Tuesday, July 14, 2009

ರುದ್ರಪಾಠ

"ಅಪ್ಪ ಎಲ್ಲಿ?" ಅಂತ ಅಮ್ಮನ ಹತ್ತಿರ ಫೋನಿನಲ್ಲಿ ಕೇಳ್ದೆ.. "ಅಪ್ಪ ಸಿಗಂದೂರಿಗೆ ಹೋಯ್ದ. ದಿನಾ ಬೆಳಿಗ್ಗೆ ಅಲ್ಲಿಗೆ ಹೋಗಿ ರುದ್ರ ಹೇಳಿಕೊಡ್ತಾಯಿದ್ದ. ಸಂಜೆ ಮನೇಲಿ ಊರಿನವರಿಗೆ ರುದ್ರ ಹೇಳಿಕೊಡ್ತಾಯಿದ್ದ. ಮನ್ಯಾಥಣ್ಣ ಚದ್ರಳ್ಳಿಗೆ, ಶ್ರೀಧರಣ್ಣ ಕೆರೆಕೈ ಗೆ, ಸೂರ್ಯನಾರಾಯಣ ಚಿಕ್ಕಯ್ಯ ಗುಮ್ಗೋಡಿ ಗೆ, ದತ್ತಣ್ಣ ಮೂರ್ಕೈ ಗೆ ಹೋಗಿ ರುದ್ರ ಹೇಳಿಕೊಡ್ತಾಯಿದ್ದ." ಅಂತ ಅಮ್ಮ ಹೇಳಿದ್ಲು.

ಇದು ನಮ್ಮ ಕರೂರು ಸೀಮೆಯಲ್ಲಿ ರುದ್ರ ಕಲಿತವರು ಬೇರೆ ಬೇರೆ ಊರುಗಳಿಗೆ ಹೋಗಿ ಉಚಿತವಾಗಿ ರುದ್ರ ಹೇಳಿಕೊಡುತ್ತಿರುವ ವಿಷಯ. ನಿಮಗೆ ಆಶ್ಚರ್ಯವಾಗಬಹುದು. ಅದೂ ಉಚಿತವಾಗಿ ಹೇಳಿಕೊಡುತ್ತಿದ್ದಾರೆ ಎಂದು!!!. ಇದು ಗೋಕರ್ಣದ ಶ್ರೀಮಹಾಬಲ ದೇವರಿಗೆ ಕೋಟಿ ರುದ್ರದ ಸಂಕಲ್ಪ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರಿಂದ ಆದ ನಂತರದ ಪ್ರಭಾವ. ಇದು ಕೇವಲ ನಮ್ಮ ಸೀಮೆಯಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಇದು ಶ್ರೀರಾಮಚಂದ್ರಾಪುರ ಮಠದ ಎಲ್ಲಾ ಸೀಮೆಗಳಲ್ಲಿ ನಡೆಯುತ್ತಿರುವುದು. ಇಲ್ಲಿ ಯಾರಿಗೂ ಒತ್ತಡವಿಲ್ಲ. ಎಲ್ಲರೂ ಸ್ವಯಂ ಆಸಕ್ತಿಯಂದ ಕಲಿಯುತ್ತಿರುವುದು. ಜನರ ಮನಸ್ಸನ್ನು ಸದ್ದಿಲ್ಲದೇ/ಅರಿವಿಲ್ಲದೇ ನಮ್ಮ ಶ್ರೀಗಳವರು ಪರಿವರ್ತಿಸಿದ್ದಾರೆ ಮತ್ತು ಪರಿವರ್ತಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಮನೆಯ ಒನರ್ ಶ್ರೀಧರಣ್ಣನೂ ಈಗ ರುದ್ರ ಕಲಿತಾಯಿದ್ದಾನೆ. ನಾಲ್ಕೈದು ಜನ ಇಂಜಿನಿಯರ್ಸ್ ಕಲಿಯಕೆ ಬತ್ತಾಯಿದ್ದ. ನೀನೂ ಬಾ ಅಂತ ಶ್ರೀಧರಣ್ಣ ಕರೆದಿದ್ದರು. ಬೆಳೆಗ್ಗೆ ೭ ಕ್ಕೆ ಮನೆ ಬಿಟ್ಟರೆ ರಾತ್ರಿ ಎಷ್ಟು ಹೊತ್ತಿಗೆ ವಾಪಾಸು ಬರ್ತೀನಿ ಅಂತ ನನಗೇ ಗೊತ್ತಿರೋದಿಲ್ಲ. ಸಾಫ್ಟ್ವೇರ್ ಕೆಲ್ಸನೇ ಹಾಗೆ. "ರೀ.. ಎಷ್ಟೋತ್ತಿಗೆ ಬತ್ತಿ" ಅಂತ ಹೆಂಡ್ತಿ ಕೇಳಿದ್ರೆ ಎಷ್ಟು ಹೊತ್ತು ಆಗತ್ತೇ ಅಂತಾನೇ ನನಗೆ ಗೊತ್ತಿರೋದಿಲ್ಲ. ಕಲಿಯ ಬೇಕು ಅನ್ನೋ ಮನಸ್ಸಿದೆ.. ಆದ್ರೆ ಸಮಯ ಇಲ್ಲ.

ಇನ್ನೂ ನೆನಪಿದೆ ನನಗೆ. ಸಣ್ಣವನಿದ್ದಾಗ ಬೆಳಿಗ್ಗೆ ಐದಕ್ಕೆ ಸ್ವರ ಬದ್ದಾವಾಗಿ ಕಿವಿಗೆ ನಾದವಾಗಿ ಹೊಮ್ಮುತ್ತಿದ್ದ ರುದ್ರದ ಸಾಲುಗಳು.. ಶೀ ಸೂಕ್ತ, ಪುರುಷ ಸೂಕ್ತ....

ಮಳೆಯಿರಲಿ, ಚಳಿಯಿರಲಿ, ಸೆಖೆಯಿರಲಿ ಅಪ್ಪ ದಿನ ಬೆಳಿಗ್ಗೆ ನಾಲ್ಕುವರೆಗೆ ಎದ್ದು ಸ್ನಾನ ಮಾಡಿ ಬರೋಬ್ಬರಿ ಎರಡು ತಾಸು ಪೂಜೆ ಮಾಡುತ್ತಿದ್ದರು. ಅಪ್ಪನ ಕಂಠನೇ ಹಾಗೆ. ಎಷ್ಟೇ ನಿದ್ರೆ ಬಂದಿದ್ದರು ಆ ಸ್ವರ, ಮಂತ್ರ, ಘಂಟೆ ಎಲ್ಲಾ ಈಗಲೂ ನೆನಪಿದೆ. ಅಪ್ಪನ ಜೊತೆಗೆ ಅಮ್ಮ ಎದ್ದು ಚಿಮಣಿ ಹಿಡಿದುಕೊಂಡು ದೇವರಿಗೆ ಹೂವು ಕೊಯ್ಯುತ್ತಿದ್ದು, ಸೋಮಾರಿ ನಾನು ಇನ್ನು ಮಲಗಿರುತ್ತಿದ್ದು ಎಲ್ಲವೂ ಮರೆಯಲಸಾದ್ಯ. ಈಗಲೂ ನನಗೆ ರುದ್ರ, ಪುರುಷ ಸೂಕ್ತ, ಶ್ರೀ ಸೂಕ್ತ ನೆನಪಿಲ್ಲದಿದ್ದರೂ ಆ ಲಯಬದ್ದವಾದ ಸ್ವರ ಇನ್ನೂ ನೆನಪಿದೆ.

ಅಮ್ಮ ರುದ್ರದ ಬಗ್ಗೆ ಹೇಳಿದಾದ ಬಾಲ್ಯದ ನೆನಪಾಯಿತು.

ಗಿರಿನಗರದಲ್ಲಿ ಶನಿವಾರ ಮತ್ತು ಭಾನುವಾರ ರುದ್ರ ಹೇಳಿಕೊಡುತ್ತಿದ್ದಾರಂತೆ. ಹೋಗಿ ಕಲಿಯಬೇಕು.

ಗೆಳೆಯರೊಡನೆ ರುದ್ರಪಾಠ ಲೇಖನ ಹಂಚಿಕೊಂಡಾಗ ಸಿಕ್ಕ ಕೊಂಡಿಗಳು. ಮಹೇಶ ಮತ್ತು ಉಲ್ಲಾಸರಿಗೆ ಧನ್ಯವಾದಗಳು.
http://www.sssbpt.org/sri-rudram/instructions-to-user.htm
http://www.vedamantram.com/audio/rudram.mp3

Saturday, January 24, 2009

ನೀನ್ಯಾರಿಗಾದೆಯೋ ಎಲೆ ಮಾನವ - ಜನವರಿ 2009

ಗೋವು ಮಾತನಾಡಿದಾಗ.....

ಆತ್ಮೀಯ,

ಜನ ನನ್ನನ್ನು ಅಮೃತಮಹಲ್ ಅಂತ ಗುರುತಿಸುತ್ತಾರೆ. ನಾನು ಕೆಲಸಗಾರ ತಳಿಗೆ ಸೇರಿದವ. ನಾನು ಮೂಲತಃ ಚಿಕ್ಕಮಗಳೂರು, ಹಾಸನ ಮತ್ತು ಚಿತ್ರದುರ್ಗದವ. ಮೈಸೂರು ಅರಸರು ನನ್ನನ್ನು ಅಭಿವೃದ್ಧಿಗೊಳಿಸಿದರು. ಆಗ ನನ್ನನ್ನು “ಬೆಣ್ಣೆ ಚಾವಡಿ” ಎಂಬ ಹೆಸರಿಂದ ಕರೆಯುತ್ತಿದ್ದರು. ಅನಂತರ ನನ್ನನ್ನು ಟಿಪ್ಪುಸುಲ್ತಾನ್ ಅಭಿವೃದ್ಧಿಪಡಿಸಿ “ಅಮೃತಮಹಲ್” ಅಂತ ಹೆಸರಿಟ್ಟ. ಮೈಸೂರಿನ ದಿವಾನರಾಗಿದ್ದ ಶ್ರೀಪೂರ್ಣಯ್ಯನವರು ನನ್ನನ್ನು ತಮಿಳುನಾಡಿನಲ್ಲಿ ಬೆಳೆಸಿದರು. ನನ್ನನ್ನು ತಮಿಳುನಾಡಿನ ಕೆಲವು ಕಡೆ ಇಂದಿಗೂ “ಪೂರ್ಣಯ್ಯನ ದನ” ಅಂತ ಕರೀತಾರೆ. ನಿಮ್ಮ ರೀತಿ ನನಗಿಷ್ಟವಾದ ಹೆಸರು ಇಟ್ಟುಕೊಳ್ಳುವ ಅರ್ಹತೆ ನನಗಿಲ್ಲ ಅಲ್ಲವೇ? ಹೆಸರು ಬದಲಾದರೇನಂತೆ, ನನ್ನ ವರ್ತನೆ ಬದಲಾಗಿಲ್ಲ. ನಾನೊಬ್ಬ ಸ್ವಾಮಿನಿಷ್ಟ ಮತ್ತು ಧೈರ್ಯಶಾಲಿ.

ಅದಕ್ಕಾಗಿಯೇ ನನ್ನನ್ನು ಯುದ್ಧದಲ್ಲಿ ಬಳಸುತ್ತಿದ್ದರೂ ಅನ್ಸುತ್ತೆ. ನನ್ನ ಕೋಡು ಉದ್ದವಿದೆ ಎಂದು ಅದಕ್ಕೆ ಬೆಂಕಿ ಹಚ್ಚಿ ವೈರಿಗಳತ್ತ ನನ್ನ ಓಡಿಸುತ್ತಿದ್ದರು. ಪರಿಸ್ಥಿತಿಯ ಅರಿವಿದ್ದರೂ ನಾನೊಬ್ಬ ಅಸಹಾಯಕ ನೋಡಿ. ಎಷ್ಟಾದರೂ ನಾನೊಬ್ಬ ಮೂಕ ಪ್ರಾಣಿ ಅಲ್ಲವೇ? ನನ್ನ ಕೂಗು ಅವರಿಗೆಲ್ಲಿ ಅರ್ಥವಾಗಬೇಕು ಹೇಳಿ. ಯುದ್ಧಕಾಲದಲ್ಲಿ ಸಾಮಾನು - ಸರಂಜಾಮು ಸಾಗಿಸಲು ನನ್ನನ್ನು ಉಪಯೋಗಿಸುತ್ತಿದ್ದರು. ದಿನಗಟ್ಟಲೇ ಆಹಾರ ಮತ್ತು ನೀರನ್ನು ಸೇವಿಸದೇ ನಾನಿರುತ್ತೇನೆ. ನಾನು ಹಾಲು ಜಾಸ್ತಿ ನೀಡದಿದ್ದರೂ ಶ್ರಮದ ಕೆಲಸಕ್ಕೆ ಉಪಯೋಗವಾಗುತ್ತೇನೆ.

ಹಿಂದೆ ನನ್ನ ಸಂವರ್ಧನೆಗಾಗಿ ಕಾವಲು ಭೂಮಿಯನ್ನು ಬಿಟ್ಟಿದ್ದರು. ಇತ್ತೀಚಿನ ಕೆಲವು ಘಟನೆಯಿಂದ ನನ್ನ ಹೆಸರು ಸ್ವಲ್ಪಮಟ್ಟಿಗೆ ನಿನಗೆ ಪರಿಚಯವಾಗಿರಬಹುದು. ನನ್ನ ನಿರ್ವಹಣೆಯನ್ನು ಸರಕಾರ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸುವುದರಲ್ಲಿತ್ತು. ಅದರ ವಿರುದ್ಧ ನಿನ್ನ ಸಹೋದರರು ಕೂಗಾಡಿದರು, ಪ್ರತಿಭಟಿಸಿದರು. ಅದರ ಫಲವೇನಾಯಿತು? ಅಂತ ನಿನಗೆ ತಿಳಿದಿರಬಹುದು.

ಈಗ ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ. ನಾನು ಬಲಿಪಶುವಾದೆ.

ಹೇಳು ಮಾನವ ಇದು ನ್ಯಾಯವೇ.....
ಪ್ರತಿಭಟಿಸಲು ನಾನು ಅಸಹಾಯಕ. ನೀನೂ.....??


~~~~~~~~~~~~~~~~~~~~~~~~~~~~~~~~~~~~~~
ಮಾನವನ ಸ್ವಾರ್ಥದ ಅಟ್ಟಹಾಸದಲ್ಲಿ ಸಿಕ್ಕಿ ನಲುಗುತ್ತಿರುವ ಮೂಕ ಪ್ರಾಣಿ ಗೋವು ಮಾತನಾಡುವ ಲೇಖನ ಮಾಲಿಕೆ "ನೀನ್ಯಾರಿಗಾದೆಯೋ ಎಲೆ ಮಾನವ"
ಈ ಲೇಖನ ಮಾಲಿಕೆ ಶ್ರೀರಾಮಚಂದ್ರಾಪುರ ಮಠದ "
ಧರ್ಮಭಾರತೀ" ಮಾಸ ಪತ್ರಿಕೆಯಲ್ಲಿ ಡಿಸೆಂಬರ್ ನಿಂದ ಪ್ರಾರಂಭವಾಗಿದೆ.
ಈ ಲೇಖನಮಾಲಿಕೆಯನ್ನು ಧರ್ಮಭಾರತೀ ಯ ಅಂತರಜಾಲ ತಾಣದಲ್ಲಿ ಓದಬಹುದು

Friday, January 16, 2009

ಶ್ರೀಭಾರತೀಗುರುಕುಲಮ್

ಶ್ರೀರಾಮಚಂದ್ರಾಪುರ ಮಠದ ಗುರುಕುಲ "ಶ್ರೀಭಾರತೀಗುರುಕುಲಮ್" ವೆಬ್ ಸೈಟ್ ಅಂತರಜಾಲದಲ್ಲಿ ಲಭ್ಯ.



ಇದು ಮಠಕ್ಕೆ ಸೇವಾರೂಪದಲ್ಲಿ ಮಾಡಿದ ನಾಲ್ಕನೇ ವೆಬ್ ಸೈಟ್. ಗುರುಕುಲದ ವೆಬ್ ಸೈಟ್ ಡಿಸೈನಿನ್ನಲ್ಲಿ ಮಡದಿ ಜಯಶ್ರೀಯ ಪಾತ್ರ ಹೆಚ್ಚಿತ್ತು.
1) http://shrigurukulam.org/
2) http://dharmabharathi.org
3) http://vishwagou.org/
4) http://bharathividyalaya.in/

ನಿಮ್ಮ ಸಲಹೆಗಳಿಗೆ ಸ್ವಾಗತ.

Wednesday, December 24, 2008

ವಿದಾಯ

ಆತ್ಮೀಯರೇ,

ಇಂದು ನನಗೆ ಬಹಳ ಬೇಸರವಾಗುತ್ತಿದೆ. ಜೀವನದ ಪ್ರತಿ ಗಳಿಗೆ ನನ್ನ ಜೊತೆಯಿದ್ದು ನನ್ನ ಅವಿಬಾಜ್ಯ ಅಂಗವಾದ ನಿಮ್ಮನ್ನು ಇಂದು ನನ್ನ ಹಿತಕ್ಕೋಸ್ಕರ ಬಲಿ ಕೊಡುತ್ತಿದ್ದೇನೆ. ಕ್ಷಮೆಯಿರಲಿ. ನನಗೂ ನಿಮ್ಮನ್ನು ಬೀಳ್ಕೊಡಲು ಇಷ್ಟವಿಲ್ಲ. ಆದರೆ ವಿದಿಯಾಟ. ವಿದಿಯಾಟದ ಮುಂದೆ ಹುಲುಮಾನವರ ಆಟವೇನೂ ಸಾಗದು. ನಾವೆಲ್ಲಾ ಪಾತ್ರದಾರಿಗಳು. ಸೂತ್ರದಾರಿ ಅವನು.

ನಾನು ಬೆಳೆದ ಹಾಗೆ ನೀವೂ ನನ್ನೊಟ್ಟಿಗೆ ಬೆಳೆದಿರಿ. ಹಾಗೆಯೇ ನನ್ನ ಏಳುಬೀಳಿನಲ್ಲಿ ಬಾಗಿಯಾಗಿ ನನಗೆ ಸ್ಪೂರ್ತಿಯಾದಿರಿ. ನಿಮ್ಮಿಂದ ನನಗೆ ಯಾವುದೇ ತೊಂದರೆಯಾಗಲಿಲ್ಲ. ಆದರೂ ನಿಮ್ಮನ್ನು ದೂರ ಮಾಡುತ್ತಿದ್ದೇನೆ.

ನಾವೇನು ಮಾಡಿದೆವು ಅಂತ ನೀವು ನನ್ನ ಪ್ರಶ್ನಿಸಬಹುದು.
ನೀವು ಹುಟ್ಟಿದ ಸ್ಥಳ ಸರಿಯಾದುದಲ್ಲ. ಪ್ರತಿಯೊಬ್ಬರು ಉತ್ತಮ ಸಂಸ್ಕಾರವಂತರಾಗಬೇಕಾದರೆ ಉತ್ತಮ ಪರಿಸರವಿರಬೇಕು. ಉತ್ತಮರ ಸಹವಾಸವಿರಬೇಕು. ಆಗಲೇ ಆತನಲ್ಲಿ ಜೀವನದ ತತ್ವಗಳ ಬಗ್ಗೆ ಜಾಗೃತಿ ಮೂಡುತ್ತದೆ. ಆದರೆ ನಿಮ್ಮ ವಿಷಯದಲ್ಲಿ ಹಾಗಾಗಲಿಲ್ಲ. ಇದು ನಿಮ್ಮ ತಪ್ಪಲ್ಲ. ಮತ್ತೆ ಹೇಳ್ತೇನೆ, ಇದು ವಿದಿಯಾಟ. ಅದಕ್ಕೆ ನಿಮ್ಮನ್ನು ನನ್ನಿಂದ ದೂರ ಮಾಡುತ್ತಿದ್ದೇನೆ.

ಮೊನ್ನೆ ನಿಮ್ಮನ್ನು ಕಳಿಸಿಕೊಡುವಾಗ ನನಗೆ ಬಹಳ ನೋವಾಯಿತು. ಬಾಯಿ ಕಿತ್ತು ಬಂದ ಹಾಗಾಯಿತು. ನನ್ನನ್ನು ಕಳಿಸದಿರು ಅಂತ ಮೌನವಾಗಿ ನೀವಿಬ್ಬರು ನನ್ನನ್ನು ತಬ್ಬಿ ಹಿಡಿದಿದ್ದಿರಿ. ಆದರೂ ಕಳಿಸಿಕೊಟ್ಟೆ. ಈಗ ನಿಮ್ಮ ಜಾಗದಲ್ಲಿ ಹೊಸತು ಕೃತಕ ಹಲ್ಲುಗಳು ಬಂದಿವೆ. ಹೊಂದಿಕೊಳ್ಳಲು ಕೆಲವು ದಿನಗಳಾಗಬಹುದು. ಅಲ್ಲಿಯ ತನಕ ಕಿರಿ ಕಿರಿಯಾಗುತ್ತದೆ. ಆಗ ನಿಮ್ಮ ನೆನಪಾಗುತ್ತದೆ.

ಮನಸು ಹೇಳ ಬಯಸಿದೇ ನೂಂರೊದು
ತುಟಿಯ ಮೇಲೆ ಬಾರದಿರೇ ಮಾತೊಂದು
ವಿದಾಯ ಗೆಳೆಯರೇ
ವಿದಾಯ ಗೆಳೆಯರೇ,
ವಿದಾಯ ಹೇಳ ಬಯಸಿರುವೇ ನಾನಿಂದು

ಏನಿದು ವಿದಾಯ ಅನಿಸಿರಬಹುದು. ಇದು ದಂತ ವಿದಾಯ!!!
ಹುಟ್ಟಿನಿಂದ ನನ್ನ ಜೊತೆಗೆ ಸಿಹಿ ಕಹಿಯನ್ನುಂಡ ಮತ್ತು ಹುಟ್ಟುವಾಗಲೇ ವಕ್ರವಾಗಿದ್ದ ಎರಡು ಹಲ್ಲುಗಳನ್ನು ಮೊನ್ನೆ ದೂರಮಾಡಿದೆ. ಅಗ ನನಗನಿಸಿದ್ದು ಹೀಗೆ.

Saturday, December 6, 2008

ನೀನ್ಯಾರಿಗಾದೆಯೋ ಎಲೆ ಮಾನವ

ಗೋವು ಮಾತನಾಡಿದಾಗ.....

ಆತ್ಮೀಯ,

ಬಹಳ ದಿನಗಳಿಂದ ಈ ಪತ್ರ ಬರೆಯಬೇಕೆಂದಿದ್ದೆ. ಇಂದು ಬರೆಯುತ್ತಿರುವೆ.

ನಾನೇನು ತಪ್ಪು ಮಾಡಿದೆ ನಿನಗೆ? ನಿನ್ನನ್ನು ಎಂದಾದರೂ ದೂಷಿಸಿದ್ದೆನಾ? ಅಥವಾ ನಿನ್ನ ಕುಟುಂಬಕ್ಕೇನಾದರೂ ದ್ರೋಹ ಮಾಡಿದ್ದೆನಾ? ಅಮ್ಮನ ಎದೆ ಹಾಲಿನ ಅನಂತರ ನೀನು ಕುಡಿದಿದ್ದು ನನ್ನ ಹಾಲಲ್ಲವೇ? ಅಂದಿನಿಂದ ಇಂದಿನವರೆಗೆ ನಾನೆಂದೂ ನಿನಗೆ ಮೋಸ ಮಾಡಿಲ್ಲ. ಹಾಗಿದ್ದಾಗ ನನ್ನ ಮೇಲೆ ನಿನಗೇಕೆ ಕೋಪ, ಮತ್ಸರ!

ಹಾಲು ಬೇಕೆಂದಾಗ ಏನು ಮಾಡುತಿದ್ದೆ ನೀನು?
ನನ್ನ ಮುದ್ದು ಕರುವಿಗೆ ನಾನು ಹಾಲುಣಿಸದಂತೆ ಮಾಡಿ ನನ್ನ ಹಾಲನ್ನು ಕರೆದು ನೀನು ನಿನ್ನವರಿಗೆ ಉಣಿಸಿದೆ. “ಅಮ್ಮ ನನಗೆ ಹಾಲು ಬೇಕು, ಕೊಡು” ಅಂತ ಕರು ಸಂಜ್ಞೆ ಮಾಡಿದರೂ ಅದನ್ನು ನೋಡಿ ನಾನು ಅಸಹಾಯಕಳಾಗಿದ್ದೆ. “ಮಗು, ಎಲ್ಲದಕ್ಕೂ ನಾವು ಪಡೆದುಕೊಂಡು ಬರಬೇಕು” ಎಂದು ಕರುವಿಗೆ ಸಮಾಧಾನ ಮಾಡುತ್ತಿದ್ದೆ. ಕೆಚ್ಚಲು ಗಾಯವಾದಾಗ ನಾನು ಒದ್ದಿದ್ದು ನಿಜ. ನನಗೆ ನೋವಾಗುವುದಿಲ್ಲವೇ? ಅದನ್ನೇ ಕಾರಣವಾಗಿಟ್ಟುಕೊಂಡು ನೀನು ನನ್ನ ಕಾಲುಗಳನ್ನು ಕಟ್ಟಿ ಹಾಲು ಕರೆದಿಲ್ಲವೇ? ನನ್ನ ನೋವು ನಿನಗರ್ಥವಾಗಲಿಲ್ಲವೇ?

ಕಂಡ ಕಂಡವರ ಮೇಲೆ ನಿನ್ನ ಕಾಮುಕ ದೃಷ್ಟಿಯಿಟ್ಟ ನೀನು ನನಗೆ ನನ್ನಷ್ಟಕ್ಕೆ ಗರ್ಭಧರಿಸಲೂ ಬಿಡಲಿಲ್ಲ. ನನ್ನ ಪ್ರಾಣಗಳಾದ ನನ್ನ ಕರುಗಳನ್ನು ದುಡ್ಡಿನ ಆಸೆಗೆ ನೀನು ಮಾರಿದೆ. ಸ್ವತಂತ್ರವಾಗಿ ಓಡಾಡುವ ಹಕ್ಕನ್ನೂ ಕಸಿದುಕೊಂಡೆ. ಯಾಕೆ ಕೋಪ ನಿನಗೆ? ಹಾಲು ಕೊಡುವುದಿಲ್ಲ ಎಂಬ ಏಕೈಕ ಕಾರಣಕ್ಕೆ ನನ್ನನ್ನು ಕಸಾಯಿಖಾನೆಗೆ ತಳ್ಳಿದೆ. ನನ್ನ ಕೋಡು ಉದ್ದವಿತ್ತು, ಅದಕ್ಕೆ ಬೆಂಕಿ ಹಚ್ಚಿ ವೈರಿಗಳ ಮೇಲೆ ಆಕ್ರಮಣ ಮಾಡಲು ನನ್ನನು ಉಪಯೋಗಿಸಿದೆ. ನಿನ್ನ ಭಯದಿಂದ ನಾನು ಹಾಗೆ ಓಡಿದೆ. ಓಡುವಾಗ ಕೊಂಬಿನಲ್ಲಿದ್ದ ಬೆಂಕಿ ನನ್ನ ಮೈಗೂ ತಾಗಿ ಸುಟ್ಟಿತ್ತು. ವೈರಿಗಳು ನನ್ನ ಇರಿದಿದ್ದರು. ನಿನ್ನನ್ನು ಕಾಪಾಡಿಕೊಳ್ಳಲು ನನ್ನನ್ನು ನೀನು ಉಪಯೋಗಿಸಿದ್ದೆ. ನಿನಗೆ ಕರುಣೆಯಿಲ್ಲವೇ?

ನಿನಗಾಗಿ ನನ್ನ ಜೀವನ ತೆತ್ತೆ. ಹೇಳು ಮಾನವ ಹೇಳು.
ನನಗೆ ಉತ್ತರಿಸು. ನಿನ್ನ ಆತ್ಮವನ್ನೊಮ್ಮೆ ಪ್ರಶ್ನಿಸು....
~~~~~~~~~~~~~~~~~~~~~~~~~~~~~~~~~~~~~~
ಮಾನವನ ಸ್ವಾರ್ಥದ ಅಟ್ಟಹಾಸದಲ್ಲಿ ಸಿಕ್ಕಿ ನಲುಗುತ್ತಿರುವ ಮೂಕ ಪ್ರಾಣಿ ಗೋವು ಮಾತನಾಡುವ ಲೇಖನ ಮಾಲಿಕೆ "ನೀನ್ಯಾರಿಗಾದೆಯೋ ಎಲೆ ಮಾನವ"

ಈ ಲೇಖನ ಮಾಲಿಕೆ ಶ್ರೀರಾಮಚಂದ್ರಾಪುರ ಮಠದ "ಧರ್ಮಭಾರತೀ" ಮಾಸ ಪತ್ರಿಕೆಯಲ್ಲಿ ಡಿಸೆಂಬರ್ ನಿಂದ ಪ್ರಾರಂಭವಾಗಿದೆ. ಬರೆಯಲು ಸ್ಪೂರ್ತಿಸಿದ ಮತ್ತು ಆಶೀರ್ವದಿಸಿದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರಿಗೆ ಚಿರಋಣಿ. ಬರವಣಿಗೆಯನ್ನು ತಿದ್ದಿ ತೀಡುತ್ತಿರುವ ಮತ್ತು ಧರ್ಮಭಾರತೀ ಮಾಸಪತ್ರಿಕೆಯಲ್ಲಿ ಲೇಖನ ಬರೆಯಲು ಅವಕಾಶ ನೀಡಿದ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಜಗದೀಶ ಶರ್ಮಾರವರಿಗೆ ಪ್ರೀತಿಪೂರ್ವಕ ಧನ್ಯವಾದಗಳು.

ಈ ಲೇಖನಮಾಲಿಕೆಯನ್ನು ಧರ್ಮಭಾರತೀ ಯ ಅಂತರಜಾಲ ತಾಣದಲ್ಲಿ ಓದಬಹುದು

Thursday, October 23, 2008

ಎ ವೆಡ್ನೆಸ್ ಡೇ

ಫಿಲ್ಮ್ ನೋಡೋದು ಅಂದ್ರೆ ನನಗೆ ಸ್ವಲ್ಪ ಅಲರ್ಜಿ. ಎಲ್ಲೋ ಅಪರೂಪಕ್ಕೆ ಒಳ್ಳೇ ಫಿಲ್ಮ್ ಬಂದ್ರೆ ಹೋಗೋಣ ಅನ್ಸತ್ತೆ. ಇತ್ತೀಚೆಗಂತೂ ಯಾವ್ದಾದ್ರು ಒಂದು ಫಿಲ್ಮ್ ಹಿಟ್ ಆದ್ರೆ ಅದೇ ರೀತಿ ಇರುವ (ಕಥೆ, ಸಂಗೀತ, ಸಾಹಿತ್ಯ ಏಲ್ಲಾ ಆಲ್ಮೋಸ್ಟ್ ಕಾಪಿ) ಫಿಲ್ಮ್ ಗಳು ಸಾಲಗಿ ಬರುತ್ತದೆ. ಯಾವ್ದಾದ್ರು ಡಮ್ ಅಂದ್ರೆ ಅಲ್ಲಿಗೆ ಆ ಸೀರೀಸ್ ಸ್ಟಾಪ್ . ಮಿತಿಮೀರಿದ ಕ್ರೌರ್ಯ್ಯ, ಕಾಮ, ಅರ್ಥವಿಲ್ಲದ ಹಾಸ್ಯ, ಮನಸಿಗನಿಸಿದ ಸಾಹಿತ್ಯವೆಲ್ಲಾ ಜಾಸ್ತಿಯಾಗಿದೆ. ಸಂಗೀತವಂತೂ ಕೇಳಲಸಾದ್ಯ. ಅರವತ್ತು-ಏಪ್ಪತ್ತರ ಹಾಡಿನ(ಅದ್ರಲ್ಲೂ ಪಾಪ್ ಮ್ಯೂಸಿಕ್ ಕಾಪಿ ಮಾಡೋದು ಜಾಸ್ತಿ) ಒಂದು ತುಣುಕನ್ನು ತೆಗೆದುಕೊಂಡು ಸ್ವಲ್ಪ ಬದಲಾಯಿಸಿದರೆ ಆಯ್ತು. ಈಗ ಯಾರು ಬೇಕಾದ್ರು ನಿರ್ದೇಶಕರಾಗಬಹುದು. ಒಂದೆರಡು ಬೇರೆ ಭಾಷೆ ಅಥವಾ ಅದೇ ಭಾಷೆಯ ಫಿಲ್ಮ್ ನೋಡಿ ಅಲ್ಲಿಂದ ಇಲ್ಲಿಂದ ತಂದು ಹಾಕಿದ್ರೆ ಆಯ್ತು. ಇವುಗಳ ಮದ್ಯೆ ಅಲ್ಲಿ ಇಲ್ಲಿ ಒಂದೆರಡು ಒಳ್ಳೇ ಫಿಲ್ಮ್ ಗಳು ಬರುತ್ತದೆ.

ಮೊನ್ನೆಯಷ್ಟೇ ರಾಘು ಒಂದು ಸಿ.ಡಿ ತಂದುಕೊಟ್ಟಿದ್ದ. ಯಾವ ಫಿಲ್ಮ್ ಅಂತ ಕೇಳಿದ್ದೆ. "ಎ ವೆಡ್ನೆಸ್ ಡೇ" ಅಂದ. ಯಾವ ಭಾಷೆದು, ಇಂಗ್ಲೀಷಿಂದಾ ಅಂದೆ. ಅದಕ್ಕೆ ಅಲ್ಲ ಹಿಂದಿದು, ಚೆನ್ನಾಗಿದೆ ಅಂದ. ಆಯ್ತು ನೋಡೋಣ ಅಂತ ಸುಮ್ಮನಾದ. ಭಾನುವಾರ ಸ್ವಲ್ಪ ಫ್ರೀ ಇದ್ದಿದ್ರಿಂದ ಸ್ವಲ್ಪ ನೋಡೋಣ, ಚೆನ್ನಾಗಿದ್ರೆ ಫುಲ್ ನೋಡಿದ್ರಾಯ್ತು ಅಂತ ಹಾಕಿದೆ. ಫಿಲ್ಮ್ ಫುಲ್ ಮುಗಿಯೋತನಕ ಮೇಲೇಳಲಿಲ್ಲ. ಫಿಲ್ಮ್ ತುಂಬಾ ಚೆನ್ನಾಗಿದೆ. ಹಿರೋ ಹಿರೋಯಿನ್ನು ಮರ ಸುತ್ತೋ ಹಾಡುಗಳಿಲ್ಲ. ಅನಗತ್ಯ ಸಂಬಾಷಣೆಯಿಲ್ಲ. ಹಾಸ್ಯಕ್ಕಾಗಿಯೇ ಬಳಸಿಕೊಂಡ ವ್ಯಕ್ತಿಗಳಿಲ್ಲ. ಫಿಲ್ಮ್ ನ ಕೊನೆಯ ತನಕ ಯಾರು ಹಿರೋ ಅನ್ನುವ ಪ್ರಶ್ನೆ ಕಾಡತ್ತೆ. ವಿಲನ್ ಯಾಕೆ ಹಾಗೆ ಮಾಡ್ತಾಯಿದ್ದಾನೆ ಅನ್ನೋದು ಮನಸ್ಸಲ್ಲಿ ಕಾಡತ್ತೆ.

ನಿರಜ್ ಪಾಂಡೇಯವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಇತ್ತೀಚಿನ ದಿನಗಳಲ್ಲಿ ಬಂದ zತ್ತಮ ಚಿತ್ರವೆನ್ನಬಹುದು. ನಾಸಿರುದ್ದೀನ್ ಶಾ ಮತ್ತು ಅನುಪಮ್ ಖೇರ್ ಅವರ ಅಭಿನಯವಿರುವ ಚಿತ್ರದ ಸಾರಾಂಶ ಭಯೋತ್ಪಾದನೆಗೆ ಸಾಮಾನ್ಯ ವ್ಯಕ್ತಿಯ ಸೇಡು ಅಥವಾ ಪ್ರತಿಕ್ರಿಯೆಯನ್ನೊಳಗೊಂಡಿದೆ. ನಿಮಗೆ ಬಿಡುವಾದಾಗ ಒಮ್ಮೆ ನೋಡಿ. ಹಾಂ..ಗೆಳೆಯ ರವೀಂದ್ರ "ಮುಂಬೈ ಮೇರಿ ಜಾನ್" ಫಿಲ್ಮ್ ಬಗ್ಗೆ ಹೇಳಿದ್ದ. ಅದನ್ನು ನೋಡಬೇಕು. ನಿವೇನಾದ್ರು ನೋಡಿದ್ರೆ ಹೇಗಿದೇ ಅಂತ ಹೇಳಿ.

ಒಳ್ಳೆಯವನು

ಒಂದು ಕ್ಷೇತ್ರದಲ್ಲಿ ವ್ಯಕ್ತಿ ಉನ್ನತ ಸ್ಥಾನಕ್ಕೇರಿದ ಹಾಗೆ ಆತನಿಗೆ ಬೇರೇ ಕ್ಷೇತ್ರದಲ್ಲಿ ಆಸಕ್ತಿ ಕಡಿಮೆಯಾಗುವುದು ಸಹಜ. ನಮ್ಮ ಸ್ಥಾನ ಜಾಸ್ತಿಯಾದ ಹಾಗೆ ಕೆಲಸವೂ ಮತ್ತು ಅದರ ಜೊತೆ ಉಚಿತವಾಗಿ ಬರುವ ಒತ್ತಡಗಳು ಹೆಚ್ಚು ಹೆಚ್ಚು. ತಮ್ಮ ಕಾರ್ಯ್ಯವ್ಯಾಪ್ತಿಯಲ್ಲಿ ಬರುವ ಕೆಲಸವನ್ನು ಮುಗಿಸುವುದರಲ್ಲಿಯೇ ದಿನದ ಹೆಚ್ಚಿನ ಸಮಯ ಕಳೆದುಹೋಗುತ್ತದೆ. ಅಲ್ಲಿ ಇಲ್ಲಿ ಅಪರೂಪಕ್ಕೊಬ್ಬರು ತಮ್ಮ ಕಾರ್ಯ್ಯಕ್ಷೇತ್ರದ ಜೊತೆ ಬೇರೆ ಕ್ಷೇತ್ರದಲ್ಲಿಯೂ ಬಾಗಿಯಾಗುವುದನ್ನು ಕಾಣುತ್ತೇವೆ. ಅಂತವರಲ್ಲಿ ಅಶೋಕ ಹೆಗಡೆ ಒಬ್ಬರು. ಕಳೆದ ಕೆಲವು ವರ್ಷಗಳಿಂದ ಅಶೋಕ ಹೆಗಡೆಯವರ ಬಗ್ಗೆ ಕೇಳಿದ್ದೆ. ಅವರ ಕಥೆಗಳನ್ನು ಓದಿದ್ದೆ. ಅವರು ವಿಪ್ರೋನಲ್ಲಿದ್ದಾರೆ ಅಂತ ತಿಳಿದಿತ್ತು. ಆಮೇಲೆ ನಾನೂ ವಿಪ್ರೋ ಸೇರಿ ಮೇಲೆ ಒಂದೆರಡು ಬಾರಿ ಅವರನ್ನು ಬೇಟಿ ಮಾಡಲು ಹೋಗಿದ್ದೆ. ಅವರು ಬ್ಯುಸಿ ಇದ್ದಿದ್ರಿಂದ ಆಗಿರಲಿಲ್ಲ. ಆಮೇಲೆ ಅವರು ವಿಪ್ರೋ ಬಿಟ್ಟ ಮೇಲೆ ಬೇಟಿ ಮಾಡಲಾಗಲಿಲ್ಲ. ಒಮ್ಮೆ ಫೋನಾಯಿಸಿದಾಗ "ಒಳ್ಳೆಯವನು" ಪುಸ್ತಕದ ಬಗ್ಗೆ ಹೇಳಿದ್ದರು. ಇತ್ತೀಚೆಗಷ್ಟೆ ಅದನ್ನು ಓದಿದೆ.

ಅದರಲ್ಲಿ ಬರುವ ಒಂದೊಂದು ಕಥೆಯೂ ಬಹಳ ಸುಂದರವಾಗಿದೆ. ಕಥೆಯಲ್ಲಿ ಬರುವ ನಾಗರಾಜ, ವಿಲಾಸ, ಪುರುಷೋತ್ತಮ, ಸುಬ್ರಾಯ ಹೆಗಡೆಯವರು, ಹಮೀದ, ಜಲೀಲ, ಮನು ಮತ್ತು ಒಳ್ಳೆಯವನು ಮನಸ್ಸಲ್ಲಿ ಅಚ್ಚಳಿಯದೇ ನಿಲ್ಲುತ್ತಾರೆ. ನಿಮಗೆ ಬಿಡುವಾದಾಗ ಒಮ್ಮೆ ಓದಿ.