ನಿಮ್ಮ ಬಾಸ್ ಅಥವಾ ನಿಮ್ಮ ಅಕ್ಕಪಕ್ಕ ಇರೋರು ನೀವು ಯಾವ ಸೈಟ್ ನೋಡ್ತಾಯಿದೀರ ಅಂತ ನೋಡ್ತಾಯಿರ್ತಾರಾ ? ಅವರ ಕಣ್ಣು ತಪ್ಪಿಸಿ ನೀವು ಯಾವ್ದಾದ್ರು ಸೈಟ್ ನೋಡ್ಬೇಕಾ !!! steps ಕೆಳಗಡೆ ಇದೆ. ಚೆಕ್ ಮಾಡಿ

1) Go to Tools > Internet Options in IE
2) Click Accessibility > select first 3 checkbox which comes in Formating section and click OK button
3) Go to Advanced tab and scroll down > De select Show Picture in Multi media section and click OK button

refresh the page and njoy ಮಾಡಿ

Thursday, March 13, 2008

comfortzone

ಘಟನೆ 1
ಮೊನ್ನೆ ಆತ ಮತ್ತೆ ಬಸ್ಸಲ್ಲಿ ಬಂದ. ಬಸ್ ನಲ್ಲಿ ಇದ್ದ ಎಲ್ಲರ ಹುಬ್ಬು ಒಮ್ಮೆ ಮೇಲೆ ಹೋಯ್ತು. ಕೆಲವರು ಅವನ ಬಸ್ಸು ಮಿಸ್ಸಾಗಿ ಇಲ್ಲಿಗೆ ಬಂದ ಅಂದ್ಕೊಂಡ್ರು. ಇನ್ನು ಕೆಲವರು ಮಿಸ್ಸಾಗಿ ಈ ಬಸ್ಸಿಗೆ ಬಂದ ಅಂದ್ಕೊಂಡ್ರು. ಎಲ್ಲರಿಗೂ ಆಶ್ಚರ್ಯ!!!. ಒಂದು ರೀತಿ ಪೆಕರನ ಹಾಗೆ ನಗ್ತಾ ಒಳಗೆ ಬಂದ. ಎಲ್ಲ ಯಾವ ರೀತಿ ಸ್ವಾಗತಿಸಬಹುದು ಅನ್ನೋ ಭಯ ಅವನಲ್ಲಿತ್ತು. ಬಂದು ಹಿಂದೆ ನಾವು ಕೂರುವ ಜಾಗಕ್ಕೆ ಬಂದ. ಒಬ್ಬ ಕೇಳೇಬಿಟ್ಟ "ಯಾಕೆ ಆ ಬಸ್ಸು ಮಿಸ್ಸಾಯ್ತಾ?" ಇವನು ಸುಮ್ಮನೆ ನಕ್ಕ. ಕಳೆದ ತಿಂಗಳಷ್ಟೇ ತಾನು ಕಂಪನಿ ಬಿಡ್ತಾಯಿದೀನಿ, ಒಳ್ಳೆ ಕೆಲ್ಸ ಸಿಗ್ತು. ಟಾ ಟಾ ಅಂದೆಲ್ಲಾ ಬೊಗಳೇ ಬಿಟ್ಟು ಹೋದವ ಒಂದು ತಿಂಗಳೊಳಗೆ ವಾಪಾಸು ಬಂದಿದ್ದ.

ಘಟನೆ 2
ನಾನು ಅವ್ನಿಗೆ ಬಹಳಷ್ಟು ಸಲ ಫೋನ್ ಮಾಡಿದ್ದೆ. ನೀನು ಈಗ ಇರೋ ಕಂಪನಿ ಚೆನ್ನಾಗಿ ನಡಿತಾಯಿಲ್ಲ. ನಿನಗೆ ಸಂಸಾರವಿದೆ. ಕಂಪನಿ ಯಾವಾಗ ಮುಚ್ಚತ್ತೆ ಅಂತ ಹೇಳೊಕಾಗೊಲ್ಲ, ಬೇರೆ ಕಡೆ ಹುಡ್ಕೋ ಅಂತ. ಅದ್ಕೆ ಆತ ಹೌದು ಕಂಪನಿ ಚೆನ್ನಾಗಿ ನಡಿತಾಯಿಲ್ಲ ಅಂತ ನನಗೂ ಗೊತ್ತು. ಕಂಪನಿ ಚೈಂಜ್ ಮಾಡ್ತೀನಿ ಅಂದಿದ್ದ. ಆರು ತಿಂಗಳಾದ್ರೂ ಎನೂ ಸುದ್ದಿಯಿಲ್ಲ. ಸುಮ್ಮನೆ ಫೋನ್ ಮಾಡಿ ಕೇಳ್ದೆ ಎಲ್ಲಿದೀಯಾ ಅಂತ. ಆತ ಅಲ್ಲೇ ಇದ್ದ !!!

ಘಟನೆ 3
ಅವನನ್ನು ಅದೇ ಮೊದ್ಲು ನಾನು ನೋಡಿದ್ದು. ಆತನಿಗೆ ಸುಮಾರು 35-45 ವರ್ಷವಾಗಿರಬಹುದು. ಅಲ್ಲಿಗೆ ಬಂದವರೆಲ್ಲಾ ನನಗೆ ಪರಿಚಯಸ್ತರು. ಆತ ಮಾತ್ರ ನನಗೆ ಹೊಸಬ. ಉಳಿದವರಿಗೆ ಆತ ಪರಿಚಯ. ನಾನು ಬೆಂಗಳೂರಿಗೆ ಬಂದು ಬಹಳ ವರ್ಷವಾಗಿತ್ತು. ಬಹುಶಃ ಮನೆಯಾಳತನಕ್ಕೆ ಬಂದಿರಬಹುದೆಂದುಕೊಂಡೆ. ಆದ್ರೆ ಅಲ್ಲಿ ಯಾರ ಮನೆಯಲ್ಲೂ ಬರೀ ಹೆಣ್ಣು ಮಕ್ಕಳಿರಲಿಲ್ಲ. ಮನಸ್ಸಲ್ಲೀ ಒಂದು ರೀತಿ ಗೊಂದಲವಾಯ್ತು. ಸಂಜೆ ಮನೆಗೆ ಹೋದಾಗ ಅಮ್ಮನ ಹತ್ರ ಕೇಳ್ದೆ. ಆತ ಯಾರೂ ಅಂತ. ಅಮ್ಮ ಹೇಳಿದ್ಲು ಅಂವ ಶಂಕ್ರಣ್ಣನ ಮಗ!. ಶಂಕ್ರಣ್ಣಂಗೆ ಒಬ್ಬನೇ ಮಗ ಅಂದ್ಕೊಂಡಿದ್ದೆ. ಕೊನೆಗೆ ಗೊತ್ತಾಯ್ತು ಈತ ಅವನ ಹಿರೇ ಮಗನಾಗಿದ್ದ. ಯಾವಾಗಲು ಅವನಾಯಿತು, ಅವನ ಮನೆಯಾಯಿತು. ಊರ ಯಾರ ಮನೆಗೂ ಆತ ಹೋಗ್ತಾಯಿರಲಿಲ್ಲ.

ಘಟನೆ 4
ಹೌದು ಅದೇ ಹಳೆಯ ಡ್ರೈವರ್ ರಾಜ. ಮುಖ ಸುಕ್ಕುಗಟ್ಟಿತ್ತು. ತಲೆ ಕೂದಲು ಉದಿರಿತ್ತು. ಮಾತಲ್ಲಿ ಮೊದಲಿನ ರೀತಿಯ ಗಡಸು ಇರಲಿಲ್ಲ. ನಿದಾನವಾಗಿ ಡ್ರೈವಿಂಗ್ ಮಾಡ್ತಾಯಿದ್ದ. ಕಣ್ಣಲ್ಲಿ ಹೊಳಪಿರಲಿಲ್ಲ. ಮೊದಲಿನ ಹಾಗೆ ಹುಡುಗಿಯರು/ಹೆಂಗಸರನ್ನು ಕಂಡಾಗ ಹಾರ್ನ್ ಮಾಡ್ತಾಯಿರಲಿಲ್ಲ. ಮೊನ್ನೆ ನನ್ನ ನೋಡಿ ನಕ್ಕಿದ್ದ. ಮಾತಾಡಲು ಆಸಕ್ತಿಯಿದ್ದ ಹಾಗೆ ಕಾಣ್ಲಿಲ್ಲ.
~~~~~~~~~~~~~~~
ಈ ಮೇಲ್ಕಂಡ ಘಟನೆ ನೋಡಿದಾಗ ನಮಗೆ ಗೊತ್ತಾಗತ್ತೆ ಇವ್ರು comfortzone ನಲ್ಲಿ ಇದಾರೆ ಅಂತ. ತಾವು ಬದ್ಲಾಗಬೇಕು ಅನ್ಸಿದ್ರು ಯಾರೂ ರಿಸ್ಕ್ ತಗೊಳ್ಳೋಕೆ ತಯಾರಿರಲಿಲ್ಲ. ಅನಿವಾರ್ಯ ಅನ್ನಿಸ್ಸೋ ತನಕ ಇವ್ರೂ ಹಾಗೆ ಇರ್ತಾರೆ. ಅನಿವಾರ್ಯವಾದ್ರೆ ಮಾತ್ರ ಬದ್ಲಾಯಿಸ್ತಾರೆ. ಈ ರೀತಿ ಜನ ಎಲ್ಲ ಕಡೆ ಕಾಣಿಸ್ತಾರೆ. ಕೆಲವು ಗುಣಗಳು ನಮ್ಮಲ್ಲೂ ಇರ್ತವೆ. ಹೆಚ್ಚಿನ ಜನ ಜೀವನದಲ್ಲಿ ರಿಸ್ಕ್ ತಗೋಳ್ಳೋಕೆ ಹೋಗೊಲ್ಲ. ಯಾಕೆ ತಗೋಬೇಕು ಅಂತ ಇರ್ತಾರೆ. ಯಾರಾದ್ರು ತಗೊಂಡು ಜೀವನದಲ್ಲಿ ಯಶಸ್ವಿಯಾದ್ರೆ ಅದನ್ನು ಕೇಳಿ ಖುಷಿ ಪಡ್ತಾರೆ ವಿನಹಃ ತಾವು ತೆಗೆದುಕೊಳ್ಳೋಲ್ಲ. ತಮ್ಮ ಮಕ್ಕಳಲ್ಲಿ ತಾವು ಕಂಡ ಕನಸ್ಸನ್ನು ನನಸ್ಸು ಮಾಡೋಕೆ ನೋಡ್ತಾರೆ. ಮಕ್ಕಳು ದೊಡ್ಡವರಾದಾಗ ಹೆಚ್ಚಿನ ಜನ ತನ್ನ ಅಪ್ಪ ಮಾಡಿದ ಹಾಗೆ ಮಾಡ್ತಾರೆ. ಅವರು ತಮ್ಮ ಮಕ್ಕಳಲ್ಲಿ ತಾವು ಕಂಡ ಕನಸ್ಸನ್ನು ನನಸ್ಸು ಮಾಡೋಕೆ ನೋಡ್ತಾರೆ.
ಇದು ಪುನರಾವರ್ತನೆಯಾಗ್ತಾಯಿರತ್ತೆ. ಒಂದು ದಿನ ಗಂಟು ಮೂಟೆ ಕಟ್ಟೋ ಹೊತ್ತಿಗೆ ಕೆಲವರಿಗೆ ಅರಿವಾಗಿರತ್ತೆ. ಇನ್ನು ಕೆಲವರಿಗೆ ಅರಿವಾಗೋದೇಯಿಲ್ಲ