Wednesday, May 30, 2007

ಹೆಸರು...

ಹೆಸರು...

ಅದು ನಮ್ಮನ್ನು ಗುರುತಿಸೋಕೆ ಅಂತ ಇಟ್ಟಿರೋದು ಅಂತಿರಾ?. ಹೀಗೆ ಹೆಸರೇ ಇಲ್ಲ್ದೇ ಇದ್ರೆ ಚೆನ್ನಾಗೋರ್ತಾಯಿತ್ತು. ಯಾರು ಯಾರನ್ನು ಕರೆದ್ರು ಅಂತ ಗೊತ್ತಾಗ್ತಾಯಿರಲಿಲ್ಲ. ಈ ಹೆಸರು ಕಂಡುಹಿಡಿದವರು ಯಾರೋ ಏನೋ !!! ಎಲ್ಲ ವಿಚಿತ್ರ !!!

ಎಷ್ಟೋ ಜನ ತಮ್ಮ ಹೆಸರು ಚೆನ್ನಾಗಿಲ್ಲ ಅಂತ ಅಪ್ಪ, ಅಮ್ಮನ್ನ ಬೈತಾರೆ. ಪಾಪ, ಅವ್ರೇನು ಮಾಡ್ತಾರೆ. ತಮಗಿಷ್ಟದ್ದನ್ನು ಇಟ್ಟಿರಬಹುದು. ಜಾತಕದ ಪ್ರಕಾರ ಹೆಸರು ಇಟ್ಟಿರಬಹುದು. ದೇವರ ಹೆಸರಿಟ್ಟ್ತೀನಿ ಅಂತ ಹರಕೆ ಹೊತ್ತ್ಗೊಂಡು ಇಟ್ಟಿರಬಹುದು. ತಮ್ಮ ಮನೆಯ ಹಿರಿಯರ ಹೆಸರು ನೆನಪಿರಲಿ ಅಂತ ಅಜ್ಜ ನ ಹೆಸರು ಇಟ್ಟಿರಬಹುದು (ಅಪ್ಪನ ಹೆಸರು ಗಣೇಶ, ಮಗನ ಹೆಸರು ಗಣೇಶ !!!. ಆದರೆ ನನಗೆ ತಿಳಿದ ಹಾಗೆ ಅಜ್ಜಿ ಹೆಸರನ್ನು ಮೊಮ್ಮಗಳಿಗೆ ಇಟ್ಟಿದ್ದು ಕೇಳಿಲ್ಲ. ನಿಮಗೆ ಏನಾದ್ರು ಗೊತ್ತೆ ?)

ಮೊದ್ಲೆಲ್ಲಾ ಉದ್ದ ಉದ್ದ ಹೆಸ್ರು ಇರ್ತಾಯಿತ್ತು. ಈಗೇ ಎರಡೇ ಅಕ್ಷರ ಇರೋ ಹೆಸ್ರು ಜಾಸ್ತಿ. ಮುಂದೊಂದು ದಿನ ಒಂದೇ ಅಕ್ಷರ ಬರಬಹುದು.

ಇನ್ನು ಕೆಲವರು ಬುದ್ದಿ (?) ಬಂದಮೇಲೆ ಅಥವಾ ಎಲ್ಲರೂ ತಮ್ಮ ಹೆಸರು ಹೇಳ್ಲಿಕ್ಕೆ ಅನುಕೂಲ ಆಗ್ಲಿ ಅಂತ ಶಾರ್ಟ್
ಮಾಡ್ಕೋತಾರೆ. ಕ್ರಿಷ್ಣಪ್ಪ ಅಂತ ಇದ್ದವರು ಶಾರ್ಟ್ ಆಗಿ ಕ್ರಿಸ್ ಅಂತನೋ ಇಟ್ಕೋತಾರೆ. ಇನ್ನು ನನ್ನ ಫ್ರೆಂಡ್ ದರಣೇಂದ್ರ ಮೂರ್ತಿ ತೈವಾನ್ ನಲ್ಲಿದಾನೆ. ಪಾಪ ಅಲ್ಲಿಯವರಿಗೆ ಇವನ ಹೆಸರು ಉಚ್ಚಾರಣೆ ಮಾಡೋಕೆ ಒದ್ದಾಡ್ತಾಯಿದ್ರು ಅನ್ಸತ್ತೆ. ಈಗ ಡ್ಯಾನ್ ಅಂತ ಇಟ್ಕೊಂಡಿದಾನೆ. ಇರ್ಲಿ, ಅವರ ಮರ್ಜಿ ಅಲ್ವಾ?

ಈಗ ನನ್ನೆಸ್ರಿಗೆ ಬರೋಣ. ನನ್ನೆಸ್ರು ಒಂತರಾ ವಿಚಿತ್ರ. ಹುಡುಕಿದ್ರೆ ಏಲ್ಲೋ ಒಂದಿಬ್ಬರು ಸಿಗಬಹುದು. ಹುಟ್ಟಿದಾಗ ಇಟ್ಟಿದ್ದು ಮಹೇಶ (ಈಗಲೂ ನಮ್ಮೂರಿಗೆ ಹೋಗಿ ಯಜ್ಞೇಶ್ ಅಂದ್ರೆ ಇಲ್ಲಿ ಯಾರು ಇಲ್ಲ ಅಂತಾರೆ, ಹಾಗೆ ಆಫೀಸಿಗೆ ಬಂದು ಮಹೇಶ್ ಅಂದ್ರೆ ಸೇಮ್ ರಿಪ್ಲೈ.) 2 ವರ್ಷ ಆದ್ಮೇಲೆ ಯಜ್ಞೇಶ್ವರನಿಗೆ ಆಹುತಿಯಾಗೋಕೆ ಹೋಗಿ, ಹಿರಿಯವರು ಮಾಡಿದ ಅದೃಷ್ಟದ ಪಲವಾಗಿ ಮರುಜನ್ಮ ಪಡೆದು ಬಂದ್ ಮೇಲೆ ಯಜ್ಞೇಶ್ ಅಂತ ಹೆಸ್ರಿಟ್ರು.

ಒಬ್ಬೊಬ್ರು ಒಂದು ರೀತಿ ಕರಿತಾರೆ. ಬಂಗಾಳಿ ಫ್ರೆಂಡ್ ಒಬ್ಬ ಜಗಣೇಸ್ ಅಂತ ಕರಿತಾಯಿದ್ದ. ಕೊನೆಗೆ ಕೇಳಿದಾಗ ಬಂಗಾಲ ಭಾಷೆಯಲ್ಲಿ "ಯ" ಬದ್ಲು "ಜ" ಉಪಯೋಗಿಸ್ತಾರೆ. ಹಾಗೆ ಕರಿಬೇಡಪ್ಪ ಅಂದ ಮೇಲೆ ಯಗ್ನೇಸ್ ಅಂತ ಕರಿಯೋಕೆ ಶುರು ಮಾಡ್ದ. 100 ರಲ್ಲಿ 99 ಜನ ಯಗ್ನೇಸ್ ಅಂತ ಕರೀತಾರೆ. "ಜ್ಞ" ಮತ್ತು "ಗ್ನ" ನಡುವೆ ವ್ಯತ್ಯಾಸ ಇಲ್ಲದೇ ಇರೋರು ಒಂದು ಕಡೆಯಾದ್ರೆ, ನಾಲಿಗೆ ಹೊರಳದೇ ಹೇಳೋರು ಇನ್ನೊಂದು ಕಡೆ."ಗ್ನ" ಅಲ್ಲ ಅಂದ್ರೆ, "ಯಜನೇಶ್" ಅಂತಾರೆ. ಇನ್ನು ಯಾವ್ದಾದ್ರು ಕ್ರೆಡಿಟ್ ಕಾರ್ಡಿನವರು ಫೋನ್ ಮಾಡಿದ್ರೆ "may i speaking to ya ya ya.....ಅಂತ ಹೇಳಿ ಕೊನೆಗೆ narayana swamy (ನನ್ನ ಅಪ್ಪನ ಹೆಸ್ರು)ಅಂತಾರೆ. ಅವ್ರು ಏಲ್ಲಿ ಯಾ..ಯಾ.. ಅಂತ ಹೇಳಿದ್ರೋ..ತಕ್ಷಣ ನಾನೇ Yajnesh ಅಂತ ಹೇಳ್ತೀನಿ. ಹೆಸ್ರಲ್ಲೇನಿದೆ ಮಣ್ಣು ಅಂತಿರಾ??? ಜನ ನೆನಪಿಟ್ಕೊಳ್ಳೋದು ನಮ್ಮ ವ್ಯಕ್ತಿತ್ವದಿಂದ ಅಲ್ವಾ?

ನೀವು ಒಂದ್ಸಲ ನನ್ನ ಹೆಸ್ರು ಹೇಳೋಕೆ ನೋಡಿ.. ನೆನಪಿಡಿ "ಗ್ನ" ಅಲ್ಲ..."ಜ್ಞ"...

Wednesday, May 23, 2007

ಹುಚ್ಚು

ನಿನ್ನೆ ಒಂದು ಪುಸ್ತಕ ಓದ್ತಾಯಿದ್ದೆ. ಅದರಲ್ಲಿ ಹುಚ್ಚಿನ ಬಗ್ಗೆ ಒಂದು ಲೇಖನ ಬಂದಿತ್ತು. ಅದರ ಸಾರವನ್ನು ತೆಗೆದುಕೊಂಡು ಅದಕ್ಕೆ ಕೈ, ಕಾಲುಗಳನ್ನು ಸೇರಿಸಿ ಬರಿಯೋಣ ಅಂತ ಇದೀನಿ.

ಏನಿದು ಹುಚ್ಚು????

ವೈದ್ಯಶಾಸ್ತ್ರದ ಪ್ರಕಾರ "ಮನೋರೋಗ".

ಏ ಅವನಿಗೆ ಹುಚ್ಚು ಹಿಡಿದಿದೆ ಅನ್ಸತ್ತೆ ಅಂದರೆ ಅವನನ್ನು ನಿಮ್ಯಾನ್ಸ್ ಅಥವಾ ಕಂಕನಾಡಿಗೆ ಸೇರಿಸ್ಬೇಕೇನೋ ಅನ್ನೋರು, ಏನಾದ್ರು ಎಡವಟ್ಟು ಮಾತಾಡಿದ್ರೆ ಹುಚ್ಚರ ರೀತಿ ಮಾತಾಡಬೇಡ ಅನ್ನೋರು, ಏನಾದರು ಜಾಸ್ತಿ ಯೋಚನೆ ಮಾಡ್ತಾಯಿದ್ದರೆ, ಇವಳಿಗೆ/ಇವನಿಗೆ ಏನೋ ಆಗಿದೆ, ಹೀಗೆ ಬಿಟ್ಟರೆ ಹುಚ್ಚು ಹಿಡಿಯೋ ಚಾನ್ಸ್ ಇರತ್ತೆ ಅನ್ನೋರು, ಅವನಿಗೆ ಹುಡುಗಿ ಕೈ ಕೊಟ್ಟಿದ್ದರಿಂದ ಹುಚ್ಚರ ತರ ವರ್ತಿಸಿತಾಯಿದಾನೆ ಅನ್ನೋ ಜನಗಳು ಇರ್ತಾರೆ.
ಇವೆಲ್ಲ ಮನೋರೋಗಕ್ಕೆ ಸಂಬಂದಪಟ್ಟಿರೋದು.

ಏಲ್ಲ ಪರಿದಿಯನ್ನು ದಾಟಿ, ಇತಿ ಮಿತಿಯನ್ನು ದಾಟಿದ ಅಂಟಿಗೂ ಹುಚ್ಚು ಎನ್ನುತ್ತಾರೆ. ಈ ಪ್ರಪಂಚದಲ್ಲಿ ಬಹಳ ರೀತಿಯ ಹುಚ್ಚರನ್ನೂ, ಹುಚ್ಚುತನಗಳನ್ನು ನಾವು ಕಾಣಬಹುದು.ಹಣದ ಅತಿಯಾಸೆ ಇರೋರು, ಜೀವನ ಪೂರ್ತಿ ಕಷ್ಟಗಳನ್ನೆಲ್ಲಾ ಅನುಭವಿಸಿಯಾದರೂ ಹಣ ಗಳಿಸಬೇಕು ಅಂತ ಇರ್ತಾರೆ. ಹೆಚ್ಚು ಹಣಗಳಿಸಬೇಕು ಅಂತ ಹಣದ ಹಿಂದೆ ಹೋಗೋರನ್ನು ನಾವು ಈಗ ಹೆಚ್ಚು ಕಾಣ್ತೇವೆ. ಅದು ಅತಿಯಾದರೆ ಅಡ್ಡಬಂದವರನ್ನು ಮುಗಿಸಿಯಾದರೂ ಹಣ ಗಳಿಸಬೇಕು ಅನ್ನೋದು ಅವರ ಉದ್ದೇಶವಾಗಿರತ್ತೆ. ಅಂತವರಿಗೆ ಏಷ್ಟು ಸಂಬಳ ಬಂದರೂ ತೃಪ್ತಿಯಿರೋದಿಲ್ಲ. ಅವನಿಗೆ ನನಗಿಂತ ಜಾಸ್ತಿ ಬರತ್ತೆ. ನಾನು ಅವನಷ್ಟು ಸಂಬಳ ಪಡೀಬೇಕು ಅಂತ ವಾಮಮಾರ್ಗನ್ನಾದರು ಬಳಸಿ ಹಣದ ಹಿಂದೆ ಓಡ ಹುಚ್ಚರನ್ನು ನಾವು ಕಾಣ್ತೇವೆ.

ಇನ್ನು ಕೆಲವರು ಇರ್ತಾರೆ, ಒಬ್ಬರನ್ನೊಬ್ಬರು ಪ್ರೀತಿಸಿ, ಅವರನ್ನು ಪಡೆಯಲು ತಮ್ಮನ್ನು ಹೆತ್ತು, ಹೊತ್ತು ಬೆಳಿಸಿದ ತಂದೆ ತಾಯಿಗಳನ್ನು ಬಿಟ್ಟಾದರು ಸರಿ, ಅವಳನ್ನು/ಅವನ್ನನ್ನು ಪಡೆಯಲೇ ಬೇಕು ಅನ್ನುವ ಹುಚ್ಚುತನವನ್ನು ನಾವು ಕಾಣ್ತೇವೆ. ಆಗ ಅವರಿಗೆ ಯಾರ ತಿಳುವಳಿಕೆ, ಬುದ್ದಿಮಾತುಗಳು ಅವರಿಗೆ ರುಚಿಸೋಲ್ಲ. ತಮ್ಮ ಗುರಿ ಅವಳನ್ನು/ಅವನನ್ನು ಪಡೆಯೋದು ಅಂತ ಇರತ್ತೆ. ಕೊನೆಗೆ ಒಬ್ಬರನ್ನೊಬ್ಬರು ಸಿಗದೇ ಇದ್ದರೆ, ಜೀವವನ್ನಾದರು ಕಳೆದುಕೊಂಡು ಬಿಡಬೇಕೆನ್ನುವ ಹುಚ್ಚತನವದು.

ತಾನು ದೊಡ್ದ ಮನುಷ್ಯನಾಗಬೇಕು ಅನ್ನೋ ಹುಚ್ಚು ಇರೋರಿಗೆ, ಇತರರನ್ನು ತುಳಿದರೂ ಪರವಾಗಿಲ್ಲ, ತಮ್ಮ ಕೀರ್ತಿ ಹೆಚ್ಚಾಗಬೇಕು ಅನ್ನೋದಿರತ್ತೆ. ಇನ್ನು ಕೆಲವರಿಗೆ ರಾಜಕೀಯದ ಹುಚ್ಚು. ಕೆಲವರಿಗೆ ಸಿನಿಮಾದ ಹುಚ್ಚು. ಸಿನಿಮಾ ನಟಿ/ನಟನ ಹುಚ್ಚು.ಕೆಲ ಲಫಂಗರಿಗೆ ಹುಡುಗಿಯರ ಹುಚ್ಚು. ತಮ್ಮ ಬ್ಲಾಗನ್ನು ಹೆಚ್ಚು ಜನ ನೋಡಬೇಕು, ಕಮೆಂಟ್ಸ್ ಮಾಡಬೇಕು ಅನ್ನೋ ಹುಚ್ಚು. ಯಾರು ಕಮೆಂಟ್ಸ್ ಮಾಡದೇ ಇದ್ದರೆ ತಾವೆ Anonymous ನಿಂದ ಮಾಡೋ ಹುಚ್ಚು. ಇದು ಹುಚ್ಚತನಕೆ ಸೇರ್ಪಡೇಯಾದ ಹೊಸ ಹುಚ್ಚು. ಹುಚ್ಚಿನ ಬಗ್ಗೆ ಬರೆಯುತ್ತಾ ಹೋದರೆ ಹನುಮಂತನ ಬಾಲದ ತರ ಆಗಬಹುದು.

ಯಾವುದೋ ಫಿಲ್ಮ್ ನಲ್ಲಿ ಕೇಳಿದ ಹಾಡು ನೆನಪಾಗ್ತಾಯಿದೆ.

"ಹುಚ್ಚರ ಸಂತೆ, ಹುಚ್ಚರ ಸಂತೆ,
ಈ ಭೂಮಿ ಮೇಲೆ ಇರೋರೆಲ್ಲ ಹುಚ್ಚರು ಕಣೋ..."


ಒಟ್ಟಿನಲ್ಲಿ ಹುಚ್ಚಿನ ಬಗ್ಗೆ ಜಾಸ್ತಿ ಯೋಚನೆ ಮಾಡಿದರೆ ನಮಗೆ ಹುಚ್ಚ ಎನ್ನಬಹುದು.


ನಾಳಿನ ಭವಿಷ್ಯದ ಬಗ್ಗೆ ಯಾವಾಗಲು ಚಿಂತಿಸುತ್ತ, ಇರುವ ಪ್ರತಿಕ್ಷಣವನ್ನು ಅನುಭವಿಸಲಾರದವನು ಎಷ್ಟು ಶ್ರೀಮಂತನಾದರೇನು, ಏಷ್ಟು ಬುದ್ದಿವಂತನಾದರೇನು, ಅವನು ಹುಚ್ಚನೇ.

Friday, May 18, 2007

ಬಿಸಿ ಬಿಸಿ ಸುದ್ದಿಗಳು (?)

ಬೆಳಗ್ಗೆ ಎದ್ದವನೆ ಹೊರಗೆ ಬಂದು ಪೇಪರ್ ಗೆ ತಡಕಾಡಿದೆ. ಇವತ್ತು ಎಂದಿನಂತೆ ಪೇಪರ್ ಲೇಟು. ತತ್. ಯಾವಾಗ್ಲು ಇವರ ಹಣೇಬರಹನೇ ಇಷ್ಟು ಅಂತ ಬೈಕೋತ್ತಾ ಪೇಪರಿಗಾಗಿ ಕಾದೆ. ಶಬರಿ ರಾಮನಿಗೆ ಕಾದಂತೆ. ಕೊನೆಗೂ ಪೇಪರಿನವನು ಬಂದ. ನನ್ನ ಕಂಡೊಡನೇ ಸೈಕಲ್ನಲ್ಲಿ ಹೋಗ್ತಾ ಮುಖದ ಮೇಲೆ ಪೇಪರ್ ಏಸೆದ. ಒಳ್ಳೇ ಬಾಣದ ತರ ನನ್ನತ್ತ ನುಗ್ಗಿ ಬಂತು. ಹೇಗೋ ತಪ್ಪಿಸಿಕೊಂಡೆ. ಬೈಯೋಣ ಅಂತ ಬಾಯಿ ತೆರೆಯೋಕಿಂತ ಮುಂಚೆ ಅವನು ಮಂಗ ಮಾಯ. ವೇಗವಾಗಿ ಬಂದ ಪೇಪರ್ರು, ಗೋಡೆಗೆ ಹೊಡೆದು ನ್ಯೂಟನ್ಸ್ ಥರ್ಡ ಲಾ ದಂತೆ ಮತ್ತೆ ಕೆಳಗೆ ಬಿತ್ತು. ಮೊದಲ ಮಹಡಿಯಿಂದ ಕೆಳಗಿಳಿದು ಬೆಳಗ್ಗೆ ಬೆಳಗ್ಗೆ ಬೈತಾ ಹೋಗಿ ಪೇಪರ್ ತಂದೆ.

ಪೇಪರ್ ನಲ್ಲಿ ಏನ್ ಮಣ್ಣು ಇರಲ್ಲ ಅಂತ ಗೊತ್ತಿದ್ರು, ಬೆಳಗ್ಗೆ ಎದ್ದ ತಕ್ಷಣ ಪೇಪರ್ ಓದದೆ ಹೋದ್ರೆ ಮನಸ್ಸಿಗೆ ಸಮಾಧಾನನೇ ಇರಲ್ಲ ನೋಡಿ. ಅಂತೂ ಪೇಪರ್ ತಂದು ಬಿಡಿಸಿ ನೋಡ್ದೆ. ಅದೇ ಹಳಸು ವಿಷಯಗಳು, ಉಳ್ಳಾಲ ಎಲೆಕ್ಷನ್ನು... ಅಬ್ಬಾ... ಅದರ ಮದ್ಯ ದೊಡ್ಡ ಪೋಸ್ಟರ್ರು.. ನಮ್ಮ ಮಣ್ಣಿನ ಮಗ ದೇವೇಗೌಡರ ಹುಟ್ಟಿದ ಹಬ್ಬ. ಅವರ ಅಭಿಮಾನಿ(?)ದೇವರುಗಳ ಹಾರೈಕೆ. ಯಪ್ಪೋ.. ಅಂತ ಬೇರೆ ಪುಟ ನೋಡೋಣ ಅಂತ ತಿರುಗಿಸಿದರೆ ಅದ್ರಲ್ಲೂ ಇದೇ ವಿಷಯ..."ಮಂಗ್ಯಾನ್ ಮಕ್ಳು ಎಲ್ಲ್ ನೋಡಿದ್ರೂ ಫೋಟೋ ಹಾಕ್ಕ್ಯಂತಾರ್ರೀ..." ಅಂತ ಕಾಳಣ್ಣ ಹಿಂದೆ ಬರೆದಿದ್ದ ನೆನಪಾಗಿ ನಕ್ಕೆ.

ದೇವೇಗೌಡ್ರು ಅಂದ ತಕ್ಷಣ ನನಗೆ ಹಳೇ ಕಂಪನಿಯ ಒಂದು ಘಟನೆ ನೆನಪಾಯ್ತು. ನಮ್ಮ ಹಳೇ ಕಂಪನಿಯಲ್ಲಿ ಯಾರದ್ದೇ ಹುಟ್ಟಿದ ಹಬ್ಬ ಆದ್ರೂ ರಿಸೆಪ್ಷನ್ ನಲ್ಲಿ ಹಾಕ್ತಾಯಿದ್ರು. ಒಮ್ಮೆ ನನ್ನ ಹತ್ತಿರ ಒಬ್ಬ ಫ್ರೆಶರ್ರು ಬಂದು ಈ ಕಂಪನಿಯಲ್ಲಿ ಯಾರಾದ್ರು ರಾಜಕಾರಣಿಗಳು ಬೋರ್ಡಿನಲ್ಲಿದಾರಾ ಅಂದ. ಯಾಕಪ್ಪ ನಿನಗೆ ಆ ಡೌಟು ಬಂತು ಅಂತ ಕೇಳಿದೆ. ಅಲ್ಲಾ ಮೊನ್ನೆ ನಾನು ಕೆಲ್ಸಕ್ಕೆ ಸೇರಿದಾಗ ರಿಸೆಪ್ಷನ್ ನಲ್ಲಿ "ಹ್ಯಾಪಿ ಬರ್ಥ್ ಡೇ ದೇವೇಗೌಡ" ಅಂತ ಹಾಕಿದ್ರು ಅಂದ .. ಅವನ್ನ ಕೇಳ್ದೆ "ಊರಿಗೆ ಒಬ್ಬಳೇ ಪದ್ಮಾವತಿನಾ". ಅವ್ನಿಗೆ ಅರ್ಥ ಆಗಿಲ್ಲ. ಪ್ಯಾಟೆನಲ್ಲಿ ಓದ್ದೋನು. ಅದೆಲ್ಲ ಏಲ್ಲಿ ಅರ್ಥ ಆಗ್ಬೇಕು. ಕಣ್ಣು ಬಿಟ್ಕಂಡು ನಿಂತ. ಇಲ್ಲೂ ಒಬ್ಬ ದೇವೇಗೌಡ್ರು ಇದಾರಪ್ಪ. ಅವರು ರಾಜಕಾರಣಿ ಅಲ್ಲ. ಸಿಸ್ಟಮ್ ಅಡ್ಮಿನ್ನು ಅಂದೆ. ಅವನು ಸೇರಿದ್ದ ದಿನ ಸಿಸ್ಟಮ್ ಅಡ್ಮಿನ್ನು ದೇವೇಗೌಡ್ರ ಬರ್ಥ್ ಡೇ. ಪಾಪ ಹೊಸಬನಿಗೆ ಅದು ಏಲ್ಲ ಗೊತ್ತಾಗ್ಬೇಕು.

ಈಗ ವರ್ತಮಾನಕ್ಕೆ ಬರೋಣ. ಪೇಪರ್ರಿನಲ್ಲಿ ಅಷ್ಟೇನು ಹೊಸ ವಿಷಯ ಇರ್ಲಿಲ್ಲ. ನಿತ್ಯಕರ್ಮ ಮುಗಿಸಿ ಹೊಟ್ಟೆಪಾಡಿಗೋಸ್ಕರ ಕೆಲ್ಸ ಮಾಡ್ಬೇಕಲ್ಲ. ಕಾರ್ ತಗಂಡು ಹೊರಟೆ. ಮದ್ಯ ನನ್ನ ಫ್ರೆಂಡಿನ ಹತ್ರ ಇವತ್ತು ದೇವೇಗೌಡ್ರ ಹುಟ್ಟಿದ ಹಬ್ಬ ಕಣೋ ಅಂದೆ.ಅದಕ್ಕೆ ಅವನು "ಓ ನಮ್ಮ ನೆಲ್ಸನ್ ಮಂಡೇಲಾದಾ" ಅಂದ. ನಂಗೆ ಅರ್ಥ ಆಗ್ಲಿಲ್ಲ. ಅದಕ್ಕೆ ಅವನು ಹೇಳ್ದ..

"ನೆಲ+ಸನ್+ಮಂಡೆ+ಇಲ್ಲ"

ವಿ.ಸೂಃ ಇದು ನನ್ನ ವಯಕ್ತಿಕ ಅನಿಸಿಕೆ ಅಲ್ಲ... ನನ್ನ ಸ್ನೇಹಿತನದು..

Tuesday, May 15, 2007

ಗೋ ಶಕೆ

ವಿಶ್ವ ಗೋ ಸಮ್ಮೇಳನ ಮುಗಿದಿದೆ. ಕ್ರಿಸ್ತ ಶಕೆ ಮುಗಿದು ಗೋ ಶಕೆ ಪ್ರಾರಂಭವಾಗಿದೆ ಅನ್ನಬಹುದು. ಇಲ್ಲಿಯ ತನಕ ಗೋ ಏನ್ನುವುದು ಬರೀ ಹಾಲು ಕೊಡುವ ಯಂತ್ರ ಎಂದರಿತಿದ್ದ ಆಧುನಿಕ ಸಮಾಜ(?) ಗೋವಿನ ಬಗ್ಗೆ ಅಲ್ಪಸಲ್ಪ ಅರಿತಿರುವುದು ಗೋ ಶಕೆಯ ಪ್ರಾರಂಭ ಅನ್ನಬಹುದು.ಹಾಲು ಕೊಡದ ಹಸುಗಳನ್ನು ಕಸಾಯಿ ಖಾನೆಗೆ ಮಾರುವ ಮುನ್ನ ಜನ ಸ್ವಲ್ಪ ಯೋಚಿಸುವಂತಾಗಿದೆ.

ಹಿಂದೆಲ್ಲಾ ಗೋ ಅಂದರೆ ಪೂಜ್ಯ ಭಾವನೆಯಿತ್ತು. ಕಾಲಕ್ರಮೇಣ ಜನರಲ್ಲಿ ಅದು ಮರೆಯಾಯ್ತು. ಇಂದಿಗೂ ಹಳ್ಳಿಗಳಲ್ಲಿ ಗೋವನ್ನು ಪೂಜಿಸುತ್ತಾರೆ. ಯಾವುದಾದರು ಕಾರ್ಯಕ್ರಮದಲ್ಲಿ ಊಟಕ್ಕೆ ಮುನ್ನ "ಗೋ ಗ್ರಾಸ" ಕೊಡುವುದನ್ನು ನೀವು ನೋಡಿರಬಹುದು. ಗಂಟೀ ಪೂಜೆ (ಗೋ ಪೂಜೆ) ಹಬ್ಬ ನಿಮಗೆ ಗೊತ್ತಿರಬಹುದು. ಕೆಲವು ಕಡೆ ದೀಪಾವಳಿಯ ದಿನ ಮಾಡ್ತಾರೆ. ಗೋವನ್ನು ತೊಳೆದು ಅವಕ್ಕೆ ಶೃಂಗಾರ ಮಾಡಿ ಪೂಜಿಸಿ ಅವನ್ನು ಗುಡ್ಡಕ್ಕೆ ಕರೆದುಕೊಂಡು ಹೋಗ್ತಾರೆ. ಅಲ್ಲಿ ಹುಮ್ಮಸ್ಸು ಇರುವ ಯುವಕರು ಗೋವಿನ ಸರವನ್ನು ಕೀಳುವ ಪದ್ದತಿ ಇದೆ. ಗೋವನ್ನು ಅಟ್ಟಿಸಿಕೊಂಡು ಹೋಗಿ ಸರ (ಅಡಕೆ ಸರ, ಚೆಂಡು ಹೂವಿನ ಸರ...) ಕೀಳುತ್ತಾರೆ. ಸಿಗದೇ ಇದ್ದರೆ ಗೋ ಓಡುವಾಗ ಬಿದ್ದ ಸರವನ್ನು ಯಾರು ನೋಡದ ಹಾಗೆ ಎತ್ತಿಕೊಂಡು ತಾವೇ ಕಿತ್ತ ಹಾಗೆ ಬಂದು ಫೋಸು ಕೊಡುವವರೂ ಇದ್ದಾರೆ. ಇನ್ನು ಕೆಲವರು ಇದರ ಉಸಾಬರಿ ಬೇಡ, ಹಬ್ಬಕ್ಕೆ ಹಾಕಿದ ಹೊಸ(?) ಬಟ್ಟೆ ಹಾಳಾದೀತು ಎಂದು ಸುಮ್ಮನಿರುತ್ತಾರೆ.
ಆದರೆ ಕಾಲನ ಹೊಡೆತಕ್ಕೆ ಸಿಕ್ಕು ಈಗ ಹಬ್ಬ ಹರಿದಿನಗಳನ್ನು ಅರ್ಥರಹಿತವಾಗಿ ಆಚರಿಸುತ್ತಿದ್ದಾರೆ. ಯಾರಿಗೂ ಹಬ್ಬದ ಬಗ್ಗೆ ಸರಿಯಾದ ಮಾಹಿತಿಯಿರೋದಿಲ್ಲ. ಎಲ್ಲರೂ ದುಡ್ಡಿನ ಬೆನ್ನ ಹಿಂದೆ ಬಿದ್ದು ಹಳ್ಳಿಯನ್ನು ತೊರೆದು ಪಟ್ಟಣಗಳತ್ತ ದಾವಿಸುತ್ತಿದ್ದಾರೆ. ಒಂದು ರೀತಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಊರಲ್ಲೋ, ಅಪ್ಪ ಅಮ್ಮ ಮಕ್ಕಳಿಲ್ಲದ ಮೇಲೆ ಏನ ಹಬ್ಬ ಮಾಡೋದು ಅಂತ ಕಾಟಾಚಾರಕ್ಕೆ ಹಬ್ಬ ಮಾಡೋ ಪರಿಸ್ಥಿತಿ ಬಂದಿದೆ.

ಇನ್ನೊಂದು ಕಡೆ ಕೆಲವು ಮಠಗಳು ನಮ್ಮ ಸಂಸ್ಕೃತಿಯನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನ ಮಾಡ್ತಾಯಿವೆ. ಇದರಲ್ಲಿ ಇತ್ತೀಚೆಗೆ ಕೇಳಿ ಬರ್ತಾಯಿತರೋ ಹೆಸರು "ಶ್ರೀ ರಾಮಚಂದ್ರಪುರ ಮಠ". ಗೋವನ್ನು ಬರೀ ಧೈವಿಕ ದೃಷ್ಟಿಯಿಂದ ನೋಡದೆ ವೈಜ್ಙಾನಿಕ ದೃಷ್ಟಿಯಿಂದಲೂ ನೋಡಿ, ಗೋವಿನಿಂದ ಏನು ಉಪಯೋಗವಾಗ್ತಾಯಿದೆ ಅಂತ ಏಲ್ಲರಿಗೂ ಮನವರಿಕೆ ಮಾಡಿಕೊಟ್ಟಿದೆ ಈ ಮಠ. ನಿಮಗೆ ತಿಳಿದಿರಲಿ.. ಗೋವಿನ ಬಗ್ಗೆ ಅತಿ ಹೆಚ್ಚು ಪೇಟೆಂಟ್ ಪಡೆದಿರೋ ದೇಶ ಅಮೇರಿಕ.

ನಾವೀಗ ವೈಜ್ಙಾನಿಕ ಯುಗದಲ್ಲಿದ್ದೇವೆ. ವೆಬ್ ಸೈಟ್,ಈ-ಮೈಲ್, ಎಲ್ಲ ಜೀವನದ ಅವಿಭಾಜ್ಯ ಅಂಗವಾಗ್ತಾಯಿದೆ. ಒಬ್ಬ ಇಂಜಿನಿಯರ್ ಒಂದು ದಿನ ಆಫೀಸಿನಲ್ಲಿ ಇಂಟರ್ನೆಟ್ ಇಲ್ಲ ಅಂದ್ರೆ ವಿಲ ವಿಲ ಒದ್ದಾಡ್ತಾಯಿರ್ತಾನೆ. ಮುಂದೊಂದು ದಿನ ಪ್ರತಿಯೊಬ್ಬನು ತನ್ನದೇ ಆದ ವೆಬ್ ಸೈಟ್ ಹೊಂದಿ ಅದರಲ್ಲಿ ತನ್ನ ಏಲ್ಲಾ ಮಾಹಿತಿಯನ್ನು ಕೊಡೋ ಪರಿಸ್ಥಿತಿ ಬರಬಹುದು. ನಿಮ್ಮ ವಿಳಾಸ ಕೊಡ್ತೀರಾ, ನಿಮ್ಮ ಫೋನ್ ನಂಬರ್ ಕೊಡ್ತೀರಾ ಅಂತ ಕೇಳಿದರೆ ನನ್ನ ವೆಬ್ ಸೈಟ್ ನೋಡಿ ಅಂತ ಅನ್ನಬಹುದು.

ಏನಿದು ಗೋವಿಗೂ ವೆಬ್ ಸೈಟ್ ಗೂ ಏನು ಸಂಭಂದ ಅನ್ನಬಹುದು. ಸಂಭಂದ ಇದೆ... ವಿಶ್ವ ಗೋ ಸಮ್ಮೇಳನದ ವಿಷಯವನ್ನು ಜಗತ್ತಿಗೆ ಅತಿ ಶೀಘ್ರವಾಗಿ ತಲುಪಿಸಲು ರಾಮಚಂದ್ರಪುರ ಮಠವೂ ಸಹ ವೆಬ್ ಸೈಟ್ ಹೊಂದಿದೆ. ನನಗೆ ವಿಶ್ವ ಗೋ ಸಮ್ಮೇಳನದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬೇಕು ಅಂತ ಅನಿಸಿದರೂ ಕೆಲಸದ ಒತ್ತಡದಿಂದ ಕೊನೆಯ ಕೆಲವು ದಿನಗಳಲ್ಲಿ ಅದರಲ್ಲಿ ಭಾಗಿಯಾಗಿದ್ದೆ. ಮಠಕ್ಕೆ ಹೋಗಿ ಅಲ್ಲಿ ಕೆಲಸ ಮಾಡಲು ಆಗದೇ ಇದ್ದರೂ ಎನಾದರು ಸೇವೆ ಮಾಡಬೇಕು ಅಂತ ಮನಸ್ಸಲ್ಲಿ ಇತ್ತು. ಆಗ ನನಗೆ ಹೊಳೆದಿದ್ದು ವೆಬ್ ಸೈಟ್.

ತಕ್ಷಣ ಅದನ್ನು ಕೈಗೆತ್ತಿಕೊಂಡು ಮುಗಿಸಿದೆ. ನಿಮಗೆ ಬಿಡುವಾದಾಗ http://www.vishwagou.org ಒಮ್ಮೆ ನೋಡಿ. ಡಿಸೈನ್ ಮಾಡಿದೆ. ಆದರೆ ಅದನ್ನು ಮೈಂಟೈನ್ ಮಾಡೋದು ಕಷ್ಟವಾಗ್ತಾಯಿತ್ತು. ಸರಿಯಾದ ಮಾಹಿತಿ ಪಡೆಯೋದು ಎಲ್ಲ ಬಹಳ ಕಷ್ಟದ ಕೆಲಸ. ಅದನ್ನು ವಹಿಸಿಕೊಂಡಿದ್ದು "ಋಷಿ ಸಿಸ್ಟೆಂಮ್ಸ್ ". ನಾನು ಡಿಸೈನ್ ಮಾಡಿಕೊಟ್ಟಿದ್ದೆ. ಅವರು ಅದನ್ನು ಅದನ್ನು ಮೈಂಟೈನ್ ಮಾಡ್ತಾಯಿದಾರೆ.

ಪ್ರತಿಯೊಬ್ಬನಿಗೂ ತಾವು ತಮ್ಮ ದೇಶಕ್ಕೆ, ರಾಜ್ಯಕ್ಕೆ, ಸಮಾಜಕ್ಕೆ, ಊರಿಗೆ ಎನಾದ್ರು ಸಹಾಯ ಮಾಡಬೇಕು ಅಂತ ಇರತ್ತೆ. ಆದರೆ ಅವಕಾಶ ಇರೊಲ್ಲ. ಅವಕಾಶವನ್ನು ನಾವು ಸೃಷ್ಠಿಮಾಡ್ಕೋಬೇಕು. ನೀವು ಮನೆಯಲ್ಲಿ ಗೋವನ್ನು ಕಟ್ಟಿ, ಸಾಕಿ ಅಂತ ಮಠ ಹೇಳ್ತಾಯಿಲ್ಲ. ನಿಮ್ಮ ಕೈಲಿ ಏನಾಗತ್ತೋ ಅದನ್ನು ಮಾಡಿ ಅನ್ನತ್ತೆ. ನಿಮಗೆ ಏನಾದ್ರು ಮಾಡಬೇಕು ಅಂತ ಅನಿಸಿದರೆ ನೀವು ಮಠವನ್ನು ಸಂಪರ್ಕಿಸಬಹುದು ಅಥವಾ ನನ್ನನ್ನು ಸಂಪರ್ಕಿಸಿ. ಅದನ್ನು ಮಠಕ್ಕೆ ತಿಳಿಸುವ ಕೆಲಸವನ್ನು ಮಾಡುತ್ತೇನೆ.

Sunday, May 13, 2007

ಗತಕಾಲದ ಡೈರಿಯ ನೆನಪುಗಳು

"ಈಗ ಕೃಷ್ಣ ಭಟ್ಟರ ಮನೆಗೆ ಹೋಗಿ ಬಂದೆ, ಅಲ್ಲಿ ಕಾಫಿ ಕೊಟ್ಟಿದ್ದರು"

ಏನಿದು ಅಂತ ಅನಿಸಬಹುದು.. ಇದು ನಾನು ಒಂದಾನೊಂದು ಕಾಲದಲ್ಲಿ ಇದ್ದಕಿದ್ದ ಹಾಗೆ ಡೈರಿ ಬರೀಬೇಕು ಅಂತ ಅನಿಸಿ ಬರೆದಿದ್ದು. ಡೈರಿ ಹೇಗೆ ಬರೀಬೇಕು ಅಂಥ ಗೊತ್ತಿರ್ಲಿಲ್ಲ. ಬೆಳಗ್ಗೆ ಪ್ರಾರಂಭ ಮಾಡಿದೆ. "7 ಘಂಟೆಗೆ ಎದ್ದೆ, ತಿಂಡಿ ತಿಂದೆ" (ಇದು ಸುಳ್ಳು!!! ಅಮ್ಮ ಏಳು, ಬೆಳಗಾತು ಅಂತ ಸುಮಾರು ಸಲ ಹೇಳಿದ ಮೇಲೆ ನಾನು ಎದ್ದಿದ್ದು. ಅದೂ 9 ಘಂಟೆಗೆ. ಡೈರಿನಲ್ಲಿ ಹಾಗೆ ಬರೆದರೆ ನನ್ನ ಮರ್ಯಾದೆಗೆ(!) ಕುಂದಾಗತ್ತೆ ಅಂತ 7ಕ್ಕೆ ಏದ್ದೆ ಅಂದಿದ್ದೆ). ಆಮೇಲೆ ಬರೀಲಿಕ್ಕೆ ಏನೂ ವಿಷ್ಯ ಇರಲಿಲ್ಲ. ಅದಕ್ಕೆ ಕೃಷ್ಣ ಭಟ್ಟರ ಮನೆಗೆ ಹೋದೆ. ಬಂದ ತಕ್ಷಣ ಡೈರಿ ಕಂಟಿನ್ಯೂ ಮಾಡಿದೆ, "ಈಗ ಕೃಷ್ಣ ಭಟ್ಟರ ಮನೆಗೆ ಹೋಗಿ ಬಂದೆ, ಅಲ್ಲಿ ಕಾಫಿ ಕೊಟ್ಟಿದ್ದರು". ಬಹಳ ಅಮೂಲ್ಯಯವಾದ ವಿಷಯಗಳನ್ನು(?) ಯಾರಾದರು ಕದ್ದು ಓದಬಹುದೆಂಬ ಭಯದಿಂದ ಡೈರಿಯ ಮೊದಲು ಪುಟದಲ್ಲಿ "ಆತ್ಮೀಯ ಓದುಗ, ಅಪ್ಪಣೆಯಿಲ್ಲದೇ ಓದುವುದು ಮರ್ಯಾದಸ್ತರ ಲಕ್ಷಣವಲ್ಲ" ಎಂದು ಬರೆದಿದ್ದೆ. ಮೊದಲ ಪುಟ ನೋಡದೇ ಅಥವಾ ನೋಡಿಯೂ ಡೈರಿಯನ್ನು ಓದಿದರೆ ಅಂತ "ಸೀಕ್ರೇಟ್ ಭಾಷೆಯನ್ನು" ಭಾವಯ್ಯನಿಂದ ಕಲಿತು ಡೈರಿಯನ್ನು ಮುಂದುವರೆಸಿದೆ.ಈಗಲೂ ಆ "ಸೀಕ್ರೇಟ್ ಭಾಷೆ" ಅರ್ದಂರ್ದ ನೆನಪಿದೆ..

"ಅಕೌಕಘೌ ಘನಚ್ಸೈವ ಚಟೌತಪೌ ನಮಜ್ಜಡೇ...."

"ಅ" ಕಾರಕ್ಕೆ "ಕ" ಕಾರ... ಏನೋ ನೆನಪು..ಇದು ಕೆಲವು ದಿನ ಮಾತ್ರ ಮುಂದುವರೆಯಿತು. ಆಮೇಲೆ ಡೈರಿಯ ಸುದ್ದಿಗೇ ಹೋಗಿರಲಿಲ್ಲ.

ಆಮೇಲೆ ವಿದ್ಯಾಭ್ಯಾಸಕ್ಕೆ ಚಿಕ್ಕ ವಯಸ್ಸಿನಲ್ಲೇ ಬೆಂದಕಾಳೂರಿಗೆ ಬಂದೆ. ಮಾವನ ಮನೆಯಲ್ಲಿದ್ದೆ. ಮನೆಯ ನೆನಪು ಕಾಡಿದಾಗಲೆಲ್ಲಾ ಡೈರಿಯನ್ನು ಬರೆಯಲು ಪ್ರಾರಂಭ ಮಾಡಿದೆ. ಆಗ ಅದು ಹಿಂದಿನಗಿಂತ ಸ್ವಲ್ಪ ಉತ್ತಮವಾಗಿತ್ತು ಅನ್ನಬಹುದು. ಅದರಲ್ಲಿ ಊಟ ಮಾಡಿದೆ, ತಿಂಡಿ ತಿಂದೆ ಎಂದೆಲ್ಲಾ ಬರೆಯಲಿಲ್ಲ. ಆದರೆ ಮನೆಯ ಬಗ್ಗೆ ಬರಿತಾಯಿದ್ದೆ. ಮುಂದೆ ಯಾವಾಗ ಊರಿಗೆ ಹೋಗೋದು, ಎಷ್ಟು ದಿನವಿದೆ ಎಂಬುದು ಅದರಲ್ಲಿ ಕಾಯಂ ಆಗಿತ್ತು. ಇನ್ನು ದೀಪಾವಳಿಗೆ ೪೫ ದಿನ ಇದೆ. ಮರುದಿನದ ಡೈರಿಯಲ್ಲಿ.. ೪೪ ದಿನವಿದೆ. ಆಗ ದಿನ ಏನ್ನೋದು ಶತಮಾನದ ರೀತಿಯಾಗಿತ್ತು. ಈಗ ಓದಿದ್ರೆ ನಗು ಬರತ್ತೆ.

ಸೀಕ್ರೇಟ್ ಭಾಷೆ ಬರೆಯುವುದು ಕಷ್ಟವಾದ ಕಾರಣ ಕನ್ನಡದಲ್ಲೇ ಬರೆಯಲು ಅಣಿಯಿಟ್ಟೆ. ಮುಂದೆ ಏಲ್ಲೋ ಒಂದು ದಿನ ಅದು ಅತ್ತೆಗೆ ಸಿಕ್ಕಿ ಅದನ್ನು ಏಲ್ಲರ ಮುಂದೆ ಓದಿ, ಅವರ ಜೋತೆ ಅನಿವಾರ್ಯವಾಗಿ ನಾನು ನಕ್ಕು ಮತ್ತೆ ಡೈರಿಗೆ ತಿಲಾಂಜಲಿಯಿಟ್ಟೆ.

ಆಮೇಲೆ ಕಾಲೇಜು, ಡೈರಿ ಬರಿಲಿಲ್ಲ, ಕವನ ಬರೀಲಿಕ್ಕೆ ಪ್ರಾರಂಭ ಮಾಡಿದೆ. ಬರೆದಿದ್ದು ಕೆಲವೇ ಕವನಗಳಾದ್ರು ಅದರಲ್ಲಿ ಒಂದು ನನಗೆ "ಅಂತರಕಾಲೇಜು ಕವನ ಸ್ಪರ್ಧೆ"ಯಲ್ಲಿ ಬಹುಮಾನವನ್ನು ತಂದುಕೊಡ್ತು. ಒಟ್ಟು 385 ಕಾಲೇಜಿನ ವಿಧ್ಯಾರ್ಥಿಗಳು ಬಾಗವಹಿಸಿದ್ದರು. ಅದರಲ್ಲಿ 20 ಜನರ ಕವನಕ್ಕೆ ಪ್ರಶಸ್ತಿ ಬಂದಿತ್ತು. ಆ 20 ಜನರ ಕವನವನ್ನು ಒಟ್ಟುಗೂಡಿಸಿ ಒಂದು ಪುಸ್ತಕವನ್ನು ಹೊರತಂದಿದ್ದರು. ನನ್ನ ಕವನದಲ್ಲಿ ಬರುವ "ಬೆಂಕಿ ನೀಲಿಯ ಹೂವು" ಏನ್ನುವುದನ್ನು ಆ ಪುಸ್ತಕಕ್ಕೆ ಹೆಸರಿಟ್ಟಿದ್ದರು. ನ್ಯಾಷನಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಬಿ.ಸಿ.ರಾಮಚಂದ್ರ ಶರ್ಮರಿಂದ ಬಹುಮಾನ ಪಡೆದಾಗ ಬಹಳ ಸಂತೋಷವಾಗಿತ್ತು.

ನಂತರ ಕೆಲಸದ ಬೇಟೆ, ಅಮೇಲೆ ಕೆಲಸ....ಹಾಗಾಗಿ ಬರೆಯೋದೇ ಬಿಟ್ಟು ಹೋಗಿತ್ತು. ಏನಾದ್ರು ಬರೀಬೇಕು ಅಂತ ಅನ್ನಿಸ್ತಾಯಿತ್ತು. ಆದರೆ ಕಾಲ ಕೂಡಿಬಂದಿರಲಿಲ್ಲ.

7 ವರ್ಷಗಳಿಂದ ಕೆಲಸ ಮಾಡಿ ಬೇಸತ್ತಿದ್ದ ಮನಸ್ಸಿಗೆ ಜಸ್ಟ್ ಫಾರ್ ಎ ಚೈಂಜ್ ಅಂತ ಬ್ಲಾಗ್ ಬರಿಯೋಕೆ ಪ್ರಾರಂಭ ಮಾಡಿದೀನಿ. ಜನ ಓದಲೀ, ಹೊಗಳಲಿ ಅನ್ನುವ ಆಸೆಯಿಲ್ಲ. ನನಗನಿಸಿದ್ದನ್ನು ಬರೀತೀನಿ.

ಈಗಲೂ ಕೆಲವು ಹಳೇ ಡೈರಿಗಳು ಮನೆಯಲ್ಲಿ ಮೇಲೆ ಇಟ್ಟಿದ್ದೇನೆ. ಏಲ್ಲೋ ಅಪರೂಪಕ್ಕೆ ಅದನ್ನ ಓದ್ತಾಯಿರ್ತಿನಿ. ಹಳೆಯ ನೆನಪು ನುಗ್ಗಿ ಬರತ್ತೆ.

Thursday, May 3, 2007

ವಿಶ್ವ ಗೋ ಸಮ್ಮೇಳನ

ಏತ್ತ ನೋಡಿದರತ್ತ ಜನ ಸಾಗರ, ಏಲ್ಲವೂ ಶಿಸ್ತುಮಯ, ಗಲಾಟೆ, ಗೌಜುಗಳಿರಲಿಲ್ಲ, ಏಲ್ಲರಲ್ಲೂ ಮುಂದೆ ಏನಿರಬಹುದೆಂಬ ಕುತೂಹಲ, ಬಾಯಾರಿಕೆಯ ತಣಿಯಲು ಮದ್ಯ ಮದ್ಯ ಇದ್ದ ಪಾನೀಯ ಕೌಂಟರ್ ಗಳು, ಅಮೃತಧಾರ ಗೋಲೋಕ, ಕಾಮಧೇನು ತುಲಾಭಾರ, ಮರುಜನ್ಮಪಡೆದ ಏಷ್ಟೋ ಹಸುಗಳು (ಕಸಾಯಿಖಾನೆಗೆ ಹೋಗ್ತಾಯಿದ್ದ ಹಸುಗಳು ಕಟುಕರಿಂದ ಪಾರಾಗಿ ಬಂದವು), ಸತತ ೨೪ ಘಂಟೆ ನಡೆಯುತ್ತಿದ್ದ ಭಜನೆ ಮತ್ತು ವೇಣು ನಿನಾದ, ಹರಿದು ಬರುತ್ತಿರುವ ಭಕ್ತರ ಕಾಣಿಕೆಗಳನ್ನು ಜೋಡಿಸಿಟ್ಟ ಸುವಸ್ತು ಸಂಗ್ರಹಾಲಯ...ಒಂದೇ.. ಎರಡೇ.... ಇದು "ವಿಶ್ವ ಗೋ ಸಮ್ಮೇಳನದ" ಕೆಲವು ಅನುಭವಗಳು...

9 ದಿನಗಳಲ್ಲಿ ಸುಮಾರು 12-13 ಲಕ್ಷಕ್ಕೂ ಜನ ಪ್ರವಾಹದಂತೆ ಹರಿದು ಬಂದಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿಯೇ ಇಷ್ಟು ಜನ ಸೇರಿದ್ದು ಬಹುಶಃ ಇದೇ ಮೊದಲು ಅನ್ಸತ್ತೆ. ಶಿಸ್ತು ಬದ್ದ ಕಾರ್ಯಕರ್ತರುಗಳ ದೊಡ್ಡ ದಂಡೇ ಅಲ್ಲಿತ್ತು.ಏಲ್ಲರಲ್ಲೂ ಒಂದು ರೀತಿಯ ಉತ್ಸಾಹ ಮನೆ ಮಾಡಿತ್ತು.

ಹಿಂದೊಂದು ಕಾಲವಿತ್ತು. ಪ್ರತೀವರ್ಷ ರಾಮನವಮಿಗೆ ರಥೆ ಎಳೆಯಲ್ಲಿಕ್ಕೆ ಜನರನ್ನು ಕರೆಸ್ತಾಯಿದ್ರು. ಯಾಕೆಂದ್ರೆ ಮಠ ಅಧೋಗತಿಯಲ್ಲಿತ್ತು ಅಂತ ಹೇಳ್ತಾರೆ. ಆದರೆ ಈಗ ಮಠದ ಚಿತ್ರಣವೇ ಬದಲಾಗಿದೆ. ಮೊದಲು ಬರೀ ಹವ್ಯಕರ ಶ್ರದ್ಧಾಕೇಂದ್ರವಾಗಿದ್ದ ಶ್ರೀ ಮಠ ಇಂದು ಜಾತಿಬೇದವಿಲ್ಲದೆ ಜನರನ್ನು ಸೆಳಿತಾಯಿದೆ. ಇದರ ಕೇಂದ್ರಬಿಂದು ಶೀ ರಾಘವೇಶ್ವರ ಭಾರತೀ ಮಹಸ್ವಾಮಿಗಳು. ತಮ್ಮ 19 ನೇ ವಯಸ್ಸಿನಲ್ಲಿ ಅಂದರೆ ಏಪ್ರಿಲ್ 94 ರಂದು ಸಂನ್ಯಾಸ ತೆಗೆದುಕೊಂಡ ಶ್ರೀಗಳವರು ಮಠದ ಅಧಿಕಾರ ವಹಿಸಿಕೊಂಡಿದ್ದು ಕೆಲವೇ ವರ್ಷಗಳ ಹಿಂದೆ.

ಈ ದೊಡ್ಡ ಕಾರ್ಯಕ್ರಮಕ್ಕೆ ನಾನೊಂದು ಚಿಕ್ಕ ಅಳಿಲು ಸೇವೆಯಾಗಿ http://vishwagou.org ವೆಬ್ ಸೈಟ್ ಡಿಸೈನ್ ಮಾಡಿದೆ.