Saturday, June 28, 2008

ವೃತ್ತಿ

"ಮಂಜೂ...." ಅಂತ ಕರೆದೆ.

"ಬಂದೇ.." ಅಂತ ಗುಡಿಸಿಲಿನ ಒಳಗಿಂದ ಒಂದು ಆಕೃತಿ ಬಂತು. ಊರುಗೋಲು ಹಿಡಿದು ಹೊರಗೆ ಬಂದು ನನ್ನನ್ನು ದಿಟ್ಟಿಸಿ "ಓ ಅಪ್ಪಿ, ಯಾವಾಗ ಬಂದ್ರಿ" ಅಂದ. ನನ್ನಜ್ಜನ ವಯಸ್ಸಿನ ಮಂಜು ನನಗೆ ಗೌರವ ಕೊಟ್ಟಿದ್ದು ಇರಿಸುಮುರಿಸಾಯ್ತು. ಒಳಗಿಂದ ಯಾರು ಅಂತ ಹೇಳ್ತಾ ಮಂಜು ಹೆಂಡ್ತಿ ಮಂಜಿ ಬಂದ್ಲು. ಮಂಜಿಗೆ ಇತ್ತೀಚೆಗೆ ಕಣ್ಣು ಕಾಣಿಸೊಲ್ಲ ಅಂತ ಅಮ್ಮ ಹೇಳಿದ್ದು ನೆನಪಾಯ್ತು. "ಭಟ್ಟರ ಮಗ ಬಂದಿದಾರೆ" ಅಂತ ಮಂಜು ಹೇಳ್ದ. ಅವನನ್ನೇ ಗಮನಿಸಿದೆ. ಮಂಜು ಬಹಳ ಸೋತು ಹೋಗಿದ್ದ. ಬಟ್ಟೆ ಹರಿದು ಹೋಗಿತ್ತು. ಬಣ್ಣ ಮಾಸಿತ್ತು. "ಏನ್ ಯೋಚ್ನೆ ಮಾಡ್ತಾಯಿದೀರ ಬುದ್ದಿ" ಅಂತ ಮಂಜು ಕೇಳಿದಾಗಲೇ ನಾನು ವಾಸ್ತವಕ್ಕೆ ಬಂದಿದ್ದು. "ನಿಂದೊಂದು ಫೋಟೋ ತಗೋಬೇಕು" ಅಂದೆ. ಹೊಸದಾಗಿ ಕ್ಯಾಮೆರಾ ತಗೊಂಡಿದ್ದೆ. ಊರಿಗೆ ಹೋದಾಗ ಮಂಜು ಮತ್ತು ಮಂಜಿಯ ಫೋಟೋ ತಗೋಬೇಕು ಅಂತ ಬಹಳ ದಿನದಿಂದ ಯೋಚಿಸಿದ್ದೆ. ನಾನು ಹೇಳಿದ ತಕ್ಷಣ ಮಂಜು ಗುಡಿಸಿಲಿನ ಒಳಗೆ ಹೋದ. ಹೋಗೋವಾಗ ಹೆಂಡ್ತಿಯನ್ನು ಒಳಗೆ ಕರ್ಕೊಂಡು ಹೋದ. ಯಾಕೆ ಮಂಜು ಹೋದ, ನಾನೇದ್ರು ತಪ್ಪು ಮಾತಾಡಿದ್ನೆ ಅಂತ ಗಾಭರಿಯಾದೆ. 2 ನಿಮಿಷ ಮೌನವಾಗಿದ್ದೆ. ಮತ್ತೆ ಕರೆದೆ. ಒಳಗಿಂದ "ಬಂದೇ" ಅಂದ. 5 ನಿಮಿಷ ಬಿಟ್ಟು ಇಬ್ರೂ ಹೊರಗೆ ಬಂದಿದ್ರು. ಇದ್ದ ಬಟ್ಟೆಯಲ್ಲಿ ಚೆನ್ನಾಗಿರೋದನ್ನ ಆರಿಸಿ ಉಟ್ಟುಕೊಂಡು ಬಂದಿದ್ರು. ಅವರು ನಿತ್ಯ ಹಾಕುತ್ತಿದ್ದ ಬಟ್ಟೇಯಲ್ಲಿ ಫೋಟೋ ತೆಗೀಬೇಕು ಅಂತಿದ್ದ ನನಗೆ ನಿರಾಸೆಯಯ್ತು. ಆದರೂ ಅದನ್ನು ತೋರಿಸಿಕೊಳ್ಳದೆ ಒಂದೆರಡು ಫೋಟೋ ತಗೊಂಡೆ. ಕೊನೆಗೆ ಮನೆಗೆ ಬಾ ಅಂತ ಹೊರಟೆ. ನಾನು ಮನೆಯ ದಾರಿ ಹಿಡಿದಿದ್ದೆ, ಅದ್ರೆ ನನ್ನ ಮನಸ್ಸು ಬಾಲ್ಯದ ಕಡೆ ಪಯಣಿಸಿತ್ತು.

ಸರಿಯಾಗಿ ಓದದೇ ಹೊದ್ರೆ ದನ ಕಾಯೋಕೆ ಹೋಗು ಅಂತ ನಾವು ಸಣ್ಣಕಿದ್ದಾಗ ಎಲ್ಲ ಹೇಳ್ತಿದ್ರು. ಅದ್ರಲ್ಲೂ ಭೀಮನಕೋಣೆಗೆ ದನ ಕಾಯೋಕೆ ಹೋಗು ಅಂತಿದ್ರು. ಇಂದಿಗೂ ನನಗೆ ಭೀಮನಕೋಣೆಗೂ ದನ ಕಾಯೋದಕ್ಕು ಏನು ಸಂಬಂಧ ಅಂತ ಗೊತ್ತಿಲ್ಲ. ಇದು ಸಾಗರದ ಹತ್ತಿರ ಇರೋ ಒಂದು ಸಣ್ಣ ಗ್ರಾಮ. ಬಹುಶ: ಹಿಂದೆ ಭೀಮನಕೋಣೆ ದನ ಕಾಯೋದಕ್ಕೆ ಹೆಸರುವಾಸಿಯಾಗಿರಬೇಕು. ಇರಲಿ. ಅದು ಇಲ್ಲಿ ಅಪ್ರಸ್ತುತ. ಆವಾಗ ನನಗೆ ದನ ಕಾಯೋದು ಅಂದ್ರೆ ಕೀಳು ಮಟ್ಟದ ಕೆಲಸ ಅನ್ನೋ ಭಾವನೆಯಿತ್ತು. ದನ ಕಾಯೋದು ಅಂದಾಗ ನನಗೆ ನೆನಪಾಗ್ತಾಯಿದ್ದಿದ್ದು ಮಂಜು. ಆತನ ಕೆಲಸ ದನ ಕಾಯೋದಾಗಿತ್ತು. ಹಾಗಂತ ಅದು ಅವನ ವೃತ್ತಿಯಾಗಿರಲಿಲ್ಲ. ದೇಹದಲ್ಲಿ ಶಕ್ತಿಯಿರೋ ತನಕ ಆತ ಕೂಲಿ ಕೆಲಸ ಮಾಡಿದ್ದ. ವಯಸ್ಸಾದ ಹಾಗೆ ಅವನಿಗೆ ಕೂಲಿ ಮಾಡೋಕೆ ಅಗ್ತಾಯಿರಲಿಲ್ಲ. ಮಂಜುಗೆ ಮಕ್ಕಳಿರಲಿಲ್ಲ. ಇದ್ದ ಚೂರು ಗದ್ದೆಯಿಂದ ಅವನಿಗೆ ಸಂಸಾರ ನಡೆಸಲು ಕಷ್ಟವಾದ ಕಾರಣ ಆತ ದನ ಕಾಯೋ ಕೆಲಸ ಮಾಡ್ತಾಯಿದ್ದ. ಆಗ ನಮ್ಮೂರಲ್ಲಿ ಇದ್ದ 12 ಮನೆಯಲ್ಲಿ 8 ರಿಂದ 10 ಮನೆಯವರು ದನ/ಎಮ್ಮೆ ಸಾಕಿದ್ದರು. ಬೆಳೆಗ್ಗೆ ಯಾರಾದ್ರು ಜೋರಾಗಿ ಕೂಗಿದ್ರೆ ಅದು ಮಂಜುದೇ ಅಂತ ಗೊತ್ತಾಗ್ತಾಯಿತ್ತು. ಬೆಳೆಗ್ಗೆ ಬೇಗ ತಿಂಡಿ ತಿಂದು ಮಂಜಿ ಕೊಟ್ಟ ಬುತ್ತಿಯನ್ನು ತಗೊಂಡು ಎಲ್ಲರ ಮನೆ ಹತ್ತಿರ ಜೋರಾಗಿ ಕೂಗಿ, ಬಿಟ್ಟ ದನಗಳನ್ನು ಹತ್ತಿರ ಇದ್ದ ಗುಡ್ಡಕ್ಕೆ ಹೊಡೆದುಕೊಂಡು ಹೋದರೆ ಮಂಜು ವಾಪಾಸಾಗ್ತಾಯಿದ್ದಿದ್ದು ಸಂಜೆ ಸೂರ್ಯ ಮುಳುಗೋ ಹೊತ್ತಲ್ಲಿ. ಅಲ್ಲಿಯ ತನಕ ಅದೇ ಅವನ ಪ್ರಪಂಚ. ಅವನು ಹೇಗೆ ಕಾಲ ಕಳಿತಾನೆ, ಅವನಿಗೆ ಒಂಟಿತನ ಕಾಡೊಲ್ವೆ, ಕಾಡಲ್ಲಿ ಭಯ ಆಗೊಲ್ವೆ, ಅವನ ಜೀವನದ ಗುರಿಯೇನು, ಕಾಡು ಪ್ರಾಣಿ ಬಂದ್ರೆ ಎನ್ ಮಾಡ್ತಾನೆ ಅಂತೆಲ್ಲಾ ನನ್ನ ಮನಸ್ಸಲ್ಲಿ ಪ್ರಶ್ನೆ ಏಳ್ತಾಯಿತ್ತು. ಅಲ್ಲಿ ಅವನು ಏನ್ ಮಾಡ್ತಾನೆ ಅಂತ ಕೆಲವೊಮ್ಮೆ ಅಮ್ಮನ ಹತ್ತಿರ ಕೇಳಿದ್ದೆ. ದನ ಕಾಯ್ತಾನೆ ಅಂದಿದ್ಲು.

ಮುಂದೆ ಹಳ್ಳಿಯಲ್ಲಿದ್ದರೆ ಉತ್ತಮ ವಿಧ್ಯಾಬ್ಯಾಸ ಸಿಗದೆಂಬ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದೆ. ಇಲ್ಲಿ ಬಂದು ಓದಿ, ಕೆಲಸಕ್ಕೆ ಸೇರಿಯೂ ಆಯ್ತು. ಸಣ್ಣಕ್ಕಿದ್ದಾಗ ಶಾಲೆಯಲ್ಲಿ ನಿಮ್ಮ ಗುರಿಯೇನು ಅಂತ ಕೇಳಿದ್ರು. ನಾನು ಏನೂ ಹೇಳಿರಲಿಲ್ಲ. ಮನೆಗೆ ಹೋದಮೇಲೆ ಮಂಜು ಹತ್ರ ಒಮ್ಮೆ ಕೇಳಿದ್ದೆ. ನಿನ್ನ ಗುರಿಯೇನು ಅಂತ. ಅದಕ್ಕೆ ಆತ ಶಕ್ತಿಯಿರೋ ಅಷ್ಟು ದಿನ ಕೆಲಸ ಮಾಡ್ತೀನಿ ಆಮೇಲೆ ದೇವ್ರು ನೋಡ್ಕೋತಾನೆ ಅಂದಿದ್ದ. ಮುಂದೆ ಮಂಜಿನ ಯಾರು ನೋಡ್ಕೋತಾರೆ ಅಂದಾಗ ಅಕ್ಕಪಕ್ಕದ ಮನೆಯವ್ರು ನೋಡ್ಕೋತಾರೆ ಅಂದಿದ್ದ. ಇಂಟರ್ವ್ಯೂಗೆ ಹೋದಾಗ ಎಲ್ಲರ ನಿಮ್ಮ ಮುಂದಿನ ಗುರಿಯೇನು ಅಂತ ಕೇಳ್ತಾರೆ. ಎಲ್ಲ ನಾನು ಅದಾಗಬೇಕು, ಇದಾಗಬೇಕು ಅಂತ ಹೇಳ್ತಾರೆ. ನೂರರಲ್ಲಿ 90 ಜನಕ್ಕೆ ತಾವೇನಾಗಬೇಕು ಎಂಬುದು ಗೊತ್ತೇಯಿರಲ್ಲ. ಕೆಲಸದ ಬಗ್ಗೆ ಯೋಚಿಸ್ತಾರೆ ಹೊರತು ಯಾರೂ ಜೀವನದ ಬಗ್ಗೆ ಯೋಚಿಸಲ್ಲ. ಜೀವನ ಅಂದ್ರೆ ಏನು ಅನ್ನುವ ಹೊತ್ತಿಗೆ ಗಂಟು ಮೂಟೆ ಕಟ್ಟೋಕೆ ತಯಾರಾಗಿರ್ತಾರೆ. ನನ್ನ ಕೇಳಿದಾಗ ನಾನು ಸುಮ್ಮನೆ ನಕ್ಕಿದ್ದೆ. ಆಗ ಮಂಜು ನೆನಪಾಗಿದ್ದ.

ಕೆಲಸದ ಒತ್ತಡದ ನಡುವೆ ಮಂಜು ಕಳೆದು ಹೋಗಿದ್ದ. ಎಷ್ಟು ದುಡಿದರೂ ಅದಕ್ಕೆ ತಕ್ಕ ಹಾಗೆ ಏರೋ ನಮ್ಮ ಖರ್ಚು, ಬಂದ ಸಂಬಳವನ್ನು ಮೂರೇ ದಿನದಲ್ಲಿ ಮುಕ್ಕಿ ಮತ್ತೆ ಯಾವಾಗ ಸಂಬಳ ಬರತ್ತೋ ಎಂದು ಕಾಯೋದು, ಈ ಕೆಲಸ, ಇ-ಡೆಡ್ ಲೈನು, ಯಾಂತ್ರಿಕ ಜೀವನದಿಂದ ಮನಸ್ಸು ಬೇಸತ್ತಿತ್ತು. ಆಗ ಮತ್ತೆ ನೆನಪಾಗಿದ್ದು ಮಂಜು. ಒಮ್ಮೆ ಊರಿಗೆ ಹೋಗಿ ಬರೋಣ ಅಂತ ಹೋಗಿದ್ದೆ. ಆಗ ಅಮ್ಮನ ಕೇಳಿದ್ದೆ. ಮಂಜು ಹೇಗಿದಾನೆ ಅಂತ. ಅವನು ಸತ್ತು ಎಷ್ಟೋ ವರ್ಷವಾಯ್ತು ಅಂದ್ಲು. ಮಂಜಿ ಹೇಗಿದಾಳೆ ಅಂದೆ. ಮಂಜು ಹೋದ ಕೆಲವೇ ದಿನಗಳಲ್ಲಿ ಅವಳೂ ಅವನ ಹಾದಿ ಹಿಡಿದ್ಲು ಅಂತ ಹೇಳಿದ್ಲು.

ಅನಾದಿಕಾಲದಿಂದ ಜೀವನದ ಅವಿಭಾಜ್ಯ ಅಂಗವಾದ ಕೊಟ್ಟಿಗೆ ಎಷ್ಟೋ ಮನೆಯಲ್ಲಿ ಎತ್ತಂಗಡಿಯಾಗಿತ್ತು. ಮಂಜು ಹೋದ ಮೇಲೆ ದನ ಕಾಯೋ ಕೆಲಸನೂ ಇರಲಿಲ್ಲ. ಬಹುಶ: ಮಂಜು ಅಥವಾ ದನ ಕಾಯೋರು ಇದ್ದಿದ್ರೆ ಅವಕ್ಕೆ ಕಾಡಲ್ಲಿ ಹೋಗಿ ತಮಗಿಷ್ಟವಾದುದನ್ನು ತಿನ್ನುವ ಹಕ್ಕು ಇರ್ತಿತ್ತು. ತಮಗಿಷ್ಟವಾದವರ ಜೊತೆ ಸೇರುವ ಅವಕಾಶವಿರ್ತಿತ್ತು. ಕೃತಕ ಗರ್ಭದಾರಣೆ ಕಡಿಮೆಯಾಗ್ತಿತ್ತು. ಮನೆಯಲ್ಲಿ ಕೂರಲಾಗದೆ ಮಂಜುವಿನ ಮನೆಯ ಹತ್ತಿರ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಮನೆಯ ಸೋಗೆ ಹಾರಿ ಹೋಗಿತ್ತು. ಅರ್ದಬಿದ್ದ ಗೋಡೆಗಳು ನನ್ನನ್ನು ನೋಡಿ ಯಾವುದು ಶಾಶ್ವತವಲ್ಲ ಎಂದು ಅಣಕಿಸುತ್ತಿತ್ತು.

ಬಹಳ ಹಿಂದೆ ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ನನ್ನ ಒಂದು ಕಥೆ ಪ್ರಕಟವಾಗಿತ್ತು. ಕೆಲವು ದಿನಗಳ ಹಿಂದೆ ವೆಬ್ ಸೈಟಿನ ನೋಡಿದಾಗ ಅದು ಮಾಯವಾಗಿತ್ತು. ಮನೆಯಲ್ಲಿ ಒಂದು ಪ್ರತಿಯಿತ್ತು. ಅದನ್ನು ಇಲ್ಲಿ ಹಾಕುತ್ತಿದ್ದೇನೆ.

5 comments:

Anonymous said...

hey,

tumba chennagi bandide. naanu modlu thatskannada.com dalli odidde

-srikant

Sree said...

ಒಯ್ ಮುಂಚೆನೂ ಬರ್ದಿದ್ಯಲ . ಮತ್ತೆ ಅದೇಯ?

ತೇಜಸ್ವಿನಿ ಹೆಗಡೆ- said...

ಇದೇ ಮೊದಲಬಾರಿ ನಾನು ನಿಮ್ಮ ಈ ಕಥೆ ಓದುತ್ತಿರುವುದು. ನಿರೂಣೆ ಚುರುಕಾಗಿ, ಸರಳವಾಗಿದ್ದು.. ಕಲವೊಂದು ಸಾಲುಗಳು ಆಳವಾಗಿ ಆಲೋಚನೆಗೆಳೆಯುವಂತಿವೆ. ಜೊತೆಗೆ ತುಸು ಕುತೂಹಲವನ್ನೂ ಮೂಡಿಸುವಂತಿರುವ ಕಥೆ ಚೆನ್ನಾಗಿ ಮೂಡಿದೆ.

ಜಗದೀಶಶರ್ಮಾ said...

ನಾನೊಮ್ಮೆ ಒದಿದ್ದೆ. ನಿನಗಿಂತ ಮೊದಲೆ ಮಂಜನ ನೋಡಿದ ನನ್ನ ನೆನಪುಗಳು ಮೂಡಿಬಂಡವು. ಚೆನ್ನಾಗಿ ಬರ್ದಿದೀಯಾ.

ಯಜ್ಞೇಶ್ (yajnesh) said...

@srikant

ಧನ್ಯವಾದಗಳು

@sree

ಮುಂಚೆ ಸ್ವಲ್ಪ ಬರೆದಿದ್ದೆ. ಆದರೆ ಈಗ ಇರುವ ಕಥೆ ಅದಕ್ಕಿಂತ ದೊಡ್ಡದಾಗಿದೆ.

@ ತೇಜಸ್ವಿನಿ ಹೆಗಡೆಯವರೇ,
ನಿಮ್ಮ ಬಗ್ಗೆ ಅರಿತಿದ್ದೆ. ನಿಮ್ಮ ಬ್ಲಾಗಿನ ಬಗ್ಗೆ ತಿಳಿದಿರಲಿಲ್ಲ. ಆಕಸ್ಮಿಕವಾಗಿ ನೀವು ಹುಡುಕಾಟದಲ್ಲಿ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ. ನಿಮ್ಮ ಪ್ರತಿಕ್ರಿಯೆ/ಪ್ರೋತ್ಸಾಹಕ್ಕೆ ಧನ್ಯವಾದಗಳು.


@ ಜಗದೀಶ ಶರ್ಮರೇ,
ಧನ್ಯವಾದಗಳು. ಮಂಜನ ಫೋಟೋ ತೆಗೇದಿದ್ದು ಎಲ್ಲಿದೆ ಅಂತ ಹುಡುಕಬೇಕು.