"ಬೇಗ ಏಳು, ಎದ್ದು ಸ್ನಾನ ಮಾಡು. ಅಪ್ಪ ಆಗ್ಲೇ ಪೂಜೆ ಶುರು ಮಾಡಿದ್ದ. ಗೋ ಪೂಜೆ ಮಾಡಕು, ಆಮೇಲೆ ಅಜ್ಜನ ಮನೆಗೆ ಹೋಗಕು" ಅಮ್ಮ ಕರೆದಾಗ ಯಾವಾಗ್ಲು ತಡವಾಗಿ ಏಳ್ತಾಯಿದ್ದ ನಾನು ಇಂದು ಮಾತ್ರ ದಿಗ್ಗನೆ ಎದ್ದಿದ್ದೆ. ಎದ್ದು ಬಡ ಬಡ ಸ್ನಾನ ಮಾಡೋದ್ರೊಳಗೆ ಅಪ್ಪ ಗೋಪೂಜೆ ಮಾಡೋಕೆ ಕೊಟ್ಟಿಗೆಗೆ ಬಂದಿದ್ದ. ನಾನು ಗೌತಮ ಮತ್ತು ಚಂಪ ಎಲ್ಲ ದನಕರುಗಳನ್ನು ನೋಡಿದ್ವಿ. ಎಲ್ಲ ಸಡಗರದಿಂದ ನಮ್ಮನ್ನು ನೋಡ್ತಾಯಿದ್ವು. ಅಬ್ಬಾ... ಈ ಸಲ ಚೆಂಡು ಹೂವಿನ ಬರಗಾಲ ನೋಡಿ. ನಮ್ಮ ಮನೇಲಿ ಇದ್ದ ಚೆಂಡು ಹೂವು ಸಾಕಾಗೊಲ್ಲ ಅಂತ ಹಿಂನ್ಸೋಡಿಗೆ ಹೋಗಿ ಕೊಯ್ಕೊಂಡು ಬಂದಿದ್ವಿ. ತಂದು ಸಂಜೆ ಎಲ್ಲಾ ಸುರಿದು ಹಾರ ಮಾಡಿ ಅದನ್ನು ನೇತು ಹಾಕಿದ್ವಿ. ಇದು ಗಂಗೆಗೆ, ಇದು ಗಂಗೆ ಮಗ್ಳಿಗೆ, ಇದು ಶುಂಟಿ ಎಮ್ಮೆಗೆ ಹೀಗೆ ಸಾಗಿತ್ತು ನಮ್ಮ ಹಾರದ ವಿಂಗಡಣೆ. ಬೆಳಿಗ್ಗೆ ಪೂಜೆ ಸಮಯದಲ್ಲಿ ಅದಲ್ಲೆ ದನಕರುಗಳ ಮುಡಿಲನ್ನೇರಿತ್ತು. ಗಂಗೆಗೆ ಈ ಸಲದ ಪೂಜೆ. ಅಪ್ಪ ಪೂಜೆ ಮಾಡ್ತಾಯಿದ್ರೆ ಗಂಗೆ ಆ ಕಡೆ ಈ ಕಡೆ ಮುಖ ಅಲ್ಲಾಡಿಸುತ್ತಾಯಿತ್ತು. ಅಮ್ಮ ಕುಂಕುಮ ಹಚ್ಚೋಕೆ ಹರಸಾಹಸ ಮಾಡಿದ್ಲು. ನಾನಂತು ನನ್ನ ಹೊಸ ಬಟ್ಟೆ ಗಲೀಜಾದರೆ ಕಷ್ಟ ಅಂತ ದೂರ ನಿಂತಿದ್ದೆ. ಅಮ್ಮ ಎಲ್ಲ ದನಕರು, ಎಮ್ಮೆಗಳಿಗೆ ಕುಂಕುಮ ಹಚಿದ್ಲು. ಮನೆ ಕೆಲಸದಾಳು ವಾಸು ಹೊಸ ಬಟ್ಟೆ ಹಾಕ್ಕೊಂಡು ಬಂದಿದ್ದ. ಅಪ್ಪ, ಅಮ್ಮ ಮತ್ತು ವಾಸು ಎಲ್ಲಾ ಗೋವುಗಳಿಗೆ ಹಾರ ಕಟ್ಟಿದ್ದರು. ಎಲ್ಲ ಮನೆಯವರಿಗಿಂತ ನಮ್ಮ ಮನೇಲಿ ಗೋಪೂಜೆ ಬೇಗ ಆಗಿತ್ತು.
"ಮನ್ಯಾಥ.. ಕು ಹೂ.. ವಿದ್ಯಾ ಕು ಹೂ" ಅಂತ ಅಮ್ಮ ಜೋರಾಗಿ ಪಕ್ಕದಮನೆ ಮಂಜುನಾಥಣ್ನನ್ನ ಕರೆದಿದ್ಲು. ಪಕ್ಕದ ಮನೇ ಅಂದ್ರೆ ಸುಮಾರು ದೂದ ಇತ್ತು. ಪಟ್ಟಣದ ತರ ಅಕ್ಕ ಪಕ್ಕ ಇಲ್ಲ. ನಮ್ಮ ಮನೆ ಒಂದು ಗುಡ್ಡದ ಮೇಲಿದ್ದರೆ ಪಕ್ಕದ ಮನೆ ಇನ್ನೊಂದು ಗುಡ್ಡದ ಮೇಲೆ. "ಗೋಪೂಜೆ ಮುಗತ್ತಾ? ಗೋವು ಬಿಡದಾ?" ಅಂತ ಅಮ್ಮ ಕೂಗಿ ಕೇಳ್ದಾಗ ವಿದ್ಯಕ್ಕ "ಐದ್ ನಿಮ್ಷ. ಇವು ಪೂಜೆ ಮಾಡ್ತಾಯಿದ್ದ" ಅಂತ ಕೂಗಿದ್ದಳು. ಅಪ್ಪ "ಅಚೇಮನೆ ಸುಬ್ಬಣ್ಣ ಯವಾಗ್ಲು ಲೇಟು. ಈ ಸಲನಾದ್ರು ಬೇಗ ಏಳ್ಲಾಗಿತ್ತು" ಅಂತ ಗೊಣಗುಟ್ಟಿದ್ದ. ಅಮ್ಮ ಅದ್ಕೆ "ಅವು ನಿಮ್ಮಂಗೆ ಗಡಿಬಿಡಿ ಮಾಡ್ತ್ವಲ್ಲೆ. ನಿದಾನ ಮಾಡ್ತ" ಅಂದಿದ್ಲು. ನಮ್ಗೂ ಆದಷ್ಟು ಬೇಗ ಮುಗ್ಸಿ ಅಜ್ಜನ ಮನೆಗೆ ಹೋಗೋ ತವಕ. ಐದು ನಿಮಿಷದಲ್ಲಿ ಮನ್ಯಾಥಣ್ಣ ರೆಡಿ ಅಂತ ಕೂಗಿದ್ದ. ನಮ್ಮ ಮನೆಯಿಂದ ಗೋವುಗಳೆಲ್ಲ ಹೊರಟಿದ್ವು. ಎಂದಿನಂತೆ ಇಂದು ಬ್ಯಾಣದ ಕಡೆ ಹೋಗದೆ ಊರ ಕಡೆ ಹೋಗಬೇಕಿತ್ತು. ಅಭ್ಯಾಸ ಬಲದಂತೆ ಮೇಲೆ ಹೋದರೆ ಕಷ್ಟ ಅಂತ ವಾಸು ಮೇಲ್ಗಡೆ ನಿಂತಿದ್ದ. ಅಪ್ಪ ಅಮ್ಮ ಗೋವನ್ನು ಬಿಟ್ಟಿದ್ದರು. ನಾವೆಲ್ಲ ಗೋವಿನ ಹಿಂದೆ ಹೆಜ್ಜೆ ಹಾಕಿದ್ವಿ. ಸ್ವಲ್ಪ ದೂರ ಹೋದ್ಮೇಲೆ ಮನ್ಯಾಥಣ್ಣನ ಮನೆ ಗೋವುಗಳೆಲ್ಲ ಸೇರಿದ್ವು. ಯಥಾಪ್ರಕಾರ ಸುಬ್ಬಣ್ಣ ಲೇಟು. ಏಷ್ಟ್ ಸಲ ಹೇಳಿದ್ರು ಅಷ್ಟೇ ಅಂತ ಅಪ್ಪ ಮತ್ತು ಮನ್ಯಾಥಣ್ಣ ಮಾತಾಡ್ಕೊಂಡ್ರು. ಮನ್ಯಾಥಣ್ಣನ ಅಮ್ಮ ಭಾಗೀರಥಕ್ಕ "ಎನ್ರೋ.. ಅಪ್ಪ ಹೊಸ ಬಟ್ಟೆ ತಂದ್ನಾ" ಅಂತ ನಮ್ಮನ್ನು ಕೇಳಿದ್ಲು. ನಾವೆಲ್ಲ ಫುಲ್ ಖುಷಿನಲ್ಲಿದ್ವಿ. ಅಂತೂ ಇಂತು ಸುಬ್ಬಣ್ಣ ಮನೆ ಗೋವೆಲ್ಲ ಹೊರಟ್ವು. ಈಶಜ್ಜನ ಮನೆ ಎತ್ತಿಗೆ ಈ ಸಲ ಭಾರೀ ಅಲಂಕಾರ. ಕೋಡು ತುಂಬೆಲ್ಲಾ ಹೂವು. ಹಿಂನ್ಸೋಡಿ ರವಿಯಣ್ಣ ಸಿಂಗಾರ ಮಾಡಿದ್ದ. ಎಲ್ಲಾ ಗುಡ್ಡಕ್ಕೆ ಹೋದ್ವಿ. ಅಲ್ಲಿ ದೇವ್ರಿಗೆ ಕಾಯಿ ಒಡೆದು ಗೋವನ್ನೆಲ್ಲಾ ಮೇಯಲು ಬಿಟ್ಟಿದ್ರು.
ಊರ ಯುವಕರಿಗೆಲ್ಲಾ ಗೊವಿನ ಮೇಲಿದ್ದ ಸರ ಕೀಳೋದು ಒಂದು ಚಟ. ಅದು ಯಾಕಾಗಿ ಬಂತೋ ಗೊತ್ತಿಲ್ಲ. ತಮ್ಮ ಸಾಮರ್ಥ್ಯ ತೋರಿಸ್ಕೋಬೇಕು ಅಂತಾನೋ ತಿಳಿದಿಲ್ಲ. ಸಿಂಗಾರಗೊಂಡ ಗೋವನ್ನು ಬೆರಿಸಿಕೊಂಡು ಹೋಗಿ, ಕುತ್ತಿಗೆಯಲ್ಲಿದ್ದ ಸರ ಕಿತ್ತುಕೊಂಡು ಬರಬೇಕು. ಎಷ್ಟೋ ಜನ ಸಗಣಿ ಮೇಲೆ ಬಿದ್ದು ಮೈಯೆಲ್ಲಾ ಕೊಳಕು ಮಾಡಿಕೊಂಡು ಬರಿಗೈನಲ್ಲಿ ಬಂದ್ರೆ ಇನ್ನು ಕೆಲವರು ಒಂದಿಷ್ಟು ಸರ ತರುತ್ತಿದ್ದರು. ನಾನಂತು ಇದರ ಉಸಾಬರಿ ಬೇಡ ಅಂತ ಹೋಗ್ತಾನೇ ಇರ್ಲಿಲ್ಲ. ಗೌತಮನಂತೂ ಚಾಲೆಂಜ್ ಹಾಕಿ ಓಡಿಹೋಗಿ ಒಂದಿಷ್ಟು ಸರ ಕಿತ್ತುಕೊಂಡು ಬರ್ತಾಯಿದ್ದ. ಊರ ಎಲ್ಲರೂ ಗುಡ್ಡದ ಮೇಲೆ ಕುಳಿತು, ಹೆಂಗಸರು ತಂದು ಅವಲಕ್ಕಿ, ಕಾಯಿತುರಿ ಎಲ್ಲಾ ಕುತ್ಗೊಂಡು ತಿಂತಾಯಿದ್ರು. ಒಂದಿಷ್ಟು ಹರಟೆ ನಡಿತಾಯಿತ್ತು. ಎಲ್ಲರೂ ಹಬ್ಬಕ್ಕೆ ನಮ್ಮ ಮನೆಗೆ ಬನ್ನಿ ಅಂತ ಕರಿತಾಯಿದ್ರು. ನಮ್ಗೆ ಇಲ್ಲಿ ಹಬ್ಬ ಮುಗಿದಿದ್ದೇ ತಡ ಸೀದಾ ಅಜ್ಜನ ಮನೆಗೆ ಓಡ್ತಾಯಿದ್ವಿ. ಅಣ್ಣ, ಭಾವಯ್ಯ, ಕೃಪೇಶ್ ಭಾವಯ್ಯ, ಗೋಪ್ಲ್ಯಾ, ಅತ್ತೆ ಮತ್ತು ಮಾವರನ್ನು ನೋಡೋಕೆ ಆದಷ್ಟು ಬೇಗ ಹೋಗ್ಬೇಕು ಅನ್ನೋದೆ ನಮ್ಮ ಗುರಿ. ಮತ್ತುಳಿದವರೆಲ್ಲ ಯಾವಾಗ್ಲು ಸಿಗಾರೆ. ಆದ್ರೆ ಇವ್ರೆಲ್ಲಾ ಸಿಗೋದು ಅಪರೂಪ. ಅಜ್ಜನ ಊರಿನ ಪರಮೇಶಣ್ಣ ನ ಮನೆಯಲ್ಲಿ ಗೋಪೂಜೆ ಸ್ವಲ್ಪ ಲೇಟು. ಹಾಗಾಗಿ ನಮಗೆ ನಮ್ಮ ಮನೆ ಮತ್ತು ಅಜ್ಜನ ಮನೆ ಗೋಪೂಜೆ ಎರಡು ಸಿಗ್ತಾಯಿತ್ತು.
ಎಂದಿನಂತೆ ಅಜ್ಜನ ಮನೆಯಲ್ಲಿ ಗೋವು ಪೂಜೆ ಮುಗಿಯುವ ಹಂತಕ್ಕೆ ಬಂದಿತ್ತು. ನಾವು ಫುಲ್ ಹೆಮ್ಮೆಯಿಂದ ನಮ್ಮೂರಲ್ಲಿ ಗೋಪೂಜೆ ಮುಗಿದು ಸುಮಾರು ಹೊತ್ತು ಆತು. ನಿಮ್ಮೂರಲ್ಲಿ ಯಾವಾಗ್ಲು ಲೇಟು ಅಂತ ನಗಾಡ್ತಯಿದ್ವಿ. ನಾವು ಹೋದ ಸ್ವಲ್ಪ ಹೊತ್ತಿಗೆ ಅಜ್ಜನ ಮನೆಯಿಂದ ಗೋವುಗಳು ಹೊರಟವು. ಶೇಷಗಿರಿಯಣ್ಣನ ಮನೆ ಹತ್ರ ಊರ ಎಲ್ಲರ ಮನೆಯ ಗೋವುಗಳು ಬಂದವು. ಎಲ್ಲಾ ಸೇರಿ ಗುಡ್ಡದ ಕಡೆ ಹೊರಟೆವು. ಅಲ್ಲಿ ಎಲ್ಲ ತಂದಿದ್ದ ಅವಲಕ್ಕಿ, ಅರಳಿಗೆ ಕಾಯಿ ತುರಿದು ಬೆಲ್ಲ ಸೇರಿಸಿ ಬಾಳೆ ಎಲೆಯಲ್ಲಿ ತಿನ್ನೋಕೆ ಏನು ಖುಷಿ ಗೊತ್ತಾ. ಅಲ್ಲಿ ಮತ್ತೆ ಹರಟೆ ನಂತರ ಅಜ್ಜನ ಮನೆಯತ್ತ ನಮ್ಮ ಪಯಣ. ಅಲ್ಲಿ ಎಲ್ಲರ ಜೊತೆ ಕುಳಿತು ಹಾಲುಂಡೆ ಪಾಯಸಕ್ಕೆ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿದ್ವಿ. ಇವ ಮಾಡಿದ ಉಂಡೆ ದೊಡ್ಡಕಿದ್ದು, ಇವ ಮಾಡಿದ್ದು ಸಣ್ನ ಅನ್ನೋ ತಮಾಷೆಯಲ್ಲಿ ಸಮಯ ಹೋಗಿದ್ದೆ ಗೊತ್ತಾಗ್ತ್ಲಿರಲಿಲ್ಲ. ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾ ಮಾತನಾಡುವ ಹೊತ್ತಿಗೆ ಊಟ ಸಿದ್ದವಾಗುತ್ತಿತ್ತು. ಸಂಜೆಯ ತನಕ ಅಲ್ಲೇ ಇದ್ದು ಮನೆಗೆ ವಾಪಾಸಾದ್ವಿ. ಮನೆಗೆ ಬರೋಕೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಮನೆಗೆ ಬಂದರೆ ಮತ್ತೆ ನಾವು ಮೂವರು. ಅಲ್ಲಾದರೆ ಎಷ್ಟು ಜನ ಇದ್ರು. ನಾಳೆ ನಮ್ಮ ಮನೆ ಹಬ್ಬಕ್ಕೆ ಎಲ್ಲಾ ಬರ್ತಾರೆ ಅಂತ ಅಪ್ಪ ಅಮ್ಮ ನಮ್ಮನ್ನು ಪುಸಲಾಯಿಸಿ ಕರ್ಕೊಂಡು ಹೋಗ್ತಾಯಿದ್ರು. ಮನೆಗೆ ಬಂದು ಹಬ್ಬ ಕಳಿಸಲು ಅಪ್ಪ ಹೋಗುತ್ತಿದ್ದ. ಅಪ್ಪನ ಜೊತೆ ನಾವು ಹಿಂದೆ. "ಹಬ್ಬ ಹಬ್ಬ ಮಲ್ಲಣ್ಣ, ಇಬ್ಬರಿಗೊಂದ್ ಹೋಳಿಗೆ. ಹಬ್ಬದ ಮರ್ದಿನ ರಾಗಿ ರಬ್ಬಳಿಗೆ" ಅಂತ ಅಪ್ಪ ಹೇಳ್ತಾಯಿದ್ರೆ ನಾವು ದ್ವನಿಗೂಡಿಸ್ತಾಯಿದ್ವಿ. ಹಬ್ಬ ಕಳೆದು ಹೋಗಿದ್ದೆ ಗೊತ್ತಾಗ್ತಾಯಿರಲಿಲ್ಲ. ಪ್ರತಿ ದಿನ ಈ ರೀತಿ ಹಬ್ಬ ಇದ್ದಿದ್ರೆ ಎಷ್ಟು ಚೆಂದ ಅನಿಸ್ತಾಯಿತ್ತು.
"ಏಳ್ರಿ, ಸ್ನಾನಕ್ಕೆ ಹೋಗಿ, ಘಂಟೆ ಹನ್ನೊಂದಾಯ್ತು" ಅಂತ ಹೆಂಡ್ತಿ ಕರೆದಾಗಲೇ ನಾನು ಮತ್ತೆ ವಾಪಾಸಾಗಿದ್ದು. ಅಲ್ಲಿಯತನಕ ನನ್ನ ಮನಸ್ಸು ಸುಮಾರು ಹದಿನೈದು ಇಪ್ಪತ್ತು ವರ್ಷದ ಹಿಂದೆ ಆಚರಿಸುತ್ತಿದ್ದ ಹಬ್ಬಕ್ಕೆ ನಾನು ಹೋಗಿತ್ತು. ವಾಸ್ತವಕ್ಕೆ ಬಂದ ಮೇಲೆ ಹಿಂದೆ ಮತ್ತು ಇಂದು ನೆನೆದಾಗ ಮನ್ಸು ಬೇಸರವಾಗಿತ್ತು. ಸುಮ್ನೆ ಒಮ್ಮೆ ಟಿ.ವಿ ಹಾಕಿದೆ. ಒಂದು ಚಾನಲ್ ನಲ್ಲಿ ಫಿಲ್ಮ್ ನಲ್ಲಿ ಬರೋ ಹೀರೋಗಳ (ಆದ್ರೆ ಬಹಳಷ್ಟು ಜನ ಇವ್ರೇ ನಿಜವಾದ ಹೀರೋಗಳು ಅಂತ ಮಾಡ್ಕೊಂಡಿರ್ತಾರೆ) ಇಂಟರ್ವ್ಯೂ ಬರ್ತಾಯಿತ್ತು. ಇನ್ನೊಂದ್ರಲ್ಲಿ ಅಡುಗೆ ಪ್ರೋಗ್ರಾಮ್. ಸ್ವಲ್ಪ ಹಕ್ಕಿ(ಅಕ್ಕಿ) ಹಾಕಿ, ಆಮೇಲೆ ಕೊತ್ತಮಿರಿ (ಕೊತ್ತಂಬರಿ), ಆಮೇಲೆ ಹಿಂಗ್ (ಇಂಗು) ಹಾಕಿ ಅಂತ ಹೇಳ್ಯಾಯಿದ್ರು. ಈ ಸಲ ಇವ್ರಿಗೆ ರಾಜ್ಯೋಸ್ತವ (ಹೆಚ್ನವ್ರು ಹೀಗೆ ಹೇಳೋದು) ಪ್ರಶಸ್ತಿ ಕೊಡಬೇಕಿತ್ತು.
ಚಿಕ್ಕವನಿದ್ದಾಗ ಆಚರಿಸುತ್ತಿದ್ದ ಹಬ್ಬ ಮತ್ತು ಇಂದಿನ ಹಬ್ಬ ನೆನೆದಾಗ ಯಾಕೋ ನೋವಾಯ್ತು. ಎತ್ತಣ ಮಾಮರ, ಎತ್ತಣ ಕೋಗಿಲೆ.
ದೀಪಾವಳಿಯ ಶುಭಾಶಯಗಳು. ಮನದ ಕತ್ತಲೆ ಕಳೆದು ಬೆಳಕು ಬರಲಿ.
3 comments:
nammoralli kooda habba almost heegene! odi tumba khushi aytu!
chennaagiddu barha..eega astu munche eladu, khoo heladu yaavudu ille!
-kodasra
ಬರಹ ತುಂಬಾ ಚೆನ್ನಾಗಿದೆ. ನಿಮಗೂ ದೀಪಾವಳಿಯ ಶುಭಾಶಯಗಳು.
Post a Comment