Monday, June 11, 2007

ಮಣ್ಣಿನ ವಾಸನೆ

"ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು"

ಮಳೆಯನ್ನು ಏಷ್ಟು ಅದ್ಬುತವಾಗಿ ಚನ್ನವೀರ ಕಣವಿಯವರು ವರ್ಣಿಸಿದ್ದಾರೆ. ಮಲೆನಾಡಿನಲ್ಲಿ ಮಳೆಯ ಅಂದವೇ ಬೇರೆ. ಅದಕ್ಕೆ ಅದರದೇ ಆದ ಸಂಗೀತ, ಲಯ, ವೇಗವಿರತ್ತೆ. ಈ ಕವನವನ್ನು ಓದುತ್ತಾಯಿದ್ದರೆ ಊರಿಗೆ ಹೋಗಿ ಮಳೆಯಲ್ಲಿ ನೆನೆಯೋಣ ಅನ್ನಿಸತ್ತೆ. ಮಳೆಯನ್ನು ನೋಡುತ್ತಾ ಹೊಸಗನಸ ಕಾಣೋಣ ಅನ್ನಿಸತ್ತೆ. ಕ್ರಿಕೇಟ್ ನಲ್ಲಿ ನೀವು ಮೆಕ್ಷಿಕನ್ ಅಲೆಯನ್ನು ನೋಡಿರಬಹುದು. ಜನ ಹೋ ಏಂದು ಸರದಿಯ ಮೇಲೊಬ್ಬೊಬ್ಬರಾಗಿ ಏದ್ದು ನಿಲ್ಲುವುದು. ಆದರೆ ಅದು ಮಳೆಯ ಜೊತೆ ಗಾಳಿಯು ಲೀನವಾದಾಗ ಉಂಟಾಗುವ ಅಲೆಗೆ ಸರಿಸಾಟಿಯಲ್ಲ. ಮಳೆಯ ಅಲೆ ನೋಡಲು ಬಹಳ ಸುಂದರ.

ಅಮ್ಮ ಏಳು,ಬೆಳಗಾಯ್ತು ಅಂತ ಹೇಳಿದಾಗ ಎದ್ದು ಸೀದಾ ಹೊರಗೆ ಹೋಗ್ತಾಯಿದ್ದೆ. ಮಳೆಯನ್ನು ನೋಡ್ತಾ ಅಲ್ಲೇ ಕುಳಿತಿರುತ್ತಿದ್ದ ನನಗೆ ಅಮ್ಮ ಮತ್ತೆ ಕರೆದಾಗಲೇ ಎಚ್ಚರವಾಗ್ತಾಯಿದ್ದಿದ್ದು. ನಿದಾನ ಹೋಗು, ಸಂಕ ದಾಟೋವಾಗ ಹುಶಾರು, ಗದ್ದೆಯಲ್ಲಿ ಹೋಗೋವಾಗ ಹಾಳಿಯ ಮೇಲೇ ಹೋಗು, ನೀರಲ್ಲಿ ಆಟ ಆಡಬೇಡ, ಮಳೆಯಲ್ಲಿ ನೆನಿಬೇಡ, ಜ್ವರ ಬರತ್ತೆ ಅಂತೆಲ್ಲ ಅಮ್ಮ ಶಾಲೆಗೆ ಹೋಗೋವಾಗ ಹೇಳ್ತಾಯಿದ್ದಳು. ಎಲ್ಲದ್ದಕ್ಕೂ ತಲೆಯಾಡಿಸಿ ಹೋಗ್ತಾಯಿದ್ದೆ.

ನಮ್ಮ ಮನೆಯಿಂದ ಶಾಲೆ ಸುಮಾರು 2 ಕಿ.ಮಿ ಆಗ್ತಾಯಿತ್ತು. ಗದ್ದೆಯನ್ನು ಹಾದು ಹೋಗಬೇಕಿತ್ತು. ಕೆಲವು ಕಡೆ ನಾಟಿ ಮಾಡಿದ ಗದ್ದೆಗಳು. ಆ ಗದ್ದೆಯ ಹಾಳಿ ಹಾಳಾಗಬಾರದೆಂದು ಗದ್ದೆಯ ಮಣ್ಣನ್ನು ಹಾಳಿಯ ಮೇಲೆ ಹಾಕಿರುತ್ತಿದ್ದರು. ಎಷ್ಟೋ ದಿನ ಏಲ್ಲೋ ನೋಡುತ್ತಾ ಒಣಗಿರದ ಹಾಳಿಯನ್ನು ಮೆಟ್ಟಿ, ಕಾಲು ಕೆಸರು ಮಾಡಿಕೊಂಡು, ಕಾಲು ತೊಳಿಯಲಿಕ್ಕೆ ಹೊಳೆಗೆ ಹೋಗಿ, ಅಲ್ಲಿ ಆಟ ಆಡಿ ಬರ್ತಾಯಿದ್ದೆ.

ಇನ್ನು ನಾಟಿ ಮಾಡಿರದ ಗದ್ದೆಯೆಂದರೆ ನಮಗೆ ಬಹಳ ಇಷ್ಟ. ಎಲ್ಲರು ಒಟ್ಟಾಗಿ ಕಾಲಲ್ಲಿ ನೀರನ್ನು ತಳ್ಳಿದಾಗ ಉಂಟಾಗುವ ಸಣ್ಣ ಸಣ್ಣ ಅಲೆಗಳನ್ನು ನೋಡಿ ಕೇಕೆ ಹಾಕ್ತಾಯಿದ್ದೆವು. ಹಾಳಿಯ ಮೇಲೆ ಹೋಗ್ತಾಯಿರೋರ ಹತಿರ ಹೋಗಿ, ಜೋರಾಗಿ ಗದ್ದೆಗೆ ಹಾರಿ, ಅವರ ಮೇಲೆ ನೀರು ಹಾರಿಸಿ ಓಡಿಹೋಗೋದನ್ನ ನೆನೆಸಿಕೊಂಡರೆ ಈಗಲೂ ನಗು ಬರತ್ತೆ.

ನಿನ್ನೆ ನೈಸ್ ರಸ್ತೆಯಲ್ಲಿ ಹೋಗ್ತಾಯಿದ್ದೆ. ಸಣ್ಣದಾಗಿ ಮಳೆ ಬರ್ತಾಯಿತ್ತು. ಕಾರನ್ನು ನಿಲ್ಲಿಸಿ ಕೆಳಗಿಳಿದು ಮಳೆಯಲ್ಲಿ ನೆನೆದೆ. ಆಗ ಮಳೇಲಿ ನೆನಿಬೇಡ, ಜ್ವರ ಬರತ್ತೆ ಅಂತ ಅಮ್ಮ ಹೇಳಿದ ಹಾಗಾಯ್ತು. ತಿರುಗಿ ನೋಡಿದೆ, ಯಾರು ಇರಲಿಲ್ಲ. ಅಮ್ಮ ಇದ್ದಿದ್ದರೆ ನನಗೆ ನೆನಿಯೋಕೆ ಬಿಡ್ತಾಯಿರಲಿಲ್ಲ ಅನ್ನಿಸಿತು. ಅಮ್ಮನಿಗೂ ಮಳೆಯನ್ನು ನೋಡಿದಾಗ ಮಕ್ಕಳ ನೆನಪಾಗಿರಬೇಕು. ಕಾಲನ ಹೊಡೆತಕ್ಕೆ ಸಿಕ್ಕು ನಾವೆಲ್ಲ ಮನೆಬಿಟ್ಟು ಹೊರಗೆ ಬಂದಿದ್ದೇವೆ. ಮತ್ತೆ ಮನೆಗೆ ಹೋಗಲಿಕ್ಕುಆಗದು, ಇಲ್ಲಿ ಇರಲೂ ಆಗದು. ಒಂದು ರೀತಿ ತ್ರಿಶಂಕುವಿನ ರೀತಿಯಾಗಿದೆ. ನಮಗೆ ನಮ್ಮ ಸಂತೋಷಕ್ಕಿಂತ ಪರರು ನಮ್ಮ ಬಗ್ಗೆ ಏನನ್ನುವರೋ, ಊರಲ್ಲಿ ಇದ್ದರೆ ನಮಗಾರು ಗೌರವ ಕೊಡೊಲ್ಲ ಅನ್ನುವ ಏಂಬ ಅಳುಕು ಅನ್ನತ್ತೆ. ಈಗ ಅಭಿಮನ್ಯುವಿನ ರೀತಿಯಾಗಿದೆ. ಬಂದಿದ್ದಾಗಿದೆ, ಹೋಗಲು ತಿಳಿಯದು.

ಮನಸ್ಸು ಏಲ್ಲೋ ಹೋಗಿತ್ತು. ಮಣ್ಣಿನ ವಾಸನೆಯನ್ನು ಆಘ್ರಾಣಿಸುತ್ತಾ ಮತ್ತೆ ಕಾರು ಹತ್ತಿ ಹೊರಟೆ.

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

2 comments:

ನಂದಕಿಶೋರ said...

ನಮಸ್ಕಾರ ಯಜ್ಞೇಶ್.

ಎಂತ ಮಾಡುದು ಹೇಳಿ? ಈ ಮಳೆ, ಹಲಸು, ಮಾವು, ಯುಗಾದಿ, ದೀಪಾವಳಿ - ಅದು ಇದು ಬಂದಾಗೆಲ್ಲ ನಮ್ಮಂಥವರದ್ದು ಹಣೆಬರಹವೇ ಇಷ್ಟು. ಊರನ್ನು ಎಣಿಸಿ ಕೊರಗುದು. ಈ ಸಂದರ್ಭಗಳಲ್ಲಿ ಊರಿಗೂ ನಮ್ಮ ನೆನಪಾದೀತಾ? :-)
ಇನ್ನೊಂದು ಮಜ - ಮುಂದಿನ ಸಂತತಿಯವರು ಬೆಂಗಳೂರಿನ ಕೊಚ್ಚೆಯನ್ನು ನೆನಪಿಸಿ ಕೊರಗುತ್ತಾರೋ ಏನೋ? ಪಾಪ, ಅವರ ಹಣೆಬರಹ ;-)

ಯಜ್ಞೇಶ್ (yajnesh) said...

ಯಾತ್ರಿಕರೆ,

ನಾವು ಬಾಲ್ಯದಲ್ಲಿ ಅನುಭವಿಸಿದ್ದನ್ನ ನಮ್ಮ ಮುಂದಿನ ಸಂತತಿ(ಸಿಟಿಯಲ್ಲಿ ಇರೋರು) ಅನುಭವಿಸಲಾರರು ಅನ್ಸತ್ತೆ.ಈಗ ಇನ್ನು ಕಣ್ಣು ಸರಿಯಾಗಿ ಬಿಟ್ಟಿರಲ್ಲ, ಅವಾಗಲೇ ಅವರಿಗೆ ಅದು ಇದು ಅಂತ ತಲೆಗೆ ತುಂಬ್ತಾಯಿರ್ತಾರೆ. ಅವರ ತಲೆಯಲ್ಲಿ ಹೋಮ್ ವರ್ಕ್ ಮುಂತಾದ ವಿಷಯಗಳೇ ತುಂಬಿರತ್ತೆ. ನಮ್ಮ ಹಾಗೆ ಹಳ್ಳಿ, ಗದ್ದೆ, ಮಳೆ, ಶಾಲೆ ಅನುಭವಿಸೋಕೆ ಆಗೊಲ್ಲ.