Friday, May 18, 2007

ಬಿಸಿ ಬಿಸಿ ಸುದ್ದಿಗಳು (?)

ಬೆಳಗ್ಗೆ ಎದ್ದವನೆ ಹೊರಗೆ ಬಂದು ಪೇಪರ್ ಗೆ ತಡಕಾಡಿದೆ. ಇವತ್ತು ಎಂದಿನಂತೆ ಪೇಪರ್ ಲೇಟು. ತತ್. ಯಾವಾಗ್ಲು ಇವರ ಹಣೇಬರಹನೇ ಇಷ್ಟು ಅಂತ ಬೈಕೋತ್ತಾ ಪೇಪರಿಗಾಗಿ ಕಾದೆ. ಶಬರಿ ರಾಮನಿಗೆ ಕಾದಂತೆ. ಕೊನೆಗೂ ಪೇಪರಿನವನು ಬಂದ. ನನ್ನ ಕಂಡೊಡನೇ ಸೈಕಲ್ನಲ್ಲಿ ಹೋಗ್ತಾ ಮುಖದ ಮೇಲೆ ಪೇಪರ್ ಏಸೆದ. ಒಳ್ಳೇ ಬಾಣದ ತರ ನನ್ನತ್ತ ನುಗ್ಗಿ ಬಂತು. ಹೇಗೋ ತಪ್ಪಿಸಿಕೊಂಡೆ. ಬೈಯೋಣ ಅಂತ ಬಾಯಿ ತೆರೆಯೋಕಿಂತ ಮುಂಚೆ ಅವನು ಮಂಗ ಮಾಯ. ವೇಗವಾಗಿ ಬಂದ ಪೇಪರ್ರು, ಗೋಡೆಗೆ ಹೊಡೆದು ನ್ಯೂಟನ್ಸ್ ಥರ್ಡ ಲಾ ದಂತೆ ಮತ್ತೆ ಕೆಳಗೆ ಬಿತ್ತು. ಮೊದಲ ಮಹಡಿಯಿಂದ ಕೆಳಗಿಳಿದು ಬೆಳಗ್ಗೆ ಬೆಳಗ್ಗೆ ಬೈತಾ ಹೋಗಿ ಪೇಪರ್ ತಂದೆ.

ಪೇಪರ್ ನಲ್ಲಿ ಏನ್ ಮಣ್ಣು ಇರಲ್ಲ ಅಂತ ಗೊತ್ತಿದ್ರು, ಬೆಳಗ್ಗೆ ಎದ್ದ ತಕ್ಷಣ ಪೇಪರ್ ಓದದೆ ಹೋದ್ರೆ ಮನಸ್ಸಿಗೆ ಸಮಾಧಾನನೇ ಇರಲ್ಲ ನೋಡಿ. ಅಂತೂ ಪೇಪರ್ ತಂದು ಬಿಡಿಸಿ ನೋಡ್ದೆ. ಅದೇ ಹಳಸು ವಿಷಯಗಳು, ಉಳ್ಳಾಲ ಎಲೆಕ್ಷನ್ನು... ಅಬ್ಬಾ... ಅದರ ಮದ್ಯ ದೊಡ್ಡ ಪೋಸ್ಟರ್ರು.. ನಮ್ಮ ಮಣ್ಣಿನ ಮಗ ದೇವೇಗೌಡರ ಹುಟ್ಟಿದ ಹಬ್ಬ. ಅವರ ಅಭಿಮಾನಿ(?)ದೇವರುಗಳ ಹಾರೈಕೆ. ಯಪ್ಪೋ.. ಅಂತ ಬೇರೆ ಪುಟ ನೋಡೋಣ ಅಂತ ತಿರುಗಿಸಿದರೆ ಅದ್ರಲ್ಲೂ ಇದೇ ವಿಷಯ..."ಮಂಗ್ಯಾನ್ ಮಕ್ಳು ಎಲ್ಲ್ ನೋಡಿದ್ರೂ ಫೋಟೋ ಹಾಕ್ಕ್ಯಂತಾರ್ರೀ..." ಅಂತ ಕಾಳಣ್ಣ ಹಿಂದೆ ಬರೆದಿದ್ದ ನೆನಪಾಗಿ ನಕ್ಕೆ.

ದೇವೇಗೌಡ್ರು ಅಂದ ತಕ್ಷಣ ನನಗೆ ಹಳೇ ಕಂಪನಿಯ ಒಂದು ಘಟನೆ ನೆನಪಾಯ್ತು. ನಮ್ಮ ಹಳೇ ಕಂಪನಿಯಲ್ಲಿ ಯಾರದ್ದೇ ಹುಟ್ಟಿದ ಹಬ್ಬ ಆದ್ರೂ ರಿಸೆಪ್ಷನ್ ನಲ್ಲಿ ಹಾಕ್ತಾಯಿದ್ರು. ಒಮ್ಮೆ ನನ್ನ ಹತ್ತಿರ ಒಬ್ಬ ಫ್ರೆಶರ್ರು ಬಂದು ಈ ಕಂಪನಿಯಲ್ಲಿ ಯಾರಾದ್ರು ರಾಜಕಾರಣಿಗಳು ಬೋರ್ಡಿನಲ್ಲಿದಾರಾ ಅಂದ. ಯಾಕಪ್ಪ ನಿನಗೆ ಆ ಡೌಟು ಬಂತು ಅಂತ ಕೇಳಿದೆ. ಅಲ್ಲಾ ಮೊನ್ನೆ ನಾನು ಕೆಲ್ಸಕ್ಕೆ ಸೇರಿದಾಗ ರಿಸೆಪ್ಷನ್ ನಲ್ಲಿ "ಹ್ಯಾಪಿ ಬರ್ಥ್ ಡೇ ದೇವೇಗೌಡ" ಅಂತ ಹಾಕಿದ್ರು ಅಂದ .. ಅವನ್ನ ಕೇಳ್ದೆ "ಊರಿಗೆ ಒಬ್ಬಳೇ ಪದ್ಮಾವತಿನಾ". ಅವ್ನಿಗೆ ಅರ್ಥ ಆಗಿಲ್ಲ. ಪ್ಯಾಟೆನಲ್ಲಿ ಓದ್ದೋನು. ಅದೆಲ್ಲ ಏಲ್ಲಿ ಅರ್ಥ ಆಗ್ಬೇಕು. ಕಣ್ಣು ಬಿಟ್ಕಂಡು ನಿಂತ. ಇಲ್ಲೂ ಒಬ್ಬ ದೇವೇಗೌಡ್ರು ಇದಾರಪ್ಪ. ಅವರು ರಾಜಕಾರಣಿ ಅಲ್ಲ. ಸಿಸ್ಟಮ್ ಅಡ್ಮಿನ್ನು ಅಂದೆ. ಅವನು ಸೇರಿದ್ದ ದಿನ ಸಿಸ್ಟಮ್ ಅಡ್ಮಿನ್ನು ದೇವೇಗೌಡ್ರ ಬರ್ಥ್ ಡೇ. ಪಾಪ ಹೊಸಬನಿಗೆ ಅದು ಏಲ್ಲ ಗೊತ್ತಾಗ್ಬೇಕು.

ಈಗ ವರ್ತಮಾನಕ್ಕೆ ಬರೋಣ. ಪೇಪರ್ರಿನಲ್ಲಿ ಅಷ್ಟೇನು ಹೊಸ ವಿಷಯ ಇರ್ಲಿಲ್ಲ. ನಿತ್ಯಕರ್ಮ ಮುಗಿಸಿ ಹೊಟ್ಟೆಪಾಡಿಗೋಸ್ಕರ ಕೆಲ್ಸ ಮಾಡ್ಬೇಕಲ್ಲ. ಕಾರ್ ತಗಂಡು ಹೊರಟೆ. ಮದ್ಯ ನನ್ನ ಫ್ರೆಂಡಿನ ಹತ್ರ ಇವತ್ತು ದೇವೇಗೌಡ್ರ ಹುಟ್ಟಿದ ಹಬ್ಬ ಕಣೋ ಅಂದೆ.ಅದಕ್ಕೆ ಅವನು "ಓ ನಮ್ಮ ನೆಲ್ಸನ್ ಮಂಡೇಲಾದಾ" ಅಂದ. ನಂಗೆ ಅರ್ಥ ಆಗ್ಲಿಲ್ಲ. ಅದಕ್ಕೆ ಅವನು ಹೇಳ್ದ..

"ನೆಲ+ಸನ್+ಮಂಡೆ+ಇಲ್ಲ"

ವಿ.ಸೂಃ ಇದು ನನ್ನ ವಯಕ್ತಿಕ ಅನಿಸಿಕೆ ಅಲ್ಲ... ನನ್ನ ಸ್ನೇಹಿತನದು..

No comments: