ಗೋವು ಮಾತನಾಡಿದಾಗ.....
ಆತ್ಮೀಯ,
ಜನ ನನ್ನನ್ನು ಅಮೃತಮಹಲ್ ಅಂತ ಗುರುತಿಸುತ್ತಾರೆ. ನಾನು ಕೆಲಸಗಾರ ತಳಿಗೆ ಸೇರಿದವ. ನಾನು ಮೂಲತಃ ಚಿಕ್ಕಮಗಳೂರು, ಹಾಸನ ಮತ್ತು ಚಿತ್ರದುರ್ಗದವ. ಮೈಸೂರು ಅರಸರು ನನ್ನನ್ನು ಅಭಿವೃದ್ಧಿಗೊಳಿಸಿದರು. ಆಗ ನನ್ನನ್ನು “ಬೆಣ್ಣೆ ಚಾವಡಿ” ಎಂಬ ಹೆಸರಿಂದ ಕರೆಯುತ್ತಿದ್ದರು. ಅನಂತರ ನನ್ನನ್ನು ಟಿಪ್ಪುಸುಲ್ತಾನ್ ಅಭಿವೃದ್ಧಿಪಡಿಸಿ “ಅಮೃತಮಹಲ್” ಅಂತ ಹೆಸರಿಟ್ಟ. ಮೈಸೂರಿನ ದಿವಾನರಾಗಿದ್ದ ಶ್ರೀಪೂರ್ಣಯ್ಯನವರು ನನ್ನನ್ನು ತಮಿಳುನಾಡಿನಲ್ಲಿ ಬೆಳೆಸಿದರು. ನನ್ನನ್ನು ತಮಿಳುನಾಡಿನ ಕೆಲವು ಕಡೆ ಇಂದಿಗೂ “ಪೂರ್ಣಯ್ಯನ ದನ” ಅಂತ ಕರೀತಾರೆ. ನಿಮ್ಮ ರೀತಿ ನನಗಿಷ್ಟವಾದ ಹೆಸರು ಇಟ್ಟುಕೊಳ್ಳುವ ಅರ್ಹತೆ ನನಗಿಲ್ಲ ಅಲ್ಲವೇ? ಹೆಸರು ಬದಲಾದರೇನಂತೆ, ನನ್ನ ವರ್ತನೆ ಬದಲಾಗಿಲ್ಲ. ನಾನೊಬ್ಬ ಸ್ವಾಮಿನಿಷ್ಟ ಮತ್ತು ಧೈರ್ಯಶಾಲಿ.
ಅದಕ್ಕಾಗಿಯೇ ನನ್ನನ್ನು ಯುದ್ಧದಲ್ಲಿ ಬಳಸುತ್ತಿದ್ದರೂ ಅನ್ಸುತ್ತೆ. ನನ್ನ ಕೋಡು ಉದ್ದವಿದೆ ಎಂದು ಅದಕ್ಕೆ ಬೆಂಕಿ ಹಚ್ಚಿ ವೈರಿಗಳತ್ತ ನನ್ನ ಓಡಿಸುತ್ತಿದ್ದರು. ಪರಿಸ್ಥಿತಿಯ ಅರಿವಿದ್ದರೂ ನಾನೊಬ್ಬ ಅಸಹಾಯಕ ನೋಡಿ. ಎಷ್ಟಾದರೂ ನಾನೊಬ್ಬ ಮೂಕ ಪ್ರಾಣಿ ಅಲ್ಲವೇ? ನನ್ನ ಕೂಗು ಅವರಿಗೆಲ್ಲಿ ಅರ್ಥವಾಗಬೇಕು ಹೇಳಿ. ಯುದ್ಧಕಾಲದಲ್ಲಿ ಸಾಮಾನು - ಸರಂಜಾಮು ಸಾಗಿಸಲು ನನ್ನನ್ನು ಉಪಯೋಗಿಸುತ್ತಿದ್ದರು. ದಿನಗಟ್ಟಲೇ ಆಹಾರ ಮತ್ತು ನೀರನ್ನು ಸೇವಿಸದೇ ನಾನಿರುತ್ತೇನೆ. ನಾನು ಹಾಲು ಜಾಸ್ತಿ ನೀಡದಿದ್ದರೂ ಶ್ರಮದ ಕೆಲಸಕ್ಕೆ ಉಪಯೋಗವಾಗುತ್ತೇನೆ.
ಹಿಂದೆ ನನ್ನ ಸಂವರ್ಧನೆಗಾಗಿ ಕಾವಲು ಭೂಮಿಯನ್ನು ಬಿಟ್ಟಿದ್ದರು. ಇತ್ತೀಚಿನ ಕೆಲವು ಘಟನೆಯಿಂದ ನನ್ನ ಹೆಸರು ಸ್ವಲ್ಪಮಟ್ಟಿಗೆ ನಿನಗೆ ಪರಿಚಯವಾಗಿರಬಹುದು. ನನ್ನ ನಿರ್ವಹಣೆಯನ್ನು ಸರಕಾರ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸುವುದರಲ್ಲಿತ್ತು. ಅದರ ವಿರುದ್ಧ ನಿನ್ನ ಸಹೋದರರು ಕೂಗಾಡಿದರು, ಪ್ರತಿಭಟಿಸಿದರು. ಅದರ ಫಲವೇನಾಯಿತು? ಅಂತ ನಿನಗೆ ತಿಳಿದಿರಬಹುದು.
ಈಗ ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ. ನಾನು ಬಲಿಪಶುವಾದೆ.
ಹೇಳು ಮಾನವ ಇದು ನ್ಯಾಯವೇ.....
ಪ್ರತಿಭಟಿಸಲು ನಾನು ಅಸಹಾಯಕ. ನೀನೂ.....??
~~~~~~~~~~~~~~~~~~~~~~~~~~~~~~~~~~~~~~
ಮಾನವನ ಸ್ವಾರ್ಥದ ಅಟ್ಟಹಾಸದಲ್ಲಿ ಸಿಕ್ಕಿ ನಲುಗುತ್ತಿರುವ ಮೂಕ ಪ್ರಾಣಿ ಗೋವು ಮಾತನಾಡುವ ಲೇಖನ ಮಾಲಿಕೆ "ನೀನ್ಯಾರಿಗಾದೆಯೋ ಎಲೆ ಮಾನವ"
ಈ ಲೇಖನ ಮಾಲಿಕೆ ಶ್ರೀರಾಮಚಂದ್ರಾಪುರ ಮಠದ "ಧರ್ಮಭಾರತೀ" ಮಾಸ ಪತ್ರಿಕೆಯಲ್ಲಿ ಡಿಸೆಂಬರ್ ನಿಂದ ಪ್ರಾರಂಭವಾಗಿದೆ.
1 comment:
ಯಜ್ಞೇಶ್ ಸರ್,
ತುಂಬಾ ದಿನವಾಗಿತ್ತು ನಿಮ್ಮ ಬ್ಲಾಗಿಗೆ ಬಂದು...ಗೋವು ತನ್ನ ನೋವನ್ನು ತೋಡಿಕೊಳ್ಳುವ ಪತ್ರ ಚೆನ್ನಾಗಿ ಮೂಡಿಬಂದಿದೆ......ಥ್ಯಾಂಕ್ಸ್.....
ನನ್ನ ಬ್ಲಾಗಿನ ಕಡೆಗೆ ಬಿಡುವು ಮಾಡಿಕೊಂಡು ಬನ್ನಿ....
Post a Comment