ಆಫೀಸಿನ ಕೆಲಸದ ನಡುವೆ ನನ್ನ ಗಮನ ಸೆಳೆದಿತ್ತು ಒಂದು ಟ್ವಿಟ್ಟರ್ ಮೆಸೇಜು. ಹೋಗಿ ಎನಾಗಿದೆ ಅಂತ ನೋಡೋದ್ರೊಳಗೆ ಹಲವಾರು ಮೆಸೇಜುಗಳು ಟ್ವಿಟ್ಟರ್, ಫೇಸ್ ಬುಕ್, ಎಸ್.ಎಮ್.ಎಸ್ ಗಳಲ್ಲಿ ಹರಿದಾಡತೊಡಗಿತು. ಭಟ್ಟರು ವಿಜಯಕರ್ನಾಟಕ ಬಿಟ್ಟರಂತೆ!!! ಅನ್ನೋ ಸುದ್ದಿ ಎಲ್ಲೆಡೆ ಹರಡಿತ್ತು. ಎಲ್ಲರಿಗೂ ಶಾಕ್ ಆಗಿತ್ತು. ಮನೆಗೆ ಫೋನಾಯಿಸಿ ಟಿ.ವಿ ನಲ್ಲಿ ಎನಾದ್ರು ಬರ್ತಾಯಿದೆಯೇ ಅಂತ ವಿಚಾರಿಸಿದೆ. ಯಾವ ಟಿವಿ ಯಲ್ಲೂ ಇದರ ಬಗ್ಗೆ ಬರುತ್ತಿರಲಿಲ್ಲ. ಇದು ಸುಳ್ಳುಯಾಗಲಿ ಅಂತ ಮನಸ್ಸು ಹಾರೈಸತೊಡಗಿತು. ಆದರೆ ಅಂತರ್ಜಾಲ ತಾಣಗಳಲ್ಲಿ ನಿರಂತರವಾಗಿ ಹರಿದಾಡತೊಡಗಿತು. ಎನಾದರು ಆಗಲಿ ಅಂತ ವಿಜಯಕರ್ನಾಟಕದಲ್ಲಿ ಇದ್ದ ಗೆಳೆಯನಿಗೆ ಫೋನಾಯಿಸಿದೆ. ಆತ ತುಂಬಾ ಬೇಸರದ ದ್ವನಿಯಲ್ಲಿ ಹೌದು, ಭಟ್ಟರು ರಿಸೈನ್ ಮಾಡಿದ್ರು ಅಂದ. ಆಫೀಸಿನಲ್ಲಿ ಎಲ್ಲರೂ ಗಾಭರಿಯಾಗಿದ್ದಾರೆ ಅಂದ. ನನಗೂ ಮನಸ್ಸಿಗೆ ಬೇಸರವಾಯ್ತು.

ಅದೆಷ್ಟು ಹೊಸತನ್ನು ನೀಡಿದಿರಿ ಸಾರ್ ನೀವು! ಒಂದಾದ ಮೇಲೆ ಇನ್ನೊಂದರಂತೆ ಓದುಗನ ಮನಸ್ಸನ್ನು ಅರಿತು, ಆತನಿಗೆ ಬೋರ್ ಆಗದ ಹಾಗೆ ಕೊಟ್ಟಿರಿ. ಹೊಸ ಪೀಳಿಗೆಯನ್ನು ಸೃಷ್ಟಿಸಿದಿರಿ. ವಿಜಯಕರ್ನಾಟಕದಲ್ಲಿ ಬರೋ ಹೆಡ್ ಲೈನ್ ಓದೋಕೆ ಚೆಂದ. ಇಷ್ಟೆಲ್ಲಾ ಕ್ರಿಯೇಟಿವಿಟಿ ನಿಮ್ಮಲ್ಲಿದೆ! ಇದರೆಲ್ಲದರ ನಡುವೆ ಪ್ರತಿದಿನ ಬರುವ ನಿಮ್ಮ ಸಂಪಾದಕೀಯ, ವಕ್ರತುಂಡೋಕ್ತಿ, ಸ್ಪೂರ್ತಿಸೆಲೆ, ರೂಲ್ ಕಾಲ್ ಗಳು, ಸವ್ಯಸಾಚಿಗಳಾಗಿ, ನೆಚ್ಚಿನ ಅಂಕಣಗಳಾದ ನೂರೆಂಟು ಮಾತು, ಸುದ್ದಿಮನೆ, ಜನಗಳ ಮನ ನಮ್ಮೆಲ್ಲರ ಮನಸ್ಸನ್ನು ಸೂರೆಗೊಂಡಿತ್ತು. ಆಗ್ಗಾಗ್ಗೆ ವಿಶೇಷ ವ್ಯಕ್ತಿಗಳನ್ನು ಕರೆಸಿ ಗೌರವ ಸಂಪಾದಕರಾಗಿ ಅವರಿಗೆ ಗೌರವ ಮತ್ತು ನಮಗೆ ಹೊಸತನ್ನು ನೀಡಿದಿರಿ. ಜನರ ನಾಡಿಮಿಡಿತಕ್ಕೆ ತಕ್ಕ ಹಾಗೆ ಬರುತ್ತಿತ್ತು ನಿಮ್ಮ ಅಂಕಣಗಳು. ಅದರಲ್ಲೂ ನೂರೆಂಟು ಮಾತು ಸೂಪರ್. ದಿನಬೆಳಗಾದರೆ ಆ ಹಗರಣ, ಈ ಹಗರಣ ಅಂತ ಕೇಳಿ ಕೇಳಿ ರೋಸಿಹೋಗಿದ್ದ ನಮಗೆ ಎಲ್ಲ ಮರೆಯುವ ಹಾಗೆ ಬರುತ್ತಿತ್ತು ನೂರೆಂಟು ಮಾತುಗಳು. ಹಾರ್ನ್ ಬಿಲ್ ಪಕ್ಷಿ ಬಗ್ಗೆಯಾಗಲಿ ಅಥವಾ ರಿಚರ್ಡ್ ಬ್ರಾಸನ್ ಆಗಲಿ, ಎಲ್ಲವೂ ವಿಶಿಷ್ಟ. ನಿಮ್ಮ ಅಂಕಣಗಳು ಮಿಂಚಂಚೆಯಲ್ಲಿ ಅದೆಷ್ಟು ಬಾರಿ ಹರಿದಾಡಿತ್ತು. ಅದೇನೊ ಸ್ಪೂರ್ತಿ ಆ ಅಂಕಣಗಳನ್ನು ಓದೋವಾಗ ಅದೆಲ್ಲಿಂದೋ ಬರುತ್ತಿತ್ತು.
"ದೇಶ ಸುತ್ತು, ಕೋಶ ಓದು" ಇದನ್ನು ಅಕ್ಷರಶಃ ಪಾಲಿಸುತ್ತಿದ್ದಿರಿ ನೀವು. ನಿಮ್ಮ ನೋಟವೇ ವಿಶೇಷವಾಗಿತ್ತು ಅನ್ಸತ್ತೆ. ಅದಕ್ಕೆ ಅದೆಲ್ಲವೂ ನಿಮ್ಮ ಅಂಕಣಗಳಲ್ಲಿ ಬರುತ್ತಿತ್ತು. ಆಯಾ ದೇಶದ ವಿಶೇಷವೇನು ಅನ್ನೋದನ್ನ ಗಮನಿಸಿ ಎಲ್ಲರಿಗೂ ಇಷ್ಟವಾಗುವ ಹಾಗೆ ಬರೆಯುತ್ತಿದ್ದಿರಿ. ಅದನ್ನು ಓದಿದರೆ ನಾವು ಅಲ್ಲಿ ಹೋಗಿ ಬಂದ ಹಾಗಾಗುತ್ತಿತ್ತು. ಪ್ರಯಾಣದ ಸಮಯದಲ್ಲಿ ನೀವು ಬಹಳಷ್ಟು ಪುಸ್ತಕಗಳನ್ನು ಓದುತ್ತಿರುತ್ತೀರಿ ಅಂತ ಕೇಳಿದ್ದೆ. ಅತ್ಯಂಕ ಕಡಿಮೆ ಅವಧಿಯಲ್ಲಿ ನಲವತ್ತೈದು ಪುಸ್ತಕಗಳನು ಬರೆದಿರಿ. ಬಂದ ಪುಸ್ತಕಗಳೆಲ್ಲಾ ಹಾಟ್ ಸೇಲ್ ಆಗುತ್ತಿದ್ದವು. ಬಹಳಷ್ಟು ಬಾರಿ ಪುಸ್ತಕದಂಗಡಿಯಲ್ಲಿ ಬಂದ ತಕ್ಷಣ ಖಾಲಿಯಾಗಿರುತ್ತಿದ್ದವು.
ನೀರು ಒಂದೆಡೆ ನಿಲ್ಲಬಾರದಂತೆ, ಹರಿಯುತ್ತಾ ಇರಬೇಕಂತೆ, ಬಹುಷಃ ನೀವು ನಿಂತ ನೀರಾಗಲು ಇಷ್ಟವಿಲ್ಲದೇ ಹೊಸತನ್ನು ಹುಡುಕಿಕೊಂಡು ಹೊರಟಿರಬೇಕು. ಅಲ್ಲಿ ಹೋಗ್ತಾರಂತೆ, ಇಲ್ಲಿ ಹೋಗ್ತಾರಂತೆ, ಹಾಗಂತೆ, ಹೀಗಂತೆ ಅಂತ ಕಟ್ಟು ಕಥೆ ಸೃಷ್ಟಿಸುತ್ತಿರುವವರ ಬಗ್ಗೆ ನೋಡಿದರೆ/ಕೇಳಿದರೆ ಹೇಸಿಗೆಯಾಗುತ್ತದೆ. ನೀವಿಲ್ಲದ ವಿಜಯ ಕರ್ನಾಟಕ ಓದಲು ಮನಸ್ಸಾಗುತ್ತಿಲ್ಲ. ಪ್ರತಿದಿನ ಬೆಳ್ಳಂಬೆಳಗ್ಗೆ ಆಫೀಸಿಗೆ ಬಂದು ಮೊದಲು ಮಾಡುತ್ತಿದ್ದ ಕೆಲಸ ವಿಜಯಕರ್ನಾಟಕ ಈ-ಪೇಪರ್ ಓದೋದು. ಇವತ್ತೂ ಓದಿದೆ. ಯಾಕೋ ಬೋರ್ ಅಂತ ಅನಿಸಿತು. ಒಂದು ಚಿತ್ರ ನಟಿ ಸೀರೆ ಉಟ್ಟರೂ ಅದನ್ನು ಬ್ರೇಕಿಂಗ್ ನ್ಯೂಸ್ ಅಂತ ಹಾಕೋ ಮಾಧ್ಯಮಗಳು, ಟಿವಿ ನವರು ನೀವು ವಿಜಯಕರ್ನಾಟಕದಿಂದ ಹೊರನಡೆದಿದ್ದರ ಬಗ್ಗೆ ಹಾಕಲಿಲ್ಲ. ಪತ್ರಿಕೆಯಲ್ಲಿರುವ/ದೃಶ್ಯ ಮಾಧ್ಯಮದಲ್ಲಿರುವ ಸುದ್ದಿಗಳ ಬಗ್ಗೆ ಅದೇ ವೃತ್ತಿಯಲ್ಲಿರುವವರು ಹಾಕೊಲ್ಲ ಅಂತ ಆತ್ಮೀಯರೊಬ್ಬರು ಹೇಳಿದರು. ಆದರೂ ತಡರಾತ್ರಿಯವರೆಗೆ ಎಲ್ಲಾ ಟಿ.ವಿ ನೋಡಿದೆ. ಬೆಳಗ್ಗೆ ವಿಜಯಕರ್ನಾಟಕ ಓದಿದ್ದೆ. ಎಲ್ಲಿಯೂ ಸುದ್ದಿಯಿರಲಿಲ್ಲ. ಮನಸ್ಸಿಗೆ ಬೇಸರವಾಯ್ತು.
ನಾವೆಲ್ಲಾ ನಿಮ್ಮ ಜೊತೆಯಿದ್ದೇವೆ. ನೀವೇನೇ ಮಾಡಿದ್ರು ಅದು ಹೊಸತಾಗಿರತ್ತೆ. ನಮಗೆಲ್ಲಾ ಇಷ್ಟವಾಗುತ್ತದ್ದೆ. ನೀವೀಗ ಸ್ವತಂತ್ರರು. ಮೊದಲಿನ ಹಾಗಲ್ಲ. ನಿಮ್ಮಲ್ಲಿರೂ ಶಕ್ತಿ ಹೊರಬರಲಿ. ಸಾದ್ಯವಾದರೆ ಅದು ಅಂತರ್ಜಾಲದಲ್ಲಿ ಶೀಘ್ರವಾಗಿ ಬರಲಿ.