Thursday, April 19, 2007

ಹಿರಿಯರಲ್ಲಿ ಭಕ್ತಿ ಭಾವ ತುಂಬಿರಬೇಕು....

ಮುದ್ದು ಮಾತು ಕೇಳಿ,
ಓ ಮುದ್ದು ಮಕ್ಕಳೇ,
ಜಾಣರಾಗಿ ಬಾಳೀ ನನ್ನ ಹೊನ್ನ ಹೂಗಳೇ,
ಮಾತಲ್ಲೀ ಹಿತವಿರಲೇಬೇಕು,
ನಿಮ್ಮ ನಡೆಯಲ್ಲೀ ಹಿತವಿರಲೇಬೇಕು,
ನೀವು ಏಲ್ಲೇ ಇರಲೀ, ನಾಳೆ ಹೇಗೇ ಇರಲೀ,
ಜನ ಮೆಚ್ಚುವಂತೆ ನೀವಿರಬೇಕು.

ಬಹಳ ಸರಳ, ಅಷ್ಟೇ ಅರ್ಥಗರ್ಬಿತವಾಗಿದೆ.

ತನಗೊಂದು ಮಗುವಾಗತ್ತೇ ಅಂತ ಗೊತ್ತಾದ ತಕ್ಷಣ, ತಂದೆ, ತಾಯಿ ಕನಸು ಕಾಣ್ಲಿಕ್ಕೆ ಪ್ರಾರಂಭ ಮಾಡ್ತಾರೆ. ನನ್ನ ಮಗ / ಮಗಳನ್ನು ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು ಅಂತ ಏನೇನೋ ಕನಸು ಕಂಡಿರ್ತಾರೆ. ತಾವು ಜೀವನದಲ್ಲಿ ಸಾಧಿಸಿದ್ದಕ್ಕಿಂತ ಹೆಚ್ಚು ತಮ್ಮ ಮಕ್ಕಳು ಸಾಧಿಸಬೇಕು, ತಮಗಿಂತ ಒಳ್ಳೆ ಜೀವನ ನಡೆಸ್ಬೇಕು, ಸಮಾಜದಲ್ಲಿ ಓಳ್ಳೆ ಗೌರವ ತಗೋಬೇಕು, ತಮ್ಮ ಇಳಿಗಾಲದಲ್ಲಿ ಆಸರೆಯಾಗಿರ್ತಾರೆ .... etc.

ಆದರೆ ಏಷ್ಟೋ ತಂದೆ ತಾಯಿಗಳ ಕನಸು ಬರೀ ಕನಸಾಗೇ ಇರತ್ತೆ. ನನಸಾಗೋದೆ ಇಲ್ಲ. ಮಕ್ಕಳು ಬೆಳೆದ ಹಾಗೆ ತಮ್ಮ ತಂದೆ ತಾಯಿಯಲ್ಲಿ ತಪ್ಪು ಹುಡುಕೋಕೆ ಪ್ರಾರಂಭ ಮಾಡ್ತಾರೆ. ಅದ್ರಲ್ಲೂ ಹೆಂಡತಿ ಮಾತು ಕೇಳಿ ಹೆತ್ತಪ್ಪ, ಹೆತ್ತಮ್ಮನ ಕಡೆಗಣಿಸೋರೆ ಜಾಸ್ತಿ. ಮದುವೆಯಾದ ಮೇಲೆ ತಮ್ಮ ಮಕ್ಕಳ ಬಗ್ಗೆ ಕನಸು ಕಾಣ್ತಾಯಿರ್ತಾರೆ. ವಯಸ್ಸಾದ ಅಪ್ಪ ಅಮ್ಮರನ್ನು ಕಡೆಗಣಿಸಿರುತ್ತಾರೆ. ನಾಳೆ ನಮ್ಮ ಮಕ್ಕಳು ಸಹ ನಮ್ಮ ಹಾಗೆ ಆಗ್ತಾರೆ ಅಂತ ಆದರೆ ಅವರಿಗೆ ಗೊತ್ತಾಗೋದೇ ಇಲ್ಲ. ಆದರೆ ತಮಗೆ ವಯಸ್ಸಾದಾಗ ಅವರಿಗೆ ತಮ್ಮ ತಂದೆ ತಾಯಿ ಅನುಭವಿಸಿದ ನೋವು ನೆನಪಾಗೊಲ್ಲ. ತಮ್ಮ ಮಕ್ಕಳ ಬಗ್ಗೆ ಕೋಪಯಿರತ್ತೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು.

ಹೆತ್ತು, ಹೊತ್ತು, ಪ್ರೀತಿಯನ್ನು ಧಾರೆಯೆರೆದ ಅಪ್ಪ ಅಮ್ಮ ಕೊನೆಗೆ ವೃದ್ದಾಶ್ರಮದಲ್ಲಿ ತಮ್ಮ ಬಗ್ಗೆ ತಾವು ಹಳಿದುಕೊಳ್ತಾಯಿರ್ತಾರೆ.

ನಾನು ಕಾಲೇಜ್ ನಲ್ಲಿ ಓದೋವಾಗ ಒಂದು ಫೋಟೋಗ್ರಾಫಿ ಅಸೈನ್ಮೆಂಟ್ ಗೋಸ್ಕರ ಕಾಲೇಜ್ ಪಕ್ಕದ್ದಲ್ಲೇ ಇದ್ದ ವೃದ್ದಾಶ್ರಮಕ್ಕೆ ಹೋಗಿದ್ದೆ. ಅಲ್ಲಿ ಒಬ್ಬ ಅಜ್ಜಿಯ ಫೋಟೋ ತಗೋವಾಗ ಆ ಅಜ್ಜಿ, ವೃದ್ದಾಶ್ರಮ ನೋಡ್ಕೊಳ್ಳೋನ ಹತ್ರ "ಏನಪ್ಪ,ಬೆಳಗ್ಗೆಯಿಂದ ತಿಂಡಿ ಕೊಟ್ಟಿಲ್ಲ, ಯಾವಾಗ ಕೊಡ್ತೀಯಾ" ಅಂತ ಅಂದ್ಲು. ಆಗ ಸಮಯ 12:30 ದಾಟಿತ್ತು. ನನಗೆ ಅಪರಾದಿ ಭಾವನೆ ಕಾಡ್ತಾಯಿತ್ತು.

ನಾಳೆ ನಮಗೂ ವಯಸ್ಸಾಗತ್ತೆ, ನಮ್ಮ ಮಕ್ಕಳು ನಮ್ಮನ್ನು ಕಡೆಗಣಿಸಬಹುದು... ಆವಾಗ ನಾನು ನನ್ನ ತಂದೆ ತಾಯಿಯರನ್ನು ಚೆನ್ನಾಗಿ ನೋಡ್ಕೊಂಡಿಲ್ಲ ಅಂತ ಪಶ್ಚಾತ್ತಾಪಪಡೋದಕ್ಕಿಂತ ಈಗಲೇ ಏಚ್ಚೆತ್ತು ತಂದೆ ತಾಯಿಯರನ್ನು ಚೆನ್ನಾಗಿ ನೋಡ್ಕೊಳ್ಳೋದು ಓಳ್ಳೇದು ಅಲ್ವಾ?

ಹಾಗಾದರೆ ಇದಕ್ಕೆ ಪರಿಹಾರ ಇಲ್ವಾ ಅಂತ ಅನಿಸಬಹುದು. ಬೆಳೆಯುವ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಭಾರತೀಯತೆ ಅಂದ್ರೆ ಏನು? ಏಲ್ಲವನ್ನು ಸರಿಯಾದ ರೀತಿಯಲ್ಲಿ ಹೇಳಿದರೆ ಇದನ್ನು ತಡೆಗಟ್ಟಬಹುದು ಅನ್ಸತ್ತೆ.

ಮೇಲಿನ ಹಾಡಲ್ಲಿ ಇನ್ನೊಂದು ವಾಕ್ಯ ಬರತ್ತೆ " ಹಿರಿಯರಲ್ಲಿ ಭಕ್ತಿ ಭಾವ ತುಂಬಿರಬೇಕು...."

Wednesday, April 18, 2007

ನಿವೃತ್ತಿ

ಎಂ.ಪಿ. ಪ್ರಕಾಶ್ ನಿವೃತ್ತಿ ವಿಷಯ ಕೇಳಿ ಒಂದು ರೀತಿ ಬೇಸರ ಹಾಗು ಆನಂದವಾಯ್ತು.
ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಅಂದ್ರೆ ಜನರಿಗೆ ಅಸಹ್ಯ ಭಾವನೆ ಬಂದಿದೆ. ಸಂಸತ್ತು,ವಿಧಾನಸಭೆಗಳಲ್ಲಿ ನಡೆಯುವ ಚರ್ಚೆ ನೋಡಿದರೇ ಅಥವಾ ಕೇಳಿದರೆ ಗೊತ್ತಾಗತ್ತೆ ಅವರ ಬಗ್ಗೆ, ಅವರ ಯೋಗ್ಯತೆ ಬಗ್ಗೆ. ಆಡಳಿತ ಪಕ್ಷದ ಹುಳುಕನ್ನು ಕಂಡು ಹಿಡಿಯಲು ವಿರೋದ ಪಕ್ಷದವರು ಹಗಲಿರುಳು ಪ್ರಯತ್ನಿಸಿದರೇ, ಅದನ್ನು ತೇಪೆ ಹಾಕಲು ಆಡಳಿತ ಪಕ್ಷ ಒದ್ದಾಡುತ್ತಿರುತ್ತದೆ. ಯಾವ ಪಕ್ಷ ಅಧಿಕಾರಕ್ಕೆ ಬಂದ್ರು ಇದೇ ಗತಿ. ಹೀಗೆ ಅಗ್ತಾ ಇದ್ರೆ ನಮ್ಮ ದೇಶ ಏಲ್ಲಿ ಮುಂದುವರಿಯತ್ತೆ. ತಮಗಿಷ್ಟ ಬಂದ ಹಾಗೆ ಸಾರ್ವಜನಿಕರ ದುಡ್ದು ಪೋಲು ಮಾಡೋದು, ಜಾತಿ ರಾಜಕಾರಣ ಮಾಡೋದು...ಅಬ್ಬ..ಒಂದೇ... ಏರಡೇ.. ಯಾರದ್ದೋ ದುಡ್ಡು... ಏಲ್ಲಮ್ಮನ ಜಾತ್ರೆ


ಇಲ್ಲಿ ವ್ಯಕ್ತಿತ್ವದ ಆದಾರದ ಮೇಲೆ ಸಚಿವ ಸ್ಥಾನವಿಲ್ಲ, ಜಾತಿವಾರು ಆಧಾರದ ಮೇಲಿದೆ.ಇಷ್ಟೆಲ್ಲಾ ಆದ್ರೂ ಜನ ಅವರನ್ನ ಕೇಳೋಲ್ಲ. ಯಾಕೆ ಅವರ ಉಸಾಬರಿ ಅಂತ ಸುಮ್ನೆ ಇರ್ತಾರೆ. ತಾವಾಯ್ತು, ತಮ್ಮ ಕೆಲಸವಾಯ್ತು. ಇದರ ನಡುವೆ ಅಲ್ಲೋ ಇಲ್ಲೋ ಒಂದೆರಡು ರಾಜಕಾರಣಿಗಳು ಸಮರ್ಥರಿರುತ್ತಾರೆ. ಅಂತಹರಲ್ಲಿ ಏಂ.ಪಿ.ಪ್ರಕಾಶ್ ಕೂಡ ಒಬ್ಬರು. ನಾನೇನು ರಾಜಕೀಯ ವಿಶ್ಲೇಕನಲ್ಲ. ಪತ್ರಿಕೆಗಳಿಂದ, ಹಾಗು ಅವರ ನಡ ನುಡಿಯಿಂದ ನನಗನಿಸಿದ್ದು. ಅದಕ್ಕೆ ಹೇಳಿದ್ದು ಅವರು ರಾಜಕಾರಣದಿಂದ ನಿವೃತ್ತರಾಗೋದು ಬೇಸರದ ವಿಷಯ.

ಇನ್ನು ಸಂತೋಷ ಯಾಕೇ ಅಂತ ಕೇಳಬಹುದು. ಅವರು ಬರೀ ರಾಜಕಾರಣಿ ಆಗಿರಲಿಲ್ಲ. ಅವರೊಲ್ಲೊಬ್ಬ ಕವಿಯಿದ್ದ. ಅವರಿಗೆ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಒಲವಿತ್ತು. ನಿವೃತ್ತಿಯ ನಂತರ ಅವರು ಹೆಚ್ಚಾಗಿ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅದರಿಂದ ನಮ್ಮ ಸಾಹಿತ್ಯ ಲೋಕಕ್ಕೆ ಒಳಿತಲ್ಲವೇ.

ಇವೆರಡನ್ನು ತುಲನೆ ಮಾಡಿದರೆ, ಅವರು ರಾಜಕೀಯದಲ್ಲಿದ್ದರೆ ಒಳ್ಳೇದು ಅನ್ಸತ್ತೆ ಅಲ್ವೇ? ಹೊಲಸೆದ್ದ ರಾಜಕಾರಣಕ್ಕೆ ಏಂ.ಪಿ.ಪ್ರಕಾಶ್ ಅಂತವರು ಬೇಕು.

Monday, April 16, 2007

ಬಿಡು ಗೆಳೆಯ

ಬಿಡು ಗೆಳೆಯ ನನ್ನನ್ನು
ಬಾಂದಳದ ಬಿಳಿ ಮೋಡದಂತೆ
ಒಂಟಿಯಾಗಲು ಬಿಡು ನನ್ನ
ನಿಂತೆ ನಿಂತಿರುವ ಬಾಹುಬಲಿಯಂತೆ

ಮಾನಸವೆ ಹೆಪ್ಪುಗಟ್ಟಿದೆ
ನಿಂತ ಜೀವದ ತುಂಬ
ನಕ್ಷತ್ರ ನಿಂತು ಬಿಟ್ಟಿದೆ
ಕಡಲ ನಾಭಿಯ ತುಂಬ

ಏನು ಮಾಡಲಿ ಹೇಳು ಗೆಳೆಯ
ಚಿಲ್ಲರೆಯಾಡುವ ಮಾತಿಗೆ
ಕಾಯುತಿದೆ ಇರುಳು ಅರಳುವ ಗ್ರಹಣ
ಬೆಂಕಿ ನೀಲಿಯ ಹೂವಿಗೆ

ನಂಬುವುದು ಹೇಗೆ
ಕಿತ್ತು ತಿನ್ನುವ ಮಾಗಿಗೆ
ನಂಬದಿರುವುದು ಹೇಗೆ
ಮರದ ಮೇಲಿನ ಕಾಯಿಗೆ

1999ನೇ ಸಾಲಿನಲ್ಲಿ ನಡೆದ "ಅಂತರ ಕಾಲೇಜ್ ಕವನ ಸ್ಪರ್ದೆ"ಯಲ್ಲಿ ಪ್ರಶಸ್ತಿ ಗಳಿಸಿದ ಕವನ