Friday, July 9, 2010

ಸಂಗ್ರಹ ವಿಜಯಕರ್ನಾಟಕದಲ್ಲಿ

"ನೀನು ಆಫೀಸ್ ನಲ್ಲಿ ಕೆಲ್ಸ ಮಾಡ್ತ್ಯ ಅಥ್ವಾ ಹಾಡು ಬರಿತ್ಯಾ" ಬೆಳ್ಳಂಬೆಳಗ್ಗೆ ಕಾರು ತೆಗಿತಾ ಇದ್ದಾಗ ಮನೆಯ ಓನರ್ ಶ್ರೀಧರಣ್ಣ ಕೇಳಿದ ಪ್ರಶ್ನೆ. ಒಮ್ಮೆ ನನ್ನ ಹುಬ್ಬು ಮೇಲೆ ಹೋಗಿ ಬಂತು. "ಯಾಕೆ" ಅಂತ ನಗಾಡುತ್ತಾ ಕೇಳಿದೆ. ಅದಕ್ಕೆ "ನಿನ್ ಹೆಸ್ರು ಇವತ್ತು ವಿಜಯ ಕರ್ನಾಟಕದಲ್ಲಿ ಬೈಂದು" ಅಂದ. ಒಂದ್ಸಲ ಆಶ್ಚರ್ಯ ಮತ್ತು ಸ್ವಲ್ಪ ಭಯನೂ ಆಯ್ತು. ಇದೇನಪ್ಪಾ ನನ್ ಹೆಸ್ರು ವಿಜಯಕರ್ನಾಟಕ ಪೇಪರ್ ನಲ್ಲಿ ಅಂತ. ಅಷ್ಟೊತ್ತಿಗೆ ಶ್ರೀಧರಣ್ಣನ ಹೆಂಡತಿ ರಾಧಕ್ಕ "ನೀನು ಹಾಡು ಬರಿತ್ಯಾ" ಅಂದಾಗ ಇನ್ನೂ ಕನ್ಫ್ಯೂಸ್.. ಕೊನೆಗೆ ಗೊತ್ತಾಯ್ತು. ನಾನು ಬರಿತಾಯಿರೋ "ನಮ್ಮ ಸಂಗ್ರಹ" ಬ್ಲಾಗ್ ಬಗ್ಗೆ ವಿಜಯಕರ್ನಾಟಕದ ಲವಲvk ಯಲ್ಲಿ ಬಂದಿತ್ತು.

ಉತ್ತಮ ಸಾಹಿತ್ಯ/ಉತ್ತಮ ಸಂಗೀತ ಇರೋ ಹಾಡುಗಳೆಂದ್ರೆ ನನಗೆ ತುಂಬಾ ಇಷ್ಟ. ಹಾಗೆ ಇಷ್ಟವಾಗೋ ಹಾಡುಗಳ ಸಾಹಿತ್ಯ ಮಾತ್ರ ನೆನ್ಪಲ್ಲಿ ಇರೊಲ್ಲ. ಮನ್ಸಿಗೆ ತೋಚಿದ್ದನ್ನೆಲ್ಲಾ ಆ ಹಾಡಿಗೆ ತಕ್ಕ ಹಾಗೆ ಸೇರಿಸಿ ಹಾಡ್ತಾಯಿರ್ತೀನಿ. ಜಯಶ್ರೀ ನನ್ನ ಸಾಹಿತ್ಯ ಕೇಳಿ ಯಾವಾಗ್ಲು ನಗ್ತಾ ಇದ್ಲು. ಕೊನೆಗೆ ಒಂದು ದಿನ ಮನ್ಸಿಗೆ ಬಂದಿದ್ದು ನಾನ್ಯಾಕೆ ಇಷ್ಟವಾಗೋ ಹಾಡುಗಳನ್ನು ಒಂದು ಬ್ಲಾಗ್ ನಲ್ಲಿ ಬರೀಬಾರ್ದು ಅಂತ. ಹೇಗೂ ನನ್ನ ಹತ್ತಿರ ಒಳ್ಳೊಳ್ಳೆ ಹಾಡುಗಳು ಇದ್ದವು. ಅದನ್ನ ಕೇಳುತ್ತಾ ಸಾಹಿತ್ಯ ಬರೆದರಾಯಿತು. ಇಂಟರ್ನೆಟ್ ನಲ್ಲಿ ಹುಡುಕಿದ್ರೂ ಸಿಗತ್ತೆ, ಸಾಹಿತ್ಯ ರಚೆನಕಾರರ ಪುಸ್ತಕಗಳು ಸಿಗತ್ವೆ. ಅದನ್ನ ನೋಡಿ ಬರೀಬಹುದು. ಸಮಯ ಸಿಕ್ಕಾಗ/ಮನಸ್ಸಿಗೆ ಸಂತಸ/ಬೇಸರವಾದಾಗ ಒಮ್ಮೆ ಬ್ಲಾಗ್ ಗೆ ಭೇಟಿಯಿತ್ತು ಹಾಡುಗಳಲ್ಲಿ ಇರೋ ಸಾಹಿತ್ಯ ಓದ್ತಾಯಿದ್ರೆ ಎಲ್ಲಾ ನಾರ್ಮಲ್ ಮತ್ತು ಜೊತೆಗೆ ಮನ್ಸಿಗೆ ಉಲ್ಲಾಸ. ಬಿಡುವು ಸಿಕ್ಕಾಗ ಬರಿತಾಯಿದ್ದೆ. ಕೊನೆಗೆ ಇದರ ಜೊತೆ ವೀಡಿಯೋ ಇದ್ರೆ ನಾವು ವೀಡಿಯೋನ ನೋಡ್ತಾ ಹಾಡಬಹುದಲ್ಲ ಅನಿಸ್ತು. ಹಾಡಿಗೆ ವಿಡಿಯೋನ ಸೇರ್ಸಿದೆ. ಅದೆಷ್ಟೋ ಜನ ಇದನ್ನು ಬಂದು ಓದ್ತಾರೆ/ನೋಡ್ತಾರೆ. ಕೆಲವರು ಮೆಚ್ಚುಗೆಯ ಮಾತಾಡಿ ಹೋಗ್ತಾರೆ. ಇನ್ನು ಕೆಲವರು ತಮ್ಮ ಹತ್ತಿರ ಇರೋ ಹಾಡನ್ನು ನನಗೆ ಹಾಕಲು ಕೊಡ್ತಾರೆ.

ಇದೊಂದು ಕನ್ನಡಕ್ಕಾಗಿ ನನ್ನ ಸಣ್ಣ ಸೇವೆ. ಬೇರೆ ಯಾವ ಉದ್ದೇಶವೂ ಇಲ್ಲ. ಹಾಗಂತ ನಾನು ಯಾವ ಭಾಷೆಯನ್ನು ದ್ವೇಷಿಸಲ್ಲ. ನನ್ನ ಮಾತೃ ಭಾಷೆಯ ಬಗ್ಗೆ ಹೆಮ್ಮೆ. ನಾನು ನವಂಬರ್ ಕನ್ನಡಿಗನಲ್ಲ.

ಇಲ್ಲಿ ನಿಮ್ಮ ಹಾಡು ಇದ್ದು, ನಿಮಗೆ ಇಲ್ಲಿ ಇರೋದು ಇಷ್ಟವಿಲ್ಲದಿದ್ದರೆ ಖಂಡಿತಾ ಹೇಳಿ. ತೆಗೆಯುತ್ತೇನೆ.

ನಮಸ್ಕಾರಗಳು


Online link: http://www.vijaykarnatakaepaper.com/svww_zoomart.php?Artname=20100710l_002101010&ileft=52&itop=1053&zoomRatio=130&AN=20100710l_002101010

Blog: http://nammasangraha.blogspot.com

Wednesday, May 5, 2010

ಅಮ್ಮನಿಗಾಗಿ ಕೆಲವು ಹಾಡುಗಳು

Mother's Day ಹತ್ರ ಬಂತು. ಈಗ್ಲಾದ್ರು ಅಮ್ಮನ್ನ ನೆನ್ಪು (ಮರ್ತು ಹೋಗಿದ್ರೆ) ಮಾಡ್ಕೊಳ್ಳಿ...

ಅಮ್ಮನಿಗಾಗಿ ಕೆಲವು ಹಾಡುಗಳು - ಸಂಗ್ರಹದಲ್ಲಿ

Tuesday, February 2, 2010

ಹೊಸಾ ಗಾದೆ




ಅವ್ನಿಗೆ ಏನು ಗೊತ್ತು ಬದನೇಕಾಯಿ ಅನ್ನೋದು ಹಳೇ ಗಾದೆ...

ಅವ್ನಿಗೆ ಏನು ಗೊತ್ತು ಬಿ.ಟಿ ಬದನೇಕಾಯಿ ಅನ್ನೋದು ಹೊಸಾ ಗಾದೆ...





Sunday, December 13, 2009

ನಾನೇನಾಗಬೇಕು?

ನಾನೇನಾಗಬೇಕು?
ಪ್ರಶ್ನೆ ನನ್ನಲ್ಲಿ ಅನೇಕ ಸಲ ಹುಟ್ಟಿದೆ ಮತ್ತು ಉತ್ತರ ಸಿಗದೇ ಮತ್ತೆ ಮನಸ್ಸಿಂದ ಮರೆಯಾಗಿದೆ ಮತ್ತೆ ಹುಟ್ಟುತ್ತಲಿದೆ.

ನಿಮಲ್ಲಿಯೂ ಈ ಪ್ರಶ್ನೆ ಒಂದಲ್ಲಾ ಒಂದು ಸಾರಿ ಬಂದಿರೊತ್ತೆ. ಈ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿಲ್ಲಾ ಅಂದ್ರೆ ನಿಮಗೆ ಜೀವನದಲ್ಲಿ ಗುರಿಯೇಕೆ ಬೇಕು ಅಂತಿರತ್ತೆ ಅಥವಾ ಗುರಿಯೇನು ಎಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿರೊತ್ತೆ.



ಹೌದು ನಾನೇನಾಗಬೇಕು????

ಮನಸ್ಸಲ್ಲಿ ಎನೇನೋ ಹೋಯ್ದಾಟ ನಡಿತಾಯಿರೊತ್ತೆ. ಇತ್ತೀಚೆಗಷ್ಟೆ ವಿಜಯಕರ್ನಾಟಕದ ಲವಲವಿಕೆಯಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಏನೇನು ಸಾಧಿಸಬೇಕು ಅಂತ ಬರೆದುಕೊಂಡು (ನೂರಕ್ಕೂ ಹೆಚ್ಚು) ಅವೆಲ್ಲವನ್ನು ಸಾಧಿಸಿದನಂತೆ!!!. ಅದರಿಂದ ಸ್ಪೂರ್ತಿ ಪಡೆದು ನಾನು ಬರೆದೆ. ಸಾಧಿಸೋಕೆ ಆಗತ್ತೋ ಇಲ್ಲವೋ.. ಆದ್ರೂ ಬರೆದೆ...ಹದಿನೈದರಿಂದ ಇಪ್ಪತ್ತು ಗುರಿಗಳನ್ನು ಬರಿಯೋಕೆ ಸಾಧ್ಯವಾಯುತು ನೋಡಿ. ಆಮೇಲೆ ಏನು ಬರೆಯೋದು ಅಂತ ಗೊತ್ತಾಗ್ತಾಯಿಲ್ಲ. ನನ್ನ ಬಂಡವಾಳ ಏನೆಂದು ನನಗೇ ಗೊತ್ತಾಯಿತು :).... ನೀವು ಒಮ್ಮೆ ಪ್ರಯತ್ನಿಸಿ (ಇಷ್ಟರೊಳಗೆ ಪ್ರಯತ್ನ ಪಡದಿದ್ದರೆ)

ಈಗ ಬರೆದ ಗುರಿಯ ವಿಮರ್ಶೆ ಮಾಡ್ತಾಯಿದ್ದೀನಿ. ಸ್ವಲ್ಪವಾದರೂ ಗುರಿಯತ್ತ ಪ್ರಯತ್ನ ಮಾಡೋಣ ಅಂತ. ಅವ್ನು ಇದ್ನಂತೆ ಆಮೇಲೆ ಹೋದ್ನಂತೆ (ಮೇಲೆ) ಅನ್ನೋದು ಆಗೋದು ಬೇಡ.

Sunday, November 1, 2009

ಬದಲಾವಣೆ

ವರುಷ ಕ್ಷಣದಂತೆ ಕಳಿತಾಯಿದೆ. ನಿನ್ನೆ ಮೊನ್ನೆ ನೆಟ್ಟ ಬೀಜ, ಮೊಳಕೆಯೊಡೆದು ಹೊರ ಪ್ರಪಂಚಕ್ಕೆ ಬಂದು ಪರಿಸರಕ್ಕೆ ಹೊಂದಿಕೊಂಡು ಅಲ್ಲಿ ತನ್ನ ಅಸ್ತಿತ್ವವನ್ನು ಸಾರಿ ಮೇಲೇರುತ್ತಿದೆ. ನಿನ್ನೆ ಮೊನ್ನೆ ಬರಿ ಮೈಯಲ್ಲಿ ಓಡಾದುತ್ತಿದದ್ದ ಸಣ್ಣ ಹುಡುಗರೆಲ್ಲಾ ಇಂದು ಬೆಳೆದು ಉತ್ತಮ ಜೀವನ ಸಾಧಿಸುತ್ತಿದ್ದಾರೆ. ನನಗೆ ವಯಸ್ಸಾಗುತ್ತಿದೆ ಅಂತ ಅವರನ್ನು ನೋಡಿದಾಗ ನೆನಪಾಗತ್ತೆ. ಆದರೆ ಕೆಲವು ಕ್ಷಣಗಳಲ್ಲಿ ಎಲ್ಲ ಮರೆತುಹೋಗುತ್ತದೆ. ಆಗೊಮ್ಮೆ ಈಗೊಮ್ಮೆ ನಾನ್ಯಾರು ಅನ್ನೋ ಪ್ರಶ್ನೆ ಹುಟ್ಟತ್ತೆ. ನಾನೇನು ಮಾಡಬೇಕು, ನಾನೇನು ಮಾಡಿದ್ದೇನೆ, ನನ್ನ ಅಸ್ತಿತ್ವವೇನು ಅನ್ನೋ ಹತ್ತು ಹಲವಾರು ಉತ್ತರವಿಲ್ಲದ ಪ್ರಶ್ನೆಗಳು ಉದ್ಭವವಾಗೊತ್ತೆ. ಸ್ವಲ್ಪ ಹೊತ್ತು ಮನಸ್ಸು ದ್ವಂದ್ವದಲ್ಲಿರೊತ್ತೆ. ಆಮೇಲೆ ಯಥಾಸ್ತಿತಿ. ದಿನ ಕ್ಷಣದಂತೆ ಹೋಗತ್ತೆ.

ಆದರೆ ನನ್ನಲ್ಲಿ ಯಾವುದೇ ಬದಲಾವಣೆ ಇಲ್ಲ.

ಜಗಲಿಯಲ್ಲಿ ಅಜ್ಜಿ ಕುಳಿತು ಕವಳ ಹಾಕಿ ಏನನ್ನೋ ಯೋಚಿಸುತ್ತಿರುತ್ತಾಳೆ. ಪಕ್ಕದಲ್ಲಿ ನಾನು ಹೋಗಿ ಕುಳಿತು ಕವಳ ಹಾಕಿ ಕುಳಿತು ಯೋಚಿಸುತ್ತೇನೆ. ಆದರೆ ನನ್ನ ಯೋಚನೆಗಳಿಗೆ ಸರಿಯಾದ ಮಾರ್ಗವಿಲ್ಲ. ಯೋಚನೆಗಳು ಸಿಕ್ಕ ಸಿಕ್ಕೆಲ್ಲಾ ಕಡೆ ತುಂಬಿರುತ್ತವೆ. ಯಾವ ಯೋಚನೆ ಯಾವ ಕಡೆ ಎನ್ನೋದು ಇರೋದಿಲ್ಲ. ಯೊಚನೆಗಳು ಗಾಳಿಯಲ್ಲಿ ಲೀನವಾಗಿರುತ್ತವೆ. ಎಷ್ಟೋ ಹೊತ್ತು ಮೌನ. ಅಮ್ಮ ಕರೆದಾಗ ಎಚ್ಚರ, ವಾಸ್ತವ. ಮತ್ತೆ ಕೆಲ್ಲಸದಲ್ಲಿ ಮಗ್ನ. ಎಲ್ಲವೂ ಮರೆತುಹೋಗುತ್ತದೆ.

ಆದರೆ ನನ್ನಲ್ಲಿ ಯಾವುದೇ ಬದಲಾವಣೆ ಇಲ್ಲ.

ನಾನು ಬದಲಾಗಬೇಕು, ನನ್ನಲ್ಲಿ ಇರೋ ಪ್ರತಿಭೆ ಹೊರಗೆ ಬರಬೇಕು, ಹೊಸ ಹೊಸ ವಿಷಯಗಳ ಬಗ್ಗೆ ಆಸಕ್ತಿ ಬರಬೇಕು. ಮನಸ್ಸಲ್ಲಿ ಸಕಾರಾತ್ಮಕ ಯೋಚನೆಗಳು ಮಾತ್ರ ಬರಬೇಕು, ನಾನು ಬದಲಾಗಬೇಕು ಅನ್ನೋದು ಎಂದು ಬರೊತ್ತೆ ಅನ್ನೋದೆ ನನಗೇ ತಿಳಿದಿಲ್ಲ. ಅದು ನನ್ನಿಂದನೇ ಬರಬೇಕು ಅಂತ ತಿಳಿದಿದ್ದರೂ ಇನ್ನೊಬ್ಬರು ನನ್ನನ್ನು ಜಾಗೃತಗೊಳಿಸಲಿ ಅಂತ ಬಯಸುತ್ತೇನೆ. ಮನಸ್ಸಿಗೆ ಬೇಸರವಾದಾಗ ಒಂಟಿಯಾಗಿ ಒಂದು ಸುತ್ತು ಹಾಕಿ ಬರುತ್ತೇನೆ. ಮತ್ತೆ ಕೆಲಸದಲ್ಲಿ ಮಗ್ನನಾಗುತ್ತೇನೆ. ಮತ್ತದೇ ಬೇಸರ ಅದೇ ಕೆಲಸ ಅದೇ ಜೀವನ....

ಆದರೆ ನನ್ನಲ್ಲಿ ಯಾವುದೇ ಬದಲಾವಣೆ ಇಲ್ಲ.

Sunday, October 18, 2009

ಸಾಕು ಮತ್ತು ಬೇಕು

"ಸಾಕು..ಸಾಕು..ಎಲ್ಲವೂ ಸಾಕು. ಇನ್ನು ಯಾವುದರ ಸಹವಾಸನೂ ಬೇಡ" ಅಂತ ಹೇಳಿತು ಸಾಕು

"ಯಾಕೆ ಸಾಕು??? ಇನ್ನೂ ಬೇಕು. ನಾನು ಮೇಲೇರಬೇಕು. ನನ್ನನ್ನು ಎಲ್ಲರೂ ಗುರುತಿಸಬೇಕು. ನಾನು ಇನ್ನೂ ಮೇಲೇರಬೇಕು" ಅಂತ ಹೇಳಿತು ಬೇಕು.

"ಮೇಲೇರಿ ಏನನ್ನು ಸಾಧಿಸುತ್ತೀಯಾ? ನೀನು ಮೇಲೇರಿದಂತೆ ನಿನಗೆ ಸುಖ ಸಂತೋಷವೇನಾದರೂ ಜಾಸ್ತಿ ಸಿಗುತ್ತದೆಯೋ? ನಾಲ್ಕು ಜನ ನಿನ್ನನ್ನು ನೋಡಿ ಅಥವಾ ನಿನ್ನ ಸಾಧನೆ ನೋಡಿ ಹೊಗಳಿದರೆ ನಿನಗೆ ವಿಶೇಷವಾದ ಕೋಡು ಎನಾದರು ಬರುತ್ತದೆಯೋ? ಅದಕ್ಕೆ ನಾನು ಹೇಳಿದ್ದು ಸಾಕು ಅಂತ"

"ಜೀವನದಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು. ಅದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಸಿಗತ್ತೆ. ಯಾರೂ ನಡೆಯದ ಹಾದಿಯಲ್ಲಿ ನಾವು ಸಾಗಬೇಕು. ಅದಕ್ಕೆ ಬೇಕು ಅಂದಿದ್ದು"

"ನೆಮ್ಮದಿ ಬರೀ ಸಾಧನೆ ಮಾಡಿದರೆ ಮಾತ್ರ ಸಿಗತ್ತಾ? ಎಲ್ಲಾ ನಮ್ಮ ಮನಸ್ಸಿನ ಮೇಲೆ ಡಿಪೆಂಡು. ಬೇಕು ಅಂದಾಗ ಬೇಕುವಿನ ಜೊತೆ ಅಪಾರ ನಿರೀಕ್ಷೆ ಬರೊತ್ತೆ. ಅದರ ಜೊತೆ ನಿರಾಸೆನೂ ಇರತ್ತೆ. ಸುಮ್ಮನೆ ಮನ್ಸು ಹಾಳಾಗತ್ತೆ. ಇದೆಲ್ಲಾ ಬೇಡ. ನಿನ್ನನ್ನು ನೀನು ಅರಿ. ಎಲ್ಲಾ ನಿನ್ನೊಳಗೇ ಇದೆ. ಅದನ್ನು ನೋಡು. ಹೊರಗೆ ಎಲ್ಲಾ ಟೊಳ್ಳು. ನಿಜವಾದ ಸುಖ ಸಂತೋಷ ನಿನ್ನಲೇ ಇದೆ. ನಿನ್ನನ್ನು ನೀನು ಗೆಲ್ಲು. ಬೇರೆ ಎಲ್ಲಾ ಬಕ್ವಾಸ್...ಬಂಡಲ್. ಅದ್ಕೆ ನಾನು ಹೇಳ್ತಾಯಿರೋದು ಎಲ್ಲಾ ಸಾಕು ಅಂತ."

ಹೀಗೆ ಸಾಗಿತ್ತು ಸಾಕು ಮತ್ತು ಬೇಕು ನಡುವಿನ ಸಂಭಾಷಣೆ. ಇದಕ್ಕೆ ಕೊನೆಯಿರಲಿಲ್ಲ. ಕೆಲವೊಮ್ಮೆ ಸಾಕು ಗೆದ್ದರೆ ಮತ್ತೆ ಕೆಲವೊಮ್ಮೆ ಬೇಕು....

ಪರಿಸ್ಥಿತಿ

"ಹಬ್ಬ ಜೋರಾ?"

"ಏನಿಲ್ಲ..ಸಿಂಪಲ್ ಹಬ್ಬ" ನನ್ನ ಉತ್ತರ

"ಪಟಾಕಿ ಜೋರಾ?"

"ಏನಿಲ್ಲ.. ಬರೀ ಬಾಯಿ ಪಟಾಕಿ ಅಷ್ಟೇ" ನನ್ನ ಉತ್ತರ

"ಅದು ಯಾವ ಪಟಾಕಿ. ಎಷ್ಟು ರುಪಾಯಿ ಆಗತ್ತೆ ಅದಕ್ಕೆ???"

"!!@#!!!##" ನನ್ನ ಪರಿಸ್ಥಿತಿ.

~~~~~~~~~~~~~~~~~~~~~~~~~~~~~~~~~~~~~~~~~~

"ಹಬ್ಬಕ್ಕೆ ಊರಿಗೆ ಹೋಗ್ತಾಯಿದೀಯಾ?"

"ಹೂಂ. ಹೋಗ್ತಾಯಿದೀನಿ" ನನ್ನ ಉತ್ತರ

"ಬರ್ತಾ ನಮ್ಗೆಲ್ಲಾ ಏನ್ ತರ್ತೀಯಾ?"

"ಎಮ್ಮೆ ಸಗಣಿ ತರ್ತೀನಿ" ಅಂತ ತಮಾಷೆಯಿಂದ ನನ್ನ ಉತ್ತರ

"Bring 1 kg emme sagani for me" ಮಲೆಯಾಳಿ ಫ್ರೆಂಡ್ ರಿಕ್ವೆಷ್ಟು

"!!@#!!!##" ನನ್ನ ಪರಿಸ್ಥಿತಿ.