Sunday, May 13, 2007

ಗತಕಾಲದ ಡೈರಿಯ ನೆನಪುಗಳು

"ಈಗ ಕೃಷ್ಣ ಭಟ್ಟರ ಮನೆಗೆ ಹೋಗಿ ಬಂದೆ, ಅಲ್ಲಿ ಕಾಫಿ ಕೊಟ್ಟಿದ್ದರು"

ಏನಿದು ಅಂತ ಅನಿಸಬಹುದು.. ಇದು ನಾನು ಒಂದಾನೊಂದು ಕಾಲದಲ್ಲಿ ಇದ್ದಕಿದ್ದ ಹಾಗೆ ಡೈರಿ ಬರೀಬೇಕು ಅಂತ ಅನಿಸಿ ಬರೆದಿದ್ದು. ಡೈರಿ ಹೇಗೆ ಬರೀಬೇಕು ಅಂಥ ಗೊತ್ತಿರ್ಲಿಲ್ಲ. ಬೆಳಗ್ಗೆ ಪ್ರಾರಂಭ ಮಾಡಿದೆ. "7 ಘಂಟೆಗೆ ಎದ್ದೆ, ತಿಂಡಿ ತಿಂದೆ" (ಇದು ಸುಳ್ಳು!!! ಅಮ್ಮ ಏಳು, ಬೆಳಗಾತು ಅಂತ ಸುಮಾರು ಸಲ ಹೇಳಿದ ಮೇಲೆ ನಾನು ಎದ್ದಿದ್ದು. ಅದೂ 9 ಘಂಟೆಗೆ. ಡೈರಿನಲ್ಲಿ ಹಾಗೆ ಬರೆದರೆ ನನ್ನ ಮರ್ಯಾದೆಗೆ(!) ಕುಂದಾಗತ್ತೆ ಅಂತ 7ಕ್ಕೆ ಏದ್ದೆ ಅಂದಿದ್ದೆ). ಆಮೇಲೆ ಬರೀಲಿಕ್ಕೆ ಏನೂ ವಿಷ್ಯ ಇರಲಿಲ್ಲ. ಅದಕ್ಕೆ ಕೃಷ್ಣ ಭಟ್ಟರ ಮನೆಗೆ ಹೋದೆ. ಬಂದ ತಕ್ಷಣ ಡೈರಿ ಕಂಟಿನ್ಯೂ ಮಾಡಿದೆ, "ಈಗ ಕೃಷ್ಣ ಭಟ್ಟರ ಮನೆಗೆ ಹೋಗಿ ಬಂದೆ, ಅಲ್ಲಿ ಕಾಫಿ ಕೊಟ್ಟಿದ್ದರು". ಬಹಳ ಅಮೂಲ್ಯಯವಾದ ವಿಷಯಗಳನ್ನು(?) ಯಾರಾದರು ಕದ್ದು ಓದಬಹುದೆಂಬ ಭಯದಿಂದ ಡೈರಿಯ ಮೊದಲು ಪುಟದಲ್ಲಿ "ಆತ್ಮೀಯ ಓದುಗ, ಅಪ್ಪಣೆಯಿಲ್ಲದೇ ಓದುವುದು ಮರ್ಯಾದಸ್ತರ ಲಕ್ಷಣವಲ್ಲ" ಎಂದು ಬರೆದಿದ್ದೆ. ಮೊದಲ ಪುಟ ನೋಡದೇ ಅಥವಾ ನೋಡಿಯೂ ಡೈರಿಯನ್ನು ಓದಿದರೆ ಅಂತ "ಸೀಕ್ರೇಟ್ ಭಾಷೆಯನ್ನು" ಭಾವಯ್ಯನಿಂದ ಕಲಿತು ಡೈರಿಯನ್ನು ಮುಂದುವರೆಸಿದೆ.ಈಗಲೂ ಆ "ಸೀಕ್ರೇಟ್ ಭಾಷೆ" ಅರ್ದಂರ್ದ ನೆನಪಿದೆ..

"ಅಕೌಕಘೌ ಘನಚ್ಸೈವ ಚಟೌತಪೌ ನಮಜ್ಜಡೇ...."

"ಅ" ಕಾರಕ್ಕೆ "ಕ" ಕಾರ... ಏನೋ ನೆನಪು..ಇದು ಕೆಲವು ದಿನ ಮಾತ್ರ ಮುಂದುವರೆಯಿತು. ಆಮೇಲೆ ಡೈರಿಯ ಸುದ್ದಿಗೇ ಹೋಗಿರಲಿಲ್ಲ.

ಆಮೇಲೆ ವಿದ್ಯಾಭ್ಯಾಸಕ್ಕೆ ಚಿಕ್ಕ ವಯಸ್ಸಿನಲ್ಲೇ ಬೆಂದಕಾಳೂರಿಗೆ ಬಂದೆ. ಮಾವನ ಮನೆಯಲ್ಲಿದ್ದೆ. ಮನೆಯ ನೆನಪು ಕಾಡಿದಾಗಲೆಲ್ಲಾ ಡೈರಿಯನ್ನು ಬರೆಯಲು ಪ್ರಾರಂಭ ಮಾಡಿದೆ. ಆಗ ಅದು ಹಿಂದಿನಗಿಂತ ಸ್ವಲ್ಪ ಉತ್ತಮವಾಗಿತ್ತು ಅನ್ನಬಹುದು. ಅದರಲ್ಲಿ ಊಟ ಮಾಡಿದೆ, ತಿಂಡಿ ತಿಂದೆ ಎಂದೆಲ್ಲಾ ಬರೆಯಲಿಲ್ಲ. ಆದರೆ ಮನೆಯ ಬಗ್ಗೆ ಬರಿತಾಯಿದ್ದೆ. ಮುಂದೆ ಯಾವಾಗ ಊರಿಗೆ ಹೋಗೋದು, ಎಷ್ಟು ದಿನವಿದೆ ಎಂಬುದು ಅದರಲ್ಲಿ ಕಾಯಂ ಆಗಿತ್ತು. ಇನ್ನು ದೀಪಾವಳಿಗೆ ೪೫ ದಿನ ಇದೆ. ಮರುದಿನದ ಡೈರಿಯಲ್ಲಿ.. ೪೪ ದಿನವಿದೆ. ಆಗ ದಿನ ಏನ್ನೋದು ಶತಮಾನದ ರೀತಿಯಾಗಿತ್ತು. ಈಗ ಓದಿದ್ರೆ ನಗು ಬರತ್ತೆ.

ಸೀಕ್ರೇಟ್ ಭಾಷೆ ಬರೆಯುವುದು ಕಷ್ಟವಾದ ಕಾರಣ ಕನ್ನಡದಲ್ಲೇ ಬರೆಯಲು ಅಣಿಯಿಟ್ಟೆ. ಮುಂದೆ ಏಲ್ಲೋ ಒಂದು ದಿನ ಅದು ಅತ್ತೆಗೆ ಸಿಕ್ಕಿ ಅದನ್ನು ಏಲ್ಲರ ಮುಂದೆ ಓದಿ, ಅವರ ಜೋತೆ ಅನಿವಾರ್ಯವಾಗಿ ನಾನು ನಕ್ಕು ಮತ್ತೆ ಡೈರಿಗೆ ತಿಲಾಂಜಲಿಯಿಟ್ಟೆ.

ಆಮೇಲೆ ಕಾಲೇಜು, ಡೈರಿ ಬರಿಲಿಲ್ಲ, ಕವನ ಬರೀಲಿಕ್ಕೆ ಪ್ರಾರಂಭ ಮಾಡಿದೆ. ಬರೆದಿದ್ದು ಕೆಲವೇ ಕವನಗಳಾದ್ರು ಅದರಲ್ಲಿ ಒಂದು ನನಗೆ "ಅಂತರಕಾಲೇಜು ಕವನ ಸ್ಪರ್ಧೆ"ಯಲ್ಲಿ ಬಹುಮಾನವನ್ನು ತಂದುಕೊಡ್ತು. ಒಟ್ಟು 385 ಕಾಲೇಜಿನ ವಿಧ್ಯಾರ್ಥಿಗಳು ಬಾಗವಹಿಸಿದ್ದರು. ಅದರಲ್ಲಿ 20 ಜನರ ಕವನಕ್ಕೆ ಪ್ರಶಸ್ತಿ ಬಂದಿತ್ತು. ಆ 20 ಜನರ ಕವನವನ್ನು ಒಟ್ಟುಗೂಡಿಸಿ ಒಂದು ಪುಸ್ತಕವನ್ನು ಹೊರತಂದಿದ್ದರು. ನನ್ನ ಕವನದಲ್ಲಿ ಬರುವ "ಬೆಂಕಿ ನೀಲಿಯ ಹೂವು" ಏನ್ನುವುದನ್ನು ಆ ಪುಸ್ತಕಕ್ಕೆ ಹೆಸರಿಟ್ಟಿದ್ದರು. ನ್ಯಾಷನಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಬಿ.ಸಿ.ರಾಮಚಂದ್ರ ಶರ್ಮರಿಂದ ಬಹುಮಾನ ಪಡೆದಾಗ ಬಹಳ ಸಂತೋಷವಾಗಿತ್ತು.

ನಂತರ ಕೆಲಸದ ಬೇಟೆ, ಅಮೇಲೆ ಕೆಲಸ....ಹಾಗಾಗಿ ಬರೆಯೋದೇ ಬಿಟ್ಟು ಹೋಗಿತ್ತು. ಏನಾದ್ರು ಬರೀಬೇಕು ಅಂತ ಅನ್ನಿಸ್ತಾಯಿತ್ತು. ಆದರೆ ಕಾಲ ಕೂಡಿಬಂದಿರಲಿಲ್ಲ.

7 ವರ್ಷಗಳಿಂದ ಕೆಲಸ ಮಾಡಿ ಬೇಸತ್ತಿದ್ದ ಮನಸ್ಸಿಗೆ ಜಸ್ಟ್ ಫಾರ್ ಎ ಚೈಂಜ್ ಅಂತ ಬ್ಲಾಗ್ ಬರಿಯೋಕೆ ಪ್ರಾರಂಭ ಮಾಡಿದೀನಿ. ಜನ ಓದಲೀ, ಹೊಗಳಲಿ ಅನ್ನುವ ಆಸೆಯಿಲ್ಲ. ನನಗನಿಸಿದ್ದನ್ನು ಬರೀತೀನಿ.

ಈಗಲೂ ಕೆಲವು ಹಳೇ ಡೈರಿಗಳು ಮನೆಯಲ್ಲಿ ಮೇಲೆ ಇಟ್ಟಿದ್ದೇನೆ. ಏಲ್ಲೋ ಅಪರೂಪಕ್ಕೆ ಅದನ್ನ ಓದ್ತಾಯಿರ್ತಿನಿ. ಹಳೆಯ ನೆನಪು ನುಗ್ಗಿ ಬರತ್ತೆ.

2 comments:

Madhooo said...

Very well written. I am very happy that someone else also thinks the same way as I do.:) I also think the same about my blog. I write coz I love writing. Each post that I have written is as retrospection or an experiment in writing. Never aimed at popularizing or marketing my blog. So, thanks, fellow blogger for echoing my thoughts.:)

ಯಜ್ಞೇಶ್ (yajnesh) said...

Thanx madhu...