Tuesday, July 24, 2007

ಬ್ಲಾಕ್.....

ಬ್ಲಾಕ್.....
ಯಾವ ಬ್ಲಾಕ್ ಇರಬಹುದು ಎನಿಸಬಹುದು. ಜಯನಗರ ಫಸ್ಟ್ ಬ್ಲಾಕೇ, ಮುನೇಶ್ವರ ಬ್ಲಾಕೇ ಅಥವಾ ರೋಡ್ ಬ್ಲಾಕೇ...

ಯಾವುದೂ ಅಲ್ಲ!!!
ನಮ್ಮ ಆಫೀಸಿನಲ್ಲಿ "ಬ್ಲಾಗ್ ಗಳೇ ಬ್ಲಾಕ್ ಆಗಿತ್ತು. 3 ದಿನದ ಹಿಂದೆ ಅಭ್ಯಾಸಬಲದಂತೆ ಬ್ಲಾಗ್ ನೋಡೋಕೆ ಹೋದ್ರೆ..ಅದೇ ಬ್ಲಾಕ್!!! ಬಹಳ ಬೇಸರವಾಯ್ತು. ಎಷ್ಟೋ ವರ್ಷಗಳ ನಂತರ ಬರಿಯೋಕೆ ಪ್ರಾರಂಭಮಾಡಿದ್ದ ನನಗೆ ಇದ್ದಕಿದ್ದ ಹಾಗೆ ಬ್ಲಾಗ್ ಬ್ಲಾಕ್ ಆಗಿದ್ದು ಒಂದು ರೀತಿ ಆಘಾತವಾಗಿತ್ತು.

ಇವತ್ತು ಎನಾದ್ರು ಬರತ್ತಾ ಅಂತ ನೋಡಿದೆ. ಬ್ಲಾಗ್ ಬರ್ತಾಯಿದೆ. ಮತ್ತೆ ಯಾವಾಗ ಬ್ಲಾಕ್ ಆಗತ್ತೆ ಅಂತ ಗೊತ್ತಿಲ್ಲ.

Friday, July 6, 2007

ಜುಲೈ 6

ಜುಲೈ 6, ನನ್ನ ಜೀವನದ ಓಂದು ಪ್ರಮುಖ ಘಟ್ಟ !!!

ಇಂದಿಗೆ ಬೆಂಗಳೂರಿಗೆ ಬಂದು 15 ವರ್ಷವಾಯ್ತು. ನಂಬೋಕೆ ಆಗ್ತಾಯಿಲ್ಲ. ವರ್ಷಗಳು ಹೇಳೋದು ಸೆಕೆಂಡಿನಂತೆ ಹೋಗ್ತಾಯಿದೆ. ಇಂದಿಗೂ ಹಳೆಯ ದಿನಗಳು ಕಣ್ಮುಂದೆ ಕಟ್ಟಿದ ಹಾಗೆ ಇದೆ. ಪ್ರಪಂಚವೆಂದರೆ ಏನೂ ಅರಿಯದೇ ಇದ್ದ ನನಗೆ ಬೆಂಗಳೂರಿಗೆ ಸೋದರಮಾವ ಕರೆದುಕೊಂಡು ಹೋಗ್ತೀನಿ ಅಂದಾಗ ಮನಸ್ಸಲ್ಲಿ ಬಹಳ ಸಂತೋಷವಾಗಿತ್ತು. ಬೆಂಗಳೂರಿನ ಬಗ್ಗೆ ಕೇಳಿದ್ದೆ, ಅದನ್ನು ನೋಡಬೇಕು ಅಂತ ಮನಸ್ಸಲ್ಲಿ ಇತ್ತು. ಅದಕ್ಕಿಂತ ಮೊದಲು 5 ನೇ ಕ್ಲಾಸಿನಲ್ಲಿ ಸಾಗರದಲ್ಲಿ ಸೋದರತ್ತೆಯ ಮನೆಯಲ್ಲಿ ಇದ್ದೆ. 7ನೇ ಕ್ಲಾಸಿನ ಅರ್ದಕ್ಕೆ ಮನೆಗೆ ಹೋಗಿದ್ದೆ. ಮೊದಲಿಂದಲೂ ಮನೆಯ ಪ್ರೀತಿ ಜಾಸ್ತಿ. ಅದಕ್ಕೆ ಕಿವಿ ನೋವು ಅಂತ ಕಾರಣ ಕೊಟ್ಟು ಅಲ್ಲಿಂದ ಮನೆಗೆ ಹೋಗಿದ್ದೆ. ಬೆಂಗಳೂರಿಗೆ ಹೋಗ್ತೀನಿ ಅಂದಾಗ, ಇವನು ನಾಲ್ಕು ದಿನಕ್ಕೆ ವಾಪಾಸ್ ಬರ್ತಾನೆ ಅಂತ ಎಷ್ಟೋ ಜನ ಭವಿಷ್ಯ ನುಡಿದಿದ್ದರು.

ಮಾವನ ಜೊತೆ ಬೆಂಗಳೂರಿನ ಸಣ್ಣ ಮನೆಯಲ್ಲಿ ವಾಸ. ಆಗ ಮಾವನಿಗೆ ಮದುವೆಯಾಗಿರಲಿಲ್ಲ. ಬಂದ ಒಂದು ವಾರ ಫುಲ್ ಖುಷಿ. ಏಲ್ಲಿ ನೋಡಿದರಲ್ಲಿ ಕಾರುಗಳು, ಚಿತ್ರವಿಚಿತ್ರ ಜನಗಳು, ಭಾಷೆ, ಸಂಸ್ಕೃತಿ..ಒಂದೇ.. ಎರಡೇ....ಆಮೇಲೆ ಮನೆ ಕಡೆ ನೆನಪು ಕಾಡೋಕೆ ಶುರುವಾಯ್ತು . ಓದೋದು ಬೇಡ ಏನೂ ಬೇಡ ಅಂತ ಅನಿಸೋಕೆ ಶುರುವಾಯ್ತು. ಊರಿಗೆ ಹೋದ್ರೆ ಏಲ್ಲ ನಗಾಡ್ತಾರೆ ಅಂತ ಭಯ ನನ್ನನ್ನು ಮನೆಗೆ ಹೋಗೋದನ್ನ ತಡೆಯುತ್ತಿತ್ತು. ಹಾಗಾದ್ರೆ ಏನ್ ಮಾಡೋದು, ನಾನ್ಯಾಕೆ ಓದಬೇಕು, ಮನೆಗೆ ಹೋದ್ರೆ ಏನಾಗತ್ತೆ ಅಂತ ನನ್ನಲ್ಲೆ ದ್ವಂದ್ವ ಶುರುವಾಯ್ತು. ಹೇಳೋಣ ಅಂದ್ರೆ ಯಾರು ಇರ್ಲಿಲ್ಲ. ಯಾರಲ್ಲೂ ಹೇಳೋಕಾಗದೆ ಸುಮ್ನೆ ಕಿಟಕಿಯಿಂದ ಹೊರಗೆ ನೋಡ್ತಾಯಿದ್ದೆ . ಸ್ಕೂಲಿನಲ್ಲಿ ಯಾರ ಹತ್ರನೂ ಈ ವಿಷಯದ ಬಗ್ಗೆ ಜಾಸ್ತಿ ಮಾತಾಡ್ತಯಿರಲಿಲ್ಲ. ಕೊನೆಗೆ ಬೆಂಗಳೂರಿನಲ್ಲಿ ಸಾದ್ಯವಾದಷ್ಟು ದಿನ ಇರೋದು ಅಂತ ಸುಮ್ಮನಾದೆ.

ಅವಾಗ ನನಗೆ ಹೊಳೆದಿದ್ದು ನೆಕ್ಷ್ಟ್ ಯಾವಾಗ ಊರಿಗೆ ಹೋಗೋದು ಅಂತ. ತಕ್ಷಣ ಮುಂದೆ ಯಾವ ಹಬ್ಬ ಬರತ್ತೆ ಅಂತ ನೋಡಿದೆ. ಚೌತಿ ಹತ್ತಿರವಿತ್ತು. ಎಷ್ಟು ದಿನವಿರಬಹುದು ಅಂತ ಲೆಕ್ಕ ಹಾಕಿದೆ. ಇನ್ನು 50 ದಿನದಲ್ಲಿ ಊರಿಗೆ ಹೋಗೋದು ಅಂತ ಮನಸ್ಸಲ್ಲಿ ಸಮಾದಾನ ತಂದ್ಕೊಂಡೆ. ಪ್ರತಿದಿನ ಲೆಕ್ಕ ಹಾಕೋದೆ ನನ್ನ ಕೆಲಸ. ಅವಾಗ ಒಂದೊಂದು ದಿನಾನು ವರ್ಷಗಳಂತೆ(ಆದರೆ ಇಂದು ಅದಲು ಬದಲು). ಚೌತಿ ಬಂದೇ ಬಿಡ್ತು. ಜೈಲಿನಿಂದ ಕೈದಿಯೊಬ್ಬ ಬಿಡುಗಡೆಯ ದಿನ ಕಾದ ಹಾಗಿತ್ತು ನನ್ನ ಪರಿಸ್ತಿತಿ. ಆದರೆ ಮಾವ ಚೌತಿಗೆ ಹೋಗೋದೂ ಬೇಡ ಅಂದ್ಬಿಟ್ರು. ಕೊನೆಗೆ ಅತ್ತು ಕರೆದು ಚೌತಿಗೆ ಮನೆಗೆ ಹೋದೆ.ಕ್ರಮೇಣ ಬೆಂಗಳೂರಿನ ವಾತಾವರಣಕ್ಕೆ ಹೊಂದ್ಕೊಂಡೆ. ಮನೆ ನೆನಪು ಕಡಿಮೆಯಾಗ್ತಾ ಬಂತು. ಆದರೆ ಮನೆಯಿಂದ ವಾಪಾಸು ಬಂದ ಮೇಲೆ 10 ದಿನ ಬಾರಿ ಕಷ್ಟವಾಗ್ತಾಯಿತ್ತು.

ಮೊದಲು ಬೆಂಗಳೂರಿನಲ್ಲಿರುವ ಎಷ್ಟೋ ದೇವರುಗಳ ಹೆಸರು ಕೇಳಿ ಆಶ್ಚರ್ಯವಾಗ್ತಾಯಿತ್ತು. ಅಣ್ಣಮ್ಮ ಅಂತ ನಾನು ಮೊದಲು ಕೇಳಿರಲಿಲ್ಲ. ಯಾರದ್ದೋ ಹೆಸರಿರಬಹುದು ಅಂದ್ಕೊಂಡಿದ್ದೆ. ಆಮೇಲೇ ಗೊತ್ತಾಗಿದ್ದು ದೇವರ ಹೆಸರು ಅಂತ. ಊರಲ್ಲಿ ಒಮ್ಮೆ ಊಟ ಮಾಡ್ತಾಯಿದ್ದಾಗ ಅಮ್ಮ ಅನ್ನ ಹಾಕೋಕೆ ಬಂದ್ಲು. ನಾನು ತಿನ್ನಕತ್ತಿ ತಡಿ ಅಂದೆ. ಅದಕ್ಕೆ ಅಮ್ಮ ಅದು ಎಂತದು ತಿನ್ಕತ್ತಿ, ಉಣ್ಕತ್ತಿ ಹೇಳು ಅಂದ್ಲು. ಊರಿನ ಎಷ್ಟೋ ಶಬ್ದಗಳು ಮರೆಯಾಗಿ ಹೋಗಿತ್ತು.

ಸ್ಕೂಲು, ಕಾಲೇಜು, ಕೆಲಸ, ಆಮೇಲೆ ಮದುವೆ ಹೀಗೆ ದಿನ ಬೇಗ ಕಳೆದುಹೋಯ್ತು. ಓದೋವಾಗ ವರ್ಷಕ್ಕೆ 2 ತಿಂಗಳು ಊರಲ್ಲಿ ಇರ್ತಾಯಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಊರಿಗೆ ಹೋಗೋದೆ ಅಪರೂಪ. ಹೋದರೂ ಒಂದೆರಡು ದಿನ ಮಾತ್ರ ಇರೋದು. ಊರಿನ ಮಳೆಗಾಲ ನೋಡದೆ ಎಷ್ಟು ದಿನವಾಯ್ತು. ಈಗ ಊರಲ್ಲಿ ತುಂಬಾ ಮಳೆಯಂತೆ. ನಿನ್ನೆ ಮನೆಗೆ ಫೋನು ಮಾಡಿದ್ದೆ. ಕರೇಂಟಿಲ್ಲದೇ 15 ದಿನವಾಯ್ತಂತೆ. ಫೋನು ಕೆಲವೊಮ್ಮೆ ಸರಿ ಇರತ್ತಂತೆ. ಇಲ್ಲಿ 1 ನಿಮಿಷ ಕರೇಂಟಿಲ್ಲ ಅಂದ್ರೆ ನಮಗೆ ಕಳೆಯೋದು ಕಷ್ಟ. ಅಲ್ಲಿ ಬರೋಬ್ಬರಿ 15 ದಿನ ಕರೇಂಟಿಲ್ಲ.

ಲಾಟಿನು, ಚಿಮಣಿಯಲ್ಲಿ ಕಾಲ ಕಳೆಯೋದೆ ಒಂದು ರೀತಿ ಚಂದ. ಜೋರಾಗಿ ಹೊಯ್ಯುವ ಮಳೆಯ ಶಬ್ದ, ಸಂಜೆಯಾಗ್ತಾಯಿದ್ದ ಹಾಗೆ ಜೀರುಂಡೆಯ ಶಬ್ದ ಕೇಳೋಕೆ ಖುಷಿ.....

ಹಾಂ....ಈ 15 ವರ್ಷದಲ್ಲಿ ಸಾದಿಸಿದ್ದು ಎನು ಅಂತ ನನಗೇ ಗೋತ್ತಿಲ್ಲ.