
Thursday, October 14, 2010
Monday, October 4, 2010
ಓಡಿ ಹೋದ ಪ್ರಸಂಗ
"ಅವನು ಓಡಿಹೋದ"
"ಹೌದಾ!!!.. ಸಾಲ ಜಾಸ್ತಿ ಮಾಡ್ಕೊಂಡಿರಬೇಕು,
ಏನೋ ಬಾನಗಡಿ ಮಾಡ್ಕೊಂಡಿರಬೇಕು,
ಜೀವನದಲ್ಲಿ ಬೇಸರ ಬಂದಿರಬೇಕು,
.............................................
.............................................
............................................."
"ಅವಳು ಓಡಿಹೋದ್ಲು"
"ಹೌದಾ!!! ಯಾರ ಜೊತೆ?"
Thursday, September 23, 2010
ಮೂರ್ಚೆ ಹೋಗೋ ಪ್ರಸಂಗಗಳು
ಘಟನೆ ಒಂದು
ಮಾವನ ಮನೆಗೆ ಹೋಗಿದ್ದೆ. ಅಲ್ಲಿ ಸಿಕ್ಕ ಪುರೋಹಿತರು ಮತ್ತು ನನ್ನ ನಡುವೆ ನಡೆದ ಸಂಭಾಷಣೆ
ಪುರೋಹಿತರುಃ "ನಾನು ನಿಮ್ಮನಿಗೆ ಸುಮಾರು 45 ವರ್ಷದ ಹಿಂದೆ ಹೋಗಿದ್ದಿ. ನಿಮ್ಮನೇಲಿ ಚಂಡಿ ಹೋಮ ಇತ್ತು. ಆಗ ನಿಂಗೆ ಎರ್ಡು ವರ್ಷ ಅನಿಸ್ತು. ಆವಾಗ್ಲೆ ನಿನ್ ಹಳೇ ಹೆಸ್ರು ಮಹೇಶ ಬದ್ಲು ಯಜ್ಞೇಶ್ ಅಂತ ಇಟ್ಟಿದ್ದು"
ನಾನುಃ "!@#$%... (ಹಂಗಾದ್ರೆ ನಂಗೀಗ 47 ವರ್ಷ!!!!..)"
ನಾನು ತಕ್ಷಣ ಮೂರ್ಚೆ ಹೋದೆ!!!
ಘಟನೆ ಎರ್ಡು
ಸಮಯವಾಗ್ತಾಯಿತ್ತು. ಪುರೋಹಿತರಿಗೆ ಆದಷ್ಟು ಬೇಗ ಕಾರ್ಯಕ್ರಮ ಮುಗಿಸಬೇಕು. ಕಾರ್ಯಕ್ರಮಕ್ಕೆ ಕುಳಿತವನು ನಾನು
ಪೂಜೆ ಬಾರೀ ಸ್ಪೀಡ್ ನಲ್ಲಿ ನಡಿತಾಯಿತ್ತು. ಪುರೋಹಿತರು ಯಾರು ಇಲ್ಲ ಅಂದ ತಕ್ಷಣ ಮಂತ್ರದ ಸಾಲು ಸಾಲನ್ನೆ ಹಾರಿಸುತ್ತಿದ್ದರು. ನಾನೋ ಪುರೋಹಿತ ಕುಟಂಬದಿಂದ ಬಂದವನು . ಪೂರ್ತಿ ಮಂತ್ರ ಬರದೇ ಇದ್ದರೂ ಸುಮಾರು ಗೊತ್ತು. ರುದ್ರ, ಪುರುಷ ಸೂಕ್ತ, ಶ್ರೀ ಸೂಕ್ತ, ಗಣಪತಿ ಉಪನಿಷತ್ ಎಲ್ಲಾ ಮುಗಿದ ಮೇಲೆ ಪುರೋಹಿತರು ಮತ್ತು ನನ್ನ ನಡುವೆ ನಡೆದ ಸಂಭಾಷಣೆ
ಪುರೋಹಿತರುಃ " ನಿಂಗೆ ರುದ್ರ, ಪುರುಷ ಸೂಕ್ತ, ಶ್ರೀ ಸೂಕ್ತ, ಗಣಪತಿ ಉಪನಿಷತ್ ಎಲ್ಲಾ ಬತ್ತಾ?"
ನಾನುಃ "ಹೇಳಕೆ ಪೂರ್ತಿ ಬತ್ತಲ್ಲೆ. ಆದ್ರೆ ಎಲ್ಲಾ ಗೊತ್ತಿದ್ದು"
ಪುರೋಹಿತರು ತಕ್ಷಣ ಮೂರ್ಚೆ ಹೋದರು!!! (ಅವರ ಬಂಡವಾಳ ನನ್ಗೆ ಗೋತ್ತಾಯ್ತಲ್ಲ ಅಂತ)
ಘಟನೆ ಮೂರು
ಪೂಜೆ ಎಲ್ಲಾ ಮುಗಿತು. ಪುರೋಹಿತರು ಆಶೀರ್ವಾದ ಮಾಡ್ತಾಯಿದ್ದರು
ಪುರೋಹಿತರುಃ "ಈ ಕುಟುಂಬಕ್ಕೆ ಒಳ್ಳೇದಾಗ್ಲಿ...................
............................ ನೂತನ ವಧೂ ವರರಿಗೆ ಒಳ್ಳೇದಾಗ್ಲಿ"
ಜಯಶ್ರೀಃ "ರೀ ನಮ್ಗೆ ಮದ್ವೆ ಆಗಿ 4 ವರ್ಷ ಆತು.. ಇವ್ರು ನೂತನ ವಧೂ ವರ ಅಂತ ಹೇಳ್ತಾಯಿದ್ದ" ಅಂತ ಹೇಳ್ತಾ ಹೇಳ್ತಾ ಮೂರ್ಚೆ ಹೋದ್ಲು.
ಘಟನೆ ನಾಲ್ಕು
ಸ್ಥಳಃ ಬಂಗಲಗಲ್ಲು ನಾರಾಯಣ ಭಟ್ಟರ(ನಮ್ಮನೆ) ಮನೆ ದೇವರ ಕೋಣೆ.
ಪಾತ್ರದಾರಿಗಳುಃ ಪುರೋಹಿತರು, ನಾನು ಮತ್ತು ದೇವರ ಕೋಣೆಯಲ್ಲಿದ್ದ ಸಮಸ್ತ ದೇವರುಗಳು. ಎಲ್ಲರೂ ಎದುರು ಬದ್ರು ಕುಳಿತಿದ್ದರು
ಪುರೋಹಿತರುಃ "ಸ್ನಾನ ಆತಾ, ಸಂದ್ಯಾವಂದನೆ ಮಾಡು. ನಾನು ಅಷ್ಟ್ರಲ್ಲಿ ಜಪ ಮಾಡ್ತಿ"
ನಾನುಃ " ಓಂ ಭುವು ರುಗ್ವೇದಾಯಸ್ವಾಹಾ... ಓಂ ಭುವ ಯಜುರ್ವೇದಾಯ ಸ್ವಾಹಾ.....
.......................... ................ ............... .................. .......
................... .............. .................... .............................."
ದೇವರಕೋಣೆಯಲ್ಲಿದ್ದ ಸಮಸ್ತದೇವರುಗಳು ನನ್ನ ಮಂತ್ರ ಕೇಳಿ ಮೂರ್ಚೆ ಹೋಗಿದ್ದರು
ಸ್ವಲ್ಪ ಹಿಂದುಗಡೆ ಇದ್ದ ದೇವ್ರಿಗೆ ನನ್ನ ಮಂತ್ರ ಕೇಳಿಸ್ಲಿಲ್ಲ. ಆ ದೇವರು ಮುಂದೆ ಬಂದು "ಬೆಂಗಳೂರಿಗೆ ಹೋದವನೆ ಸಂದ್ಯಾವಂದನೆಯನ್ನು ಕಲಿ" ಅಂತ ಹೇಳಿದ್ರು.
ಆಗ ನಾನು ಮೂರ್ಚೆ ಹೋದೆ
Monday, August 9, 2010
ಕೆಲವೊಮ್ಮೆ... ಕೆಲವೊಮ್ಮೆ
ಕೆಲವೊಮ್ಮೆ ಮಾತುಗಳಿಗೆ ಪ್ರತಿಮಾತು ಇದ್ದಾಗ,
ಕೆಲವೊಮ್ಮೆ ಅರ್ಥವಿಹೀನ ಚರ್ಚೆಯು ನಡೆಯುತ್ತಾ ಇದ್ದಾಗ,
ಕೆಲವೊಮ್ಮೆ ನಮಗೆ ವಿಷಯ ಜ್ಞಾನವಿಲ್ಲದೇ ಇದ್ದಾಗ,
ಕೆಲವೊಮ್ಮೆ ಜೊತೆಗಿದ್ದವರೂ ಮೌನವಾಗಿ ಇದ್ದಾಗ,
ಕೆಲವೊಮ್ಮೆ ಕೆಲವೊಮ್ಮೆ,
ಸುಮ್ಮನಿರುವುದು ಒಳ್ಳೆಯದು..
Sunday, July 18, 2010
ಕೆಟ್ಟಿದೆ, ಸರ್ವರ್ ಕೆಟ್ಟಿದೆ. ನಿಮಗೆ ಮಿಠಾಯಿ ಇಲ್ಲ.
Thursday, July 15, 2010
ಆಕೆ ಬರೋಬ್ಬರಿ 34 ವರ್ಷಗಳ ನಂತರ ಫಿಲ್ಮ್ ನೋಡಿದ್ದಳು.
ಯಾರಿರಬಹುದು ಅನ್ನೋ ಕುತೂಹಲ ನಿಮ್ಮಲ್ಲಿರಬಹುದು. ಆಕೆ ಬೇರೆ ಯಾರು ಅಲ್ಲ, ನನ್ನಮ್ಮ. ಮೊನ್ನೆ ಭಾನುವಾರ ನಾನು ಜಯಶ್ರೀ ಹೀಗೆ ಮಾತಾಡುತ್ತಾ ಇದ್ದಾಗ ಜಯಶ್ರೀ "ಎರಡನೇ ಮದುವೆ" ಫಿಲ್ಮ್ ನೋಡೋಣ್ವಾ ಅಂದ್ಲು. ಅದ್ಕೆ ನಾನು ಮುಂದಿನವಾರ ಹೋಗೋಣ ಅಂದೆ. ಇಬ್ಬರಿಗೂ ಓಕೆಯಾಯಿತು. ತಕ್ಷಣ ನನ್ ಮನ್ಸಿಗೆ ಬಂದಿದ್ದು ಯಾಕೆ ಈ ವಾರ ಹೋಗಬಾರ್ದು. ಅಮ್ಮ ಬಂದಿದ್ದಾಳೆ, ಮುಂದಿನ ವಾರದ ತನಕ ಇರೊಲ್ಲ. ಆಕೆನೂ ಫಿಲ್ಮ್ ಗೆ ಕರ್ಕೊಂಡ್ ಹೋಗೋಣ ಅಂತ. ತಕ್ಷಣ ಇಬ್ರೂ ಮಾತಾಡಿ ಬಿಗ್ ಸಿನೆಮಾಸ್ ಟಾಕೀಸ್ ನಲ್ಲಿ ಟಿಕೇಟ್ ಬುಕ್ ಮಾಡಿದ್ವಿ. ಆಮೇಲೆ ಅಮ್ಮನ ಹತ್ರ ಊಟ ಮಾಡಿದ್ಮೇಲೆ ಫಿಲ್ಮ್ ಗೆ ಹೋಗೋಣ ಅಂದೆ. ಅದ್ಕೆ ನಾ ಬರೊಲ್ಲ, ನೀವು ಹೋಗಿ ಅಂದ್ಲು. ಇಲ್ಲ ಟಿಕೇಟ್ ಬುಕ್ ಮಾಡ್ಸಿದ್ದೇನೆ. ನೀನು ಬಾ ಅಂದೆ. ಅಮ್ಮ ಹೂಂಗುಟ್ಟಿದ್ದಳು.
ಊಟ ಮಾಡಿ ನಾವು ಗೋಪಾಲನ್ ಆರ್ಕೇಡ್ ನಲ್ಲಿ ಇರೋ ಬಿಗ್ ಸಿನೆಮಾಸ್ ಟಾಕೀಸ್ ಗೆ ಹೋದ್ವಿ. ಮಾಲ್ ಮತ್ತೆ ಅದ್ರಲ್ಲಿ ಇರೋ ಟಾಕೀಸ್ ಎಲ್ಲ ಅಮ್ಮನಿಗೆ ಆಶ್ಚರ್ಯ ತಂದಿತ್ತು. ಸಾಗರದಲ್ಲಿ ಬರೀ ಟಾಕೀಸ್ ಇದ್ದಿದ್ದನ್ನು ನೋಡಿದ್ದ ಅಮ್ಮನಿಗೆ ಇಲ್ಲಿ ಎಲ್ಲಾ ಇದ್ದಿದ್ದು ನೋಡಿ ವಿಶೇಷ ಅನ್ಸಿರಬೇಕು. ಹೋಗಿ ಮೆತ್ತನೆಯ ಸೋಫಾದಲ್ಲಿ ಕುಳಿತ್ಗೊಂಡು ಫಿಲ್ಮ್ ನೋಡಿದ್ವಿ. ಏ.ಸಿ ರೂಮ್ ಆಗಿದ್ದ್ರಿಂದ ಅಮ್ಮನಿಗೆ ಸ್ವಲ್ಪ ಚಳಿಯಾಗಿತ್ತು ಅನ್ಸತ್ತೆ. ಸೀರೆ ಫುಲ್ ಹೊದ್ಕೊಂಡು ಫಿಲ್ಮ್ ನೋಡಿದ್ಳು. ಮದ್ಯೆ ಪಾಪ್ ಕಾರ್ನ್ ತಂದಿದ್ದೆ. ಅದನ್ನು ತಿಂತಾ ಫುಲ್ ಖುಷಿಲಿ ಇದ್ಲು. ಫಿಲ್ಮ್ ಮುಗ್ಸಿ ಮನೆಗೆ ಹೋಗೋವಾಗ ನೀನು ಈ ಹಿಂದೆ ಯಾವಾಗ ಟಾಕೀಸ್ ನಲ್ಲಿ ಫಿಲ್ಮ್ ನೋಡಿದ್ದೆ ಅಂತ ಕೇಳ್ದೆ. ಅದ್ಕೆ ರಾಜ್ ಕುಮಾರ್ ದು ಫಿಲ್ಮ್ "ನಾ ನಿನ್ನ ಮರೆಯಲಾರೆ" ನೋಡಿದ್ದು. ಆಮೇಲೆ ಟಾಕೀಸ್ ಗೆ ಹೋಗ್ಲಿಲ್ಲ ಅಂದಿದ್ಳು.
ದೂರದ ಮಲೆನಾಡಿನ ಗುಡ್ಡದ ಮೇಲಿದ್ದ ನಮ್ಮ ಮನೇಲಿ ದಿನವಿಡೀ ತಾನಾಯಿತು ತನ್ನ ಕೆಲಸವಾಯಿತು ಅಂತ ಇದ್ದ ಅಮ್ಮನಿಗೆ ದೂರದ ಸಾಗರಕ್ಕೆ ಹೋಗಿ ಫಿಲ್ಮ್ ನೋಡೋ ಅವಕಾಶ ಸಿಗ್ತಾಯಿದ್ದಿದ್ದು ಬಹಳ ಕಡಿಮೆ. ಹಾಗಂತ ಆಕೆಗೆ ಟಾಕೀಸ್ ಗೆ ಹೋಗಿ ನೋಡೋ ಆಸಕ್ತಿನೂ ಇರ್ಲಿಲ್ಲ. ಮನೇಲಿ ಟಿ.ವಿ ನಲ್ಲಿ ಬರೋ ಫಿಲ್ಮ್ಸ್/ದಾರವಾಹಿನ ಅಮ್ಮ ಯಾವತ್ತೂ ಮಿಸ್ ಮಾಡ್ಕೊಳಲ್ಲ. ಮೊನ್ನೆ ಫುಟ್ಬಾಲ್ ನೋಡೋಣ ಅಂತ ಹಾಲ್ ಗೆ ಬಂದು ನೋಡಿದ್ರೆ ಅಮ್ಮ ಹಿಂದಿ ಸೀರಿಯಲ್ ನೋಡೋದ್ರಲ್ಲಿ ಫುಲ್ ಬ್ಯಸಿ. ಚೈಂಜ್ ಮಾಡ್ಬೇಕಾ ಅಂತ ಕೇಳಿದ್ಲು. ನಾ ಬೇಡ, ನೀನು ನೋಡು ಅಂದಿದ್ದೆ. ಹಿಂದಿ ಪೂರ ಅರ್ಥ ಆಗ್ದೇ ಇದ್ರೆ ಏನಂತೆ, ಚಿತ್ರ ನೋಡಿದ್ರೆ ಅರ್ಥ ಆಗತ್ತೆ ಅಂದಿದ್ದ್ಲು. ನಾನು ನಕ್ಕಿದ್ದೆ.
ಇಂದು ಬಂದು "ನಾ ನಿನ್ನ ಮರೆಯಲಾರೆ" ಚಿತ್ರ ಯಾವಾಗ ಬಂದಿತ್ತು ನೋಡಿದೆ. ಅದು ಬಂದಿದ್ದು 1976 ರಲ್ಲಿ. ನಾ ಹುಟ್ಟೋದಕ್ಕಿಂತ ಮುಂಚೆ!!!

