ಸುಮಾರು ಬೆಳಗ್ಗೆ ೮ ರ ಆಜುಬಾಜು. ಬೋರ್ಗೆರೆಯುವ ಮಳೆಯಲ್ಲಿ ದೇವೇಗೌಡ ಪೆಟ್ರೋಲ್ ಬಂಕ್ ಕಡೆ ಸಾಗುತ್ತಿತ್ತು ನನ್ನ ಕಾರು. ವೈಫರ್ ಯಥಾನುಶಕ್ತಿ ಸ್ಪೀಡ್ ನಲ್ಲಿ ಗಿರ್ ಅಂತ ತಿರುಗ್ತಾಯಿತ್ತು. ನಾಲ್ಕು ಅಡಿ ಮುಂದೆ ಏನಿದೆ ಅಂತ ಕಾಣಿಸುತ್ತಿರಲಿಲ್ಲ. ಸದ್ಯ ಟೂ ವೀಲರ್ಸ್ ಕಾಟ ಇರಲಿಲ್ಲ. ನಿಧಾನವಾಗಿ ಹೋಗ್ತಾಯಿದ್ದೆ. ಇನ್ನೇನು ದೇವೇಗೌಡ ಪೆಟ್ರೋಲ್ ಬಂಕ್ ಹತ್ರ ಬಂದ ತಕ್ಷಣ ಸಿಗ್ನಲ್ ನೋಡಿದೆ. ಗ್ರೀನ್ ಇತ್ತು. ಹಾಗೆ ಸ್ವಲ್ಪ ಮುಂದೆ ಬಂದ ತಕ್ಷಣ ಯೆಲ್ಲೋ ಸಿಗ್ನಲ್ ಬಂತು. ನಿಧಾನ ಮಾಡಿದರೆ ಸರ್ಕಲ್ ಮದ್ಯದಲ್ಲೆ ರೆಡ್ ಸಿಗ್ನಲ್ ಬರತ್ತೆ. ಸಿಗ್ನಲ್ ಜಂಪ್ ಮಾಡಿದ್ರೆ ಸುಮ್ನೆ ತಾಪತ್ರಯ. ಸ್ವಲ್ಪ ಜೋರಾಗಿ ಸರ್ಕಲ್ ಕ್ರಾಸ್ ಮಾಡೋಣ ಅಂತ ಆಕ್ಸಿಲೆಟರ್ ಒತ್ತಿದೆ.
ನಲವತ್ತರ ಸ್ಪೀಡ್ ನಲ್ಲಿ ಇದ್ದ ಕಾರು ಒಮ್ಮೆಲೆ ದೇವರು ಮೈಮೇಲೆ ಬಂದಂತೆ ಜೋರಾಗೀ ಹೋಂಕರಿಸುತ್ತಾ ಹೊರಡ್ತು. ಸುಯ್ಯ್ ಅಂತ ಹೊರಟ ನನಗೆ ಸ್ವಲ್ಪ ಮುಂದೆ ಹೋಗುತ್ತಿದ್ದ ಆಟೋ ಕಣ್ಣಿಗೆ ಕಾಣಿಸ್ಲಿಲ್ಲ. ಪಾಪ ಆಟೋ ಡ್ರೈವರ್ ಗ್ರಹಚಾರ, ಆಟೋ ದಾಟೀ ಹೋಗೋವಾಗ ಮದ್ಯೆ ಇದ್ದ ಒಂದು ಸಣ್ಣ ಹೊಂಡದ ಆಳವನ್ನು ಪರೀಕ್ಷೆ ಮಾಡಿತ್ತು ಕಾರಿನ ಎಡಬಾಗದ ಟೈರುಗಳು. ದೊಪ್ಪಂತೆ ಆಟೋ ಮೇಲೇ ನೀರು ಬಿತ್ತು. ಏನಾಗತ್ತೆ ಅಂತ ನೋಡೋದ್ರೊಳಗೆ ಆಟೋ ಡ್ರವರ್ ಮತ್ತು ಹಿಂದೆ ಕುಳಿತಿದ್ದವರು ಸಂಪೂರ್ಣ ತೋಯ್ದಿದ್ದರು. ತಕ್ಷಣ ವಾರೆಗಣ್ಣಿಂದ ಆಟೋ ನೋಡಿದೆ. ಏಕಾಏಕಿ ದೊಡ್ಡ ಟ್ಯಾಂಕಿನ ನೀರು ಡ್ರೈವರ್ ಮೇಲೆ ಬಿದ್ದಿತ್ತು. ಹಿಂದೆ ಕುಳಿತಿದ್ದವರು ತೋಯ್ದಿದ್ದರು. ಡ್ರೈವರ್ ರಕ್ತ ಕೊತ ಕೊತ ಕುದಿತಾಯಿತ್ತು ಅನ್ಸತ್ತೆ. ಬಿದ್ದ ನೀರು ತಕ್ಷಣ ಆವಿಯಾಗುತ್ತಿತ್ತು. ಬಿಸಿಯಾದ ದೋಸೆ ಕಾವಲಿಗೆ ನೀರು ಹಾಕಿದಾಗ ಸುಯ್ಯ್ ಅಂತ ಶಬ್ದ ಮಾಡುತ್ತಾ ಆವಿಯಾಗುತ್ತದೆಯಲ್ಲ ಹಾಗೆ ಡ್ರೈವರ್ ಮೇಲೆ ಬಿದ್ದ ನೀರು ಆವಿಯಾಯ್ತು ಅನ್ಸತ್ತೆ. ಸದ್ಯ ಮಳೆ ಜೋರಾಗಿದ್ದರಿಂದ ಮತ್ತು ಕಾರಿನ ಗ್ಲಾಸುಗಳು ಮುಚ್ಚಿದ್ದರಿಂದ ನನಗೆ ಶಬ್ದ ಗೊತ್ತಾಗಲಿಲ್ಲ. ಆದರೆ ಡ್ರೈವರ್ ನ ರೌದ್ರಾವತಾರದ ದರ್ಶನವಾಯ್ತು. ಅಯ್ಯೋ, ಏನಪ್ಪ ಮಾಡ್ಲಿ ಈಗ ಅಂತೆ ಪೇಚಾಡಿದೆ. ಇನ್ನೂ ಸ್ಪೀಡಾಗಿ ರೈಟ್ ಗೆ ತಗೊಂಡು ಬಸ್ ನ ಓವರ್ ಟೇಕ್ ಮಾಡಿ ಮುಂದೆ ಹೋದೇ. ಯೋ.. ಯೋ... ಅಂತ ಕಿರುಚುತ್ತಾ ಆಟೋ ಡ್ರೈವರ್ ಲೆಫ್ಟ್ ಸೈಡಿಂದ ನುಗ್ಗಿ ಬಂದೇ ಬಿಟ್ಟ. ಏನೂ ಆಗದೇ ಇದ್ದವನ ತರ ಸುಮ್ನೆ ರಸ್ತೆ ನೋಡ್ತಾ ಡ್ರೈವ್ ಮಾಡ್ತಾಯಿದ್ದೆ. ಆಟೋ ಡ್ರೈವರ್ ಆಗ್ಲೇ ಸಹಸ್ರನಾಮ ಮುಗಿಸುವ ಹಂತಕ್ಕೆ ಬಂದಿದ್ದ. ಅಪ್ಪಿತಪ್ಪಿ ಎಡಬಾಗಕ್ಕೆ ನೋಡ್ಲೇ ಇಲ್ಲ. ಅವನ ಸಹಸ್ರನಾಮ ಕಿವಿಗೆ ಬೀಳೋದು ಬೇಡ ಅಂತ ಜೋರಾಗಿ ಎಫ್.ಎಮ್ ರೇಡಿಯೋ ತಿರುಗಿಸಿದ್ದೆ. ಒಳ್ಳೇ ಡ್ರೈವರ್ ಅಂತ ಅನ್ಸತ್ತೆ ಅಥವಾ ಅವ್ನಿಗೆ ಬರೀ ಸಹಸ್ರನಾಮದ ಶಬ್ದಕೋಶವಿತ್ತು ಅನ್ಸತ್ತೆ. ಬೇರೆ ಏನು ಹೇಳದೇ ಸುಮ್ನಾಗಿಬಿಟ್ಟ. ನಾನೋ ಕುತ್ತಿಗೆ ಉಳಿಕಿದಾಗ ಹೇಗೆ ನಾವು ಒಂದೇ ಡೈರಕ್ಷನ್ ನಲ್ಲಿ ನೋಡ್ತೇವೋ ಹಾಗೆ ರಸ್ತೆ ನೋಡ್ತಾಯಿದ್ದೆ. ಪಾಪ ಡ್ರೈವರ್, ಕೋಣನ ಮುಂದೆ ಕಿನ್ನರಿ ಬಾರ್ಸಿದ್ರೆ ಪ್ರಯೋಜನ ಇಲ್ಲ ಅಂತ ಭಾವಿಸಿ ಲೆಫ್ಟ್ ಸೈಡಿಗೆ ರೈಟ್ ಹೇಳ್ದ. ನಾನು ಬದುಕಿದೆಯಾ ಬಡಜೀವವೇ ಅಂತ ಮುಂದೆ ಹೋದೆ. ಪಾಪ ಡ್ರೈವರ್ ಆ ಚಳಿಯಲ್ಲಿ ನಡುಗುತ್ತಾ ಆಟೋ ಓಡಿಸಿದ್ದು ನೋಡಿ ಬೇಜಾರಾಯ್ತು. ನಾನು ಕಾರು ನಿಲ್ಸಿ ತಪ್ಪಾಯ್ತು ಗುರು ಅಂತ ಕ್ಷಮೆ ಕೇಳಿದ್ರೆ ಅವನ ಆರ್ಭಟ ಇನ್ನೂ ಹೆಚ್ಚಾಗುತಿತ್ತೇನೋ. ಸಪೋರ್ಟ್ ಗೆ ಒಂದಿಷ್ಟು ಆಟೋಗಳು ಬರ್ತಿದ್ವು. ಎಲ್ಲಾ ಸೇರಿ ನನಗೆ ಕಡುಬು ಕೊಟ್ರೂ ಕೊಡ್ತಿದ್ರು. ಅದ್ಕೆ ನಾನು ಮನ್ಸಲ್ಲಿ ಸಾರಿ ಅಂತ ಹೇಳಿ ಅವನ ಕಡೆ ನೋಡ್ಲೇ ಇಲ್ಲ.
ಹತ್ತು ವರ್ಷದ ಹಿಂದೆ ರಾಜಾಜಿನಗರದ ಹತ್ರ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ನನ್ನ ಫ್ರೆಂಡ್ ಜೊತೆ ಬೈಕ್ ನಲ್ಲಿ ಹೋಗ್ತಾಯಿದ್ದೆ. ಆಗಷ್ಟೆ ಮಳೆ ಬಂದು ಹೋಗಿತ್ತು. ಸಣ್ಣಕ್ಕೆ ಜುಮುರು ಇತ್ತು. ಒಳ್ಳೇ ವಾತಾವರಣ. ನನ್ನ ಫ್ರೆಂಡೋ ಜೋರಾಗಿ ಬೈಕ್ ಓಡಿಸ್ತಾಯಿದ್ದ. ಮುಂದೆ ಹೋಗ್ತಾಯಿದ್ದ ಸ್ವರಾಜ್ ಮಜ್ದಾ ನ ಸೈಡ್ ಹೊಡಿಬೇಕು ಅಂತ ಇನ್ನೂ ಸ್ಪೀಡ್ ಆಗಿ ಹೋದ. ಇಬ್ರ ಮದ್ಯೆ ಕಾಂಪಿಟೇಷನ್. ಇನ್ನೇನು ನಮ್ಮ ಬೈಕ್ ಸ್ವರಾಜ್ ಮಜ್ಡ ನ ಪಾಸ್ ಮಾಡಬೇಕು ಎಂದಾಗ ದೊಪ್ಪನೆ ನನ್ ಮೇಲೆ ಮೇಲಿಂದ ಯಾರೋ ನೀರು ಹಾಕಿದಂತಾಯ್ತು. ಏನಾಯ್ತು ಅಂತ ನನ್ ಫ್ರೆಂಡ್ ಕೇಳ್ದ. ಸ್ವರಾಜ್ ಮಜ್ದಾ ಹೋಗಾಯಿದ್ದ ಜಾಗದಲ್ಲಿ ನೀರು ನಿಂತಿತ್ತು. ಟೈರುಗಳು ಅವನ್ನು ನನಗೆ ಅಬಿಷೇಕ ಮಾಡಿದ್ವು. ಎಂತಾ ಸಿಟ್ಟು ಬಂದಿತ್ತು ನನಗೆ. ಜೋರಾಗಿ ಡ್ರೈವರ್ ಕಡೆ ಕೈ ಮಾಡಿ ಬೈಯ್ದೆ. ಅವ್ನು ನನ್ನ ಪರಿಸ್ಥಿತಿ ನೋಡಿ ನಗಾಡೋಕೆ ಪ್ರಾರಂಭ ಮಾಡ್ತ. ನನ್ನನ್ನ ಒಮ್ಮೆ ಗಮನಿಸ್ಕೊಂಡೆ. ನನಗೆ ನಗು ಬಂತು. ಜೋರಾಗಿ ನಾನು ನಕ್ಕೆ.
ಮಳೇ ನೀರೇ ಹಾಗೆ. ಅದರಲ್ಲಿ ನೆಂದ ಅನುಭವ ಮರೆಯೋಕೇ ಆಗೊಲ್ಲ. ಇಂದು ಕಾರನ್ನು ಮಳೆಯಲ್ಲಿ ನೆನಸಿ ಬಂದ ನನಗೆ ಊರ ನೆನಪಾಗಿತ್ತು. ಮನೆಯಿಂದ ಶಾಲೆ ಬಹಳ ದೂರವಿತ್ತು. ರಸ್ತೇನಲ್ಲೂ ಹೋಗಬಹುದಾಗಿತ್ತು. ಆದ್ರೆ ನಾವೆಲ್ಲಾ ಶಾರ್ಟ್ ಕಟ್ ನಲ್ಲಿ ಹೋಗ್ತಾಯಿದ್ದೆವು. ಅಂದ್ರೆ ಗದ್ದೆಯಲ್ಲಿ ಹೋದ್ರೆ ತುಂಬ ಹತ್ರ ಆಗ್ತಿತ್ತು. ಮದ್ಯೆ ಗದ್ದೆಗಳ ಸಾಲು. ಗದ್ದೆ ನೆಟ್ಟಿಗಿಂತ ಮುಂಚೆ ಮಳೆ ಬಂದರೆ ತುಂಬಾ ಚೆಂದ. ನಾವೆಲ್ಲಾ ಸಾಲಾಗಿ ಕೈ ಹಿಡಿದುಕೊಂಡು ನೀರನ್ನು ಕಾಲಲ್ಲಿ ತಳ್ತಾ ಹೋಗ್ತಿದ್ವಿ. ಆ ನೀರು ಸಣ್ಣ ಸಣ್ಣ ಅಲೆಯಾಗಿ ಮುಂದೆ ಮುಂದೆ ಹೋಗ್ತಾಯಿದ್ವು. ಅದರ ಹಿಂದೆ ನಾವು. ಮುಂದೆ ಯಾರಾದ್ರು ಹೋಗ್ತಾಯಿದ್ರೆ ಅವರ ಹತ್ರ ಸುಮ್ನೆ ಹೋಗಿ ಜೋರಾಗಿ ಒಂದ್ ಸಾರಿ ಹಾರ್ತಿದ್ದೆ. ನೀರೆಲ್ಲಾ ಪ್ರೋಕ್ಷಣ್ಯವಾಗ್ತಾಯಿತ್ತು. ನಾನು ಮುಂದೆ ಹೋಗ್ತಾಯಿದ್ರೆ ನಂಗೂ ಹಾಗೆ ಮಾಡ್ತಾಯಿದ್ರು. ಮಳೆಗಾಲ ಅಂದ್ರೆ ಅದೆಷ್ಟು ಸುಂದರ. ಹಿಂದೆಲ್ಲಾ ಈಗಿನ ಹಾಗೆ ಛತ್ರಿಗಳು ಕಡಿಮೆ. ಹೆಚ್ಚಿನವರು ಕಂಬಳಿಕೊಪ್ಪೆ ಹಕ್ಕೊಂಡು ಶಾಲೆಗೆ ಬರ್ತಾಯಿದ್ರು. ನಾನು ಛತ್ರಿ ತಗೊಂಡು ಹೋಗ್ತಾಯಿದ್ದೆ. ಒಂದೆರಡು ಸಲ ಕಂಬಳಿ ಕೊಪ್ಪೆ ಬೇಕು ಅಂತ ಹಟ ಮಾಡಿ ಹಾಕ್ಕೊಂಡು ಹೋಗಿದ್ದು ಇದೆ. ಹೊರಗೆ ಚಳಿಯಿದ್ದರೆ ಕಂಬಳಿ ಕೊಪ್ಪೆ ಹಾಕ್ಕೊಂಡು ಹೋದ್ರೆ ಏನು ಮಜಾ ಗೊತ್ತಾ. ಮೈಯೆಲ್ಲಾ ಬೆಚ್ಚಗಿರತ್ತೆ. ಅದೇ ಗದ್ದೇ ನೆಟ್ಟಿ ಪ್ರಾರಂಭ ಆದ್ರೆ ನಮ್ಗೆ ಶಾಲೆಗೆ ಹೋಗೋಕೆ ಕಷವಾಗ್ತಾಯಿತ್ತು. ಗದ್ದೆ ಹಾಳಿ ಸರಿ ಮಾಡಬೇಕು ಅಂತ ಮಣ್ಣೆಲ್ಲಾ ಹಾಕಿರ್ತಿದ್ರು. ಅದೂ ಒಣಗಲಿಕ್ಕೆ ವಾರವೇ ಬೇಕಾಗ್ತಿತ್ತು. ಆಗೆಲ್ಲಾ ರಸ್ತೆನೇ ಗತಿ. ದದ್ದೆ ಹಾಳಿ ಒಣಗಿದ ತಕ್ಷಣ ಮತ್ತೆ ಗದ್ದೆಗೆ ಶಿಫ್ಟು. ಆದ್ರೆ ಗದ್ದೆ ಹಾಳಿಯ ಮೇಲೆ ಜಾಗರೂಕವಾಗಿ ಹೋಗಬೇಕಾಗಿತ್ತು. ಎಲ್ಲೋ ನೋಡ್ತಾ ಹೋಗ್ತಿದ್ರೆ ಗದ್ದೆಗೆ ಬಿದ್ದು ಮೈಯೆಲ್ಲಾ ಕೆಸರಾಗುತ್ತಿತ್ತು. ಮನೆಯಿಂದ ಪ್ರತಿದಿನ ಅಮ್ಮ ಶಾಲೆಗೆ ಹೋಗೋವಾಗ ಮಳೇಲಿ ನೆನಿಬೇಡ, ಜ್ವರ ಬರತ್ತೆ ಅಂತೆಲ್ಲಾ ಹೇಳಿ ಕಳಿಸ್ತಾಯಿದ್ಲು. ಮನೆಯಿಂದ ಸ್ವಲ್ಪ ದೂರ ಬಂದು ಗದ್ದೆ ಸೇರಿದ ತಕ್ಷಣ ಅಮ್ಮ ಹೇಳಿದ್ದೆಲ್ಲಾ ಮರ್ತೇ ಹೋಗ್ತಿತ್ತು. ಶಾಲೆನಲ್ಲಿ
ಮೇಷ್ಟ್ರು ಯಾಕೆ ಫುಲ್ ನೆಂದ್ಕೊಂಡು ಬಂದಿದೀರ ಅಂತ ಕೇಳಿದ್ರೆ, ಜೋರು ಮಳೆ ಸಾರ್ ಅಂತ ರೀಲ್ ಬಿಡ್ತಾಯಿದ್ವಿ. ಆದ್ರೆ ನಾವೊಂದಿಷ್ಟು ಜನ ಮಾತ್ರ ಹೆಚ್ಚು ನೆಂದಿರ್ತಿದ್ವಿ. ಒಂದಷ್ಟು ದಿನ ಮೇಷ್ಟ್ರು ನಮ್ಗೆ ಹೇಳಿದ್ರು. ಆಮೇಲೆ ಸುಮ್ನಾಗ್ಬಿಟ್ರು. ಆದ್ರೆ ಮಳೆಯ ನೀರಿನ ಆಟದ ಸವಿ ಅನುಭವಿಸೋ ಯೋಗ ನನಗೆ ಹೆಚ್ಚು ದಿನ ಸಿಗಲಿಲ್ಲ. ಪ್ರಾಥಮಿಕ ಶಾಲೆ ಮಾತ್ರ ಊರಲ್ಲಿ ಮಾಡಿದ್ದು. ನಂತರ ಬಂದಿದ್ದು ಬೆಂದಕಾಳೂರಿಗೆ. ಹಾಗಾಗಿ ಅದೆಲ್ಲಾ ಮಿಸ್ ಆಯ್ತು. ಆಗೆಲ್ಲಾ ಎಷ್ಟ್ ನೀರಲ್ಲಿ ಆಡಿದ್ರೂ, ನೆಂದರೂ ಏನೂ ಆಗ್ತಾಯಿರಲ್ಲಿ. ಆದ್ರೆ ಇಲ್ಲಿ ಚೂರು ನೆಂದರೂ ಸಾಕು ಮರುದಿನ ರೋಗ ಎಂಟ್ರಿ ಕೊಟ್ಟಿರತ್ತೆ.
ಏನಾದ್ರು ನಮ್ಮ ಜೀವನದಲ್ಲಿ ರಿವೈಂಡ್ ಅಂತ ಇದ್ದಿದ್ರೆ ನಾನು ಮತ್ತೆ ಮತ್ತೆ ಮಳೆಗಾಲಕ್ಕೆ ಹೋಗ್ತಾಯಿದ್ನೇನೋ. ಖಂಡಿತಾ ಈ ಯಾಂತ್ರಿಕ ಬದುಕಿನತ್ತ ರಿವೈಂಡ್ ಮಾಡ್ತಾಯಿರಲ್ಲಿ.
10 comments:
ಯಜ್ನೇಶ್,
ಮಳೆಗಾಲದಲ್ಲಿ ಮಲೆನಾಡಿನ ಅನುಭವ ಮರೆಯಲು ಆಗದಂತಹದ್ದು. ಅದರಲ್ಲೂ ಮಲೆನಾಡಿಗರ ಬಾಲ್ಯ ಅಂದರೆ ಅದೊಂದು ಸುಂದರ ಚಿತ್ತಾರ.
ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
chanda baradde anna..
ತಪ್ಪಿಸಿಕೊಂಡರೂ ಪಾಪಪ್ರಜ್ಞೆ ಕಾಡುತ್ತಿರಬೇಕಲ್ಲವೇ...ಬರಹದ ಮೂಲಕ ಹೋಗಲಾಡಿಸಿಕೊಂಡಿದ್ದೀರಿ..ಬಿಡಿ.
Nice !
"ಆಗೆಲ್ಲಾ ಎಷ್ಟ್ ನೀರಲ್ಲಿ ಆಡಿದ್ರೂ, ನೆಂದರೂ ಏನೂ ಆಗ್ತಾಯಿರಲ್ಲಿ. ಆದ್ರೆ ಇಲ್ಲಿ ಚೂರು ನೆಂದರೂ ಸಾಕು ಮರುದಿನ ರೋಗ ಎಂಟ್ರಿ ಕೊಟ್ಟಿರತ್ತೆ."
ಹೌದು, ನಿಜ :(
ಟಿಪಿಕಲ್ ಬೆಂಗಳೂರಿಗ ಆಗಿ ಬಿಟಿದೆ ನೀನು!ಹಗಂತ ಇಳಿದು ಆಟೋ ಡ್ರೈವರ್‌ನ ಮಾತು ಆಡಿಸಿದ್ರು ಪರಿಸ್ಥಿತಿ ಕಷ್ಟ ಇತ್ತು ಬಿಡು! ಒಳ್ಳೆ ಬೆಂಗ್ಳೂರಪ್ಪ ಇದು...ಚೆಂದದ ಬರಹ..
-ಕೋಡ್ಸರ
Thank you all.
ಓದುತ್ತಿದ್ದಂತೆ ಹೀಗೆ..ಇದೇ.. ರೀತಿ ಮುಸ್ಸಂಜೆ ಮಳೆಯ ಅನುಭವ ನನಗೂ ಆಗಿದ್ದು ನೆನಪಾಯಿತು, ಮತ್ತೆ ಅದು ಕೂಡಾ, ದೇವೇಗೌಡ ಪೆಟ್ರೋಲ್ ಬಂಕ್ ಸಿಗ್ನಲ್ ದಾಟುತ್ತಿರಬೇಕಾದರೇ ಆಗಿದೆ!
ಆದರೆ ಆ ಆಟೋ ಚಾಲಕ ಅರ್ಥ ಮಾಡಿಕೊಂಡ, ಸನ್ನಿವೇಶದ ಅಸಹಾಯಕತೆಯನ್ನ.(ನನ್ನ ಪುಣ್ಯ!)
ಊರ ಮಳೆಗಾಲ ನಿಜಕ್ಕೂ ಸೊಗಸು........
Post a Comment