ವರುಷ ಕ್ಷಣದಂತೆ ಕಳಿತಾಯಿದೆ. ನಿನ್ನೆ ಮೊನ್ನೆ ನೆಟ್ಟ ಬೀಜ, ಮೊಳಕೆಯೊಡೆದು ಹೊರ ಪ್ರಪಂಚಕ್ಕೆ ಬಂದು ಪರಿಸರಕ್ಕೆ ಹೊಂದಿಕೊಂಡು ಅಲ್ಲಿ ತನ್ನ ಅಸ್ತಿತ್ವವನ್ನು ಸಾರಿ ಮೇಲೇರುತ್ತಿದೆ. ನಿನ್ನೆ ಮೊನ್ನೆ ಬರಿ ಮೈಯಲ್ಲಿ ಓಡಾದುತ್ತಿದದ್ದ ಸಣ್ಣ ಹುಡುಗರೆಲ್ಲಾ ಇಂದು ಬೆಳೆದು ಉತ್ತಮ ಜೀವನ ಸಾಧಿಸುತ್ತಿದ್ದಾರೆ. ನನಗೆ ವಯಸ್ಸಾಗುತ್ತಿದೆ ಅಂತ ಅವರನ್ನು ನೋಡಿದಾಗ ನೆನಪಾಗತ್ತೆ. ಆದರೆ ಕೆಲವು ಕ್ಷಣಗಳಲ್ಲಿ ಎಲ್ಲ ಮರೆತುಹೋಗುತ್ತದೆ. ಆಗೊಮ್ಮೆ ಈಗೊಮ್ಮೆ ನಾನ್ಯಾರು ಅನ್ನೋ ಪ್ರಶ್ನೆ ಹುಟ್ಟತ್ತೆ. ನಾನೇನು ಮಾಡಬೇಕು, ನಾನೇನು ಮಾಡಿದ್ದೇನೆ, ನನ್ನ ಅಸ್ತಿತ್ವವೇನು ಅನ್ನೋ ಹತ್ತು ಹಲವಾರು ಉತ್ತರವಿಲ್ಲದ ಪ್ರಶ್ನೆಗಳು ಉದ್ಭವವಾಗೊತ್ತೆ. ಸ್ವಲ್ಪ ಹೊತ್ತು ಮನಸ್ಸು ದ್ವಂದ್ವದಲ್ಲಿರೊತ್ತೆ. ಆಮೇಲೆ ಯಥಾಸ್ತಿತಿ. ದಿನ ಕ್ಷಣದಂತೆ ಹೋಗತ್ತೆ.
ಆದರೆ ನನ್ನಲ್ಲಿ ಯಾವುದೇ ಬದಲಾವಣೆ ಇಲ್ಲ.
ಜಗಲಿಯಲ್ಲಿ ಅಜ್ಜಿ ಕುಳಿತು ಕವಳ ಹಾಕಿ ಏನನ್ನೋ ಯೋಚಿಸುತ್ತಿರುತ್ತಾಳೆ. ಪಕ್ಕದಲ್ಲಿ ನಾನು ಹೋಗಿ ಕುಳಿತು ಕವಳ ಹಾಕಿ ಕುಳಿತು ಯೋಚಿಸುತ್ತೇನೆ. ಆದರೆ ನನ್ನ ಯೋಚನೆಗಳಿಗೆ ಸರಿಯಾದ ಮಾರ್ಗವಿಲ್ಲ. ಯೋಚನೆಗಳು ಸಿಕ್ಕ ಸಿಕ್ಕೆಲ್ಲಾ ಕಡೆ ತುಂಬಿರುತ್ತವೆ. ಯಾವ ಯೋಚನೆ ಯಾವ ಕಡೆ ಎನ್ನೋದು ಇರೋದಿಲ್ಲ. ಯೊಚನೆಗಳು ಗಾಳಿಯಲ್ಲಿ ಲೀನವಾಗಿರುತ್ತವೆ. ಎಷ್ಟೋ ಹೊತ್ತು ಮೌನ. ಅಮ್ಮ ಕರೆದಾಗ ಎಚ್ಚರ, ವಾಸ್ತವ. ಮತ್ತೆ ಕೆಲ್ಲಸದಲ್ಲಿ ಮಗ್ನ. ಎಲ್ಲವೂ ಮರೆತುಹೋಗುತ್ತದೆ.
ಆದರೆ ನನ್ನಲ್ಲಿ ಯಾವುದೇ ಬದಲಾವಣೆ ಇಲ್ಲ.
ನಾನು ಬದಲಾಗಬೇಕು, ನನ್ನಲ್ಲಿ ಇರೋ ಪ್ರತಿಭೆ ಹೊರಗೆ ಬರಬೇಕು, ಹೊಸ ಹೊಸ ವಿಷಯಗಳ ಬಗ್ಗೆ ಆಸಕ್ತಿ ಬರಬೇಕು. ಮನಸ್ಸಲ್ಲಿ ಸಕಾರಾತ್ಮಕ ಯೋಚನೆಗಳು ಮಾತ್ರ ಬರಬೇಕು, ನಾನು ಬದಲಾಗಬೇಕು ಅನ್ನೋದು ಎಂದು ಬರೊತ್ತೆ ಅನ್ನೋದೆ ನನಗೇ ತಿಳಿದಿಲ್ಲ. ಅದು ನನ್ನಿಂದನೇ ಬರಬೇಕು ಅಂತ ತಿಳಿದಿದ್ದರೂ ಇನ್ನೊಬ್ಬರು ನನ್ನನ್ನು ಜಾಗೃತಗೊಳಿಸಲಿ ಅಂತ ಬಯಸುತ್ತೇನೆ. ಮನಸ್ಸಿಗೆ ಬೇಸರವಾದಾಗ ಒಂಟಿಯಾಗಿ ಒಂದು ಸುತ್ತು ಹಾಕಿ ಬರುತ್ತೇನೆ. ಮತ್ತೆ ಕೆಲಸದಲ್ಲಿ ಮಗ್ನನಾಗುತ್ತೇನೆ. ಮತ್ತದೇ ಬೇಸರ ಅದೇ ಕೆಲಸ ಅದೇ ಜೀವನ....
ಆದರೆ ನನ್ನಲ್ಲಿ ಯಾವುದೇ ಬದಲಾವಣೆ ಇಲ್ಲ.
1 comment:
ನಾನು ಓದುತ್ತೇನೆ .. ಬರೆಯಬೇಕೆಂದು ಆಲೋಚಿಸುತ್ತೇನೆ .. ಹುಚ್ಚು ಹುಚ್ಚಾಗಿ ಏನೇನೊ ಗೀಚುತ್ತೇನೆ .. ಮತ್ತೆ ಮರೆಯುತ್ತೇನೆ ..
ನನ್ನಲ್ಲಿ ಯಾವುದೆ ಬದಲಾವಣೆ ಇಲ್ಲ :) :) :)
ಸುಪರ್ ಬರಹ ... ಇಷ್ಟಾ ಆತು .. ಬಹಳ ಅರ್ಥ ಗರ್ಭಿತವಾಗಿ ಇದ್ದು ..
Post a Comment